ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾಭ್ಯಾಸದ ಒತ್ತಡ - ಸರಳ ಪರಿಹಾರಗಳು

Published 30 ಮೇ 2023, 14:06 IST
Last Updated 30 ಮೇ 2023, 14:06 IST
ಅಕ್ಷರ ಗಾತ್ರ

ಬಿಎಸ್ಸಿ (ನರ್ಸಿಂಗ್‌) ಓದುತ್ತಿದ್ದೇನೆ. ಕಾಲೇಜು, ಪಠ್ಯದ ಚಟುವಟಿಕೆಗಳು, ಕೇಸ್‌ ಪ್ರೆಸೆಂಟೇಶನ್‌, ಆಸ್ಪತ್ರೆಯ ಕೆಲಸಗಳು ಇವೆಲ್ಲವುಗಳಿಂದ ಹೈರಾಣಾಗಿದ್ದೇನೆ. ಬೆಳಿಗ್ಗೆ 5ರಿಂದ ಸಂಜೆ 7ರವರೆಗಿನ ದಿನಚರಿ ಸಾಕಾಗಿದೆ. ಜೊತೆಗೆ ಬೆಂಗಳೂರಿನ ಸಂಚಾರದ ವ್ಯವಸ್ಥೆಯ ತೊಂದರೆಗಳೂ ಸೇರಿಕೊಂಡು ನಾನು ಖಿನ್ನತೆಗೆ ಒಳಗಾಗುತ್ತಿದ್ದೇನೆ ಅನ್ನಿಸುತ್ತಿದೆ. ಇದು ನನ್ನೊಬ್ಬಳ ಗೋಳಲ್ಲ ನನ್ನ ಹಾಗೆ ಎಷ್ಟೋ ವಿದ್ಯಾರ್ಥಿಗಳ ನೋವಾಗಿದೆ ಇದರಿಂದ ಹೊರಬರುವುದು ಹೇಗೆ ದಯವಿಟ್ಟು ತಿಳಿಸಿ.

ಹೆಸರು ಊರು ತಿಳಿಸಿಲ್ಲ.

ನಿಮ್ಮ ಸದ್ಯದ ಪರಿಸ್ಥಿತಿ ನಿಜವಾಗಿಯೂ ಕಷ್ಟಕರವಾಗಿದೆ. ನಿಮ್ಮ ಮೇಲಿರುವ ಒತ್ತಡದಲ್ಲಿ ಬಹುಪಾಲು ನಿಮ್ಮ ಹಿಡಿತದಲ್ಲಿ ಇರುವುದಿಲ್ಲ.ನಿಮ್ಮ ಅಸಹಾಯಕತೆ ಹತಾಶೆಗಳನ್ನು ಇನ್ನೂ ಹೆಚ್ಚುಮಾಡುತ್ತದೆ. ದುರದೃಷ್ಟವೆಂದರೆ ವಿದ್ಯಾಭ್ಯಾಸದ ವ್ಯವಸ್ಥೆ ಎಲ್ಲಾ ವಿದ್ಯಾರ್ಥಿಗಳ ಮೇಲೆ ಹೇರುತ್ತಿರುವ ಇಂಥ ಅಗಾಧವಾದ ಒತ್ತಡವನ್ನು ಕಡಿಮೆ ಮಾಡಲು ಸರ್ಕಾರಗಳು ಯೋಚಿಸುತ್ತಿಲ್ಲ. ಜೊತೆಗೆ ಒತ್ತಡವನ್ನು ನಿಭಾಯಿಸಲು ನಿಮಗೆ ಸಹಾಯ ಕೂಡ ದೊರಕುತ್ತಿಲ್ಲ. ಇಂತಹ ಒತ್ತಡವನ್ನು ಎರಡು ಮೂರು ಹಂತಗಳಲ್ಲ ನಿಭಾಯಿಸಬೇಕಾಗುತ್ತದೆ. ನರ್ಸಿಂಗ್‌ ವಿದ್ಯಾರ್ಥಿಯಾಗಿರುವ ನಿಮಗೆ ಮಾನಸಿಕ ಒತ್ತಡದ ದೈಹಿಕ ಪರಿಣಾಮಗಳು ಗೊತ್ತಿರಲೇಬೇಕಲ್ಲವೇ? ಮಾನಸಿಕ ಒತ್ತಡವನ್ನು ಮಿದುಳು ಅಪಾಯದ ಸೂಚನೆಯೆಂದು ಗ್ರಹಿಸಿ ಅದನ್ನು ಎದುರಿಸಲು ದೇಹವನ್ನು ಸಿದ್ಧಗೊಳಿಸುವುದಕ್ಕಾಗಿ ಒತ್ತಡದ ಹಾರ್ಮೋನ್‌ಗಳಾದ ಅಡ್ರಿನಾಲಿನ್‌ ಮತ್ತು ಕಾರ್ಟಿಸೋಲ್‌ಗಳನ್ನು ಬಿಡುಗಡೆ ಮಾಡುತ್ತದೆ.

