ಮಂಗಳವಾರ, ಸೆಪ್ಟೆಂಬರ್ 21, 2021
28 °C

ಏನಾದ್ರೂ ಕೇಳ್ಬೋದು | ಲೈಂಗಿಕ ಆಕರ್ಷಣೆ ಸಮಸ್ಯೆಯಲ್ಲ..

ನಡಹಳ್ಳಿ ವಸಂತ್‌ Updated:

ಅಕ್ಷರ ಗಾತ್ರ : | |

ನಡಹಳ್ಳಿ ವಸಂತ್‌, ಮನೋಚಿಕಿತ್ಸಕ

ವಿದ್ಯಾರ್ಥಿ. ಲೈಂಗಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ. ಓದಿನಲ್ಲಿ ಏಕಾಗ್ರತೆ ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯಿಂದ ಹೊರಬರಲು ಸಹಾಯಮಾಡಿ.

– ಹೆಸರು, ಊರು ಇಲ್ಲ

ನಿಮ್ಮ ಮತ್ತು ನಿಮ್ಮ ಸಮಸ್ಯೆಯ ಬಗ್ಗೆ ಪೂರ್ಣ ವಿವರಗಳಿದ್ದರೆ ಸಹಾಯವಾಗುತ್ತಿತ್ತು. ಲೈಂಗಿಕ ಆಕರ್ಷಣೆ ಸಮಸ್ಯೆಯಲ್ಲ, ಪ್ರಕೃತಿಯ ಅದ್ಭುತ ಕಾಣಿಕೆ. ಆಕರ್ಷಣೆಯನ್ನು ತಿರಸ್ಕರಿಸಿ ಹೊರತಳ್ಳಲು ಪ್ರಯತ್ನಿಸಿದರೆ ಅದು ನಿಮ್ಮನ್ನು ಹೆಚ್ಚಾಗಿ ಸೆಳೆಯುತ್ತದೆ. ವಿದ್ಯಾರ್ಥಿಯಾಗಿರುವ ನಿಮಗೆ ಲೈಂಗಿಕ ಸುಖ ಪಡೆಯಲು ಮದುವೆಯಾಗುವವರೆಗೆ ಕಾಯಬೇಕಾಗಿದೆ. ಸದ್ಯಕ್ಕೆ ನಿಮ್ಮ ಆಕರ್ಷಣೆ ಮತ್ತು ಲೈಂಗಿಕ ಭಾವನೆಗಳನ್ನು ಮಾತ್ರ ಆನಂದಿಸಿ. ಅಗತ್ಯವಿದ್ದರೆ ದೈಹಿಕ ಒತ್ತಡವನ್ನು ಹಸ್ತಮೈಥುನದ ಮೂಲಕ ಪರಿಹರಿಸಿಕೊಳ್ಳಿ.

ನನ್ನ ವಯಸ್ಸು 27, ಪಿಯುಸಿ ಓದಿರುತ್ತೇನೆ. ನಮ್ಮ ಮನೆಯಲ್ಲಿ ಎಲ್ಲರೂ ಗಡಿಬಿಡಿ ಅಂದ್ರೆ ಚುರುಕಾಗಿದ್ದಾರೆ. ನನಗೆ ಜೀವನದ ಸ್ಪಷ್ಟತೆ ಮತ್ತು ಗುರಿಯಿಲ್ಲ. ಯಾರ ಜೊತೆಗೆ ಬೆರೆಯಲೂ ಭಯವಾಗುತ್ತದೆ. ಮೂರ್ನಾಲ್ಕು ವರ್ಷಗಳ ಕಾಲ ಬೆಂಗಳೂರಿನಲ್ಲಿ ಕೆಲಸ ಮಾಡಿದೆ. ಈಗ ಊರಲ್ಲೇ ಇದೀನಿ. ಬುದ್ಧಿ ಬೆಳವಣಿಗೆ ಕಮ್ಮಿ ಅಂತ ಇತರರು ಮಾತಾನಾಡುತ್ತಾರೆ. ‌‌ಜೀವನ ಬೇಡವಾಗಿದೆ. ಬಡತನವಿದ್ದು ಏನು ಮಾಡಲೂ ಮನಸ್ಸಿಲ್ಲ. ಸಹಾಯಮಾಡಿ.

–ಬದ್ರಿ, ಊರಿನ ಹೆಸರಿಲ್ಲ.

ಜೀವನದಲ್ಲಿ ಸ್ಪಷ್ಟತೆ ಇಲ್ಲ ಎಂದು ಹೇಳಿದ್ದೀರಿ. ಅದು ನಿಮ್ಮ ಬರಹದಲ್ಲೂ ಕಾಣಿಸುತ್ತದೆ. ಬುದ್ಧಿ ಬೆಳವಣಿಗೆ ಕಡಿಮೆ ಎಂದು ಬೇರೆಯವರು ಹೇಳಿದ್ದನ್ನು ನಂಬಿಕೊಂಡಿದ್ದೀರಿಲ್ಲವೇ? ಇದರಿಂದ ಉಂಟಾದ ಕೀಳರಿಮೆ, ಬೇಸರಗಳನ್ನು ಭಯ, ನಿರಾಸಕ್ತಿ, ನಿಷ್ಕ್ರಿಯತೆಗಳ ಮೂಲಕ ತೋರಿಸುತ್ತಾ ಜೀವನವೇ ಬೇಡವಾಗಿದೆ ಎನ್ನುತ್ತಿದ್ದೀರಿ.  ಪ್ರಕೃತಿ ಎಲ್ಲಾ ಜೀವಿಗಳಿಗೂ ಜೀವನ ನಿರ್ವಹಣೆಗೆ ಬೇಕಾದ ಬುದ್ಧಿಯನ್ನು ಕೊಟ್ಟಿರುತ್ತದೆ. ನೀವು ನಿಮ್ಮ ಆಸಕ್ತಿ, ಬುದ್ಧಿಗಳೆಲ್ಲಾ ಎಲ್ಲಿದೆ ಎಂದು ಹುಡುಕಿಕೊಳ್ಳಬೇಕು. ನಿಮ್ಮಲ್ಲಿ ಇಲ್ಲದಿರುವ ಅಂಶಗಳ ಉದ್ದದ ಪಟ್ಟಿ ನೀಡಿದ್ದೀರಿ. ಬದಲಾಗಿ ಮೊದಲು ನಿಮ್ಮಲ್ಲಿ ಇರುವ ಅಂಶಗಳನ್ನು ಪಟ್ಟಿಮಾಡಿಕೊಳ್ಳಿ. ಉದಾಹರಣೆಗೆ ಪ್ರಾಮಾಣಿಕತೆ, ಸರಳತೆ, ಸ್ನೇಹಪರತೆ, ಕಷ್ಟಪಟ್ಟು ಕೆಲಸ ಮಾಡುವುದು, ಪಿಯುಸಿವರೆಗಿನ ವಿದ್ಯಾಭ್ಯಾಸ, ಬೆಂಗಳೂರಿನ ಕೆಲಸದ ಅನುಭವ, ಮುಂತಾಗಿ. ಇವುಗಳನ್ನು ಉಪಯೋಗಿಸಿ ಒಂದು ಉದ್ಯೋಗ ಹುಡುಕಿಕೊಳ್ಳಿ. ಸ್ವಾವಲಂಬಿಯಾದಾಗ ನಿಮ್ಮ ಬಗ್ಗೆ ನಿಮಗೇ ಹೆಮ್ಮೆಯಾಗುತ್ತದೆ. ಆಗ ಹೆಚ್ಚಿನ ಓದು, ಉದ್ಯೋಗದಲ್ಲಿ ಬೆಳವಣಿಗೆ, ಹೆಚ್ಚಿನ ದುಡಿಮೆಗಳ ಬಗೆಗೆ ಹಂತಹಂತವಾಗಿ ಯೋಚಿಸಿ. ಸೋಲುಗಳು ನಿಮಗೆ ಬೇಸರವುಂಟು ಮಾಡಬಹುದು, ಆದರೆ ನಿಷ್ಕ್ರಿಯತೆ ನಿಮ್ಮನ್ನು ಜೀವಂತವಾಗಿ ಹಿಂಸಿಸುತ್ತದೆ ಎಂದು ನೆನಪಿಡಿ.

ನಾನು ಪದವಿ ಅಂತಿಮ ವರ್ಷದಲ್ಲಿ ಓದುತ್ತಿದ್ದೇನೆ. ಮನೆಯಲ್ಲಿ ಕಡುಬಡತನವಿದೆ. ಯಾವುದಾದರೂ ಸರ್ಕಾರಿ ಉದ್ಯೋಗ ಪಡೆಯಬೇಕೆಂದು ಸಿಇಟಿ ಓದಲು ನಗರಕ್ಕೆ ಬಂದು ವಸತಿನಿಲಯದಲ್ಲಿ ಇದ್ದೆ. ಓದಿನ ಕಡೆ ಗಮನ ಹರಿಸಲು ಆಗಲಿಲ್ಲ. ಸ್ನೇಹಿತರ ಜೊತೆ ಮೋಜು ಮಸ್ತಿಯಲ್ಲೇ ಮೂರು ವರ್ಷ ಕಳೆದುಹೋಗಿದ್ದು ಗೊತ್ತೇ ಆಗಲಿಲ್ಲ. ಈಗ ಮಾನಸಿಕವಾಗಿ ನೆಮ್ಮದಿ ಇಲ್ಲ. ಪರಿಹಾರ ಹೇಳಿ.

–ಹಿರೇಮಠ, ಊರಿನ ಹೆಸರಿಲ್ಲ.

ನಿಮ್ಮ ಪತ್ರದಲ್ಲಿ ಸ್ಪಷ್ಟತೆ ಮತ್ತು ಪ್ರಾಮಾಣಿಕತೆ ಕಾಣಿಸುತ್ತದೆ. ಇವು ನಿಮ್ಮ ಆಸ್ತಿ ಮತ್ತು ಇವುಗಳನ್ನು ಉಪಯೋಗಿಸಿಕೊಂಡು ಮುಂದೆ ಬೆಳೆಯಲು ಸಾಧ್ಯವಿದೆ. ಹಿಂದೆ ಮೋಜುಮಸ್ತಿಯಲ್ಲಿ ಸಮಯ ಕಳೆದಿದ್ದಕ್ಕೆ ಈಗ ಪಾಪಪ್ರಜ್ಞೆ ಕಾಡುತ್ತಿದೆಯಲ್ಲವೇ? ಇದನ್ನು ನಿಮ್ಮೊಳಗೆ ಒಪ್ಪಿಕೊಳ್ಳಿ. ಸಾಧ್ಯವಿದ್ದರೆ ತಂದೆತಾಯಿಗಳ ಹತ್ತಿರವೂ ಹೇಳಿಕೊಂಡು ಅವರ ಕ್ಷಮೆಕೇಳಿ. ಮುಂದೇನು ಮಾಡುಬೇಕು ಎನ್ನುವುದನ್ನು ಸ್ಪಷ್ಟವಾಗಿ ಯೋಚಿಸಿ ಹಂತಹಂತವಾಗಿ ಬೆಳೆಯುವ ಯೋಜನೆ ಹಾಕಿಕೊಳ್ಳಿ. ತಕ್ಷಣದ ಬದಲಾವಣೆಗಳನ್ನು ನಿರೀಕ್ಷಿಸಿದರೆ ಹತಾಶರಾಗುತ್ತೀರಿ. ಮನೆಯವರಿಗೆ ಭಾರವಾಗಬಾರದು ಎನ್ನಿಸಿದರೆ ತಾತ್ಕಾಲಿಕವಾಗಿ ದುಡಿಮೆಯ ದಾರಿ ಹುಡುಕಿಕೊಳ್ಳಿ. ಸ್ವಾವಲಂಬನೆಯಿಂದ ಸಿಗುವ ಸಮಾಧಾನ ಮನಸ್ಸನ್ನು ನಿರಾಳವಾಗಿಸುತ್ತದೆ. ಆಗ ದುಡಿಮೆಯ ಜೊತೆಗೆ ಓದನ್ನೂ ಮುಂದುವರೆಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು