ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಕ್ರೀನ್‌ ಟೈಮ್‌’ಗೆ ಇರಲಿ ಮಿತಿ

Last Updated 11 ಜುಲೈ 2022, 19:30 IST
ಅಕ್ಷರ ಗಾತ್ರ

ಚಂ ದಿರನನ್ನು ತೋರಿಸಿದರೆ ಮಾತ್ರ ತುತ್ತು ತಿನ್ನುವ ಹಠಮಾರಿ ಮಕ್ಕಳ ಅಮ್ಮಂದಿರಿಗೆ ಈಗ ಕೈಗಳಲ್ಲೇ ಸ್ಮಾರ್ಟ್ ಫೋನಿರುವ ಕಾರಣದಿಂದಾಗಿ ಅಮಾವಾಸ್ಯೆಯ ಭಯವಿಲ್ಲ. ಜೋಗುಳ ಹಾಡದಿದ್ದರೆ ನಿದ್ರೆಗೆ ಜಾರದಿರುವ ಕಂದಮ್ಮಗಳನ್ನು ಸಂಬಾಳಿಸುವುದಕ್ಕೂ ಈಗ ತಂತ್ರಜ್ಞಾನದ ಮೊರೆಹೋಗಲು ಕಲಿತಿದ್ದಾಳೆ ತಾಯಿ. ಕಥೆ ಹೇಳಿ ನಿದ್ರೆ ಮಾಡಿಸುವ ಅಜ್ಜಿಯ ಜಾಗವನ್ನು ಕಾರ್ಟೂನ್‌ಗಳು ಆಕ್ರಮಿಸಿಕೊಂಡಿವೆ. ಪುಟಾಣಿಗಳ ಕೈ ಮತ್ತು ಕಂಗಳನ್ನು ಈಗ ವಿಡಿಯೋ ಗೇಮ್ಸ್ ವ್ಯಾಪಿಸಿಕೊಂಡಿರುವ ಕಾರಣ, ದಶಕಗಳ ಹಿಂದೆ ತುಂಬಿ ತುಳುಕುತ್ತಿದ್ದ ಪ್ರತಿ ವಠಾರದ ಆಟದ ಮೈದಾನಗಳು ಈಗ ಸಂಜೆಯಾಯಿತೆಂದರೆ ಬಣಗುಟ್ಟುತ್ತಿರುತ್ತದೆ. ಕಳೆದೆರಡು ವರ್ಷದ ಕೊರೊನಾ ಕಾಲಘಟ್ಟದಲ್ಲಿ ಮಕ್ಕಳ ತರಗತಿಗಳೂ ಆನ್‌ಲೈನ್‌ನಲ್ಲಿ ನಡೆದ ಕಾರಣ ಮಕ್ಕಳು ಸ್ಕ್ರೀನ್‌ ಮುಂದೆ ಗಂಟೆಗಟ್ಟಲೆ ಕಾಲ ಕಳೆಯುವುದು ತಪ್ಪಲ್ಲವೆಂಬ ನಮಗೆ ಭಾವನೆ ಬಂದಿದೆ.

ಆಟ ಮತ್ತು ಆಟಿಕೆಗಳ ಕಲ್ಪನೆಗಳು ಈಗಿನ ಡಿಜಿಟಲ್ ಕಾಲಮಾನದಲ್ಲಿ ಬಹಳಷ್ಟು ಬದಲಾಗಿವೆ. ದಶಕಗಳ ಹಿಂದೆ ಪುಟ್ಟ ಮಕ್ಕಳಿಗೆ ಆಟಿಕೆಗಳನ್ನು ಕೊಡಿಸುವ ವಿಚಾರದಲ್ಲಿ ವೈದ್ಯರು ಹೆತ್ತವರನ್ನು ಎಚ್ಚರಿಸುವ ರೀತಿ ತುಸು ಭಿನ್ನವಿತ್ತು. ಒಂದು ವರ್ಷ ಮೇಲ್ಪಟ್ಟ ಮಕ್ಕಳು ತಮ್ಮ ಕಿವಿ ಅಥವಾ ಬಾಯಿಯೊಳಗಡೆ ಹಾಕಿ ಅಪಾಯ ತಂದುಕೊಳ್ಳಬಹುದಾದ ಸಣ್ಣ ಗಾತ್ರದ ಆಟಿಕೆಗಳನ್ನು ಕೊಡಿಸದಂತೆ ವೈದ್ಯರು ಶಿಫಾರಸು ಮಾಡುತ್ತಿದ್ದರು. ಶ್ವಾಸಕೋಶದ ಅಲರ್ಜಿಯಿರುವ ಮಕ್ಕಳಿಗೆ ಸಾಕು ಪ್ರಾಣಿಗಳಿಂದ ಅಂತರ ಕಾಯ್ದುಕೊಳ್ಳುವ ಸಲಹೆಯನ್ನು ನೀಡುತ್ತಿದ್ದರು. ಕಣ್ಣಿಗೆ ಅಪಾಯ ತರಬಹುದಾದ ಚೂಪಾದ ಆಟಿಕೆಗಳನ್ನೂ ಮಕ್ಕಳ ಕೈಗೆ ನೀಡದಂತೆ ಹೆತ್ತವರನ್ನು ಎಚ್ಚರಿಸುತ್ತಿದ್ದರು. ಸುತ್ತಮುತ್ತಲಿನ ಪರಿಸರದ ಕುರಿತು ವಯೋಸಹಜವಾಗಿರುವ ವಿಪರೀತ ಕುತೂಹಲ ಹೊಂದಿರುವ ಪುಟಾಣಿ ಮಕ್ಕಳ ಕೈಗೆ ಎಲೆಕ್ಟ್ರಿಕ್ ಪ್ಲಗ್ ಪಾಯಿಂಟ್‌ಗಳು ಮತ್ತು ಅಡುಗೆಮನೆಯ ಗ್ಯಾಸ್ ಸ್ಟವ್‌ಗಳು ಎಟುಕದಂತಿರಬೇಕೆಂಬ ಸಲಹೆಗಳನ್ನು ಹೆತ್ತವರು ಪಾಲಿಸುತ್ತಿದ್ದರು. ಇಂದಿನ ದಿನಗಳಲ್ಲಿ ಹಠ ಮಾಡುವ ಮಕ್ಕಳನ್ನು ರಮಿಸಲು ಕೂಡ ಹೆತ್ತವರು ಸ್ಮಾರ್ಟ್ ಫೋನಿನ‌ ಮೊರೆ ಹೋಗುತ್ತಿರುವ ಕಾರಣದಿಂದಾಗಿ ಮತ್ತು ಹೆಚ್ಚಿನ ಮಕ್ಕಳ ಮನೋರಂಜನೆ ಮತ್ತು ಆಟೋಟಗಳು ಈಗ ಸ್ಮಾರ್ಟ್ ಫೋನ್, ಟಿವಿ ಮತ್ತು ಕಂಪ್ಯೂಟರ್ ಸುತ್ತ ಸುತ್ತುತ್ತಿವೆ; ಮಕ್ಕಳ ಈ ಹೊಸ ಆಟಿಕೆಗಳಿಂದಾಗಿ ಹೆಚ್ಚಾಗುತ್ತಿರುವ ‘ಸ್ಕ್ರೀನ್ ಟೈಮ್’ ಮಕ್ಕಳಲ್ಲಿ ಮಾಡುತ್ತಿರುವ ದುಷ್ಪರಿಣಾಮಗಳು ನಿಧಾನವಾಗಿ ಮುನ್ನಲೆಗೆ ಬರುತ್ತಿವೆ.

ಸ್ಕ್ರೀನ್ ಆಧಾರಿತ ಮಾಧ್ಯಮಗಳು ಮಾನವನ ಜೀವನದ ಅವಿಭಾಜ್ಯ ಅಂಗಗಳಾದ ಕಾರಣ ಇಂದು ಹೆಚ್ಚಿನವರ ಕೈಗಳಲ್ಲಿ ಸ್ಮಾರ್ಟ್ ಫೋನ್‌ಗಳು ಮತ್ತು ಹೆಚ್ಚಿನ ಮನೆಗಳನ್ನು ಟಿವಿ ಮತ್ತು ಕಂಪ್ಯೂಟರ್‌ಗಳು ಆಕ್ರಮಿಸಿಕೊಂಡಿವೆ. ಇಂದು ಹದಿಹರೆಯದ ಮಕ್ಕಳ ಕೈಗೆ ಸ್ಮಾರ್ಟ್ ಫೋನ್ ಮತ್ತು ಅಂತರ್ಜಾಲ ಎಟುಕಿರುವ ಕಾರಣದಿಂದ ಅವರೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಟಿವಿ ಮುಂದೆ ಕುಳಿತು ಭೋಜನ ಮಾಡುವ ಕೆಟ್ಟ ಸಂಪ್ರದಾಯ ಈಗ ಭಾರತದ ಹೆಚ್ಚಿನ ಮನೆಗಳಲ್ಲಿದೆ. ಮಕ್ಕಳ ಮನೋವಿಕಾಸ ಮತ್ತು ದೈಹಿಕ ಅರೋಗ್ಯದ ಮೇಲೆ ಡಿಜಿಟಲ್ ಬದಲಾವಣೆಗಳು ಬೀರುತ್ತಿರುವ ನಕಾರಾತ್ಮಕ ಪರಿಣಾಮಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ದಿನಕ್ಕೆ ಎರಡು ಗಂಟೆಗಳಿಗಿಂತ ಹೆಚ್ಚು ಸಮಯ ಸ್ಕ್ರೀನ್ ಮುಂದೆ (ಸ್ಮಾರ್ಟ್ ಫೋನ್/ ಟಿವಿ/ ಕಂಪ್ಯೂಟರ್) ಕಳೆಯುವ ಮಕ್ಕಳಲ್ಲಿ ಬಾಲ್ಯದಲ್ಲಿಯೆ ಬೊಜ್ಜು ಕಾಣಿಸಿಕೊಳ್ಳುತ್ತಿದೆ. ಫಾಸ್ಟ್ ಫುಡ್ ಸಂಸ್ಕೃತಿ ಕೂಡ ಅಂತಹ ಮಕ್ಕಳಲ್ಲಿ ಹೆಚ್ಚಿರುವುದರಿಂದ ಮತ್ತು ಅಟೋಟಗಳಲ್ಲಿ ಅವರಿಗೆ ಆಸಕ್ತಿ ಕಡಿಮೆಯಿರುವ ಕಾರಣ ಆ ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲೇ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಸ್ಕ್ರೀನ್ ಟೈಮ್ ಹೆಚ್ಚಾದಂತೆ ಮಕ್ಕಳ ನಿದ್ರೆಯ ಅವಧಿ ಕಡಿಮೆಯಾಗುತ್ತಿದೆ. ಹೀಗಾಗಿ ಮನುಷ್ಯದೇಹದ ಹಸಿವನ್ನು ನಿಯಂತ್ರಿಸುವ ಹಾರ್ಮೇನ್‌ಗಳಾದ ‘ಗ್ರೆಲಿನ್’ ಮತ್ತು ‘ಲೆಪ್ಟಿನ್’ ಪ್ರಮಾಣಗಳು ಏರುಪೇರಾಗಿ ಬೊಜ್ಜಿನ ಕಾಯಿಲೆಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತಿದೆ. ನಿರಂತರವಾಗಿ ಸ್ಕ್ರೀನನ್ನು ವೀಕ್ಷಿಸುವುದರಿಂದ ಕಣ್ಣು ಮತ್ತು ಕತ್ತಿನ ಸ್ನಾಯುಗಳಲ್ಲಿ ತೊಂದರೆಗಳು ಕಾಣಿಸಿಕೊಂಡು, ದೃಷ್ಟಿದೋಷವೂ ಉಂಟಾಗಬಹುದು. ಹೆಚ್ಚಿನ ಸಮಯವನ್ನು ಸ್ಕ್ರೀನ್ ಮುಂದೆ ಕಳಿಯುವ ಮಕ್ಕಳಲ್ಲಿ ಕಲಿಕೆ ಮತ್ತು ಮನೋವಿಕಾಸದ ಸಮಸ್ಯೆಗಳು ಉಂಟಾಗುತ್ತವೆ; ಅಂತಹ ಮಕ್ಕಳಲ್ಲಿ ಹಿಂಸಾತ್ಮಕ ನಡವಳಿಕೆಯ ಪ್ರವೃತ್ತಿಗಳು ಮತ್ತು ಅಮಲು ಪದಾರ್ಥಗಳ ವ್ಯಸನಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ನಮ್ಮ ದೇಶದಲ್ಲಿ ಮಕ್ಕಳ ಆರೋಗ್ಯದ ಕುರಿತಾದ ಸಮಸ್ಯೆಗಳ ನಿವಾರಣೆಯ ಬಗ್ಗೆ ನಿಖರವಾದ ನಿರ್ದೇಶನಗಳನ್ನು ನೀಡುತ್ತಾ ಬಂದಿರುವ ‘ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್’ ಕಳೆದ ವರ್ಷದ ಅಂತ್ಯದಲ್ಲಿ ಸ್ಕ್ರೀನ್ ಟೈಮ್ ಮತ್ತು ಮಕ್ಕಳ ಆರೋಗ್ಯದ ವಿಚಾರದಲ್ಲಿ ತನ್ನ ನಿಲುವುಗಳನ್ನು ಸ್ಪಷ್ಟ ಪಡಿಸಿದೆ‌‌. ಎರಡು ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳು ಸ್ಕ್ರೀನ್ ವೀಕ್ಷಣೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಅಳುವ ಮಗುವನ್ನು ರಮಿಸಲು ಮತ್ತು ಮಗುವಿಗೆ ತಿನಿಸುಲು ಹೆತ್ತವರು ಸ್ಕ್ರೀನ್ ಮೊರೆ ಹೋಗಬಾರದೆಂದು ಅಭಿಪ್ರಾಯಪಟ್ಟಿದೆ. ಕಥೆ ಹೇಳುವುದು, ಸಂಗೀತವನ್ನು ಕೇಳಿಸುವುದು ಮತ್ತು ಸರಳ ಆಟಿಕೆಗಳನ್ನು ಮಗುವಿಗೆ ನೀಡುವುದು ಈ ವಯಸ್ಸಿನ ಮಕ್ಕಳ ಮನೋವಿಕಾಸಕ್ಕೆ ಉತ್ತಮವೆಂದು ಅಭಿಪ್ರಾಯಪಟ್ಟಿದೆ‌.

ಎರಡದಿಂದ ಐದು ವಯಸ್ಸಿನ ಮಕ್ಕಳಿಗೆ ಪ್ರತಿದಿನ ಗರಿಷ್ಠ ಒಂದು ಗಂಟೆಯಷ್ಟು ಸ್ಕ್ರೀನ್ ಸಮಯವನ್ನು ನೀಡಬಹುದು. ಮಕ್ಕಳು ಹೆತ್ತವರ ಪರಿವೀಕ್ಷಣೆಯಲ್ಲಿ ತಮ್ಮ ವಯಸ್ಸಿಗೆ ಅನುಗುಣವಾಗಿ ಆರೋಗ್ಯಕರ, ಅಹಿಂಸಾತ್ಮಕ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ. ಆದರೆ ಮಕ್ಕಳ ತಮ್ಮ ಆಟಕ್ಕೆ ಮೀಸಲಾಗಿರುವ ಸಮಯದಲ್ಲಿ, ಊಟ ಮಾಡುವಾಗ ಮತ್ತು ನಿದ್ರೆ ಹೋಗುವ ಒಂದು ಗಂಟೆಯ ಮುಂಚಿನ ಸಮಯದಲ್ಲಿ ಸ್ಕ್ರೀನ್ ನೋಡುವಂತಿಲ್ಲ!

ಐದರಿಂದ ಹತ್ತು ವರ್ಷ ವಯಸ್ಸಿನ ಮಕ್ಕಳು ದಿನದಲ್ಲಿ ಎರಡು ಗಂಟೆಗಳಿಗಿಂತ ಜಾಸ್ತಿ ಸ್ಕ್ರೀನ್ ಸಮಯವನ್ನು ನೀಡಬಾರದು‌; ಆ ಸ್ಕ್ರೀನ್ ಸಮಯವನ್ನು ಕೂಢ ಶೈಕ್ಷಣಿಕ ಉದ್ದೇಶಕ್ಕೆ ಬಳಸಿಕೊಳ್ಳಲು ಒತ್ತು ನೀಡಬೇಕು. ಆ ವಯಸ್ಸಿನ ಮಕ್ಕಳ ಆಟ ಮತ್ತು ನಿದ್ರೆಯ ಸಮಯವನ್ನು ಈ ಸ್ಕ್ರೀನ್ ಸಮಯವು ನುಂಗದಂತೆ ಎಚ್ಚರ ವಹಿಸಬೇಕು; ಜೊತೆಗೆ ಮಕ್ಕಳು ವೀಕ್ಷಿಸುವ ವಿಷಯಗಳ ಬಗ್ಗೆ ಗಮನವನ್ನು ವಹಿಸಬೇಕು. ಹದಿಹರೆಯದ ಮಕ್ಕಳಲ್ಲಿ ಸ್ಕ್ರೀನ್ ಸಮಯವು ಅವರ ಸರ್ವಾಂಗೀಣ ಬೆಳವಣಿಗೆಗೆ ಕುಂಠಿತವಾಗದಂತೆ ಎಚ್ಚರ ವಹಿಸಬೇಕು. ಸೈಬರ್ ಕಾನೂನುಗಳ ಬಗ್ಗೆಯೂ ಹದಿಹರೆಯದವರನ್ನು ಜಾಗೃತಿಗೊಳಿಸುವುದರಿಂದ ಅವರು ಸೈಬರ್ ಅಪರಾಧಗಳನ್ನು ಮಾಡದಂತೆ ಮತ್ತು ಅವರ ವಿರುದ್ಧ ಸೈಬರ್ ಅಪರಾಧಗಳು ನಡೆಯದಂತೆ ಮುಂಜಾಗ್ರತೆ ವಹಿಸಬಹುದು‌.

ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳನ್ನು ಹದಿಮೂರು ವರ್ಷ ಮೀರಿದ ಮಕ್ಕಳು ಹೆತ್ತವರ ಪರಿವೀಕ್ಷಣೆಯೊಂದಿಗೆ ಆರೋಗ್ಯಕರ ರೀತಿಯಲ್ಲಿ ಬಳಸಿಕೊಳ್ಳಬಹುದು. ಆರೋಗ್ಯಕರ ಡಿಜಿಟಲ್ ನಡೆವಳಿಕೆ ಮತ್ತು ಶಿಷ್ಟಾಚಾರದ ಬಗ್ಗೆ ಮಕ್ಕಳಿಗೆ ತಿಳಿಹೇಳುವುದರಿಂದ ಮಕ್ಕಳ ‘ಡಿಜಿಟಲ್ ಫೋಟ್ ಪ್ರಿಂಟ್’ ಸ್ಚಚ್ಛವಾಗಿರುವಂತೆ ನೋಡಿಕೊಳ್ಳಬಹುದು. ಶೈಕ್ಷಣಿಕ ಕಾರಣಗಳಿಗಾಗಿ ಸ್ಕ್ರೀನ್ ಮುಂದೆ ದೀರ್ಘಕಾಲ ಕುಳಿತಿರಬೇಕಾದ ಸಂದರ್ಭದಲ್ಲಿ 20-20-20 ನಿಯಮವನ್ನು ಪಾಲಿಸಬೇಕು. ಕಣ್ಣಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಪ್ರತಿ ಇಪ್ಪತ್ತು ನಿಮಿಷದ ನಂತರ ಇಪ್ಪತ್ತು ಸೆಕೆಂಡುಗಳ ವಿರಾಮವನ್ನು ಪಡೆದು ತಮ್ಮಿಂದ ಇಪ್ಪತ್ತು ಮೀಟರ್ ದೂರದಲ್ಲಿರುವ ವಸ್ತುವನ್ನು ನೋಡಬೇಕು. ಮಕ್ಕಳು ಡಿಜಿಟಲ್ ಪ್ರಪಂಚದ ವ್ಯಸನಿಗಳಾಗದಂತೆ ಎಚ್ಚರ ವಹಿಸಲು ಮನೆಯ ಕೆಲವು ಕೋಣೆಗಳನ್ನು ಡಿಜಿಟಲ್ ಫ್ರೀ ಝೋನ್ ಮಾಡುವುದು ಮತ್ತು ಕುಟುಂಬದ ಸದಸ್ಯರು ಒಟ್ಟು ಸೇರುವ ಸಮಯದಲ್ಲಿ ಪ್ರತಿಯೊಬ್ಬರೂ ‘ಡಿಜಿಟಲ್ ಫಾಸ್ಟಿಂಗ್’ ಅನುಸರಿಸುವಂತೆಯೂ ಸಲಹೆಗಳನ್ನು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT