ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋವಿನ ‘ಕಥೆ’.. ದೇಹಕ್ಕೆ, ಮನಸ್ಸಿಗೆ ನೋವಾದಾಗ ಏನು ಮಾಡಬೇಕು?

Last Updated 16 ಮೇ 2022, 20:30 IST
ಅಕ್ಷರ ಗಾತ್ರ

ಶರೀರ ಮತ್ತು ಮನಸ್ಸು ತಮ್ಮ ಸೌಖ್ಯವನ್ನು ಕಳೆದುಕೊಂಡರೆ ವೈವಿಧ್ಯಮಯ ನೋವಿನ ಅನುಭವವಾಗುತ್ತದೆ. ಸುಲಲಿತವಾಗಿ ಓಡಾಡಿ, ಸುಖವಾಗಿದ್ದ ವ್ಯಕ್ತಿಗೆ ಪೆಟ್ಟು, ಅಪಘಾತದಂತಹ ಆಕಸ್ಮಿಕಗಳಿಂದಲೂ ಕೈಕಾಲು,‌ ದೇಹದ ನೋವು ಕಾಡಬಹುದು. ದಿನಚರಿಯ ಆಹಾರ, ನಿದ್ರೆ ಮತ್ತು ಚಟುವಟಿಕೆಗಳ ವ್ಯತ್ಯಾಸದಿಂದಲೂ ನೋವು ಕಾಡಬಹುದು.

ಇಂತಹ ‌‌ಬದಲಾವಣೆಯನ್ನು ಗುರುತಿಸಿ ಸರಿಪಡಿಸಬೇಕು. ನೋವು ಅನುಭವಿಸುತ್ತಾ ನೋವಿನ ಮೂಲವನ್ನು ನಿರ್ಲಕ್ಷಿಸುವುದು ಮತ್ತೊಂದು ರೋಗಕ್ಕೆ ಶುರುವಾಗಬಹುದು. ನೋವಿನ ಸಂವೇದನೆಯನ್ನು ಕೊಲ್ಲುವ ಔಷಧಗಳ ಸತತ ಸೇವನೆಯಿಂದ ಶರೀರದ ಅಂಗಾಂಶಗಳು ಮತ್ತಷ್ಟು ಹಾನಿಯಾಗುವುದು ನಿಶ್ಚಿತ. ನೋವು, ನಮ್ಮೊಳಗಿನ ಯಾವುದೋ ಅಸೌಖ್ಯದ ಮೊದಲ ಸೂಚನೆ, ಅಪಾಯದ ಮೊದಲ ಕರೆಗಂಟೆ. ಆದ್ದರಿಂದ ಯಾವುದೇ ನೋವಿರಲಿ, ತತ್‌ಕ್ಷಣ ಮೂಲಕಾರಣವನ್ನು ಪರಿಹರಿಸಿ.

ಕಾರಣಕ್ಕೆ ತಕ್ಕಂತೆ ಪರಿಹಾರ

ಚಲಿಸುವ ವಾಹನದಿಂದ ಬಿದ್ದಿದ್ದು, ಮೆಟ್ಟಿಲಿನಿಂದ ಬಿದ್ದಿದ್ದು, ಭಾರವಾದ ವಸ್ತುಗಳಿಂದ ಪೆಟ್ಟು, ಮುಷ್ಟಿಯಿಂದ ಹೊಡೆತ ಇಂತಹ ಅನಿರೀಕ್ಷಿತ ನೋವುಗಳಿಗೆ ಮೊದಲ ಮತ್ತು ಸಂಪೂರ್ಣ ಚಿಕಿತ್ಸೆ ತುಪ್ಪ ಅಥವಾ ಎಳ್ಳೆಣ್ಣೆ. ಇವುಗಳಲ್ಲಿ ಲಭ್ಯವಿರುವ ಒಂದನ್ನು ನೋವಾದ ಜಾಗಕ್ಕೆ ಮೃದುವಾಗಿ ಮತ್ತು ಧಾರಾಳವಾಗಿ ಸವರಿ ತಣ್ಣೀರುಪಟ್ಟಿ ಅಥವಾ ಮಂಜುಗಡ್ಡೆ ಅಥವಾ ಚಂದನದಂತಹ ಶೀತಲಲೇಪ ಹಚ್ಚಿ ಶೀತಚಿಕಿತ್ಸೆ ಮಾಡುವುದರಿಂದ ತ್ವರಿತವಾಗಿ ಆರಾಮವಾಗಬಹುದು. ಅರ್ಧ ಮುಕ್ಕಾಲುಗಂಟೆಯಲ್ಲಿ ನೋವು ನಿವಾರಣೆಯಾಗದಿದ್ದರೆ ಮೂಳೆ ಅಥವಾ ಮಜ್ಜೆ ಘಾಸಿಗೊಂಡಿದ್ದು, ಮುಂದಿನ ಸೂಕ್ತಕ್ರಮ ಅಗತ್ಯ.

ಗಾಳಿಯಲ್ಲಿ ಓಡಾಟ, ಪ್ರಯಾಣ, ಆಟ, ದೀರ್ಘನಡಿಗೆ, ಈಜು ಮುಂತಾದ ಕಾರಣಗಳಿಂದ ಕೈಕಾಲು, ಮೈನೋವು ಕಾಣಿಸಿಕೊಂಡಿದ್ದರೆ ಒಂದು ಮೃದುಸುಖವಾದ ತೈಲಾಭ್ಯಂಗ ಮತ್ತು ಹೂಬಿಸಿನೀರಿನ ಸ್ನಾನ ಹಿತತರುತ್ತದೆ. ಬೆಚ್ಚಗಿನ ಎಳ್ಳೆಣ್ಣೆಯನ್ನು ಅಂಗೈಯಲ್ಲಿ ತುಂಬಿಕೊಂಡು, ಸ್ವತಃ, ಒತ್ತಡ ಹಾಕದೆ ದೇಹವಿಡೀ ಸವರಿಕೊಳ್ಳುವುದಕ್ಕೆ ಹತ್ತು ಹದಿನೈದು ನಿಮಿಷಗಳೇ ಸಾಕು. ದೇಹವು ಎಣ್ಣೆಯನ್ನು ಹೀರಿಕೊಳ್ಳುತ್ತದೆ. ನಂತರ ಕಡಲೆಹಿಟ್ಟು ಅಥವಾ ಮೃದುಮಾರ್ಜಕದಿಂದ ತೊಳೆಯಬಹುದು. ಸ್ನಾನ ಮುಗಿಸುವಷ್ಟರಲ್ಲಿ ನೋವು ಶಮನವಾಗಿರುತ್ತದೆ. ನೀರನ್ನೂ, ಇತರ ದ್ರವ-ಘನಾಹಾರವನ್ನೂ ಸೇವಿಸದೆ, ಖಾಲಿಹೊಟ್ಟೆಯಲ್ಲಿ ಇದನ್ನು ಮಾಡುವುದು ಪರಿಣಾಮಕಾರಿ. ಸ್ನಾನದ ನಂತರ ಪಾಯಸ, ಖೀರು, ತುಪ್ಪದ ಅನ್ನದಂತಹ ಆಹಾರವಿರಲಿ.

ಬಿಸಿಲಿಗೆ ಮೈಯೊಡ್ಡಿ, ಓಡಾಡಿ, ತಲೆ-ಮೈನೋವು ಕಾಣಿಸಿಕೊಂಡಿದ್ದರೆ ತುಪ್ಪದ ತಿಳಿ ಅಥವಾ ತುಪ್ಪವನ್ನು ಕರಗಿಸಿ ತಲೆಗೆ, ಇಡೀ ಮೈಗೆ ನೆನೆಯುವಷ್ಟು ಹಚ್ಚಿಕೊಂಡು ತಣ್ಣೀರಿನಲ್ಲಿ ತಲೆ, ಮೈ ಸ್ನಾನಮಾಡುವುದು ಆರಾಮದಾಯಕ. ಸ್ನಾನಮಾಡಿ ಬೆಣ್ಣೆ ಸಕ್ಕರೆ, ತುಪ್ಪಸಕ್ಕರೆ, ಹಾಲುಸಕ್ಕರೆ, ಹಾಲು–ಅನ್ನ ಆಹಾರವಾಗಿ ಸೂಕ್ತ. ಉಪ್ಪು-ಹುಳಿ-ಖಾರರಸಗಳು ಮತ್ತೆ ವೇದನೆಯನ್ನು ಹೆಚ್ಚಿಸಬಹುದು.

ಮಕ್ಕಳಾಟವನ್ನು ನಿಯಂತ್ರಿಸುವುದು ಕಷ್ಟ. ಇಡೀ ದಿನದ ಆಟೋಟಗಳಿಂದ ಮಕ್ಕಳಿಗೆ ಕೈಕಾಲುಮೈ ನೋವು ಸಹಜ. ನಿತ್ಯವೂ ಎಳ್ಳೆಣ್ಣೆ ಸವರಿ ಸ್ನಾನ ಮಾಡಿಸುವುದು, ರಾತ್ರಿ ಮಲಗುವಾಗ ಕಾಲು, ಪಾದಗಳಿಗೆ ತುಪ್ಪ ಸವರುವ ಅಭ್ಯಾಸ ನೋವು, ಆಯಾಸ, ಅನಿದ್ರೆಯನ್ನು ನಿವಾರಿಸುತ್ತದೆ. ಇದು ವಯಸ್ಕರಿಗೂ ಹಿತಕರ.

ದಿವಸವೂ ಕೆಲವು ತಾಸು ಪಯಣಿಸುವವರು, ಭಾರವೆತ್ತುವವರು, ದೈಹಿಕಶ್ರಮಪಡುವವರು ದಿನಚರಿಯಲ್ಲಿ ಇಡೀ ಶರೀರಕ್ಕೆ ಎಳ್ಳೆಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ, ಕೈಕಾಲು ಮೈನೋವಿನಿಂದ ಮುಕ್ತಿ ಪಡೆಯಬಹುದು. ಆಹಾರದಲ್ಲಿ ಮಾಂಸ, ಹಾಲು, ತುಪ್ಪ, ಎಣ್ಣೆಯ ಜಿಡ್ಡು ಅಗತ್ಯ.

ವೃದ್ಧಾಪ್ಯದಲ್ಲಿ ಕಾಡುವ ನೋವುಗಳಿಗೆ ಬೆಚ್ಚಗಿನ ಎಳ್ಳೆಣ್ಣೆ, ವಾತಹರತೈಲದಿಂದ ತಲೆ, ಶರೀರ, ಪಾದಗಳಿಗೆ ಸವರುವ ಅಭ್ಯಾಸದಿಂದ ಸುಖ ಕಾಣಬಹುದು. ತಾಜಾ ಬಿಸಿ ಆಹಾರದಲ್ಲಿ ವಿಶೇಷವಾಗಿ ತುಪ್ಪ, ಹಾಲಿನ ಉಪಯೋಗ ನರಮಂಡಲಗಳ ಕಾರ್ಯಗಳಿಗೆ ಸಹಕಾರಿ.
ರಾತ್ರಿ ತಡವಾಗಿ ಮಲಗುವ ಅಭ್ಯಾಸ, ನಿದ್ರೆಯ ಕೊರತೆ, ಇತರ ಕಾರಣಗಳಿಂದ ನಿದ್ರಾಹೀನತೆ ಉಂಟಾಗಿದ್ದರೆ ನೋವು ಕಾಣಿಸಿಕೊಳ್ಳುವುದು. ಇಂತಹವರು ರಾತ್ರಿ ಸಕಾಲದಲ್ಲಿ ನಿದ್ರೆ ಮಾಡುವುದೇ ಸಂಪೂರ್ಣ ಪರಿಹಾರ. ಹಗಲುನಿದ್ರಿಸುವಾಗ ಯಾವ ಆಹಾರವನ್ನೂ ಸೇವಿಸದೆ ನಿದ್ರೆ ತೀರುವ ವರೆಗೆ ಮಲಗುವುದು ಕ್ಷೇಮ. ದೀರ್ಘಕಾಲದ ನಿದ್ರೆಯ ಕೊರತೆಯಿಂದ ಸದಾ ಕೈಕಾಲು ಮೈನೋವು ಕಾಡಬಹುದು. ಇವರಿಗೆ ಔಷಧಸಿದ್ಧತೈಲಗಳಿಂದ ಅಭ್ಯಂಜನ, ತುಪ್ಪಹಾಲಿನ ಆಹಾರ, ಮನಸ್ಸನ್ನು ತಿಳಿಗೊಳಿಸಿ ನಿದ್ರೆಗೆ ಪೂರಕವಾಗುವ ಜೀವನಶೈಲಿಯನ್ನು ರೂಢಿಸಬೇಕಾಗುತ್ತದೆ.

ದಿನವಿಡೀ ಕೂರುವುದರಿಂದ, ಶಾರೀರಿಕ ಚಟುವಟಿಕೆ ಮಾಡದಿರುವುದರಿಂದ, ನಿತ್ಯವೂ ಹಗಲುನಿದ್ರೆಯಿಂದ, ವ್ಯಾಯಾಮರಹಿತ ಜೀವನಶೈಲಿಯಿಂದಲೂ ನೋವುಗಳು ಕಾಡಬಹುದು. ಇಂತಹವರು ಜೀರ್ಣಕ್ರಿಯೆಗೆ ಸುಲಭವಾಗುವಂತೆ ಹಸಿವನ್ನು ಗಮನಿಸಿಯೇ ಸೇವಿಸುವ ಅಭ್ಯಾಸ ಮಾಡಿಕೊಳ್ಳಬೇಕು. ನಿತ್ಯವೂ ಸಾಸಿವೆ ಎಣ್ಣೆ, ಬಿಸಿ ಎಳ್ಳೆಣ್ಣೆ ಹಚ್ಚಿ ಏದುಸಿರು, ಬೆವರುವಂತೆ ಶರೀರಕ್ಕೆ ಆಯಾಸವೆನಿಸುವಂತೆ ವ್ಯಾಯಾಮ, ಶ್ರಮ, ಕೆಲಸಮಾಡಬೇಕು. ನಂತರ ಬಿಸಿನೀರಿನಿಂದ ಸ್ನಾನಮಾಡಬೇಕು. ಲವಲವಿಕೆಯಿಂದ, ಚಟುವಟಿಕೆಗಳಿಂದ ಈ ನೋವು ಮಾಯವಾಗುತ್ತದೆ.

ಹಸಿನಾರು, ಜಿಗುಟಾದ ಆಹಾರ, ಮೊಳಕೆಬಂದ ಹಸಿಕಾಳು, ಆಲೂಗಡ್ಡೆ, ಗೆಣಸಿನಂತಹ ಗೆಡ್ಡೆ, ಪುಟಾಣಿ/ಹುರಿಗಡಲೆ, ಹುರಿಗಾಳುಗಳು, ಅವರೆ, ಗ್ರೀನ್ ಪೀ, ಕಡ್ಲೆಪುರಿಯಂತಹ ಒಣಕಲು ಆಹಾರಸೇವನೆಯಿಂದ ಕಾಲು ಮೈನೋವು ಕಾಡಬಹುದು. ಇದಕ್ಕೆ ಪ್ರತಿಯಾಗಿ ಆಹಾರದಲ್ಲಿ ಉತ್ತಮ ಗುಣಮಟ್ಟದ (ರಿಫೈನ್ಡ್ ಆಯಿಲ್ ಅಲ್ಲ) ಸೋಸಿದ ಎಣ್ಣೆ, ತುಪ್ಪ, ಮಾಂಸ ಬೇಯಿಸಿದ ನೀರು, ಛರ್ಬಿ, ಮಜ್ಜೆ ಸೇವಿಸಬಹುದು. ಒಗ್ಗರಣೆ ಹಾಕಿದ ಜೀರಿಗೆಸಾರು, ಶುಂಠಿಸಾರು, ದಾಳಿಂಬೆ ಸಾರು ಹಿತ. ಇವುಗಳಿಂದ ನರಗಳು ಶಾಂತವಾಗುತ್ತವೆ. ನೋವು ಶಮನವಾಗುತ್ತದೆ.

ದೀರ್ಘಕಾಲದ ಕೈಕಾಲು, ಮೈ ನೋವುಗಳಿಗೆ ದಿನಚರಿಯ ಆಹಾರ, ನಿದ್ರೆ, ಚಟುವಟಿಕೆಗಳ ತಪ್ಪಾದ ಅಭ್ಯಾಸವು ಕಾರಣವಾಗಿರುತ್ತದೆ. ಕಾರಣಗಳನ್ನು ಗುರುತಿಸಿ ಸರಿಪಡಿಸುವುದರ ಜೊತೆಗೆ ಚಿಕಿತ್ಸೆಯೂ ಅವಶ್ಯ. ವಾತಹರ ತೈಲ, ಘೃತಗಳಿಂದ ಆಂತರಿಕಚಿಕಿತ್ಸೆ, ಅಭ್ಯಂಗ, ಉದ್ವರ್ತನ, ಉತ್ಸಾದನ, ಉಪನಾಹದಂತಹ ಸ್ವೇದ, ಲೇಪ, ಬಂಧನ, ನಿರೂಹ-ಸ್ನೇಹಬಸ್ತಿಗಳ ಚಿಕಿತ್ಸೆ ಪರಿಹಾರ ನೀಡಬಹುದು.

ನೋವು ಎಂಬ ಲಕ್ಷಣವು ಎಲ್ಲಿ ಕಾಣಿಸಿದೆ ಎಂಬುದು ಮುಖ್ಯ. ಎಲ್ಲ ನೋವುಗಳೂ, ಎಲ್ಲರ ನೋವೂ ಒಂದೇ ಅಲ್ಲ. ಕಾರಣಕ್ಕೆ ತಕ್ಕ ಲಕ್ಷಣ ಮತ್ತು ಪರಿಹಾರವು ಪರಸ್ಪರ ಸಂಬಂಧಪಟ್ಟಿದೆ.

ಮಾಂಸಖಂಡಗಳು, ರಕ್ತನಾಳಗಳು, ನರಮಂಡಲ, ಮೂಳೆ, ಮೃದ್ವಸ್ಥಿ, ಮಜ್ಜೆ, ಎಲ್ಲವೂ ನೋವಿನ ಆಕರಗಳು. ಪ್ರತಿ ಅಂಗಾಂಶಗಳ ಅಗತ್ಯ ಮತ್ತು ಆರೈಕೆ ಬೇರೆ.

ಸಾಮಾನ್ಯವಾಗಿ ನೋವು ಶರೀರದಲ್ಲಿ ವ್ಯಕ್ತವಾಗುವುದು. ಮನಸ್ಸಿನ ವೇದನೆಯೂ ದೇಹದ ಮೂಲಕವೇ ತೋರ್ಪಡುತ್ತದೆ. ಸದಾ ಆನಂದವಾಗಿರುವಷ್ಟು ನ್ಯಸ್ತ ಬದುಕು ಅಸಾಧ್ಯವೇನಲ್ಲ. ಚಿಂತನೆಗಳು ಆರೋಗ್ಯಕರ. ಚಿಂತೆ ನೋಯುವಂತೆ ಮಾಡುತ್ತದೆ. ಮನಸ್ಸಿನ ಮೂಲದ ದೇಹದ ನೋವಿಗೆ ತೀವ್ರತೆ ಜಾಸ್ತಿ. ಇಂತಹ ಮಾನಸಿಕ ಮೂಲದ ಯಾತನೆಗಳಿಗೆ ಪರಿಹಾರವೂ ವ್ಯಕ್ತಿಗತ. ನೋವುನಿವಾರಕ ಮಾತ್ರೆಗಳಿಗೆ ದಾಸನಾಗುವುದು ಮತ್ತೊಂದು ಅನಾರೋಗ್ಯಕ್ಕೆ ತುತ್ತಾಗಬಹುದು.

ಸಕಾಲ ತಾಜಾ ಹಿತಮಿತ ಆಹಾರ, ರಾತ್ರಿ ಬೇಗನಿದ್ರೆ, ಹಗಲಿಡೀ ಸಂತೃಪ್ತಿದಾಯಕ ಕಾಯಕ ಶರೀರ-ಮನಸ್ಸಿನ ನೋವಿನ ಮೂಲವನ್ನು ದೂರವಿರಿಸಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT