ಮಂಗಳಾಗೆ 38 ವರ್ಷ, 2 ಹೆರಿಗೆ ಸಹಜವಾಗಿಆಗಿದೆ. ಈಗ ಅವಳಿಗೆ ಕೆಮ್ಮಿದರೆ, ಸೀನಿದರೆ ಮೂತ್ರ ತೊಟ್ಟಿಕ್ಕುತ್ತದೆ. ಎಲ್ಲಿಗೆ ಹೋಗುವುದಕ್ಕೂ ಮುಜುಗರ. ಹೇಳಿಕೊಳ್ಳಲು ಸಂಕೋಚ.
ಗೀತಾಳಿಗೆ 42 ವರ್ಷ, ಗರ್ಭಕೋಶದ ಶಸ್ತ್ರಚಿಕಿತ್ಸೆಯಾಗಿ 2 ವರ್ಷಗಳಾಗಿವೆ. ಅವಳಿಗೆ ಪದೇ ಪದೇ ಮೂತ್ರಕ್ಕೆ ಹೋಗಬೇಕೆ ನಿಸುತ್ತದೆ. ಒಮ್ಮೊಮ್ಮೆ ಶೌಚಾಲಯಕ್ಕೆ ಹೋಗಿ ಕುಳಿತುಕೊಳ್ಳುವ ಮೊದಲೇ ಮೂತ್ರ ಬಂದೇ ಬಿಡುತ್ತದೆ. ಇದರಿಂದ ಅವಳು ಖಿನ್ನತೆಗೆ ಒಳಗಾಗಿದ್ದಾಳೆ.
ಅಪರ್ಣ 8 ತಿಂಗಳ ಗರ್ಭಿಣಿ. ಅವಳಿಗೆ ಜೋರಾಗಿ ಮಾತನಾಡಿದರೆ, ಕೆಮ್ಮಿದರೆ, ಸೀನಿದರೆ ಮೂತ್ರ ಸೋರುವಿಕೆಯಾಗುತ್ತದೆ. ಹೆರಿಗೆಯ ನಂತರವೂ ಇದು ಹೀಗೆಯೇ ಮುಂದುವರೆಯುತ್ತದೆಯಾ? ಎಂಬ ಆತಂಕದಿಂದ ಕಂಗಾಲಾಗಿದ್ದಾಳೆ.
ಬಹಳಷ್ಟು ಮಹಿಳೆಯರು ಈ ರೀತಿಯ ಮೂತ್ರದ ಅಸಂಯಮ ಅಥವಾ ಮೂತ್ರ ವಿಸರ್ಜನೆ ಸಮಸ್ಯೆ ಎದುರಿಸುತ್ತಿದ್ದಾರೆ. ಒಂದಲ್ಲಾ ಒಂದು ಸಂದರ್ಭದಲ್ಲಿ ಇಂಥ ಸಮಸ್ಯೆ ಉಂಟಾಗಿ, ಅದನ್ನು ಹೇಳಿಕೊಳ್ಳಲು ಆಗದೇ, ಅನುಭವಿಸಲೂ ಸಾಧ್ಯವಾಗದೇ ಕೆಲವರು ಖಿನ್ನತೆಗೂ ಒಳಗಾಗುತ್ತಾರೆ.
ಏನಿದು ಮೂತ್ರದ ಅಸಂಯಮ?
ಸಾಮಾನ್ಯವಾಗಿ ಮಹಿಳೆಯು ಹೊರಗಡೆ ಕೆಲಸಕ್ಕೆ ಹೋಗಿದ್ದಾಗ ಮತ್ತು ಬೇರೆ ಕೆಲಸದಲ್ಲಿ ನಿರತರಾಗಿದ್ದಾಗ, ಮೂತ್ರಕೋಶ ತುಂಬಿದರೂ ಸಹಜವಾಗಿ ಸ್ವಲ್ಪ ಹೊತ್ತು ಮೂತ್ರ ವಿಸರ್ಜನೆಯನ್ನು ತಡೆದುಕೊಳ್ಳುತ್ತಾಳೆ. ಇಂತಹ ಮೂತ್ರ ವಿಸರ್ಜನೆ ನಿಯಂತ್ರಣವನ್ನು ಕಾಯ್ದುಕೊಳ್ಳುವ ಕ್ರಿಯೆಯೂ ಪೆಲ್ವಿಕ್ (ಅಸ್ತಿಕುಹರ), ನರ, ಮಾಂಸ ಖಂಡಗಳ ಮತ್ತು ಇನ್ನಿತರ ಅಂಶಗಳನ್ನೊಳಗೊಂಡ ಸಂಕೀರ್ಣವಾದ ಸಮನ್ವಯವನ್ನು ಹೊಂದಿರುತ್ತವೆ. ಈ ಪ್ರಕ್ರಿಯೆಯಲ್ಲಿ ವ್ಯತ್ಯಾಸವಾದಾಗ ಮೂತ್ರದ ಅಸಂಯಮ(ಅನಿಯಂತ್ರಿತ ಮೂತ್ರ ವಿಸರ್ಜನೆ) ಅಥವಾ ಮೂತ್ರ ಸೋರುವಿಕೆ ಉಂಟಾಗುತ್ತದೆ.
ಶೇ 70ರಷ್ಟು ಸಂದರ್ಭಗಳಲ್ಲಿ ಕೆಮ್ಮಿದಾಗ, ಸೀನಿದಾಗ, ನಕ್ಕಾಗ, ಭಾರ ಎತ್ತಿದಾಗ ಈ ರೀತಿಯ ಮೂತ್ರ ಸೋರುವಿಕೆ ಉಂಟಾಗಬಹುದು. ಇದನ್ನು ಒತ್ತಡದ ಮೂತ್ರದ ಅಸಂಯಮ (ಸ್ಟ್ರೆಸ್ ಇನ್ಕಾಂಟಿನೆನ್ಸ್) ಎನ್ನುತ್ತೇವೆ. ಇನ್ನು ಕೆಲವರಲ್ಲಿ ಶೌಚಾಲಯ ತಲುಪುವ ಮೊದಲೇ ಅವಸರವಾಗಿ ಮೂತ್ರ ವಿಸರ್ಜನೆಯಾಗಿಬಿಡುತ್ತದೆ (ಅರ್ಜ್-ಇನ್ಕಾಂಟಿನೆನ್ಸ್), ಕೆಲವರಿಗೆ ಇವೆರಡು ಒಟ್ಟಾಗಿಯೂ ಇರಬಹುದು. ಯಾವ ಬಗೆಯ ತೊಂದರೆಯೇ ಇರಲಿ ನರಳುವಿಕೆಯಂತೂ ನಿಶ್ಚಿತ.
ಯಾರಲ್ಲಿ ಇಂಥ ಸಮಸ್ಯೆಗಳು ಹೆಚ್ಚು?
ವಯಸ್ಸಾದ ಹಾಗೆ ಈ ಸಮಸ್ಯೆ ಹೆಚ್ಚಾಗುತ್ತಾ ಹೋಗುತ್ತದೆ. 60ರಿಂದ 80 ವಯೋಮಾನದ ಶೇ 30ಕ್ಕೂ ಹೆಚ್ಚು ಮಹಿಳೆಯರಲ್ಲಿ ಈ ಸಮಸ್ಯೆ ಕಂಡುಬರಬಹುದು. ಅತಿಯಾದ ತೂಕವಿರುವವರಲ್ಲಿ, ಮುಟ್ಟು ನಿಂತವರಲ್ಲಿ ಇದು ಕಂಡುಬರುತ್ತದೆ. ಗರ್ಭಸ್ಥ ಶಿಶು ದೊಡ್ಡದಾಗಿದ್ದು ಸಹಜ ಹೆರಿಗೆ ಕಷ್ಟವಾದಾಗ ಗರ್ಭಕೋಶದ ಬಾಯಿ ಅಗಲವಾಗುವ ಮುನ್ನವೇ ಹೆರಿಗೆಯಲ್ಲಿ ಅತಿಯಾಗಿ ಮುಕ್ಕಿದಾಗ ಹೆರಿಗೆ ಕಷ್ಟಕರವಾಗಿ ಪೆಲ್ವಿಸ್ನ ಮಾಸಪೇಶಿಗಳು ಹಾಗೂ ನರವ್ಯೂಹ ಘಾಸಿಗೊಳಗಾಗಿ ಈ ರೀತಿಯ ತೊಂದರೆ ಉಂಟಾಗಬಹುದು. ಕೆಲವರಲ್ಲಿ ಅನುವಂಶೀಯವಾಗಿಯೇ ಈ ಸಮಸ್ಯೆ ಇರಬಹುದು. ಇನ್ನು ಕೆಲವರು ದೀರ್ಘಾವಧಿ ಕೆಮ್ಮು, ಶ್ವಾಸಕೋಶದ ಕಾಯಿಲೆ ಇರುವವರಲ್ಲಿ, ಕೃತಕವಾಗಿ ಗರ್ಭಕೋಶ ತೆಗೆಸಿಕೊಂಡವರಲ್ಲಿ, ಧೂಮಪಾನ ಮಾಡುವವರಲ್ಲಿ, ಹೀಗೆ ಹಲವು ಕಾರಣಗಳು ಮೂತ್ರ ಅಸಂಯಮಕ್ಕೆ ಅಪಾಯಕಾರಿ ಅಂಶಗಳೆಂದು ಗುರುತಿಸಲ್ಪಟ್ಟಿವೆ.
ಈ ಸಮಸ್ಯೆಗೆ ಪರಿಹಾರವೇನು?
ಇತ್ತೀಚೆಗಂತೂ ಮೂತ್ರ ಅಸಂಯಮ(ಅನಿಯಂತ್ರಿತ ಮೂತ್ರ ವಿಸರ್ಜನೆ) ನಿಯಂತ್ರಣಕ್ಕೆ ಬಹಳಷ್ಟು ಚಿಕಿತ್ಸಾ ವಿಧಾನಗಳಿವೆ. ವೈದ್ಯರು ಈ ಬಗ್ಗೆ ಸಮಸ್ಯೆ ಇರುವವರಿಂದ ಸೂಕ್ತ ವಿವರಗಳನ್ನು ಪಡೆದು ಅಗತ್ಯ ಪರೀಕ್ಷೆಗಳನ್ನು ನಡೆಸಿ ಸಲಹೆ ಸೂಚನೆ ಕೊಟ್ಟು ಹಾಗೂ ಚಿಕಿತ್ಸಾ ವಿಧಾನಗಳನ್ನು ನಿರ್ಣಯಿಸುತ್ತಾರೆ.
ಮೊದಲನೆಯದಾಗಿ ಜೀವನಶೈಲಿ ಬದಲಾವಣೆ ಯಿಂದ ಹೆಚ್ಚಿನ ಸಂದರ್ಭಗಳಲ್ಲಿ ಚಿಕಿತ್ಸೆ ಸಿಗುತ್ತದೆ.
* ನಿಮ್ಮ ತೂಕ ಅಧಿಕವಾಗಿದ್ದರೆ ಅದನ್ನು ಕಡಿಮೆ ಮಾಡಿಕೊಳ್ಳಿ. ಸಮತೂಕ ಹೊಂದುವುದರಿಂದ ಶೇ.70 ರಷ್ಟು ಪರಿಣಾಮವಾಗುತ್ತದೆ.
* ಕಾಫಿ, ಚಹಾ, ಕೋಲಾ, ಕಾರ್ಬನ್ಯುಕ್ತ ಪಾನೀಯಗಳನ್ನು ಸೇವಿಸುತ್ತಿದ್ದರೆ, ಅದನ್ನು ಕಡಿಮೆ ಮಾಡಿ. ತ್ಯಜಿಸಿದರೆ ಇನ್ನೂ ಒಳ್ಳೆಯದು.
* ಧೂಮಪಾನ, ಮದ್ಯಪಾನ ಅಭ್ಯಾಸವಿದ್ದರೆ ಬಿಟ್ಟುಬಿಡಿ.
* ಮಲಬದ್ಧತೆಯಂತಹ ಸಮಸ್ಯೆಗಳಿದ್ದರೆ ಹೆಚ್ಚು ನಾರಿನಾಂಶವುಳ್ಳ ಆಹಾರ ಸೇವಿಸಿ ಸರಿಪಡಿಸಿಕೊಳ್ಳಿ.
* ಅಗತ್ಯವಿದ್ದಷ್ಟುನೀರಿನಂಶವನ್ನು ದೇಹಕ್ಕೆ ಸೇರಿಸಿ. ಕೆಲವರು ಅಗತ್ಯಕ್ಕಿಂತ ಹೆಚ್ಚು ನೀರುಸೇವಿಸುವವರು ಇದ್ದಾರೆ. ಇಂತಹ ಸಮಸ್ಯೆಯನ್ನು ತಡೆಗಟ್ಟಲು ಪ್ರತಿ ಮಹಿಳೆಯರು ದಿನ ನಿತ್ಯ ಕೆಗೆಲ್ಸ್(Kegels) ವ್ಯಾಯಾಮ ಮಾಡಬೇಕು.
ಪ್ರತಿ ಮಹಿಳೆ ಗರ್ಭಧಾರಣೆಗೆ ಮೊದಲೇ ಪೆಲ್ವಿಸ್ ಮಾಂಸಖಂಡಗಳ ಬಲ ಪಡಿಸುವ ಕೆಗೆಲ್ಸ್ ವ್ಯಾಯಾಮ ಆರಂಭಿಸಿ ಹೆರಿಗೆಯ ನಂತರವೂ (ಸಿಝೇರಿಯನ್ ಆದರೂ ಕೂಡ 24 ಗಂಟೆಗಳೊಳಗಾಗಿ ವ್ಯಾಯಾಮ ಮಾಡಿ) ನಿಯಮಿತವಾಗಿ ಮುಂದುವರಿಸಬೇಕು. ಇದರಿಂದ ಪೆಲ್ವಿಕ್ ಸ್ನಾಯುಗಳು ಬಲಗೊಳ್ಳುತ್ತವೆ.
ಕೆಗೆಲ್ಸ್ ವ್ಯಾಯಾಮ ಮಾಡುವುದು ಹೇಗೆಂದರೆ; ಮೊದಲು ಮೂತ್ರವಿಸರ್ಜನೆ ಮಾಡಿ, ನಂತರ ಮಲಮೂತ್ರವಿಸರ್ಜನೆ ಕ್ರಿಯೆಯನ್ನು ಮಾಡುವ ಹಾಗೆ ಮುಕ್ಕಿ ನಂತರ ಮೂತ್ರದ್ವಾರ, ಯೋನಿದ್ವಾರ ಹಾಗೂ ಗುದದ್ವಾರ ಈ ಮೂರನ್ನು ಒಂದೇ ಬಾರಿಗೆ ಬಿಗಿಯಾಗಿ ಒಳಗೆ ಹಿಡಿದಿಟ್ಟುಕೊಂಡು (ಕನಿಷ್ಠ 5 ಸೆಕೆಂಡಾದರೂ) ನಂತರ ಮಾಂಸಖಂಡಗಳನ್ನು ಸಡಿಲಿಸಬೇಕು. ಹೀಗೆ ಮಾಡುವಾಗ ತೊಡೆಯ ಹಾಗೂ ಹೊಟ್ಟೆಯ ಮಾಂಸಖಂಡಗಳನ್ನು ಉಪ ಯೋಗಿಸಬಾರದು. ಪ್ರತಿಬಾರಿಯೂ ಮೂತ್ರಮಾಡಿದ ನಂತರ ಈ ರೀತಿ 10 ರಿಂದ 15 ಬಾರಿಯಾದರೂ ಮಾಡಬೇಕು. ಒಟ್ಟು ದಿನಕ್ಕೆ 50 ರಿಂದ 100 ಬಾರಿ ಮಾಡಬೇಕು. ಇದನ್ನು ಕೂತಾಗ, ನಿಂತಾಗ ಯಾವಾಗಬೇಕಾದರೂ ಮಾಡಬಹುದು. ಟಿ.ವಿ ನೋಡಬೇಕಾದರೆ, ಅಡುಗೆ ಮನೆಯಲ್ಲೂ, ಕಚೇರಿಗಳಲ್ಲಿ, ಎಲ್ಲಿ ಬೇಕಾದರೂ ಮಾಡಬಹುದು. ಪರಿಣಾಮ ತಿಳಿಯಬೇಕಾದರೆ ಕನಿಷ್ಠ 12 ವಾರಗಳಾದರೂ ಆಗಬೇಕು. ಹೆಚ್ಚಿನ ಸಂದರ್ಭಗಳಲ್ಲಿ ಮೂತ್ರ ಸೋರುವಿಕೆ ಸರಿಹೋಗುತ್ತದೆ. ಪ್ರಾಣಾಯಾಮದಲ್ಲಿ ಮೂಲಬಂಧ ಮಾಡಿದಾಗಲೂ ಇದೇ ಪರಿಣಾಮವಾಗುತ್ತದೆ.
ಬ್ಲಾಡರ್ ಟ್ರೈನಿಂಗ್ ಶಾಲೆ /ಡ್ರಿಲ್ ಥೆರಪಿಯಲ್ಲಿ ಸಮಯವನ್ನು ನೋಡಿಕೊಂಡು ಮೂತ್ರವಿಸರ್ಜನೆಯ ನಡುವಿನ ಅಂತರವನ್ನು ಡೈರಿಯಲ್ಲಿ ಬರೆದಿಟ್ಟುಕೊಂಡು ವಾರ ವಾರ ಅದನ್ನು ಹೆಚ್ಚಿಸುತ್ತಾ ಹೋಗುತ್ತಾರೆ. ಕೆಗೆಲ್ಸ್ ವ್ಯಾಯಾಮದ ಜೊತೆಗೆ ಈ ಚಿಕಿತ್ಸೆಯೂ ಅರ್ಜ್ ಇನ್ಕಾಂಟಿನೆನ್ಲ್ಲಿ (ಅವಸರದ ಮೂತ್ರ ಅಸಂಯಮ) ಇದು ಸಹಾಯವಾಗುತ್ತದೆ. ಇಂತಹ ಚಿಕಿತ್ಸೆಗಳಿಗೂ ಬಗ್ಗದೇ ಹೋದಾಗ ವೈದ್ಯರು ಕೆಲವು ಮಹಿಳೆಯರಿಗೆ ಮುಟ್ಟು ನಿಂತಮೇಲೆ ಸ್ಥಳೀಯವಾಗಿ ಈಸ್ಟೋಜನ್ ಕ್ರೀಮ್ ಬಳಸಲು ಸೂಚಿಸುತ್ತಾರೆ. ಇನ್ನು ಕೆಲವರಿಗೆ ಸೂಕ್ತ ಮಾತ್ರೆಗಳನ್ನು ಬಳಸಲು ಹೇಳುತ್ತಾರೆ. ಮಾತ್ರೆಗಳಿಗೂ ಬಗ್ಗದಾಗ ಕೆಲವೊಮ್ಮೆ ಶಸ್ತ್ರಚಿಕಿತ್ಸೆಯನ್ನೂ ಬೇಕಾಗಬಹುದು. ಅದನ್ನು ತಜ್ಞವೈದ್ಯರು ಸೂಕ್ತಪರೀಕ್ಷೆ ಮಾಡಿ ನಿರ್ಧರಿಸುತ್ತಾರೆ.
ಇವುಗಳಲ್ಲದೆ ಇತ್ತೀಚೆಗೆ ಎಲೆಕ್ಟ್ರೋ ಅಕ್ಯೂಪಂಕ್ಚರ್, ಇಂಟ್ರಾವೆಸೈಕಲ್ ಬಲೂನ್ ಡಿವೈಸ್, ಎಲೆಕ್ಟ್ರಿಕಲ್, ಪಲ್ಸ್ಡ್ ಮ್ಯಾಗ್ನೆಟಿಕ್ ಸ್ಟಿಮುಲೇಶನ್... ಹೀಗೆ ಹಲವು ವಿಧಾನಗಳು ಬಳಕೆಗೆ ಬರುತ್ತಿವೆ.
ಅದೇನೇ ಇರಲಿ ಮುಂಜಾಗ್ರತೆಯೇ ಮದ್ದು ಎನ್ನುವ ಹಾಗೆ ಪ್ರತಿ ಮಹಿಳೆ ತನ್ನ ಜೀವನಶೈಲಿಯನ್ನು ಸುಧಾರಿಸಿಕೊಳ್ಳುತ್ತಾ, ಸಮತೂಕ ಕಾಯ್ದುಕೊಳ್ಳುತ್ತಾ, ಗರ್ಭಧಾರಣೆಗೂ ಮುನ್ನ ಮತ್ತು ಹೆರಿಗೆಯ ನಂತರವೂ ಪ್ರತಿನಿತ್ಯ ತಪ್ಪದೇ ಕೆಗೆಲ್ಸ್ ವ್ಯಾಯಾಮವನ್ನು ಮಾಡಿದಾಗ ಮೂತ್ರದ ಅಸಂಯಮ ತಡೆಗಟ್ಟುವುದಷ್ಟೇ ಅಲ್ಲ, ಮೂತ್ರ ಕೋಶ ಜಾರದ ಹಾಗೆಯೂ ಸಹಾಯವಾಗುತ್ತದೆ. ಹಾಗಾದರೆ ತಡ ಮಾಡಬೇಡಿ. ಪ್ರತಿಯೊಬ್ಬ ಮಹಿಳೆಯೂ ಕೆಗೆಲ್ಸ್ ಮಾಡುವ ನಿರ್ಧಾರವನ್ನು ಈಗಲೇ ಮಾಡಿ.
(ಲೇಖಕರು ಪ್ರಸೂತಿ ತಜ್ಞರು)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.