ನಿರಂತರವಾಗಿ ಇಂತಹ ಹಾರ್ಮೋನ್‌ಗಳು ಸೃಜನೆಯಾಗುತ್ತಿದ್ದರೆ ದೇಹದ ರೋಗನಿರೋಧಕ ಶಕ್ತಿ ಕುಗ್ಗುವುದಲ್ಲದೆ, ಹಸಿವು ನಿದ್ದೆಗಳು ಕಡಿಮೆಯಾಗುತ್ತದೆ. ಒತ್ತಡ ಅಸಹನೀಯವಾದಾಗ ದೇಹ ತನ್ನನ್ನು ರಕ್ಷಿಸಿಕೊಳ್ಳಲು ಹೊರಗಡೆಯ ಪ್ರಪಂಚದಿಂದ ಮಿದುಳಿನ ಸಂಪರ್ಕವನ್ನು ತಪ್ಪಿಸುತ್ತದೆ. ಈ ಪರಿಸ್ಥಿತಿ ಖಿನ್ನತೆ, ಪ್ಯಾನಿಕ್‌ ಅಟ್ಯಾಕ್‌ ಅಥವಾ ಇನ್ನಿತರ ಮಾನಸಿಕ ಕಾಯಿಲೆಯ ಹೆಸರು ಪಡೆದುಕೊಳ್ಳುತ್ತದೆ. ಹೆಚ್ಚಿನ ಮಾನಸಿಕ ಕಾಯಿಲೆಗಳು ತೀವ್ರವಾದ ಒತ್ತಡ ಬೇಸರ ಅಸಮಧಾನಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಪ್ರಕೃತಿ ನೀಡಿರುವ ಸಹಜ ರಕ್ಷಣಾತಂತ್ರಗಳು. ಆದರೆ ಒಮ್ಮೆ ಈ ಸ್ಥಿತಿ ತಲುಪಿದರೆ ಅದರಿಂದ ಹೊರಬರುವುದು ಕಠಿಣವಾಗುತ್ತದೆ. ಇದನ್ನು ನಿಭಾಯಿಸಲು ಪ್ರತಿನಿತ್ಯ ಕನಿಷ್ಠ ಎರಡು ಬಾರಿ 10 ನಿಮಿಷ ವಿಶಿಷ್ಟವಾದ ಧ್ಯಾನದ ಅಭ್ಯಾಸವನ್ನು ಬೆಳೆಸಿಕೊಳ್ಳಿ.

ಬೆನ್ನು ಹುರಿಯನ್ನು ನೇರವಾಗಿಟ್ಟು ಸುಮ್ಮನೆ ಕುಳಿತುಕೊಂಡು ನಿಮ್ಮ ಗಮನವನ್ನು ಉಸಿರಾಟದತ್ತ ಹರಿಸಿ. ನಂತರ ನಿಧಾನವಾಗಿ ದೇಹದಲ್ಲಿ ಇರುವ ಒತ್ತಡ ಬಿಗಿತ ನೋವುಗಳನ್ನು ಗುರುತಿಸಿ. ಕೊನೆಯಲ್ಲಿ ನಿಮ್ಮೊಳಗೆ ಮೂಡುತ್ತಿರುವ ಭಾವನೆಗಳು ಯೋಚನೆಗಳತ್ತ ಗಮನ ಹರಿಸಿ. ಇದನ್ನು ಒಬ್ಬರೇ ಮಾಡಿ ಅಥವಾ ಸ್ನೇಹಿತರ ಗುಂಪಿನಲ್ಲಿ ಒಟ್ಟಾಗಿ ಮಾಡಿ. ವಿಜ್ಞಾನಿ, ವೈದ್ಯ ಡ್ಯಾನ್‌ ಸಿಗಾಲ್‌ ರೂಪಿಸಿರುವ “Wheel Of Awareness” ಧ್ಯಾನದ ಕ್ರಮದ ಧ್ವನಿಮುದ್ರಿಕೆಗಳು ಅಂತರ್ಜಾಲದಲ್ಲಿ ಲಭ್ಯವಿದೆ. ಅದನ್ನು ಬಳಸಿ ದೇಹ ಮನಸ್ಸುಗಳನ್ನು ಹಗುರಾಗಿಸಿಕೊಳ್ಳಿ. ತೀವ್ರ ಒತ್ತಡವಿದ್ದಾಗ ದಿನದಲ್ಲಿ ಹಲವಾರು ಬಾರಿ ಇದೇ ಧ್ಯಾನವನ್ನು ಒಂದರೆಡು ನಿಮಿಷಗಳು ಮಾತ್ರ ಮಾಡಿದರೆ ಮನಸ್ಸು ಉಲ್ಲಸಿತವಾಗುತ್ತದೆ. ಇದನ್ನು ಕೆಲಸದ ನಡುವೆ ಬಿಡುವಿನಲ್ಲಿ. ಬಸ್ಸಿನಲ್ಲಿ ಪ್ರಯಾಣಿಸುವಾಗ, ತರಗತಿಗಳ ಮಧ್ಯದ ಬಿಡುವಿನಲ್ಲಿ ಹೀಗೆ ಅಗತ್ಯವಿದ್ದಾಗ ಮಾಡುತ್ತಿದ್ದರೆ ದೇಹ ಮನಸ್ಸುಗಳ ಸುರಕ್ಷತೆಯ ಭಾವವನ್ನು ಅನುಭವಿಸುತ್ತಾ ಒತ್ತಡವನ್ನು ಕಡಿಮೆ ಮಾಡುತ್ತದೆ. ಜೊತೆಗೆ ದಿನಕ್ಕೆ ಒಂದು ಬಾರಿಯಾದರೂ 10 ನಿಮಿಷಗಳ ಬಿರುಸಾದ ವ್ಯಾಯಾಮ ಮಾಡಿ. ಮನೆಯೊಳಗೆ ಮಾಡಬಹುದಾದ ಸ್ಕಿಪ್ಪಿಂಗ್‌, ಬಸ್ಕಿ ಹೊಡೆಯುವುದು ಕೂಡ ದೇಹವನ್ನು ತಕ್ಷಣಕ್ಕೆ ಎಲ್ಲಾ ಒತ್ತಡಗಳಿಂದ ಬಿಡುಗಡೆಗೊಳಿಸುತ್ತದೆ.

ನೀವೇ ಹೇಳಿರುವಂತೆ ಇದು ನಿಮ್ಮೊಬ್ಬರ ಸಮಸ್ಯೆಯಲ್ಲ. ಹಾಗಾಗಿ ಸ್ನೇಹಿತರೆಲ್ಲರೂ ಸೇರಿ
ನಿಮ್ಮ ತೊಂದರೆಗಳ ಕುರಿತು ಮೇಲಧಿಕಾರಿಗಳ ಸಹಾಯ ಕೇಳಿ. ತಕ್ಷಣಕ್ಕೆ ಪರಿಹಾರಗಳು ಸಿಗದಿದ್ದರೂ ಅವರಿಗೆ ನಿಮ್ಮ ಪರಿಸ್ಥಿತಿಯ ಅರಿವಾಗುತ್ತದೆ. ಜೊತೆಗೆ ಎಲ್ಲರೂ ಸೇರಿ ತಿಂಗಳಿಗೆ ಒಂದೆರೆಡು ದಿನವಾದರೂ ಬಿಡುವನ್ನು ಹೊಂದಿಸಿಕೊಂಡು ಒಟ್ಟಾಗಿ ಸಂತೋಷದಿಂದ ಸಮಯ ಕಳೆಯುವ ವ್ಯವಸ್ಥೆ ಮಾಡಿಕೊಳ್ಳಬಹುದು.

ಕೊನೆಯದಾಗಿ ನಿಮ್ಮೆಲ್ಲಾ ಪ್ರಯತ್ನಗಳನ್ನೂ ಮೀರಿ ಕೆಲವು ಸಂದರ್ಭಗಳು ಹಿಡಿತ ತಪ್ಪಬಹುದು. ಕೊಟ್ಟ ಕೆಲಸಗಳು ತಡವಾಗಬಹುದು, ಕೇಸ್‌ ಪ್ರೆಸೆಂಟ್‌ ಮಾಡುವಾಗ ತಪ್ಪಬಹುದು, ಪರೀಕ್ಷೆಯಲ್ಲಿ ಅಂಕಗಳು ಕಡಿಮೆ ಬರಬಹುದು. ಕೆಲಸದಲ್ಲಿ ಸಣ್ಣಪುಟ್ಟ ತಪ್ಪುಗಳಾಗಬಹದು. ಇವೆಲ್ಲವೂ ನನ್ನ ಹಿಡಿತವನ್ನು ಮೀರಿದ್ದು ಎಂದು ಪೂರ್ಣ

ಮನಸ್ಸಿನಿಂದ ಒಪ್ಪಿಕೊಂಡುಬಿಡಿ. ಎಲ್ಲಾ ಪರಿಸ್ಥಿತಿಗಳನ್ನು ಹಿಡಿತದಲ್ಲಿಟ್ಟುಕೊಂಡು ನಮಗೆ ಬೇಕಾದ ಪರಿಣಾಗಳನ್ನು ಪಡೆಯಲು ಪ್ರಯತ್ನಿಸಿದರೆ ನಮ್ಮ ಅರಿವಿಗೆ ಬರದಂತೆ ಮಾನಸಿಕ ಒತ್ತಡ ದೇಹ ಮನಸ್ಸುಗಳಲ್ಲಿ ಶೇಖರಣೆಯಾಗುತ್ತಲೇ ಹೋಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT