ಬುಧವಾರ, ಆಗಸ್ಟ್ 4, 2021
22 °C

ಆತ್ಮಹತ್ಯೆ ಎಂಬ ಕ್ಷಣಿಕ ಘಾತಕ

ಬ್ರಹ್ಮಾನಂದ ನಾಯಕ Updated:

ಅಕ್ಷರ ಗಾತ್ರ : | |

ಬೇಸರದಲ್ಲಿರುವ ವ್ಯಕ್ತಿ– ಸಾಂದರ್ಭಿಕ ಚಿತ್ರ

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆಯು ಈ ಕುರಿತಂತೆ ಚರ್ಚೆಯನ್ನು ಇನ್ನೊಮ್ಮೆ ಹುಟ್ಟು ಹಾಕಿದೆ. ವ್ಯಕ್ತಿ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ, ಆತನ/ ಆಕೆಯ ಮನೋಭಾವ ಹೇಗಿರುತ್ತದೆ, ಇದಕ್ಕೆ ಪರಿಹಾರಗಳಿಲ್ಲವೇ?

ರೈಲಿಗೆ ತಲೆಕೊಟ್ಟು ಯುವ ಪ್ರೇಮಿಗಳ ಸಾವು, ಸಾಲಬಾಧೆ: ವ್ಯಾಪಾರಿ ಆತ್ಮಹತ್ಯೆ, ಪರೀಕ್ಷೆಯಲ್ಲಿ ಫೇಲ್‌: ವಿದ್ಯಾರ್ಥಿ ಆತ್ಮಹತ್ಯೆ, ವರದಕ್ಷಿಣೆ ಕಿರುಕುಳ: ಗೃಹಿಣಿ ಸಾವು... ಇವೆಲ್ಲವೂ ದಿನನಿತ್ಯ ಪತ್ರಿಕೆಗಳಲ್ಲಿ ಕಂಡು ಬರುವ ಸುದ್ದಿಗಳ ಹೆಡ್‌ಲೈನ್‌ಗಳು.

ಆಧುನಿಕ ಜಗತ್ತಿನಲ್ಲಂತೂ ಆತ್ಮಹತ್ಯೆಗಳ ಸಂಖ್ಯೆ ವಿಪರೀತವಾಗಿ ಹೆಚ್ಚುತ್ತಿದೆ. ಮೊಬೈಲ್‌ ಕೊಡಿಸಲಿಲ್ಲ ಎಂದೂ ಆತ್ಮಹತ್ಯೆಗಳಾಗುತ್ತಿವೆ. ಇದನ್ನು ತಡೆಯಬಹುದೇ ಎಂಬುದು ಹಲವರ ಪ್ರಶ್ನೆ. ಆತ್ಮಹತ್ಯೆಯನ್ನು ಮಾನಸಿಕ ರೋಗಿಗಳು ಮಾಡಿಕೊಳ್ಳುತ್ತಾರೆ ಹಾಗೂ ಇದನ್ನು ತಡೆಯಲು ಸಾಧ್ಯವಿಲ್ಲ ಎಂಬೆಲ್ಲ ನಂಬಿಕೆಗಳು ಸಮಾಜದಲ್ಲಿ ಪ್ರಚಲಿತದಲ್ಲಿದ್ದು, ಇವೆಲ್ಲ ಶುದ್ಧ ಮಿಥ್ಯೆಗಳಾಗಿವೆ. ಮಾನಸಿಕವಾಗಿ ಸೋತಿರುವ ಯಾರಾದರೂ ಆತ್ಮಹತ್ಯೆ ಮಾಡಿಕೊಳ್ಳಬಹುದು ಹಾಗೂ ಇದನ್ನು ಖಂಡಿತವಾಗಿ ತಡೆಯಬಹುದು ಎನ್ನುತ್ತಾರೆ ಮಾನಸಿಕ ವೈದ್ಯರು.

ಆತ್ಮಹತ್ಯೆ ಏಕೆ ಮಾಡಿಕೊಳ್ಳುತ್ತಾರೆ?

ಪ್ರೇಮ ವೈಫಲ್ಯ, ಸಾಲಬಾಧೆ, ಪರೀಕ್ಷೆಗಳಲ್ಲಿ ಫೇಲ್‌, ವರದಕ್ಷಿಣೆ ಸಾವು, ಗಂಡನ ಕಿರುಕುಳ.. ಇಂಥವೆಲ್ಲ ಲಕ್ಷಾಂತರ ಜನರನ್ನು ಕಾಡುತ್ತದೆ. ಆದರೆ ಇವರಲ್ಲಿ ಕೆಲವರಷ್ಟೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಹೀಗೇಕೆ ಎಂಬುದೇ ಕುತೂಹಲದ ಸಂಗತಿ. ಕೆಲವು ಬಾರಿ ಮನಸ್ಸು ಹೀಗೆ ಕಷ್ಟ ಎದುರಾದಾಗ ಆತ್ಮಹತ್ಯೆಯ ದಾರಿ ಅರಸುತ್ತದೆ.ಬಹುತೇಕರಿಗೆ ಇದು ಆ ಗಳಿಗೆಯಲ್ಲಷ್ಟೇ ಉಂಟಾಗಿರುವ ತುಡಿತವಾಗಿದ್ದು, ಆ ಗಳಿಗೆ ತಪ್ಪಿ ಹೋದರೆ ಅವರು ಮತ್ತೆ ಜೀವನ್ಮುಖಿಗಳಾಗಿ ಬಿಡುತ್ತಾರೆ.

ಆತ್ಮಹತ್ಯೆಗೆ ಸಾಮಾನ್ಯ ಕಾರಣಗಳು

ಆತ್ಮಹತ್ಯೆ ಆಲೋಚನೆ ಉದ್ಭವವಾಗಲು ನೂರಾರು ಕಾರಣಗಳಿರುತ್ತವೆ. ಜೀವನದಲ್ಲಿ ಉಂಟಾಗಿರುವ ಕಷ್ಟದ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವೇ ಇಲ್ಲ ಎಂಬ ಅನಿಸಿಕೆ ಬಲವಾದಾಗ ಆತ್ಮಹತ್ಯೆಯ ಯೋಚನೆ ಹುಟ್ಟುತ್ತದೆ. ಉತ್ತಮ ಭವಿಷ್ಯದ ಯಾವುದೇ ಆಶಾಕಿರಣ ಗೋಚರವಾಗದೇ ಇದ್ದಾಗ ಆತ್ಮಹತ್ಯೆಯೇ ಒಂದು ಪರಿಹಾರ ಎನಿಸಿಬಿಡುತ್ತದೆ.

ಆತ್ಮಹತ್ಯೆ ಯೋಚನೆಗೆ ಆನುವಂಶೀಯತೆಯೂ ಕಾರಣ ಎಂಬುದನ್ನು ಗುರುತಿಸಲಾಗಿದೆ. ಕುಟುಂಬದಲ್ಲಿ ಆತ್ಮಹತ್ಯೆಯ ಇತಿಹಾಸವಿದ್ದರೆ ಅಂಥವರು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತದೆ. ಅನುವಂಶೀಯತೆ ಹೇಗೆ ಕಾರಣವಾಗುತ್ತದೆ ಎಂಬುದು ಇನ್ನೂ ತಿಳಿದು ಬರದಿದ್ದರೂ ಕ್ಷಣಿಕ ನಿರ್ಧಾರ ತೆಗೆದುಕೊಳ್ಳುವ ಪ್ರವೃತ್ತಿ ಅನುವಂಶೀಯತೆಯಿಂದ ಬರುವ ಮೂಲಕ ಇದು ಆತ್ಮಹತ್ಯೆಗೆ ಕಾರಣವಾಗಬಹುದು ಎಂದು ಊಹಿಸಲಾಗಿದೆ.

ಆತ್ಮಹತ್ಯೆ ಮಾಡಿಕೊಳ್ಳುವವರ ಲಕ್ಷಣಗಳು

ಆತ್ಮಹತ್ಯೆ ಮಾಡಿಕೊಳ್ಳುವವರು ಸಾಮಾನ್ಯವಾಗಿ ಕೆಲ ನಡವಳಿಕೆಗಳನ್ನು ಪ್ರದರ್ಶಿಸುತ್ತಾರೆ. ಆಪ್ತರು ಈ ನಡವಳಿಕೆಗಳನ್ನು ಸೂಕ್ತ ಸಮಯದಲ್ಲಿ ಗುರುತಿಸಿ ಮಾನಸಿಕ ತಜ್ಞರ ಬಳಿ ಕರೆದೊಯ್ದುರೆ ಆತ್ಮಹತ್ಯೆಯನ್ನು ತಪ್ಪಿಸಬಹುದಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವವರ ಕೆಲ ಲಕ್ಷಣಗಳು ಇಲ್ಲಿವೆ...

* ಆತ್ಮಹತ್ಯೆ ಕುರಿತು ಮಾತನಾಡುತ್ತಿರುತ್ತಾರೆ. ಉದಾಹರಣೆಗೆ "ನಾನು ಸತ್ತು ಹೋಗುವೆ". "ನಾನು ಸತ್ತಿದ್ದರೆ
ಚೆನ್ನಾಗಿತ್ತು", "ನಾನು ಹುಟ್ಟಿರದೇ ಇದ್ದರೇ ಚೆನ್ನಾಗಿತ್ತು" ಇಂಥ ಹೇಳಿಕೆಗಳನ್ನು ನೀಡುತ್ತಿರುತ್ತಾರೆ.

* ಆತ್ಮಹತ್ಯೆ ಮಾಡಿಕೊಳ್ಳುವ ಸಾಮಗ್ರಿಗಳನ್ನು ಸಂಗ್ರಹಿಸುತ್ತಾರೆ. ಉದಾಹರಣೆಗ ಗನ್ ಖರೀದಿ ಮಾಡುವುದು, ನಿದ್ದೆ
ಮಾತ್ರೆಗಳನ್ನು ಸಂಗ್ರಹಿಸುವುದು ಇತ್ಯಾದಿ.

* ಸಮಾಜದಿಂದ ವಿಮುಖಗೊಳ್ಳುತ್ತಾರೆ ಹಾಗೂ ಒಂಟಿಯಾಗಿರಲು ಇಷ್ಟ ಪಡುತ್ತಾರೆ.

* ಭಾವನಾತ್ಮಕವಾಗಿ ಏರುಪೇರು ಅನುಭವಿಸುತ್ತಿರುತ್ತಾರೆ. ಒಂದು ದಿನ ತೀರಾ ಉತ್ಸಾಹದಲ್ಲಿದ್ದರೆ ಮರುದಿನವೇ
ಯಾವುದರಲ್ಲೂ ಆಸಕ್ತಿ ಇಲ್ಲದಂತಿರುತ್ತಾರೆ.

* ಸಾವು, ಸಾವಿಗೀಡಾಗುವುದು ಹಾಗೂ ಹಿಂಸೆಯ ಕುರಿತೇ ಆಲೋಚನೆ ಮಾಡುತ್ತಿರುತ್ತಾರೆ.

* ಇವರಿಗೆ ಸಿಕ್ಕಿ ಹಾಕಿಕೊಂಡಂತೆ ಅನಿಸುತ್ತಿರುತ್ತದೆ ಹಾಗೂ ತಮ್ಮ ಪರಿಸ್ಥಿತಿಯ ಕುರಿತು ತೀವ್ರ ನಿರಾಶಾವಾದ
ತಳೆದಿರುತ್ತಾರೆ.

* ಮಾದಕ ವ್ಯಸನವನ್ನು ಆಶ್ರಯಿಸುತ್ತಾರೆ.

* ಊಟ - ನಿದ್ದೆ ಸೇರಿದಂತೆ ದಿನಚರಿಯನ್ನು ಬದಲು ಮಾಡಿಕೊಳ್ಳುತ್ತಾರೆ.

* ಅಪಾಯಕಾರಿಯಾದ ಹಾಗೂ ತಮಗೇ ತೊಂದರೆ ಉಂಟಾಗುವಂತ ಕೆಲಸ ಮಾಡಲು ಮುಂದಾಗುತ್ತಾರೆ.
ಉದಾಹರಣೆಗೆ ಮಾದಕ ವಸ್ತು ಸೇವಿಸುವುದು ಅಥವಾ ಅಜಾಗ್ರತೆಯಿಂದ ವಾಹನ ಚಾಲನೆ ಮಾಡುವುದನ್ನು
ಮಾಡಬಹುದು.

* ತಮ್ಮ ವಸ್ತುಗಳು ದಾನ ಮಾಡಿಬಿಡುತ್ತಾರೆ. ತಮ್ಮೆಲ್ಲ ಅಪೂರ್ಣ ಕೆಲಸಗಳನ್ನು ಮುಗಿಸಲು ಅವಸರಿಸುತ್ತಾರೆ.

* ಒಡನಾಡಿಗಳಿಗೆ ಮತ್ತೆಂದೂ ಭೇಟಿಯಾಗುವುದಿಲ್ಲವೇನೋ ಎಂಬಂತೆ ವಿದಾಯ ಹೇಳುತ್ತಾರೆ.

* ವ್ಯಕ್ತಿತ್ವ ಬದಲಾವಣೆ ಕಂಡು ಬರುತ್ತದೆ. ಯಾವಾಗಲೂ ತೀವ್ರ ಆತಂಕಗೊಂಡಿರುತ್ತಾರೆ, ಥಟ್ಟನೆ ಸಿಟ್ಟಿಗೇಳುತ್ತಾರೆ.

ಈ ಎಲ್ಲ ಲಕ್ಷಣಗಳು ಥಟ್ಟನೆ ತಿಳಿದು ಬರದೇ ಇರಬಹುದು ಹಾಗೂ ಬೇರೇ ಬೇರೇಯವರಲ್ಲಿ ಬೇರೆ ಬೇರೆ
ಲಕ್ಷಣಗಳು ಕಂಡು ಬರಬಹುದು. ಕೆಲವರು ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂಬುದನ್ನು ಅತೀ ಗೌಪ್ಯವಾಗಿ
ಇಡುತ್ತಾರೆ.

ಯಾರಲ್ಲಿ ಹೆಚ್ಚು?

ಆತ್ಮಹತ್ಯೆಗೆ ಯತ್ನ ಮಾಡುವವರು ಮಹಿಳೆಯರೇ ಹೆಚ್ಚಾದರೂ ಆತ್ಮಹತ್ಯೆಗೀಡಾಗುವವರ ಸಂಖ್ಯೆಯಲ್ಲಿ ಪುರುಷರದ್ದೇ ಮೇಲುಗೈ. ಏಕೆಂದರೆ ಅವರು ಆತ್ಮಹತ್ಯೆಗೆ ಬಳಸುವ ಪರಿಕರಗಳು ಹೆಚ್ಚು ಪ್ರಭಾವಶಾಲಿಯಾಗಿರುತ್ತವೆ.

ಆತ್ಮಹತ್ಯೆ ಮಾಡುಕೊಳ್ಳುವವರರಲ್ಲಿ ಹೆಚ್ಚಿನವರು ಇಂಥವರಿರುತ್ತಾರೆ..

* ನಿರಾಶಾವಾದಿಗಳು, ಸಾಮಾಜಿಕವಾಗಿ ಬಹಿಷ್ಕೃತಗೊಂಡವರು ಹಾಗೂ ಏಕಾಂಗಿಗಳು.

* ವೈಯಕ್ತಿಕ ದುರಂತ ಅನುಭವಿಸಿದವರು. ಉದಾಹರಣೆಗೆ ಪ್ರೀತಿಪಾತ್ರರನ್ನು ಕಳೆದುಕೊಂಡವರು, ತೀವ್ರ
ಅನಾರೋಗ್ಯ ಕಾಡುತ್ತಿರುವವರು, ಆರ್ಥಿಕ ಮುಗ್ಗಟ್ಟು ಅಥವಾ ಕಾನೂನಾತ್ಮಕ ಸಮಸ್ಯೆಗಳಲ್ಲಿ ಸಿಲುಕಿ
ಹಾಕಿಕೊಂಡವರು.

* ಮಾದಕ ವ್ಯಸನಿಗಳು.

* ಮನೆಯಲ್ಲಿ ಬಂದೂಕಿನಂಥ ವಸ್ತುಗಳನ್ನು ಇಟ್ಟುಕೊಳ್ಳುವವರು. ಇಂಥವರಿಗೆ ಆತ್ಮಹತ್ಯೆ ಯೋಚನೆ ಬಂದರೆ
ಕೂಡಲೇ ಕಾರ್ಯಗತವಾಗಿ ಬಿಡುತ್ತದೆ.

* ಮಾನಸಿಕ ರೋಗವಿದ್ದವರು. ಉದಾಹರಣೆ ತೀವ್ರ ಖಿನ್ನತೆ, ದ್ವಿವ್ಯಕ್ತಿತ್ವ ತೊಂದರೆ ( ಬೈಪೋಲರ್
ಡಿಸ್‌ಆರ್ಡರ್), ವ್ಯಕ್ತಿತ್ವ ತೊಂದರೆಗಳು, ವಾಸ್ತವಿಕತೆಯಿಂದ ದೂರವಿರುವುದು, ಆತಂಕ ಮತ್ತಿತರ
ಫೋಬಿಯಾಗಳು ಕಾಡುತ್ತಿರುವವರು.

* ಗುಣಪಡಿಸಲಾಗದ ರೋಗ, ತೀವ್ರ ನೋವು, ಮಾರಣಾಂತಿಕ ಕಾಯಿಲೆಗಳೂ ಆತ್ಮಹತ್ಯೆಗೆ ಕಾರಣವಾಗುತ್ತವೆ.

* ದ್ವಿಲಿಂಗಿಗಳು, ಸಲಿಂಗಿಗಳು ಮತ್ತಿತರರು ಕೌಟಂಬಿಕ ಹಾಗೂ ಸಮಾಜದ ವಿರೋಧದಿಂದ ಆತ್ಮಹತ್ಯೆಯ ಮೊರೆ
ಹೋಗಬಹುದು.

* ಮೊದಲೇ ಆತ್ಮಹತ್ಯೆಗೆ ಯತ್ನಿಸಿದ್ದವರು ಮತ್ತೆ ಆತ್ಮಹತ್ಯೆಗೆ ಯತ್ನಿಸುವ ಸಂಭವವಿರುತ್ತದೆ.

* ಖಿನ್ನತೆಗೆ ನೀಡುವ ಆ್ಯಂಟಿಡಿಪ್ರೆಸ್ಸೆಂಟ್ ಔಷಧಿ ತೆಗೆದುಕೊಳ್ಳುತ್ತಿರುವವರಲ್ಲಿ ಆತ್ಮಹತ್ಯೆ ಯೋಚನೆ ಹೆಚ್ಚುವುದನ್ನು
ಗುರುತಿಸಲಾಗಿದೆ. ಇದರಿಂದಾಗಿ ಈ ಔಷಧ ತೆಗೆದುಕೊಳ್ಳುವವರನ್ನು ಜಾಗ್ರತೆಯಿಂದ ನೋಡಿಕೊಳ್ಳಿ ಎಂದು
ಕುಟುಂಬದವರಿಗೆ ಸಲಹೆ ನೀಡಲಾಗುತ್ತದೆ. ಔಷಧಿ ತೆಗೆದುಕೊಳ್ಳಲು ಪ್ರಾರಂಭಿಸಿದ ಮೊದಲ ಎರಡು ತಿಂಗಳುಗಳ
ಕಾಲ ಇಂಥ ಆಲೋಚನೆ ಬರುವ ಸಂಭವ ಹೆಚ್ಚು ಎನ್ನಲಾಗುತ್ತದೆ.

ಆತ್ಮಹತ್ಯೆ ತಪ್ಪಿಸಬಹುದೇ?

ಆತ್ಮಹತ್ಯೆ ಎಂಬುದು ಕ್ಷಣಿಕ ಭಾವನಾತ್ಮಕ ನಿರ್ಣಯವಾಗಿದ್ದು ಇದನ್ನು ಸುಲಭವಾಗಿ ತಪ್ಪಿಸಬಹುದು ಎನ್ನುತ್ತಾರೆ ಮಾನಸಿಕ ತಜ್ಞರು. ಆತ್ಮಹತ್ಯೆ ವಿರುದ್ಧ ಮನವೊಲಿಸಲು ಮಾನಸಿಕ ತಜ್ಞರ ಸಲಹೆಯೇ ಅತ್ಯುತ್ತಮ ಮಾರ್ಗವಾಗಿದ್ದು ಈ ಕೆಲ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಆತ್ಮಹತ್ಯೆಯ ಅಪಾಯವನ್ನ ಕಡಿಮೆ ಮಾಡಬಹುದು.

* ಮಾದಕ ವಸ್ತುಗಳು ಹಾಗೂ ಆಲ್ಕೋಹಾಲ್‌ ಸೇವನೆ ತ್ಯಜಿಸಿ: ಮಾದಕ ವಸ್ತುಗಳು ಆತ್ಮಹತ್ಯೆ ಯೋಚನೆಯನ್ನು ಹೆಚ್ಚಿಸುತ್ತವೆ. ಅಮಲಿನಲ್ಲಿ ಮುಂದಾಲೋಚನೆ ಇಲ್ಲದಂತಾಗುವುದರಿಂದ ಆತ್ಮಹತ್ಯೆ ಯೋಚನೆ ಬಂದೊಡನೆಯೇ ಕಾರ್ಯರೂಪಕ್ಕೆ ತರುವ ಸಾಧ್ಯತೆ ಹೆಚ್ಚಿರುತ್ತದೆ.

* ಸ್ಪಂದಿಸಿ: ಕುಟುಂಬ, ಸ್ನೇಹಿತರು, ಧಾರ್ಮಿಕ ಗುರುಗಳು ಕಷ್ಟಕ್ಕೆ ಸ್ಪಂದಿಸಿ ಧೈರ್ಯ ತುಂಬಿದರೆ ಆತ್ಮಹತ್ಯೆ
ಯೋಚನೆ ಕಡಿಮೆಯಾಗುತ್ತದೆ.

* ಚುರುಕಾಗಿರಿ: ದೈಹಿಕ ಚಟುವಟಿಕೆಯಿಂದ ಖಿನ್ನತೆ ಲಕ್ಷಣಗಳು ಕಡಿಮೆಯಾಗುತ್ತವೆ. ನಡಿಗೆ, ಈಜು,
ತೋಟಗಾರಿಕೆಗಳು ಮತ್ತಿತರ ಯಾವುದಾದರೂ ನೀವು ಇಷ್ಟಪಡುವ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ.

ಆತ್ಮಹತ್ಯೆ ತಡೆಯಲು ಕೆಲವು ಸಲಹೆ

* ಚಿಕಿತ್ಸೆ ಪಡೆಯಿರಿ: ಆತ್ಮಹತ್ಯೆ ಯೋಚನೆ ಬರಲು ಕಾರಣವೇನು ಎಂದು ತಿಳಿದು ಅದಕ್ಕೆ ಚಿಕಿತ್ಸೆ ಪಡೆಯಿರಿ. ಮಾನಸಿಕ ತೊಂದರೆ ಇದ್ದಲ್ಲಿ ಅದಕ್ಕೆ ಚಿಕಿತ್ಸೆ ಪಡೆಯಲು ಯಾವುದೇ ನಾಚಿಕೆ ಬೇಡ. ಚಿಕಿತ್ಸೆಯಿಂದ ನಿಮಗೆ ಜೀವನೋತ್ಸಾಹ ಬರುವುದಲ್ಲದೆ ನೀವು ಆತ್ಮಹತ್ಯೆಯ ಅಪಾಯವಿಲ್ಲದೆ ಸುರಕ್ಷಿತವಾಗಿ ಇರಬಹುದು.

* ಒಬ್ಬರೇ ಇರಬೇಡಿ: ಆತ್ಮಹತ್ಯೆ ಯೋಚನೆಗಳು ಆರಂಭವಾದಾಗ ಸಾಧ್ಯವಾದಷ್ಟು ಒಬ್ಬರೇ ಇರುವುದನ್ನು ತಪ್ಪಿಸಿ.
ಸ್ನೇಹಿತರು, ಕುಟುಂಬದವರ ಜತೆ ಸಮಯ ಕಳೆಯಿರಿ. ಯೋಚನೆಗಳು ಬೇರೇಡೆ ಹೋಗುತ್ತವೆ.

* ಪ್ರಾಣಘಾತಕ ಸಾಮಾನುಗಳನ್ನು ಇಟ್ಟುಕೊಳ್ಳಬೇಡಿ: ಆತ್ಮಹತ್ಯೆ ಯೋಚನೆಗಳು ಬರುತ್ತಿದ್ದಾಗ ಮನೆಯಲ್ಲಿ ಪ್ರಾಣ ತೆಗೆದುಕೊಳ್ಳಲು ನೆರವಾಗುವ ಯಾವುದೇ ಸಾಮಾನು ಇಟ್ಟುಕೊಳ್ಳಬೇಡಿ. ಆಗ ಯೋಚನೆ ಬಂದರೂ ಪ್ರಾಣ ತೆಗೆದುಕೊಳ್ಳಲು ಸಾಧ್ಯವಾಗದೇ ಆ ವಿಷ ಗಳಿಗೆ ತಪ್ಪಿ ಹೋಗುತ್ತದೆ.

* ಸರಳ ಜೀವನ ನಡೆಸಿ: ಕೊಳ್ಳುಬಾಕತನ ಹಾಗೂ ಅದರ ವಿಷವರ್ತುಲದಿಂದ ಹೊರಬನ್ನಿ. ಸರಳ ವಸ್ತುಗಳಲ್ಲಿರುವ
ಸಂತಸ ಅರಿಯಿರಿ. ಸಮುದ್ರ ತಟದಲ್ಲಿ ನಡೆಯುವುದು, ಸಂಗೀತ ಕೇಳುವುದು, ತಾಜಾ ಹೂವು ನೀಡುವ ಖುಷಿ
ಆಸ್ವಾದಿಸಲು ಕಲಿಯಿರಿ.

* ಸೃಜನಾತ್ಮಕ ಕಾರ್ಯಗಳತ್ತ ಆಸಕ್ತಿ ತೋರಿ. ನಿಮಗಿಷ್ಟವಾದ ಕಲೆ ಕಲಿಯಿರಿ. ಇವು ಮಾನಸಿಕ ಆಹ್ಲಾದ ನೀಡುವುದರ
ಜತೆಗೆ ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡುತ್ತದೆ.

* ಹೊಸ ಸಂಬಂಧಗಳನ್ನು ಕಟ್ಟಿಕೊಳ್ಳಲು ಯತ್ನಿಸಬೇಡಿ. ಮಾನಸಿಕವಾಗಿ ದುರ್ಬಲರಿದ್ದಾಗ, ಆತ್ಮಹತ್ಯೆ
ಯೋಚನೆಗಳು ಬರುತ್ತಿದ್ದರೆ ಮುಖ್ಯವಾಗಿ ಪ್ರೀತಿ ಸಂಬಂಧಗಳನ್ನು ಹುಟ್ಟು ಹಾಕಬೇಡಿ. ಇವೇನಾದರೂ ಮುರಿದು
ಬಿದ್ದರೆ ತಡೆದುಕೊಳ್ಳಲು ಆಗುವುದೇ ಇಲ್ಲ.

* ಸ್ವಾವಲಂಬಿಗಳಾಗಿರಿ: ಆರ್ಥಿಕ ಸ್ವಾವಲಂಬನೆ ಸಾಧಿಸಿಕೊಳ್ಳಿ. ಹಾಗೆಂದು ತೀವ್ರ ಒತ್ತಡದ, ಹೆಚ್ಚು ಏಕಾಗ್ರತೆ ಹಾಗೂ
ಬುದ್ಧಿ ಬಳಸಬೇಕಾದ ಬೇಕಾದ ನೌಕರಿಗೆ ಹೋಗಿ ಇನ್ನಷ್ಟು ಒತ್ತಡ ಮೈಮೇಲೆ ಎಳೆದುಕೊಳ್ಳುವುದು ಬೇಡ.
ಮಾನಸಿಕವಾಗಿ ಸದೃಢರಾದ ಮೇಲಷ್ಟೇ ಇಂಥ ಕೆಲಸಗಳಿಗೆ ಹೋಗಿ.

* ನಿಮ್ಮ ಆಪ್ತ ಸಂಗತಿಗಳನ್ನು ಎಲ್ಲರ ಬಳಿ ಹೇಳಿ ಡಂಗುರ ಸಾರುವುದು ಬೇಡ. ನಿಮಗೆ ತೀರಾ ವಿಶ್ವಾಸವಿದ್ದವರಬಳಿಯಷ್ಟೇ ಹೇಳಿ. ಕೆಲ ಬಾರಿ ನಿಮ್ಮ ವೈಯಕ್ತಿಕ ಸಂಗತಿಗಳನ್ನು ತಿಳಿದುಕೊಂಡು ಲೇವಡಿ ಮಾಡುವವರೂ ಇರುತ್ತಾರೆ. ದುರ್ಬಲ ಮನಸ್ಸು ಕುಸಿಯಲು ಇಷ್ಟೇ ಸಾಕಾಗುತ್ತದೆ.

ನೆನಪಿರಲಿ.. ಆತ್ಮಹತ್ಯೆ ಎಂಬುದು ಕ್ಷಣಿಕ ಭಾವನೆ. ಅದು ಆಗ ತಪ್ಪಿ ಹೋದರೆ ಸುಂದರ ಬದುಕು ನಿಮ್ಮೆದುರು ಇರುತ್ತದೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು