ಶನಿವಾರ, ಡಿಸೆಂಬರ್ 5, 2020
19 °C
ಇಂದು ಮಾನಸಿಕ ಒತ್ತಡ ಜಾಗೃತಿ ದಿನ

PV Web Exclusive: ತಿಂದುಣ್ಣುವುದರಲ್ಲಿದೆ ಮನಸಿನ ಔಷಧಿ

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

Prajavani

ಪ್ರತಿವರ್ಷ ನವೆಂಬರ್‌ ತಿಂಗಳ ಮೊದಲ ಬುಧವಾರವನ್ನು ಒತ್ತಡ ಜಾಗೃತಿ ದಿವನ್ನಾಗಿ ಆಚರಿಸಲಾಗುತ್ತದೆ. ಮನುಷ್ಯನ ಮಾನಸಿಕ–ದೈಹಿಕ ಯೋಗಕ್ಷೇಮದಲ್ಲಿ ಬಹಳ ಮುಖ್ಯ ಪಾತ್ರ ವಹಿಸುವ ಒತ್ತಡ, ಆತಂಕ, ಖಿನ್ನತೆಯಂತಹ ಉದ್ವಿಗ್ನತೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಇದನ್ನು ಸಾಧಿಸಲು ಸಾಕಷ್ಟು ಮಾರ್ಗಗಳಿವೆ. ಸೇವಿಸುವ ಆಹಾರ ಮುಖೇನ ಮನಸಿನ ಕಾಯಿಲೆಗಳನ್ನು ಜಯಿಸುವ ಪರಿಣಾಮಕಾರಿ ದಾರಿಯೊಂದಿದೆ, ಅದರ ಬಗ್ಗೆ ಇಲ್ಲಿದೆ ಮಾಹಿತಿ...

***

Tell me what you eat and I will tell you what you are-ಎನ್ನುವುದು ಫ್ರೆಂಚ್‌ ಗಾದೆಮಾತು. ಇದು ಎಲ್ಲಾ ಕಡೆ, ಎಲ್ಲಾ ಕಾಲಕ್ಕೆ ಸಲ್ಲುವ ಮಾತು. ನಿಜ, ಸರಿಯಾದ ಆಹಾರ ಕ್ರಮದಿಂದ ಒತ್ತಡ–ಖಿನ್ನತೆಯನ್ನು ದೂರ ಮಾಡಿಕೊಳ್ಳಲು ಸಾಧ್ಯವಿದೆ ಎನ್ನುತ್ತದೆ ಪ್ರಾಚೀನ ವೈದ್ಯಶಾಸ್ತ್ರ. ನಾವು ತಿನ್ನುವ ಆಹಾರ ನಮ್ಮ ಮನೋ–ದೈಹಿಕ ಆರೋಗ್ಯವನ್ನು ನಿರ್ಧರಿಸುತ್ತದೆ. ಮಾನಸಿಕ ಒತ್ತಡ, ಖಿನ್ನತೆಯಂತಹ ವೈಪರೀತ್ಯಗಳನ್ನು ಸಹ ಸಮತೋಲನಕ್ಕೆ ತರುವ ದಾರ್ಢ್ಯ ಆಹಾರದಲ್ಲಿದೆ ಎನ್ನುವುದನ್ನು ವಿಜ್ಞಾನವೂ ಪುಷ್ಟೀಕರಿಸುತ್ತದೆ. ಸಾಂಪ್ರದಾಯಿಕ ಆಹಾರಕ್ರಮಗಳನ್ನು ಅನುಸರಿಸುವವರಲ್ಲಿ ಒತ್ತಡ–ಖಿನ್ನತೆಯ ಅಪಾಯವು ಶೇ25 ರಿಂದ ಶೇ35ರಷ್ಟು ಕಡಿಮೆ ಎಂದು ಅನೇಕ ಅಧ್ಯಯನಗಳು ದೃಢಪಡಿಸಿವೆ. ಇದರಲ್ಲಿ ತರಕಾರಿಗಳು, ಹಣ್ಣುಗಳು, ಧಾನ್ಯಗಳು, ಮೀನು ಮತ್ತು ಸಮುದ್ರಾಹಾರಗಳು ಸೇರಿವೆ. ಸಂಸ್ಕರಿಸಿದ ಆಹಾರ ಮತ್ತು ಸಕ್ಕರೆಯುಕ್ತ ಆಹಾರ ದೇಹಕ್ಕಷ್ಟೇ ಅಲ್ಲ ಮನಸ್ಸಿನ ಆರೋಗ್ಯಕ್ಕೂ ಮಾರಕ.

ಸ್ವತಃ ಆಹಾರ ಅಲರ್ಜಿಯಿಂದ ಚೇತರಿಸಿಕೊಂಡಿರುವ ಆಹಾರ ತಜ್ಞೆ, ಆಂಕೊಸರ್ಜನ್  ಡಾ. ನಂದಾ ರಜನೀಶ್‌, ‘ಒತ್ತಡ ಜಾಗೃತಿ ದಿನ’ದ ನೆಪದಲ್ಲಿ ನಾವು ಸೇವಿಸುವ ಆಹಾರ–ಪಾನೀಯ ಹೇಗೆ ನಮ್ಮ ಮನೋದೈಹಿಕ ಸ್ವಾಸ್ತ್ಯವನ್ನು ಕಾಪಾಡಬಲ್ಲದು, ಯಾವ ಯಾವ ಆಹಾರಗಳು ನಮ್ಮ ಆರೋಗ್ಯವನ್ನು ನಿರ್ಧರಿಸುತ್ತವೆ ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ:

‘ಒತ್ತಡ’ ಮನುಷ್ಯನ ವೈರಿ ಎನ್ನುತ್ತದೆ ಮನೋವಿಜ್ಞಾನ. ಒತ್ತಡ ಹೇಗೆ ಉಂಟಾಗುತ್ತದೆ, ಯಾವುದರಿಂದ ಉಂಟಾಗುತ್ತದೆ, ಎಷ್ಟು ಕಾಲ ನಮ್ಮೊಳಗೆ ಉಳಿಯುತ್ತದೆ ಎನ್ನುವ ಅಂಶಗಳು ಅದು ನಮ್ಮಲ್ಲಿ ಉಂಟುಮಾಡಬಹುದಾದ ಬಾಧೆಯನ್ನು ನಿರ್ಧರಿಸುತ್ತವೆ. ಕೆಲವು ಒತ್ತಡಗಳು ಹೀಗೆ ಬಂದು ಹಾಗೆ ಹೋಗುತ್ತವೆ, ಮತ್ತೆ ಕೆಲವು ನಿಮಿಷ, ಗಂಟೆ, ದಿನ, ವರ್ಷಗಳ ಕಾಲ ನಮ್ಮೊಳಗೇ ಉಳಿಯುತ್ತವೆ. ಇನ್ನು ಕೆಲವು ಗಂಭೀರ ಮತ್ತು ದೀರ್ಘಕಾಲೀನ. ಯಾವುದೇ ಪ್ರಕಾರದ ಒತ್ತಡವಾಗಿರಲಿ. ಅದು ನಮ್ಮ ದೇಹ, ಮನಸ್ಸು, ಜೀವನದ ಮೇಲೆ ಬೀರುವ ಪ್ರಭಾವ ಹಾಗೂ ಉಂಟು ಮಾಡುವ ಹಾನಿಯ ಪ್ರಮಾಣ ಮಾತ್ರ ಗಂಭೀರವಾದುದು. ದೈಹಿಕ–ಮಾನಸಿಕ ಸ್ವಾಸ್ತ್ಯವನ್ನು ಹದಗೆಡಿಸುವ ಜೊತೆಗೆ ವ್ಯಕ್ತಿಯ ಔದ್ಯೋಗಿಕ, ಕೌಟುಂಬಿಕ, ಸಾಮಾಜಿಕ ಜೀವನವನ್ನೂ ಬಾಧಿಸಬಲ್ಲದು.

ಒತ್ತಡವನ್ನು ನಿಭಾಯಿಸಲು ಹಲವಾರು ಮಾರ್ಗಗಳಿವೆ. ಸಾತ್ವಿಕ ಆಹಾರ ಒಂದು ಪ್ರಮುಖ ಪರಿಹಾರಕ್ರಮ. ಆಹಾರದಲ್ಲಿನ ನಿರ್ದಿಷ್ಟ ಪೋಷಕಾಂಶಗಳು ಒತ್ತಡದ ಪರಿಣಾಮವನ್ನು ಕಡಿಮೆ ಮಾಡುತ್ತವೆ. ಕೆಲ ಪ್ರಕಾರದ ಪೋಷಕಾಂಶಗಳು ಮೆದುಳಿನ ಕಾರ್ಯವನ್ನು ಸುಧಾರಿಸುವ ಜೊತೆಗೆ, ಪ್ರತಿರಕ್ಷಣಾ ಕಾರ್ಯವನ್ನು ಸುಗಮಗೊಳಿಸುತ್ತವೆ. ರಕ್ತದೊತ್ತಡವನ್ನು ಕಡಿಮೆ ಮಾಡುತ್ತವೆ, ರಕ್ತಪರಿಚಲನೆಗೆ ಸಹಾಯ ಮಾಡುವುದಲ್ಲದೆ, ದೇಹದಿಂದ ಟಾಕ್ಸಿನ್‌ಗಳನ್ನು ಹೊರಹಾಕುತ್ತವೆ. ಮಾನಸಿಕ ಉದ್ವೇಗಗಳನ್ನು ನಿಯಂತ್ರಿಸುವ–ನಿಗ್ರಹಿಸುವ ಮೂಲಕ ಮನಸ್ಸನ್ನು ವ್ಯವಸ್ಥಿತವಾಗಿಡುವ ಗುಣ ಈ ಆಹಾರದಲ್ಲಿದೆ. ಮನಸ್ಸನ್ನು ಸಮಚಿತ್ತದಿಂದಿಡುವ ಅಂತಹ ಕೆಲವು ಆಹಾರಗಳು ಇಲ್ಲಿವೆ:

ಒಣಹಣ್ಣುಗಳು (ಡ್ರೈ ಫ್ರೂಟ್ಸ್‌): ಅತಿಯಾದ ಕೆಲಸದ ಒತ್ತಡಲ್ಲಿರುವಾಗ ಆಹಾರದ ಕಡೆ ಗಮನಹರಿಸುವುದು ಕಷ್ಟವಾಗುತ್ತದೆ. ನಾಲಿಗೆಗೆ ಹಿತವೆನಿಸುವ, ಹಸಿವನ್ನು ಮರೆಸುವ ಏನೊ ಒಂದು ತಿಂದರೆ ಸಾಕು ಎಂದೆನಿಸುವುದು ಸಾಮಾನ್ಯ. ಅಂತಹ ಸಮಯದಲ್ಲಿ ಅನಾರೋಗ್ಯಕರ ಖಾದ್ಯಗಳಿಗೆ ಹೋಗುವ ಬದಲು ಸುಲಭವಾಗಿ ದೊರೆಯುವ ಹಾಗೂ ಆರೋಗ್ಯವನ್ನು ಬೆಂಬಲಿಸುವ ಡ್ರೈಫ್ರೂಟ್‌ಗಳ ಮೊರೆ ಹೋಗಬಹುದು. ಇವು ಶಕ್ತಿಯನ್ನು ಒದಗಿಸುವ ಜೊತೆಗೆ ತ್ರಾಣವನ್ನು ಹೆಚ್ಚಿಸುತ್ತವೆ. ಜೀರ್ಣಕ್ರಿಯೆಗೂ ಸಹಾಯಕ.

ಬ್ರೊಕೊಲಿ: ಫೈಬರ್, ವಿಟಮಿನ್ ಸಿ, ವಿಟಮಿನ್ ಕೆ, ಕಬ್ಬಿಣ ಮತ್ತು ಪೊಟ್ಯಾಸಿಯಮ್ ಸೇರಿದಂತೆ ಅನೇಕ ಪೋಷಕಾಂಶಗಳಿರುವ ಬ್ರೊಕೊಲಿ ಆಹಾರದಲ್ಲಿ ಪರಿಗಣಿಸಲೇಬೇಕಿರುವ ತರಕಾರಿ. ಇದು ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದ್ದು, ಇದನ್ನು ಆವಿಯಲ್ಲಿ ಬೇಯಿಸಿ ಸೇವಿಸುವುದು ಹೆಚ್ಚು ಉಪಯುಕ್ತ. ಎಲೆಕೋಸು, ಕ್ಯಾಬೇಜ್‌ನಲ್ಲಿ ಸಹ ಸಾಕಷ್ಟು ಪೋಷಕಾಂಶಗಳಿವೆ. 

ಬೀನ್ಸ್ ಮತ್ತು ಮಸೂರ: ಬೀನ್ಸ್ ಮತ್ತು ಮಸೂರದಲ್ಲಿ ಕೊಬ್ಬಿನಂಶ ಕಡಿಮೆ ಮತ್ತು ವಿಟಮಿನ್ ಬಿ, ಕೆ ಮತ್ತು ಮೆಗ್ನೀಸಿಯಮ್ ಅಂಶ ಹೆಚ್ಚಿರುತ್ತದೆ. ಸಸ್ಯಾಹಾರಿಗಳಿಗೆ ದ್ವಿದಳ ಧಾನ್ಯಗಳು ಹೆಚ್ಚಿನ ಪೋಷಕಾಂಶಗಳನ್ನು ಒದಗಿಸುತ್ತವೆ. ಮಸೂರ ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ. ಹಾಗೆಯೇ ಅದರಲ್ಲಿನ ನಾರಿನಂಶವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಓಟ್ ಮೀಲ್ ಮತ್ತು ಬಾರ್ಲಿ: ಬಾರ್ಲಿ ಮತ್ತು ಓಟ್ ಮೀಲ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಮನ್ನಣೆ ಪಡೆಯುತ್ತಿರುವ ಪ್ರಕಾರಗಳು. ದುಡಿಯುವ ದಂಪತಿಗಳಿಗೆ ಇದೊಂದು ಅತ್ಯುತ್ತಮ ಆಯ್ಕೆಯಾಗಿದ್ದು, ಅವಸರದಲ್ಲಿಯೂ ಆರೋಗ್ಯವನ್ನು ಕಾಪಾಡುವ ಸೂಪರ್‌ ಫುಡ್‌ ಎಂದೇ ಹೇಳಬಹುದು. ಓಟ್ಸ್ ಮತ್ತು ಬಾರ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ, ಟೈಪ್ 2 ಡಯಾಬಿಟಿಸ್ ಮತ್ತು ಇತರ ಹೃದಯ ಸಂಬಂಧಿತ ಕಾಯಿಲೆಗಳನ್ನು ತಡೆಯುತ್ತವೆ.

ಹಸಿರೆಲೆ– ಸೊಪ್ಪು: ಹಸಿರೆಲೆಯ ಎಲ್ಲಾ ಸೊಪ್ಪುಗಳಲ್ಲಿ ವಿಟಮಿನ್ ಎ, ಬಿ, ಸಿ, ಇ ಮತ್ತು ಕೆ ಸಮೃದ್ಧವಾಗಿರುತ್ತವೆ. ಕಬ್ಬಿಣದ ಅಂಶವೂ ಹೆರಳ. ಸೊಪ್ಪು ಸೇವನೆಯಿಂದ ದೇಹಕ್ಕೆ ಅಗತ್ಯ ಪೋಷಕಾಂಶಗಳು ದೊರೆಯುವುದರಿಂದ ದೈಹಿಕ ಆರೋಗ್ಯಕ್ಕೂ ಒಳ್ಳೆಯದು, ಮನಸ್ಸಿಗೂ ಹಿತ.


ಡಾ. ನಂದಾ ರಜನೀಶ್

ಗಿಡಮೂಲಿಕೆಗಳು ಮತ್ತು ಮಸಾಲೆಗಳು

ಗಿಡಮೂಲಿಕೆಗಳು ಮತ್ತು ಮಸಾಲೆಗಳು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಅರಿಶಿನ, ಬೇ ಎಲೆಗಳು, ದಾಲ್ಚಿನ್ನಿ, ಶುಂಠಿ, ಜೀರಿಗೆ, ಬೆಳ್ಳುಳ್ಳಿ, ಲವಂಗವನ್ನು ಅಡುಗೆಯಲ್ಲಿ ಬಳಸುವುದರಿಂದ ಸಾಕಷ್ಟು ಆರೋಗ್ಯ ಲಾಭಗಳಿವೆ.

ಮೆಲಟೋನಿನ್

ದೇಹಕ್ಕೆ ಅತ್ಯಗತ್ಯವಾಗಿ ಬೇಕಿರುವ ಮೆಲಟೋನಿನ್ ಪ್ರಮಾಣವನ್ನು ಹೆಚ್ಚು ಸೇವಿಸಿ. ಮೊಟ್ಟೆ, ಮೀನು, ಬೀಜಗಳಲ್ಲಿ ಮೆಲಟೋನಿನ್ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಇದು ನಿದ್ರೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆರಾಮದಾಯಕ ನಿದ್ರೆಯಿಂದ ಮಾನಸಿಕ ಒತ್ತಡದ ಮಟ್ಟ ತಗ್ಗುತ್ತದೆ.

ಮಾನಸಿಕ ಒತ್ತಡವನ್ನು ಕಡಿಮೆ ಮಾಡುವಲ್ಲಿ ಈ ಮೂರು ಅಂಶಗಳು ತಮ್ಮದೇ ಆದ ಪ್ರಭಾವ ಹೊಂದಿವೆ

1. ಏನು ತಿನ್ನುತ್ತೇವೆ (ಆಹಾರ ಪ್ರಕಾರ)

2. ಎಷ್ಟು ತಿನ್ನುತ್ತೇವೆ (ಪ್ರಮಾಣ)

3. ಯಾವಾಗ ತಿನ್ನುತ್ತೇವೆ (ಸಮಯ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು