ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

28 ದಿನಕ್ಕೊಮ್ಮೆ ಋತು ಚಕ್ರವಾಗುವುದು ಸರಿಯೇ?

ಸ್ಪಂದನ ಅಂಕಣ
Last Updated 1 ಜುಲೈ 2022, 19:30 IST
ಅಕ್ಷರ ಗಾತ್ರ

1. ನನಗೀಗ 26 ವರ್ಷ.28 ದಿನಕ್ಕೊಮ್ಮೆ ಋತುಚಕ್ರ ಆಗುತ್ತದೆ. ನನಗೆ ಮದುವೆ ಆಗಿ 2 ವರ್ಷ ಆಯಿತು. ಮಗು ಪಡೆಯುವ ಆಸೆ. ಎಷ್ಟು ಪ್ರಯತ್ನ ಪಟ್ಟರೂ ಇನ್ನೂ ಗರ್ಭ ನಿಲ್ಲುತ್ತಿಲ್ಲ. ಈ 28 ದಿನದ ಋತುಚಕ್ರ ಏನಾದರೂ ಮಗು ಪಡೆಯುವುದಕ್ಕೆ ಸಮಸ್ಯೆ ಆಗುವುದೇ? ತಿಳಿಸಿ.

ಹೆಸರು, ಊರು ತಿಳಿಸಿಲ್ಲ

28 ದಿನದ ಋತುಚಕ್ರ ಸರಿಯಾದದ್ದೇ. ಅಂದರೆ ನಿಮಗೆ ಅಂಡಾಶಯದಿಂದ ಅಂಡೋತ್ಪತ್ತಿ ಸರಿಯಾಗಿ ಆಗುತ್ತಿದೆ ಎಂದು ಅರ್ಥ. ಆದರೆ ನಿಮ್ಮ ಗರ್ಭನಾಳಗಳು ಸರಿಯಾಗಿದೆಯೇ ಎಂಬುದನ್ನು ಟ್ಯೂಬಲ್ ಪೇಟೆಂನ್ಸಿ ಪರೀಕ್ಷೆ ಗಳನ್ನು ಮಾಡಿಸಬೇಕು. ಜೊತೆಗೆ ನಿಮ್ಮ ಪತಿಯ ವೀರ್ಯ ತಪಾಸಣೆಯನ್ನು ಕೂಡ ಮಾಡಿಸಿ. ಸೂಕ್ತ ತಜ್ಞವೈದ್ಯರ ಸಲಹೆಯನ್ನು ಪಡೆಯಿರಿ. ನಿತ್ಯ ಫೋಲಿಕ್ ಆ್ಯಸಿಡ್ ಮಾತ್ರೆಗಳನ್ನು ಸೇವಿಸುತ್ತಿರಿ. ಸಂತಾನೋತ್ಪತ್ತಿ ಬಯಸುವ ಪ್ರತಿ ಮಹಿಳೆಯರು ಗರ್ಭಧರಿಸುವ ಮೊದಲೇ ಫೋಲಿಕ್ ಆ್ಯಸಿಡ್ ಮಾತ್ರಗಳನ್ನು ದಿನವೂ ಸೇವಿಸುತ್ತಿರಬೇಕು. ಪೌಷ್ಠಿಕ ಆಹಾರ ಸೇವನೆ ಮಾಡಿ. ಋತುಫಲಪ್ರದ ದಿನಗಳಲ್ಲಿ ಅಂದರೆ ಮುಟ್ಟಾದ ಎಂಟನೇ ದಿನದಿಂದ ಹದಿನೆಂಟು ದಿನಗಳವರೆಗೆ ದಿನಬಿಟ್ಟು ದಿನ ಪತಿಯೊಡನೆ ಲೈಂಗಿಕ ಸಂರ್ಪಕ ಬೆಳಸಿ, ನಿಮಗೆ ಖಂಡಿತ ಮಗುವಾಗುತ್ತದೆ.

2. ನನ್ನ ವಯಸ್ಸು 36. ನನ್ನ ತಿಂಗಳ ಮುಟ್ಟು ಸರಿಯಾಗಿ ಆಗುತ್ತದೆ. ಆದರೆ 2 ವರ್ಷಗಳಿಂದ ಮುಟ್ಟು ನಿಂತ ಒಂದು ವಾರದ ನಂತರ ಕೆಳ ಹೊಟ್ಟೆ ಸ್ವಲ್ಪ ನೋವು ಪ್ರಾರಂಭವಾಗಿ ಮತ್ತೆ ಸ್ವಲ್ಪ ಪ್ರಮಾಣದ ರಕ್ತಸ್ರಾವ ವಾಗುತ್ತದೆ. ಹಾರ್ಮೋನಿನ ವ್ಯತ್ಯಾಸವಾಗಿದೆ ಎಂದು ವೈದ್ಯರ ಹತ್ತಿರ ಚಿಕಿತ್ಸೆಯನ್ನು ಪಡೆದುಕೊಂಡೆ. ಚಿಕಿತ್ಸೆ ಪಡೆದ 3 ತಿಂಗಳು ಯಾವ ತೊಂದರೆಗಳು ಆಗಲಿಲ್ಲ. ಆದರೆ ಈಗ ಮತ್ತೆ ಅದೇ ಸಮಸ್ಯೆ ಶುರುವಾಗಿದೆ. ದಯಮಾಡಿ ಇದಕ್ಕೆ ಏನಾದರೂ ಪರಿಹಾರ ತಿಳಿಸಿ.

ಹೆಸರು, ಊರು ತಿಳಿಸಿಲ್ಲ.

ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗುವ ಸಂದರ್ಭದಲ್ಲಿ ಕೆಲವರಿಗೆ ಸ್ವಲ್ಪಪ್ರಮಾಣದ ಬಿಳಿಮುಟ್ಟು ಹಾಗೂ ಜೊತೆಗೆ ಸ್ವಲ್ಪ ಋತುಸ್ರಾವ ಆಗುತ್ತದೆ. ನಿಮಗೆ ಆಗುತ್ತಿರುವುದು ಕೂಡ ಈ ರೀತಿಯಾದ ಅಂಡೋತ್ಪತ್ತಿ ಸಮಯದಲ್ಲಿ ಆಗುವ ಋತುಸ್ರಾವವೇ ಇರಬಹುದು. ಆದ್ದರಿಂದ ಈ ಬಗ್ಗೆ ಹೆಚ್ಚಾಗಿ ಚಿಂತಿಸುವುದು ಬೇಡ. ಹೆಚ್ಚಿನ ತೊಂದರೆಯಾದಲ್ಲಿ ವೈದ್ಯರ ಸಲಹೆಯನ್ನು ಪಡೆಯಿರಿ.

3. ನನಗೆ ವಯಸ್ಸು 17. ಸರಿಯಾಗಿ ಮುಟ್ಟು ಆಗುತ್ತಿಲ್ಲ. ಎರಡು ತಿಂಗಳಿಗೊಮ್ಮೆ ಆಗುತ್ತದೆ. ನನಗೆ ಮದುವೆ ಕೂಡ ಆಗಿಲ್ಲ. ಮುಂದು ಮದುವೆಯಾದ ಮೇಲೆ ಏನಾದರೂ ತೊಂದರ ಆಗಬಹುದಾ? ಪರಿಹಾರ ತಿಳಿಸಿ.

ಹೆಸರು, ಊರು ತಿಳಿಸಿಲ್ಲ.

ನಿಮಗೆ ಸರಿಯಾಗಿ ಮುಟ್ಟಾಗುತ್ತಿಲ್ಲವೆಂದರೆ ನಿಮಗೆ ಪಿಸಿಒಡಿ ಸಮಸ್ಯೆ ಇರಬಹುದು. ನಿಮ್ಮ ತೂಕ ಎಷ್ಟೆಂದು ತಿಳಿಸಿಲ್ಲ. ತೂಕ ಹೆಚ್ಚಿದ್ದರೆ ಕಡಿಮೆ ಮಾಡಿಕೊಳ್ಳಿ. ಈಗ ವೈದ್ಯಕೀಯ ವಿಜ್ಞಾನದಲ್ಲಿ ಹಲವು ಚಿಕಿತ್ಸಾ ವಿಧಾನಗಳಿವೆ. ನಿಮ್ಮ ಹತ್ತಿರದ ತಜ್ಞವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಿ.

ಮದುವೆಯಾದರೆ ಮಕ್ಕಳಾಗಲು ತೊಂದರೆ ಆಗುತ್ತದೆಯೇ ಎಂದು ನಿಮ್ಮನ್ನು ಪರೀಕ್ಷಿಸದೇ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ತೊಂದರೆ ಏನು ಆಗುವುದಿಲ್ಲ. ನೀವು ಹೆಚ್ಚಾಗಿ ಚಿಂತಿಸದೇ ನಿಮ್ಮ ಜೀವನಶೈಲಿ ವ್ಯತ್ಯಾಸವಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳಿ. ಈ ಬಗ್ಗೆ ಹಿಂದಿನ ಸಂಚಿಕೆಗಳಲ್ಲಿ ತಿಳಿಸಲಾಗಿದೆ. ಗಮನಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT