ಬುಧವಾರ, ನವೆಂಬರ್ 20, 2019
27 °C

ಕ್ರಿಯಾಶೀಲತೆಗೆ ರಹದಾರಿ ಹಠಯೋಗ

Published:
Updated:

ಫಿಟ್‌ನೆಸ್‌ ಅಂದ್ರೆ ದೇಹ ಮನಸ್ಸುಗಳೆರಡು ಆರೋಗ್ಯವಾಗಿರುವುದು. ಬೊಜ್ಜಿನಂಥ ಸಮಸ್ಯೆ ದೇಹವನ್ನು ನಾನಾ ಕಾಯಿಲೆಗಳಿಂದ ಹೈರಾಣಾಗಿಸುವ ಸಾಧ್ಯತೆಯೇ ಹೆಚ್ಚು. ಉದಾಹರಣೆಗೆ ಮಂಡಿನೋವು, ವಿಪರೀತ ಬೆನ್ನು ನೋವು ಹೀಗೆ. ಜತೆಗೆ ಮಾನಸಿಕವಾಗಿಯೂ ತೀವ್ರ ಒತ್ತಡವನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಹಠಯೋಗವೊಂದೇ ಎಲ್ಲದ್ದಕ್ಕೂ ಮದ್ದು ಎನ್ನುತ್ತಾರೆ ಮಿಸೆಸ್‌ ಇಂಡಿಯಾ ರನ್‌ ಅಪ್‌ ಪ್ರತಿಮಾ ಡೇವಿಡ್‌. 

ಮಿಸೆಸ್‌ ಇಂಡಿಯಾ ಪ್ರೈಡ್‌ ಆಫ್ ನೇಷನ್‌ ಸೀಸನ್‌ 3ರ ಅಂತಿಮ ಸುತ್ತಿನ ಸ್ಪರ್ಧೆ ಈಚೆಗೆ ನಡೆಯಿತು. ಅದರಲ್ಲಿ ಈ ಪ್ರಶಸ್ತಿ ಗಳಿಸಿದ ಅವರು ಮಾತಿಗೆ ಸಿಕ್ಕಾಗ ಫಿಟ್‌ನೆಸ್‌ ಮತ್ತು ತಮ್ಮ ಅಭಿಸರ್ಗ ಸ್ಟುಡಿಯೋದ ಬಗ್ಗೆ ಹೇಳಿಕೊಂಡರು. 

‘ನಿತ್ಯ 35 ನಿಮಿಷಗಳ ಕಾಲ ಜಾಗಿಂಗ್‌ ಮಾಡುತ್ತೇನೆ. ಜತೆಗೆ ಎರಡು ಗಂಟೆಗಳ ಕಾಲ ಯೋಗಾಭ್ಯಾಸ ಮಾಡುತ್ತೇನೆ. ಹಲವು ಆಸನಗಳ ಮೂಲಕ ದೇಹದಲ್ಲಿರುವ ಚಕ್ರಗಳು ಕ್ರಿಯಾಶೀಲಗೊಳ್ಳುತ್ತವೆ. ಎಂತಹುದೇ ಮಾನಸಿಕ ಹಾಗೂ ಭಾವನಾತ್ಮಕ ಸಮಸ್ಯೆಗಳಿದ್ದರೂ ಅದು ನೀಗುತ್ತದೆ. ಋಣಾತ್ಮಕ ವಿಚಾರಗಳು ಮರೆಯಾಗಿ ಧನಾತ್ಮಕ ಅಂಶಗಳತ್ತ ಮನಸ್ಸು ಹೋಗುತ್ತದೆ. ಹಾಗಾಗಿ ಯೋಗವೇ ನನ್ನನ್ನು ಫಿಟ್‌ ಆಗಿರುವಂತೆ ಮಾಡಿದೆ’ ಎನ್ನುತ್ತಾರೆ 37ರ ಹರೆಯದ ಪ್ರತಿಮಾ.

‘ಮದುವೆಯಾದ ಮೇಲೆ ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ಸಮಯ ಸಿಗುವುದೇ ಕಷ್ಟ. ಆದರೆ, ಆರೋಗ್ಯವೂ ಮುಖ್ಯ ಎಂಬ ವಿಚಾರವನ್ನು ಹೆಣ್ಣಮಕ್ಕಳು ಮನದಟ್ಟು ಮಾಡಿಕೊಳ್ಳಬೇಕು. ಮದುವೆಯಾಗಿ ಮಕ್ಕಳಾದ ಹೆಣ್ಣುಮಕ್ಕಳೆಲ್ಲ ಹೇಳುವ ಸಾಮಾನ್ಯ ಮಾತೆಂದರೆ, ‘ನಮ್ಮನ್ನು ಇವಾಗ ಯಾರು ನೋಡಬೇಕು’ ಅನ್ನೊದು. ಆದರೆ, ಯಾರೋ ನೋಡುವುದಕ್ಕೆ ಫಿಟ್‌ ಆಗೊದಲ್ಲ. ಐವತ್ತು ವರ್ಷವಾದರೂ ನಮ್ಮ ಕೆಲಸ ನಾವು ಮಾಡಿಕೊಳ್ಳವಷ್ಟರ ಮಟ್ಟಿಗೆ ದೇಹದಾರ್ಢ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯ’ ಎಂದು ಹೇಳಿದರು ಪ್ರತಿಮಾ. 

‘ಫಿಟ್‌ನೆಸ್‌ ಅಂದ್ರೆ ಫಿಗರ್‌ ಕಾಯ್ದುಕೊಳ್ಳುವುದಲ್ಲ. ಆರೋಗ್ಯವಾಗಿರುವುದು. ಮನೆ, ಗಂಡ, ಮಕ್ಕಳಿಗೆ ಎಷ್ಟು ಸಮಯ ಕೊಡ್ತೀವಿ. ಅದರ ಜತೆಗೆ ಆರೋಗ್ಯ ಕಾಳಜಿಯನ್ನು ಸೇರಿಸಿಕೊಳ್ಳಬೇಕು. ಸಾಮಾನ್ಯವಾಗಿ 10 ನಿಮಿಷ ಸಮಯ ಸಿಕ್ಕರೆ ಅದರಲ್ಲಿ 3 ನಿಮಿಷ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ’ ಎನ್ನುವುದು ಅವರು ಎಲ್ಲ ಗೃಹಿಣಿಯರಿಗೂ ನೀಡುವ ಸಲಹೆ 

‘ಎಲ್ಲರಂತೆ  ಗರ್ಭಿಣಿಯಾದ ತಕ್ಷಣ ಕೆಲಸ ಬಿಟ್ಟೆ. ಮಗುವಾದ ಮೇಲೆ ನನ್ನ ಯೋಚನೆಗಳೆಲ್ಲ ಕೇವಲ ಮನೆ ಹಾಗೂ ಮಗುವಿನದ್ದೇ ಆಗಿತ್ತು. ಮೂರು ವರ್ಷ ಹೀಗೆ ಜೀವನ ನಡೆಸಿದೆ. ಆದರೆ, ಒಳಗೆಲ್ಲ ಅದೇ ಕೊರಗು. ಇಷ್ಟೆಲ್ಲಾ ಓದಿಕೊಂಡರೂ ಮನೆಯಲ್ಲಿ ಉಳಿಯಬೇಕಾಯಿತಲ್ಲ ಎಂದು. ಚಿಕ್ಕಂದಿನಿಂದಲೇ ಯೋಗಾಭ್ಯಾಸ ಮಾಡಿದ್ದೆ. ಈ ಕೌಶಲವನ್ನೇ ಬಳಸಿಕೊಂಡು ಏನಾದರೂ ಮಾಡಬೇಕು ಎಂಬ ಆಸೆ ಮೊಳೆಯಿತು. ಅದಕ್ಕಾಗಿ ಇಂಟರ್‌ನ್ಯಾಷನಲ್‌ ಯೋಗ ಟೀಚರ್ಸ್‌ ಕೋರ್ಸ್‌ ಮಾಡಿಕೊಂಡು ಪ್ರಮಾಣಪತ್ರ ಪಡೆದೆ’ ಎನ್ನುತ್ತ ‘ಅಭಿಸರ್ಗ’ ಯೋಗ ಸ್ಟುಡಿಯೊ ರೂಪಿಸಿದ ಬಗೆಯನ್ನು ಹೇಳಿಕೊಂಡರು. 

‘ಆರಂಭದಲ್ಲಿ ಮನೆ ಮನೆಗೆ ಹೋಗಿ ತರಬೇತಿ ನೀಡಿದ್ದೇನೆ. ಬಾಯಿಂದ ಬಾಯಿಗೆ ಪ್ರಚಾರ ಸಿಕ್ಕಿ ಎರಡು ವಿದ್ಯಾರ್ಥಿಗಳಿದ್ದ ತರಬೇತಿಯಲ್ಲಿ 40 ವಿದ್ಯಾರ್ಥಿಗಳು ಸೇರಿಕೊಂಡರು. ನನ್ನ ಮೂಲ ಉದ್ದೇಶವೇ ಸಾಮಾನ್ಯ ಮಹಿಳೆಯರು, ಗೃಹಿಣಿಯರು, ಉದ್ಯೋಗಸ್ಥ ಮಹಿಳೆಯರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು. ಮೈಗ್ರೇನ್‌, ಮಂಡಿನೋವು, ಬೆನ್ನನೋವು, ಆಸ್ತಮಾ, ಹಾರ್ಮೋನ್‌ ಬದಲಾವಣೆಯಿಂದ ಉಂಟಾಗುವ ಪಿಸಿಒಡಿಯಂಥ ಸಮಸ್ಯೆಗಳನ್ನು ಯೋಗದ ಮೂಲಕ ನಿವಾರಿಸಿದ ಖುಷಿಯಿದೆ. ಬೆನ್ನುಹುರಿಯಲ್ಲಿರುವ ಶಕ್ತಿಯ ಬಿಂದುಗಳನ್ನು ಕ್ರಿಯಾಶೀಲಗೊಳಿಸಿದಾಗ ದೇಹವು ಆರೋಗ್ಯವನ್ನು ಪಡೆಯುತ್ತದೆ’ ಎನ್ನುತ್ತಾರೆ.

‘92 ಕೆ.ಜಿ ಇದ್ದವಳು 60 ಕೆ.ಜಿ. ತೂಕ ಇಳಿಸಿಕೊಂಡಿದ್ದೇನೆ. ಕಟ್ಟುನಿಟ್ಟಾದ ಆಹಾರ ಪದ್ಧತಿಯನ್ನು ಅನುಸರಿಸುತ್ತೇನೆ. ತಟ್ಟೆಯಲ್ಲಿರುವ ಶುಂಠಿ,ಬೆಳ್ಳುಳ್ಳಿ ಕೊನೆಗೆ ಕರಿಬೇವು ಸೊಪ್ಪನ್ನು ಚಪ್ಪರಿಸಿಕೊಂಡು ತಿನ್ನುತ್ತೇನೆ. ಹೇರಳ ತರಕಾರಿ ಹಾಗೂ ಹಣ್ಣು ಇರುವ ಸಮತೋಲಿತ ಆಹಾರವೇ ನನ್ನ ಊಟ. ಪ್ರತಿ ಎರಡು ಗಂಟೆಗಳಿಗೊಮ್ಮೆ ತಿನ್ನುವುದು ಅಭ್ಯಾಸ. ಇದರಿಂದ ದೇಹಕ್ಕೆ ಶಕ್ತಿಯೂ ಪೂರೈಕೆಯಾಗುತ್ತದೆ’ ಎಂದು ಪ್ರತಿಮಾ ತಮ್ಮ ಆಹಾರಕ್ರಮವನ್ನು ಬಿಚ್ಚಿಟ್ಟರು. 

‘ಸಾವಧಾನದ ಧ್ಯಾನ ಹಾಗೂ ಹಠಯೋಗ ಮೆದುಳನ್ನು ಸದಾ ಜಾಗೃತವಾಗಿ ಇಟ್ಟಿರುತ್ತದೆ. ಉಸಿರಾಟಪ್ರಕ್ರಿಯೆಯ ಮೇಲೆ ಹಿಡಿತ ಸಾಧಿಸುವುದರಿಂದ ಅನಗತ್ಯ ಮಾಹಿತಿಗಳು ಮೆದುಳಿಗೆ ತೊಂದರೆ ಕೊಡುವುದನ್ನು ತಪ್ಪಿಸುತ್ತದೆ. ನನ್ನ ತರಗತಿಗೆ ಬರುವವರಿಗೆ ಯೋಗ ಮಾಡಿ ಸಣ್ಣ ಆಗಬಹುದು ಎಂದು ಹೇಳೊಲ್ಲ. ಆದರೆ, ಯೋಗ, ಧ್ಯಾನ, ವ್ಯಾಯಾಮದಿಂದ ಚಯಾಪಚಯಾ ಕ್ರಿಯೆ ಹೆಚ್ಚಾಗಿ ದೇಹಕ್ಕೆ ಹೆಚ್ಚು ಶಕ್ತಿ ಸಿಗುತ್ತದೆ. ದೇಹ ಮತ್ತು ಮನಸ್ಸು ಕ್ರಿಯಾಶೀಲವಾಗಿರುತ್ತದೆ. ಬಾಡಿ ಟೋನ್‌ ಆಗುತ್ತದೆ’ ಎಂದು ತಿಳಿಸಿದರು. 

‘ಪ್ರತಿಯೊಬ್ಬರ ದೇಹವು ಭಿನ್ನ. ಒಂದು ವಾರಗಳ ಒಬ್ಬರ ದೇಹವನ್ನು ಸೂಕ್ಷ್ಮವಾಗಿ ಪರೀಕ್ಷಿಸಲಾಗುತ್ತದೆ.  ನೈಸರ್ಗಿಕವಾಗಿ, ಯಾವುದೇ ಒತ್ತಡವಿಲ್ಲದೇ ಯಾವ ಆಸನ ಮಾಡಲು ಶಕ್ತರು ಎಂಬುದನ್ನು ಅರ್ಥ ಮಾಡಿಕೊಂಡು, ಅದರ ಅನುಸಾರ ಆಸನಗಳನ್ನ ನೀಡಲಾಗುತ್ತದೆ. ಸಾಮಾನ್ಯವಾಗಿ ಸರ್ವಾಂಗಾಸನ, ಪವನಮುಕ್ತಾಸನ, ಮಣಿಪುರಚಕ್ರಾಸನಗಳನ್ನು ಮಾಡಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು. 

‘ನನಗೆ ಯೋಗದಿಂದ ಸಹಜವಾಗಿಯೇ ಹೆರಿಗೆಯಾಯಿತು. ಹೆರಿಗೆ ಆಗುವ ಎರಡು ದಿನದ ಮುಂಚೆನೂ ಯೋಗ ಮಾಡಿದ್ದೀನಿ. ಹೊಟ್ಟೆಗೆ ಭಾರ ಬೀಳುವ ಆಸನಗಳು ಬಿಟ್ಟು ಕೆಲ ವೊಂದು ಆಸನಗಳನ್ನು ಗರ್ಭಿಣಿಯರು ಮಾಡಬಹುದು. ಸಹಜ ಹೆರಿಗೆಗೆ ಅನುವಾಗುವಂತೆ ದೇಹವನ್ನು ಯೋಗ ಅಗತ್ಯವಾಗಿ ತರಬೇತು ಮಾಡುತ್ತದೆ. ಆ ಸಂದರ್ಭದಲ್ಲಿ ‘ಡಕ್‌ ವಾಕಿಂಗ್‌’ ಆಸನ  ಬಹಳ ಸಹಕಾರಿ. ಈಚೆಗೆ ಸಹಜ ಹೆರಿಗೆಯ ಸಂಖ್ಯೆ ಕಡಿಮೆಯಾಗುತ್ತಿದ್ದು, ಗರ್ಭಿಣಿಯರಿಗೆ ಯೋಗದಲ್ಲಿ ಆಸಕ್ತಿ ಮೂಡಿದರೆ, ಸಹಜ ಹೆರಿಗೆ ನಿಶ್ಚಿತ. ಈ ಬಗ್ಗೆಯೂ ಅಭಿ ಸರ್ಗದಲ್ಲಿ ಜಾಗೃತಿ ಮೂಡಿಸುವ ಯೋಚನೆಯಿದೆ’ ಎಂದರು. 

ಇದನ್ನೂ ಓದಿ: ‘ಯೋಗದಿಂದ ಆರೋಗ್ಯ ವೃದ್ಧಿ’

ಪ್ರತಿಕ್ರಿಯಿಸಿ (+)