ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೆಕ್ಸ್ಟಿಂಗ್‌’ ಗೀಳು ಹುಡುಗಿಯರನ್ನೇ ಕಾಡುವುದೇಕೆ?

Last Updated 13 ಜುಲೈ 2019, 16:06 IST
ಅಕ್ಷರ ಗಾತ್ರ

ಆಕೆ ಇನ್ನೂ ಹದಿನಾರನ್ನೂ ದಾಟದ ತರಳೆ. ಹುಡುಗಾಟಿಕೆಯ ಮನೋಭಾವ. ಕೈಯಲ್ಲಿರುವ ಸ್ಮಾರ್ಟ್‌ಫೋನ್‌ ಪರದೆಯ ಮೇಲೆ ಸದಾಕಾಲ ಓಡಾಡುವ ಬೆರಳುಗಳು. ‘ಈಗಿನ ಹುಡುಗಿಯರೇ ಹಾಗೆ’ ಎಂದು ನಿರ್ಲಕ್ಷಿಸಿದ್ದರು ಪೋಷಕರು. ಆದರೆ ಸಮಸ್ಯೆ ಗಂಭೀರವೆಂದು ಅರಿವಾಗಿದ್ದು ಆಕೆ ಅತಿಯಾಗಿ ನಿದ್ರೆ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದಾಗ.

ಸ್ಮಾರ್ಟ್‌ಫೋನ್‌ನಲ್ಲಿ ಆಕೆಯ ಚ್ಯಾಟಿಂಗ್‌ ಹಿಸ್ಟರಿ ಪರಿಶೀಲಿಸುತ್ತಿದ್ದಂತೆ ಪೋಷಕರು ದಂಗಾಗಿದ್ದರು. ತನ್ನದೇ ನಗ್ನ ಚಿತ್ರಗಳು, ವಿಡಿಯೊವನ್ನು ಹುಡುಗನ ಜೊತೆ ಶೇರ್‌ ಮಾಡಿಕೊಂಡಿದ್ದ ಆ ಹುಡುಗಿ, ಲೈಂಗಿಕ ವಿಷಯಗಳನ್ನು ಮುಕ್ತವಾಗಿ ಚರ್ಚಿಸಿದ್ದಳು. ಸ್ನೇಹಿತನ ಜೊತೆ ಖಾಸಗಿ ಎನಿಸುವ ವಿಷಯವನ್ನು ಹಂಚಿಕೊಂಡ ಮಾತ್ರಕ್ಕೆ ಆತ್ಮಹತ್ಯೆ ಯತ್ನದಂತಹ ವೈಪರೀತ್ಯಕ್ಕೆ ಕೈ ಹಾಕಬೇಕೇ? ಆದರೆ ಆ ಚಿತ್ರಗಳು, ವಿಡಿಯೊ, ಸಂಭಾಷಣೆಗಳು ಹುಡುಗನ ಸ್ನೇಹಿತರ ವಲಯಕ್ಕೂ ಶೇರ್‌ ಆಗಿ ವೈರಲ್‌ ಆಗಿದ್ದವು. ಹುಡುಗ ಮತ್ತವನ ಸ್ನೇಹಿತರು ಬ್ಲ್ಯಾಕ್‌ಮೇಲ್‌ ಮಾಡಿದ್ದರಿಂದ ಬೇರೆ ದಾರಿ ಕಾಣದೆ ಸಾವಿನ ದಾರಿಯಲ್ಲಿ ನಡೆಯಲು ಯತ್ನಿಸಿದ್ದಳು ಹುಡುಗಿ.

ಇದು ಬೆಂಗಳೂರೆಂಬ ಮಹಾನಗರದಲ್ಲಿ ಇತ್ತೀಚೆಗೆ ನಡೆದ ಘಟನೆ. ಇಂತಹ ಹಲವು ಘಟನೆಗಳು ನಮ್ಮ ಸುತ್ತಮುತ್ತ ನಡೆಯುತ್ತಲೇ ಇವೆ. ಬೆಳಕಿಗೆ ಬರದೆ ಕತ್ತಲೆಯ ಮರೆಯಲ್ಲೇ ನರಳಿದ ಪ್ರಕರಣಗಳೆಷ್ಟೋ. ಎದುರಿಸಲಾರದೆ, ಮರ್ಯಾದೆಗೆ ಅಂಜಿ ಅಳಿದ ಯುವ ಜೀವಗಳೆಷ್ಟೋ!

ಇದಕ್ಕೆಲ್ಲ ಕಾರಣ ಯುವಜನರನ್ನು ಸೆಳೆಯುತ್ತಿರುವ ‘ಸೆಕ್ಸ್ಟಿಂಗ್‌’ ಎಂಬ ಮಾಯಾಂಗನೆ.

ಸೆಕ್ಸ್ಟಿಂಗ್‌ ಅಂದರೆ ಏನು?

ಫೋನ್‌, ಕಂಪ್ಯೂಟರ್‌ ಅಥವಾ ಇನ್ನಾವುದೇ ಡಿಜಿಟಲ್‌ ಸಾಧನಗಳ ಮೂಲಕ ಲೈಂಗಿಕತೆಯ ಲೇಪನವುಳ್ಳ ಚಿತ್ರಗಳು, ವಿಡಿಯೊ ಅಥವಾ ಮೆಸೇಜ್‌ಗಳನ್ನು ಕಳಿಸುವುದು. ಇದು ನಗ್ನ ಚಿತ್ರಗಳಿರಬಹುದು ಅಥವಾ ಲೈಂಗಿಕ ಕ್ರಿಯೆಗಳನ್ನು ಅಭಿನಯಿಸಿ ತೋರಿಸಿದ ವಿಡಿಯೊ ಇರಬಹುದು ಅಥವಾ ಲೈಂಗಿಕ ವಿಷಯದ ಕುರಿತು ಚರ್ಚೆ ನಡೆಸಿದ ಟೆಕ್ಸ್ಟ್‌ ಮೆಸೇಜ್‌ ಇರಬಹುದು.

ಮಕ್ಕಳು, ಹದಿಹರೆಯದವರು ಮೊಬೈಲ್‌, ಟ್ಯಾಬ್ಲೆಟ್‌ ಬಳಸುವುದು, ಸಾಮಾಜಿಕ ಜಾಲತಾಣ ಅಥವಾ ಮೆಸೆಂಜರ್‌ ಆ್ಯಪ್‌ಗಳಲ್ಲಿ ಸಕ್ರಿಯರಾಗಿರುವುದು ಜಾಸ್ತಿಯಾಗುತ್ತಿದೆ. ಹೀಗಾಗಿ ಲೈಂಗಿಕತೆಯ ಲೇಪನವಿರುವ ವಿಷಯಗಳನ್ನು ಕಳಿಸುವುದು, ಸ್ವೀಕರಿಸುವುದು ಕೂಡ ಹೆಚ್ಚಾಗಿದ್ದು, ಪೋಷಕರ, ಶಾಲಾ ಶಿಕ್ಷಕರ, ಕಾನೂನುಪಾಲಕರ ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ಇಂತಹ ಸಂದೇಶಗಳನ್ನು, ಚಿತ್ರಗಳನ್ನು ಪಡೆಯುವವರಲ್ಲಿ ಶೇ.64.9ರಷ್ಟು ಪುರುಷರೇ ಎಂದು ಇತ್ತೀಚೆಗೆ ನಡೆದ ಸಮೀಕ್ಷೆಯೊಂದು ಹೇಳಿದೆ.

ಬೆಂಗಳೂರಿನ ನಿಮ್ಹಾನ್ಸ್‌ನ ವೈದ್ಯರು ಹಾಗೂ ಆಸ್ಟ್ರೇಲಿಯಾದ ತಜ್ಞರು ‘ಹದಿಹರೆಯದವರಲ್ಲಿ ಸೆಕ್ಸ್ಟಿಂಗ್‌ ಹಾಗೂ ಮಾನಸಿಕ ಆರೋಗ್ಯ’ ಕುರಿತು ನಡೆಸಿದ ಸಮೀಕ್ಷೆಯಲ್ಲಿ ಸೆಕ್ಸ್ಟಿಂಗ್‌ ಭಾರತದಲ್ಲಿ ಹೆಚ್ಚುತ್ತಿರುವ ಸಮಸ್ಯೆ ಎಂಬುದು ಬಹಿರಂಗಗೊಂಡಿದೆ. ಇದನ್ನು ಕಳಿಸುವ ಹುಡುಗಿಯರ ಸಂಖ್ಯೆ ಶೇ 3ರಷ್ಟಿದ್ದರೂ ಕೂಡ ಸಂದೇಶ ಸ್ವೀಕರಿಸಿದ ಹುಡುಗರು ಅದನ್ನು ಇತರರಿಗೆ ಹಂಚಿ ವೈರಲ್‌ ಆಗುತ್ತಿರುವುದು ಸಮಸ್ಯೆಯ ಆಳವನ್ನು ಹೆಚ್ಚಿಸಿದೆ. ಬೆಂಗಳೂರು ಈ ವಿಷಯದಲ್ಲಿ ಮುಂಚೂಣಿಯಲ್ಲಿದೆ!

‘ಒಬ್ಬಳು ಹುಡುಗಿ ಹಾಗೂ ಹುಡುಗನ ಮಧ್ಯೆ ಹಂಚಿಕೊಂಡ ಹುಡುಗಿಯ ನಗ್ನ ಚಿತ್ರ ವೈರಲ್‌ ಆಗಲು ಎಷ್ಟು ಹೊತ್ತೂ ಬೇಕಿಲ್ಲ. ಹದಿಹರೆಯದ ಹುಡುಗಿ ನಂಬುವುದೇ ಬೇರೆ. ಇದು ತನ್ನ ಸ್ನೇಹಿತನ ಬಳಿಯೇ ಇರುವಂತಹ ಖಾಸಗಿ ಚಿತ್ರ ಎಂದು ಆಕೆ ತಿಳಿದುಕೊಂಡಿರುತ್ತಾಳೆ. ಆದರೆ ಅದು ಆ ಸ್ನೇಹಿತನ ಮಿತ್ರ ವಲಯದಲ್ಲಿ, ತರಗತಿಯ ಇತರ ಹುಡುಗರ ಫೋನ್‌ನಲ್ಲಿ ಶೇರ್‌ ಆಗಿದ್ದು ಗೊತ್ತಾದಾಗ ಹುಡುಗಿ ಹತಾಶೆಯ ಅಂಚನ್ನು ತಲುಪುತ್ತಾಳೆ. ಇದು ಹಲವು ದುರಂತಗಳಿಗೂ ಕಾರಣವಾಗುತ್ತದೆ’ ಎನ್ನುತ್ತಾರೆ ಬೆಂಗಳೂರಿನ ಮಾನಸಿಕ ತಜ್ಞರಾದ ಡಾ.ಎಸ್‌. ಪ್ರಮೀಳಾ.

ಇಂತಹ ಚಿತ್ರಗಳು, ವಿಡಿಯೊಗಳನ್ನು ಹುಡುಗರು ಶೇರ್‌ ಮಾಡಿಕೊಂಡಾಗ ಪೀಡಿಸುವುದು, ಬೆದರಿಕೆ ಹಾಕುವುದು, ಅವಮಾನ ಮಾಡುವುದು, ದೌರ್ಜನ್ಯ ಎಸಗುವುದು, ಕೊನೆಗೆ ಬ್ಲ್ಯಾಕ್‌ಮೇಲ್‌ ಮಾಡುವುದು... ಹೀಗೆ ಸಮಸ್ಯೆಗಳು ಶುರುವಾಗುವುದು ಸಾಮಾನ್ಯ. ಇದು ತೀವ್ರತರದ ಭಾವನಾತ್ಮಕ ಹಾಗೂ ಮಾನಸಿಕ ಸಮಸ್ಯೆಗೆ ಕಾರಣವಾಗುತ್ತದೆ. ಸಮಸ್ಯೆ ಕೈ ಮೀರಿದಾಗ ಆತ್ಮಹತ್ಯೆಯಂತಹ ದುರಂತಕ್ಕೂ ಎಡೆ ಮಾಡಿಕೊಡಬಹುದು.

ಹದಿಹರೆಯದವರ ಈ ನಡವಳಿಕೆಗೆ ಬಹಳಷ್ಟು ಕಾರಣಗಳಿವೆ ಎಂದು ಇನ್ನೊಂದು ಸಮೀಕ್ಷೆ ವರದಿ ಮಾಡಿದೆ. ಇಂತಹ ಸಂದೇಶಗಳನ್ನು ಕಳಿಸುವಂತೆ ಒತ್ತಡ ಹೇರುವುದು ತಮ್ಮ ಸ್ನೇಹಿತ ಎಂದು ಶೇ 50ರಷ್ಟು ಹುಡುಗಿಯರು ಹೇಳಿದ್ದಾರಂತೆ. ಕೆಲವೊಮ್ಮೆ ಹುಡುಗರಿಗೆ ತಾವು ಈ ರೀತಿ ಒತ್ತಡ ಹೇರುವ ಬಗ್ಗೆ ತಡವಾಗಿ ಅರಿವಾಗಿದ್ದೂ ಇದೆ. ತನ್ನ ಸ್ನೇಹಿತೆಯ ನಗ್ನ ಚಿತ್ರವನ್ನು ಇತರ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಹುಡುಗನಿಗೆ ಒಂದು ರೀತಿಯ ಪೌರುಷವನ್ನು ತೋರಿಸುವ ರೀತಿ ಎಂದು ಮನೋವಿಜ್ಞಾನಿಗಳು ವಿಶ್ಲೇಷಿಸುತ್ತಾರೆ. ಸಂಬಂಧ ಕೊನೆಗೊಂಡ ನಂತರ ಸೇಡು ತೀರಿಸಿಕೊಳ್ಳಲು ಅಥವಾ ಹತಾಶೆ ಮನೋಭಾವದಿಂದಲೂ ಹುಡುಗ ತನ್ನ ಸ್ನೇಹಿತೆಯ ಚಿತ್ರಗಳನ್ನು ವೈರಲ್‌ ಮಾಡಬಹುದು.

ಕೆಲವೊಮ್ಮೆ ಹುಡುಗಿಯರು ತಮಾಷೆಗಾಗಿಯೋ ಅಥವಾ ಚೆಲ್ಲಾಟವಾಡುವುದಕ್ಕೋ ತಮ್ಮ ನಗ್ನ ಚಿತ್ರಗಳನ್ನು ಕಳಿಸಿ ನಂತರ ತೊಂದರೆಗೆ ಸಿಕ್ಕಿ ಹಾಕಿಕೊಳ್ಳುವುದಿದೆ.

ಪೋಷಕರು ಏನು ಮಾಡಬಹುದು?

ಮಕ್ಕಳಿಗೆ ಮೊಬೈಲ್‌ ಫೋನ್‌ ಕೊಡಿಸುವ ಮುನ್ನ ಇಂತಹ ವಿಷಯಗಳ ಬಗ್ಗೆ ಎಚ್ಚರಿಕೆ ನೀಡಿ.

ಟಿವಿಯಲ್ಲೋ, ದೈನಿಕದಲ್ಲೋ ಇಂತಹ ಘಟನೆಗಳು ವರದಿಯಾದಾಗ ಮಕ್ಕಳ ಗಮನಕ್ಕೆ ತನ್ನಿ.

ಯಾವುದನ್ನೂ ಮುಚ್ಚಿಡದೆ ಮುಕ್ತ ಮನಸ್ಸಿನಿಂದ ಮಾತನಾಡಿ.

ಮಕ್ಕಳು ಏನನ್ನಾದರೂ ಮುಚ್ಚಿಡುತ್ತಿದ್ದಾರೆಯೇ ಅಥವಾ ನಿರಾಕರಿಸುತ್ತಿದ್ದಾರೆಯೇ ಎಂಬುದರ ಮೇಲೆ ನಿಗಾ ಇಡಿ.

ಮಕ್ಕಳು ಒತ್ತಡದಲ್ಲಿದ್ದಾರೆಯೇ ಎಂಬುದನ್ನು ಗಮನಿಸಿ ಆಗಾಗ ಅವರ ಜೊತೆ ಮಾತನಾಡಿ.

ಸಮಸ್ಯೆ ದೊಡ್ಡದಾಗಿದ್ದರೆ ಆಪ್ತಸಮಾಲೋಚಕರ ನೆರವು ಪಡೆಯಿರಿ.


ಅಶ್ಲೀಲ ಚಿತ್ರ ಅಥವಾ ವಿಡಿಯೊಗಳನ್ನು ಶೇರ್ ಮಾಡುವುದು ಅಪರಾಧ. ಹಾಗೊಮ್ಮೆ ಶೇರ್ ಮಾಡಿದ್ದರೆ, ಅವರ ವಿರುದ್ಧ ದೂರು ನೀಡಬಹುದು. ಶೇರ್ ಮಾಡಿದವರು ಯಾರು ಎಂದು ತಿಳಿಯದಿದ್ದರೆ ಇರುವ ಮಾಹಿತಿಗಳ ಮೂಲಕ ಈ ಕುರಿತು ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿ. ಶೇರ್ ಮಾಡಿದವರನ್ನು ಪತ್ತೆ ಹಚ್ಚಿ ಆ ವಿಡಿಯೊ ಅಥವಾ ಫೋಟೊ ಯಾರಿಂದ ಯಾರೆಲ್ಲಾ ಶೇರ್ ಮಾಡಿದ್ದಾರೆ ಎಂಬುದು ತಿಳಿಯುತ್ತದೆ. ಅವರನ್ನು ಒಳಗೊಂಡಂತೆ ಅಪರಾಧ ಮಾಡಿದವರ ವಿರುದ್ಧ ಸೈಬರ್ ಕ್ರೈಂ ವಿಭಾಗದವರು ಕಾನೂನು ಕ್ರಮ ಜರುಗಿಸುತ್ತಾರೆ.

ಹದಿಹರೆಯದವರ ಮನಸ್ಥಿತಿ ಮೊದಲಿಗಿಂತ ಬದಲಾವಣೆಯಾಗಿರಲಾರದು. ಸಾಮಾಜಿಕ, ತಾಂತ್ರಿಕ ಸಾಧ್ಯತೆಗಳು ಬದಲಾದಂತೆ ಅವರ ಮಾನಸಿಕ ಹೋರಾಟ, ತಾಕಲಾಟಗಳನ್ನು ವ್ಯಕ್ತಪಡಿಸುವ ರೀತಿ ಮಾತ್ರ ಬದಲಾಗಿದೆ. ಹೊಸದರ ಹುಡುಕಾಟ ಮತ್ತು ಅದನ್ನು ಸ್ನೇಹಿತರೆದುರು ಪ್ರದರ್ಶಿಸಿ ತಮ್ಮ ವ್ಯಕ್ತಿತ್ವದ ಘನತೆಯನ್ನು ಹೆಚ್ಚಿಸಿಕೊಳ್ಳುವ ಹಪಹಪಿ ಹದಿಹರೆಯದ ಸಾಮಾನ್ಯ ವರ್ತನೆ. ನಾವೆಲ್ಲಾ ಹಿಂದೆ ಒಂದೆರೆಡು ಹತ್ತಿರದ ಸ್ನೇಹಿತರಿಗೆ ಗುಟ್ಟಾಗಿ ಹೇಳಿಕೊಳ್ಳುತ್ತಿದ್ದೆವು! ಈಗ ಸಾಮಾಜಿಕ ಮಾಧ್ಯಮಗಳಿಂದ ಅದನ್ನು ಹೆಚ್ಚಾಗಿ ಹರಡಿದರೆ ತಮ್ಮ ವ್ಯಕ್ತಿತ್ವದ ಬೆಲೆ ಹೆಚ್ಚಾಗುತ್ತದೆ ಎಂದುಕೊಳ್ಳುತ್ತಿದ್ದಾರೆ.

ಯೌವನದ ಕಾಮನೆಗಳನ್ನು ಸಾಮಾಜಿಕ ಕಾನೂನಿನ ಚೌಕಟ್ಟಿನೊಳಗೆ ತರುವುದಕ್ಕಾಗಿ ಮಕ್ಕಳಿಗೆ ಸರಿಯಾದ ಅರಿವು ಮತ್ತು ಶಿಕ್ಷಣವನ್ನು ಕೊಡುವುದು ಪೋಷಕರು ಮತ್ತು ಸಮಾಜದ, ಸರ್ಕಾರದ ಜವಾಬ್ದಾರಿ. ಆದರೆ ಸ್ಮಾರ್ಟ್‌‍ಫೋನ್ ಅಂತರ್‌ ಜಾಲಗಳೆಂಬ ಎರಡು ಅಲುಗಿನ ಕತ್ತಿಯನ್ನು ಮಕ್ಕಳಿಗೆ ನೀಡಿರುವ ನಾವು ಅದರ ಉಪಯೋಗವನ್ನು, ಜವಾಬ್ದಾರಿಗಳನ್ನು ಮಕ್ಕಳಿಗೆ ನಾವೆಲ್ಲಿ ಕಲಿಸಿದ್ದೇವೆ?

ಬೆದರಿಕೆ ಹಾಕುವವರು ಕ್ರಿಮಿನಲ್ ಬುದ್ಧಿಯವರು. ಅಂತವರ ಸಂಖ್ಯೆ ಅತಿ ಕಡಿಮೆ.

ಹದಿಹರೆಯದವರ ಲೈಂಗಿಕ ವರ್ತನೆಗಳು ಜವಾಬ್ದಾರಿಯುತ ವಾಗಿರಬೇಕಾದರೆ ಅವರಿಗೆ ಸೂಕ್ತವಾದ, ಸಮಗ್ರವಾದ ಲೈಂಗಿಕ ಶಿಕ್ಷಣ ನೀಡಬೇಕು. ಇದರಲ್ಲಿ ಪೋಷಕರು, ತಜ್ಞರು, ಸರ್ಕಾರ ಎಲ್ಲರೂ ಪಾಲುಗೊಳ್ಳಬೇಕು. ಇದೊಂದು ಸಾಮಾಜಿಕ ಚಳವಳಿಯಾದಾಗ ಮಾತ್ರ ಎಲ್ಲರಿಗೂ ಇದರ ಅರಿವು, ಜವಾಬ್ದಾರಿಗಳು ಮೂಡುತ್ತವೆ.

ನಡಹಳ್ಳಿ ವಸಂತ್‌,

ಆಪ್ತ ಸಮಾಲೋಚಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT