ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ತಂಬಾಕು ರಹಿತ ದಿನ: ಹಾಲು ಕುಡಿದು ಧೂಮಪಾನ ಬಿಡಿ!

Last Updated 31 ಮೇ 2022, 8:34 IST
ಅಕ್ಷರ ಗಾತ್ರ

ಇಂದು ವಿಶ್ವ ತಂಬಾಕು ರಹಿತ ದಿನ. ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಜಾಗೃತಿ ಮೂಡಿಸುವ ಸಲುವಾಗಿ ಒಂದೊಂದು ಘೋಷಾವಾಕ್ಯದೊಂದಿಗೆ ಆಚರಿಸುತ್ತಿದೆ. ಈ ವರ್ಷ ‘ತಂಬಾಕಿನಿಂದ ಪರಿಸರ ಉಳಿಸಿ’ಎಂಬ ಘೋಷಾವಾಕ್ಯದೊಂದಿಗೆ ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ತಂಬಾಕು ವ್ಯಸನವನ್ನು ಬಿಡುವುದು ಅಷ್ಟು ಸುಲಭದ ಮಾತಲ್ಲ. ಬಹುತೇಕರು ಈ ವ್ಯಸನಕ್ಕೆ ದಾಸರಾಗಿರುತ್ತಾರೆ. ಇಂಥವರು ತಂಬಾಕು ಅದರಲ್ಲೂ ಧೂಮಪಾನ ತ್ಯಜಿಸುವುದು ಕಷ್ಟವೇ ಸರಿ. ಆದರೆ, ತಂಬಾಕು ಸೇವನೆಯನ್ನು ಬಿಡದೆ ಹೋದರೆ ಶೀಘ್ರವೇ ಇದರಿಂದ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ ಅಥವಾ ಇತರೆ ಅಂಗಾಂಗ ವೈಫಲ್ಯದಿಂದಲೂ ಬಳಲಬೇಕಾಗುತ್ತದೆ. ತಂಬಾಕು ಸೇವನೆ ನಿಲ್ಲಿಸದೇ ಹೋದರೆ ಏನೆಲ್ಲಾ ಆರೋಗ್ಯ ಸಮಸ್ಯೆ ಎದುರಾಗಲಿದೆ ಹಾಗೂ ತಂಬಾಕು ಸೇವನೆ ತ್ಯಜಿಸುವ ಮಾರ್ಗದ ಬಗ್ಗೆ ವೈದ್ಯರು ಸಲಹೆ ನೀಡಿದ್ದಾರೆ.

ತಂಬಾಕು ಸೇವನೆಯಿಂದ ಏನೆಲ್ಲಾ ಕಾಯಿಲೆ ಬರಲಿದೆ?
ತಂಬಾಕು ಸೇವನೆಯಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಪ್ರಮುಖವಾಗಿ ಇದು ಹೃದಯ ರಕ್ತನಾಳದ ಕಾಯಿಲೆ, ದೀರ್ಘಕಾಲದ ಶ್ವಾಸಕೋಶದ ಕಾಯಿಲೆ, ದುರ್ಬಲ ಫಲವತ್ತತೆ, ವಿವಿಧ ರೀತಿಯ ಕ್ಯಾನ್ಸರ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೊಗೆ ಕಾರ್ಸಿನೋಜೆನ್‌ಗಳನ್ನು ಹೊಂದಿರುತ್ತದೆ, ಇದು ಸಾಮಾನ್ಯ ಜೀವಕೋಶಗಳಲ್ಲಿ ರೂಪಾಂತರಗಳನ್ನು ಪ್ರೇರೇಪಿಸುತ್ತದೆ, ಇದರ ಪರಿಣಾಮವಾಗಿ ಅಸಹಜ ಜೀವಕೋಶದ ಬೆಳವಣಿಗೆ ಮತ್ತು ಕ್ಯಾನ್ಸರ್ ಉಂಟಾಗುತ್ತದೆ.

ಧೂಮಪಾನದ ಅಪಾಯಗಳು:
• ಮುಖ ಸುಕ್ಕುಗಟ್ಟುವುದು
• ಹೃದಯರಕ್ತನಾಳದ ಕಾಯಿಲೆಗಳು
• ಶ್ವಾಸಕೋಶ, ಮೂತ್ರಪಿಂಡ, ಗಂಟಲು, ಬಾಯಿ, ಹೊಟ್ಟೆ ಮತ್ತು ಮೇದೋಜೀರಕ ಗ್ರಂಥಿಯ ಕ್ಯಾನ್ಸರ್
• ಆಸ್ಟಿಯೊಪೊರೋಸಿಸ್
• ಹಲ್ಲುಗಳು ನಿಶ್ಯಕ್ತಿಯಾಗುವುದು
• ವೀರ್ಯಗಳ ಕೊರತೆ
• ಕಣ್ಣಿನ ಪೊರೆ, ಕುರುಡುತನ
• ಉಬ್ಬಸ, ಕೆಮ್ಮು
• ಸೋಂಕಿತ ರಕ್ತ ಮತ್ತು ರೋಗನಿರೋಧಕ ಶಕ್ತಿ ಕುಂದುವುದು

ತಂಬಾಕಿನಿಂದ ಹೃದಯಕ್ಕೆ ಹಾನಿ
ತಂಬಾಕು ಹೃದಯ ಮತ್ತು ರಕ್ತ ಅಪಧಮನಿಗಳಿಗೆ ಹಾನಿ ಮಾಡುವ ವಿಷವನ್ನು ಹೊಂದಿರುತ್ತದೆ, ಇದು ಅಸಮರ್ಪಕ ಕಾರ್ಯಕ್ಕೆ ಕಾರಣವಾಗುತ್ತದೆ. ತಂಬಾಕು ಸೇವನೆಯಿಂದ ಕ್ರಮೇಣ ರಕ್ತ ಅಪಧಮನಿಗಳನ್ನು ಸಂಕುಚಿತಗೊಳಿಸುತ್ತಾ ಹೋಗುತ್ತದೆ, ದೇಹದಾದ್ಯಂತ ರಕ್ತ ಮತ್ತು ಆಮ್ಲಜನಕದ ನೈಸರ್ಗಿಕ ಹರಿವು ನಿಧಾನಗೊಳ್ಳುತ್ತದೆ. ಜೊತೆಗೆ ಹೃದಯದ ಬಡಿತವು ಹೆಚ್ಚಾಗುವುದು ಹಾಗೂ ಹಿಗ್ಗುವುದು. ಈ ಅಸಹಜ ಕಾರ್ಯಚಟುವಟಿಕೆಯು ಅಧಿಕ ರಕ್ತದೊತ್ತಡ ಮತ್ತು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತವೆ. ಇದು ಹೃದಯಾಘಾತ, ಪಾರ್ಶ್ವವಾಯು ಆಗುವ ಸಾಧ್ಯತೆ ಇದೆ.

ಓದಿ...World No Tobacco Day: ತಂಬಾಕು ಪರಿಸರಕ್ಕೆ ಹಾನಿಕರ – ಏಕೆ?

ಧೂಮಪಾನ ನಿಲ್ಲಿಸಲು ಇಲ್ಲಿವೆ ಸಿಂಪಲ್‌ ಸಲಹೆ...

ಧೂಮಪಾನವನ್ನು ಬಿಡುವುದು ಅಷ್ಟು ಸುಲಭವಲ್ಲ, ಹಾಗೆಂದು ಕಷ್ಟವೂ ಅಲ್ಲ. ನಿಮ್ಮ ಪ್ರೀತಿಪಾತ್ರರಿಗೋಸ್ಕರ ಯಾವ ಕೆಟ್ಟ ಅಭ್ಯಾಸವಾದರೂ ಸುಲಭವಾಗಿ ಬಿಡುಬಹುದು. ಒಂದು ವೇಳೆ ನೀವು ಧೂಮಪಾನ ಬಿಡುವ ನಿರ್ಧಾರ ಮಾಡಿದ್ದರೆ ಈ ಸಲಹೆಗಳನ್ನು ಪಾಲಿಸಿ.

1) ಕಾರಣವನ್ನು ಹುಡುಕಿ: ಧೂಮಪಾನ ಬಿಡುವ ಪ್ರೇರಣೆ ಪಡೆಯಲು, ತ್ಯಜಿಸಲು ಪ್ರಬಲವಾದ, ವೈಯಕ್ತಿಕ ಕಾರಣದ ಅಗತ್ಯವಿದೆ. ಇದು ನಿಮ್ಮ ಕುಟುಂಬವನ್ನು ಸೆಕೆಂಡ್ ಹ್ಯಾಂಡ್ ಹೊಗೆಯಿಂದ ರಕ್ಷಿಸುವುದೂ ಇರಬಹುದು. ಅಥವಾ ಶ್ವಾಸಕೋಶದ ಕ್ಯಾನ್ಸರ್, ಹೃದ್ರೋಗ ಕಾಡದಂತೆ ನಿಮ್ಮನ್ನು ರಕ್ಷಿಸಿಕೊಳ್ಳಲು ನೀವು ಮುಂದಾಗಿರಬಹುದು. ಕಾರಣ ಚಿಕ್ಕದಾದ್ರೂ ಸರಿ ಅದು ನಿಮ್ಮ ಮನಸ್ಸಿನ ಮೇಲೆ ದೊಡ್ಡ ಪರಿಣಾಮ ಬೀರಬೇಕು. ಅಂಥಹ ಕಾರಣ ಹುಡುಕಿ, ಧೂಮಪಾನ ಬಿಡಲು ನಿರ್ಧರಿಸಿ.

2) ಹಾಲು ಕುಡಿದು ಸಿಗರೇಟ್ ಗೆ ಹೇಳಿ ಬೈ: ನೀವು ಸಿಗರೇಟ್ ಅಥವಾ ತಂಬಾಕು ತ್ಯಜಿಸಲು ನಿರ್ಧರಿಸಿದರೆ, ಪ್ರಾರಂಭದಲ್ಲಿ ಹಾಲು ಕುಡಿಯುವ ಅಭ್ಯಾಸವನ್ನು ಶುರು ಮಾಡಿ. ಹಾಲು ನಿಮ್ಮ ಕಡುಬಯಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮಗೆ ಸಿಗರೇಟ್ ಸೇದಬೇಕೆಂಬ ಚಟ ಬಂದಾಗಲೆಲ್ಲ ಒಂದು ಲೋಟ ಹಾಲು ಕುಡಿಯಿರಿ. ಕೆಲವೇ ದಿನಗಳಲ್ಲಿ ನೀವು ಪರಿಣಾಮ ನೋಡಬಹುದು.

3) ವೈದ್ಯರ ಸಲಹೆ: ಧೂಮಪಾನ ಬಿಡಬೇಕೆನ್ನುವವರು ವೈದ್ಯರ ಸಲಹೆ ಪಡೆಯಬಹುದು. ಅದಕ್ಕೆಂದೇ ವಿಶೇಷ ತರಬೇತಿ,ಚಿಕಿತ್ಸೆ ಲಭ್ಯವಿದೆ. ಅದ್ರಲ್ಲಿ ಪಾಲ್ಗೊಳ್ಳುವ ಮೂಲಕ ನೀವು ಧೂಮಪಾನ ತ್ಯಜಿಸಬಹುದು.

4) ನಿಕೋಟಿನ್ ರಿಪ್ಲೇಸ್ಮೆಂಟ್ ಥೆರಪಿ: ನೀವು ಧೂಮಪಾನವನ್ನು ಒಂದೇ ದಿನ ಏಕಾಏಕಿ ನಿಲ್ಲಿಸಿದ್ರೆ ಸಮಸ್ಯೆಯಾಗುತ್ತದೆ. ನಿಕೋಟಿನ್ ಸಿಗದೆ ನಿಮಗೆ ಅನೇಕ ಅನಾರೋಗ್ಯ ಕಾಡಬಹುದು. ತಲೆನೋವು ಕಾಣಿಸಿಕೊಳ್ಳಬಹುದು. ಉತ್ಸಾಹ ಕಡಿಮೆಯಾಗುತ್ತದೆ. ಕಿರಿಕಿರಿ, ಕೋಪ ಬರುತ್ತದೆ. ಹಾಗಾಗಿ ಸಿಗರೇಟ್ ಬದಲು ನೀವು ನಿಕೋಟಿನ್ ಬದಲಿ ಚಿಕಿತ್ಸೆ ಶುರು ಮಾಡಬಹುದು. ನಿಕೋಟಿನ್ ಗಮ್ ಬಳಸಬಹುದು.

-ಡಾ. ವಿವೇಕ್ ಆನಂದ್ ಪಡೆಗಲ್, ನಿರ್ದೇಶಕರು - ಶ್ವಾಸಕೋಶಶಾಸ್ತ್ರ, ಫೋರ್ಟಿಸ್ ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT