ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲಿಗೆ ಬಳಲದಿರಿ

Last Updated 14 ಏಪ್ರಿಲ್ 2023, 19:30 IST
ಅಕ್ಷರ ಗಾತ್ರ

ಪ್ರತಿ ಬಾರಿಗಿಂತ ಈ ವರ್ಷದ ಬೇಸಿಗೆ ತುಸು ಹೆಚ್ಚೇ 'ಪ್ರಖರ'ವಾಗಿದೆ. ಇದು ಇನ್ನೂ ಎರಡು ತಿಂಗಳು ಮುಂದುವರಿಯುವ ಲಕ್ಷಣಗಳಿವೆ. ಬಿಸಿಲಿನಿಂದ ರಕ್ಷಣೆಗೆ ಕೆಲವೊಂದು ಕ್ರಮಗಳನ್ನು ಅನುಸರಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ದೇಹದಲ್ಲಿನ ನೀರಿನ ಅಂಶದ ಜೊತೆಗೆ, ಲವಣಾಂಶವೂ ಹೊರಹೋಗುತ್ತದೆ. ಇದೇ ಕಾರಣಕ್ಕೆ ದೇಹ ಬಳಲುತ್ತದೆ. ಬಾಯಾರುತ್ತದೆ. ಶರೀರದಲ್ಲಿ ನೀರಿನ ಪ್ರಮಾಣ ಕಡಿಮೆಯಾದಷ್ಟು ದೇಹದೊಳಗಿನ ಅಂಗಾಗಗಳ ಮೇಲೆ ಒತ್ತಡ ಹೆಚ್ಚುತ್ತದೆ. ಹೀಗಾಗಿ, ಬೇಸಿಗೆ ಕಾಲದಲ್ಲಿ ದೇಹಕ್ಕೆ ಹೆಚ್ಚಾಗಿ ನೀರು ಜೊತೆಗೆ ಲವಣಾಂಶಯುಕ್ತ ಪಾನೀಯಗಳುಬೇಕು.

ಹಾಗೆಂದು ಕೇವಲ ತಂಪು ಪಾನೀಯಗಳನ್ನೇ ಕುಡಿಯಬೇಕಾಗಿಲ್ಲ. ಬದಲಿಗೆ, ನೈಸರ್ಗಿಕ ಪಾನೀಯಗಳನ್ನು ಹೆಚ್ಚಾಗಿ ಸೇವಿಸಬೇಕು. ಹಾಗಾದರೆ, ಬಾಯಾರಿಕೆ ನೀಗಿಸಿಕೊಳ್ಳುವ ಟಿಪ್ಸ್‌ ಇಲ್ಲಿದೆ.

ದ್ರವ ಆಹಾರಕ್ಕೆ ಒತ್ತು..

*ಹೆಚ್ಚು ನೀರು ಕುಡಿಯಬೇಕು. ನೀರಿನ ಜೊತೆಗೆ, ಎಳನೀರು, ಮಜ್ಜಿಗೆ, ನಿಂಬೆ ಹಣ್ಣಿನ ಪಾನಕ, ಬೇಲದ‌ಹಣ್ಣಿನ ಪಾನಕ, ಹುಣಸೆ ಹುಳಿಯಿಂದ ಮಾಡುವ ಪಾನಕವನ್ನು ಕುಡಿಯಬಹುದು‌. ಆದಷ್ಟು ಪಾನಕಗಳಿಗೆ ಬೆಲ್ಲವನ್ನೇ (ಲಭ್ಯವಾದರೆ ಸಾಯವ ಬೆಲ್ಲವನ್ನೇ) ಬಳಸಿ‌.

*ಕಲ್ಲಂಗಡಿ, ಕಿತ್ತಳೆಯ ಜ್ಯೂಸ್(ಸಕ್ಕರೆ ಹಾಕದೇ) ಕುಡಿಯಬಹುದು. ಸಲಾಡ್‌ನಲ್ಲಿ ಹೆಚ್ಚು ಸೌತೆಕಾಯಿ ಸೇರಿಸಿ ತಿನ್ನಿ.

*ಹೆಚ್ಚು ನೀರಿನಂಶವಿರುವ ಹಣ್ಣು – ತರಕಾರಿಗಳನ್ನು ಸೇವಿಸುವುದರಿಂದ ಇವುಗಳು ಮೂತ್ರಪಿಂಡಗಳನ್ನು ಪ್ರಚೋದಿಸಿ ಶರೀರದಿಂದ ಹೆಚ್ಚು ನೀರಿನ ಅಂಶವನ್ನು ಹೊರಹಾಕುತ್ತವೆ.

*ಹೆಚ್ಚು ಖಾರವಿರುವ, ಮಸಾಲೆಯುಕ್ತ ಆಹಾರ ಬಳಸುವುದನ್ನು ಕಡಿಮೆ ಮಾಡಿ. ಸೊಪ್ಪು - ತರಕಾರಿಗಳಿರುವ ಆಹಾರ ಬಳಸಿ. ಹೆಚ್ಚಾಗಿ ಸಕ್ಕರೆ/ ಬೆಲದಲ ರಹಿತ ತಾಜಾ ಹಣ್ಣಿನ ರಸವನ್ನು ಸೇವಿಸಿ. ತಾಜಾ ಹಣ್ಣುಗಳನ್ನೇ ತಿಂದರೂ ಇನ್ನೂ ಒಳ್ಳೆಯದು. ಎಳನೀರು ಸೇವನೆ ಸರ್ವಕಾಲಕ್ಕೂ ಸೂಕ್ತವಾದ ನೈಸರ್ಗಿಕ ಪಾನೀಯ‌

*ಹೆಸರು ಕಾಳುಗಳನ್ನು ನೀರಿನಲ್ಲಿ ಅರ್ಧ ಗಂಟೆಯಷ್ಟು ನೆನಸಿಟ್ಟು ನಂತರ ಮಿಕ್ಸಿಯಲ್ಲಿ ಜ್ಯೂಸ್ ಮಾಡಿಕೊಂಡು ದಿನಕ್ಕೆರಡು ಬಾರಿ ಕುಡಿಯಿರಿ ಇದರಿಂದ ದೇಹ ತಂಪಾಗಿರುತ್ತದೆ

*ಮೊಸರಿನ ಬದಲು ಕಡೆದ ಮಜ್ಜಿಗೆಯನ್ನು ಆಹಾರಕ್ಕೆ ಬಳಸಿ,ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುವುದರಿಂದ ಅಸಿಡಿಟಿ ಆಗುವುದಿಲ್ಲ

*5 ವರ್ಷದ ಒಳಗಿನ ಮಕ್ಕಳಿಗೆ ಪ್ರತಿ ಅರ್ಧ ಗಂಟೆಗೊಮ್ಮೆ ಒಂದು ಚಿಟಿಕೆಯಷ್ಟು ಅಯೋಡಿನ್ ಉಪ್ಪು ಮತ್ತು ಕಾಲು ಸ್ಪೂನ್ ಬೆಲ್ಲ(ಒಂದು ಲೋಟ ನೀರಿಗೆ) ಬೆರೆಸಿದ ನೀರನ್ನು ಕುಡಿಸುತ್ತಿರಬೇಕು. ಇದರಿಂದ ಮಕ್ಕಳನ್ನು ನಿರ್ಜಲೀಕರಣದಿಂದ(Dehydration) ಕಾಪಾಡಿಕೊಳ್ಳಬಹುದು.

ಬಿಸಿಲಿನಿಂದ ರಕ್ಷಿಸಿಕೊಳ್ಳಿ

*ಆದಷ್ಟು ಬೆಳಿಗ್ಗೆ ಹಾಗೂ ಸಂಜೆಯ ನಂತರವೇ ಹೊರಗಿನ ಕೆಲಸಗಳನ್ನು ಇಟ್ಟುಕೊಳ್ಳಿ.

*ಬಿಸಿಲಿನಲ್ಲೇ ಹೊರಗೆ ಹೋಗಬೇಕಾದ ಅನಿವಾರ್ಯವಿದ್ದರೆ, ಕೊಡೆ ಬಳಸಿ. ಸಾಧ್ಯವಾದರೆ ತಿಳಿ ಬಣ್ಣದ ಛತ್ರಿ ಬಳಸಿ.

*ಹೊರಗೆ ಹೋಗುವಾಗ ಕಡ್ಡಾಯವಾಗಿ ನೀರನ್ನು ತೆಗೆದುಕೊಂಡು‌ ಹೋಗಿ. ಹಿರಿಯರು - ಮಕ್ಕಳು ಜೊತೆಗಿದ್ದರೆ, ನೀರಿನ ಪ್ರಮಾಣ ತುಸು ಹೆಚ್ವಿರಲಿ.

*ಮನೆಯಲ್ಲಿರಲಿ ಅಥವಾ ಹೊರಗಡೆಯೇ ಇರಲಿ ಹಿರಿಯರು - ಮಕ್ಕಳಿಗೆ ಹೆಚ್ಚಾಗಿ ನೀರು ಕುಡಿಯಲು ತಿಳಿಸಿ‌. ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಬಹು ಬೇಗ ದೇಹ ನಿರ್ಜಲೀಕರಣಹೊಳ್ಳುತ್ತದೆ. ಸುಸ್ತಾಗುತ್ತದೆ. ಕೆಲವರಿಗೆ ತಲೆನೋವು ಬಾಧಿಸಬಹುದು‌

*ಆದಷ್ಟು ಗಾಢ ಬಣ್ಣಗಳ ಬಟ್ಟೆ ಧರಿಸಬೇಡಿ. ತಿಳಿ ಬಣ್ಣಗಳ ಕಾಟನ್‌ ಬಟ್ಟೆಗಳ ದಿರಿಸನ್ನು ಧರಿಸಿ.

*ನೆತ್ತಿಗೆ ಹರಳೆಣ್ಣೆ ಹಚ್ಚಿಕೊಳ್ಳಿ. ಸ್ಬಲ್ಪ ಹೊತ್ತು ಬಿಟ್ಟು ಸ್ನಾನ ಮಾಡಿ. ನೆತ್ತಿ ತಂಪಾಗುತ್ತದೆ. ದೇಹವೂ ಕೂಲ್ ಆಗುತ್ತದೆ‌. ಬೇಸಿಗೆ ಮುಗಿಯುವವರೆಗೂ ಹರಳೆಣ್ಣೆ ಸ್ನಾನ ಒಳ್ಳೆಯದು.

*ಬಿಗಿಯಾದ ಒಳ ಉಡುಪುಗಳನ್ನು ಧರಿಸಬೇಡಿ. ಬಿಗಿ ಉಡುಪು ರಕ್ತ ಸಂಚಾರಕ್ಕೂ ತೊಂದರೆ ಮಾಡುತ್ತದೆ.

(ಪೂರಕ ಮಾಹಿತಿ: ಡಾ. ವಸುಂಧರಾ ಭೂಪತಿ, ಆಯುರ್ವೇದ ವೈದ್ಯೆ)

ದಣಿವು ತಣಿಸುವ ಪಾನೀಯಗಳು

ಕೆಲವೊಂದು ಪಾನೀಯಗಳು ಬಾಯಾರಿಕೆ ನೀಗಿಸುವ ಜೊತೆಗೆ, ದೇಹಕ್ಕೆ ಶಕ್ತಿಯನ್ನು ತುಂಬುತ್ತವೆ. ಆರೋಗ್ಯವನ್ನು ಹೆಚ್ಚಿಸುತ್ತವೆ. ಅಂಥ ಪಾನೀಯಗಳ ವಿವರ ಇಲ್ಲಿದೆ.

ಲಾವಂಚದ ಪಾನೀಯ: ಎಂಟರಿಂದ ಹತ್ತು ಲಾವಂಚದ ಬೇರುಗಳನ್ನು ಅರ್ಧ ಲೀಟರ್‌ ನೀರಿನಲ್ಲಿ ಎರಡು ಗಂಟೆ ನೆನೆಸಿಡಬೇಕು. ನಂತರ ಅದನ್ನು ಶೋಧಿಸಿ, ಅರ್ಧ ಕಪ್ ಬೆಲ್ಲ, ನಿಂಬೆ ರಸ ಮತ್ತು ಏಲಕ್ಕಿ ಪುಡಿ ಹಾಕಬೇಕು. ಇದು ದೇಹಕ್ಕೆ ತಂಪು ನೀಡುವದಲ್ಲದೇ, ರಕ್ತ ಶುದ್ಧಿ ಮಾಡುತ್ತದೆ.

ಕಾಮಕಸ್ತೂರಿ ಪಾನೀಯ: ಅರ್ಧ ಬಟ್ಟಲು ಕಾಮಕಸ್ತೂರಿ ಬೀಜವನ್ನು ರಾತ್ರಿ ಹೊತ್ತು ನೀರಿನಲ್ಲಿ ನೆನೆಸಿ. ಮರುದಿನ ಬೆಳಿಗ್ಗೆ ಆ ಬೀಜಗಳು ಅರಳಿರುತ್ತವೆ. ಅದಕ್ಕೆ ಬೆಲ್ಲ, ನೀರು, ಹಾಲು ಬೆರಸಿ ಕುಡಿಯಬೇಕು. ಇದು, ದೇಹದ ಉಷ್ಣತೆ ಕಡಿಮೆ ಮಾಡುವ ಜೊತೆಗೆ, ಬಾಯಿ ಹುಣ್ಣನ್ನು ವಾಸಿ ಮಾಡುತ್ತದೆ.

ಮುರುಗಲ: ನಾಲ್ಕೈದು ಮುರುಗಲ ಹಣ್ಣಿನ ಬೀಜ ತೆಗೆದು, ಆ ಸಿಪ್ಪೆಯನ್ನು ನೀರಿನಲ್ಲಿ ತೊಳೆಯಬೇಕು. ಸಿಪ್ಪೆಯನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಬೇಕು. ನಂತರ ಶೋಧಿಸಿದ ರಸಕ್ಕೆ, ಎರಡು ಲೋಟ ನೀರು ಮತ್ತು ಬೆಲ್ಲ ಬೆರೆಸಿ. ಈ ಮಿಶ್ರಣಕ್ಕೆ ಮತ್ತಷ್ಟು ನೀರು ಸೇರಿಸಿ, ಪಾನೀಯ ತಯಾರಿಸಿಕೊಳ್ಳಿ. ಇದು ಪಿತ್ತ ನಾಶಕ, ರಕ್ತ ಶುದ್ದಿಯ ಜೊತೆಗೆ, ಬೊಜ್ಜು ಕರಸಗಿಸುತ್ತದೆ.

ಸುಲಭ ಪಾನೀಯ: ನೀರು ಮಜ್ಜಿಗೆಗೆ ಬೆಲ್ಲ ಬೆರೆಸಿ. ಅದಕ್ಕೆ ಸ್ವಲ್ಪ ಉಪ್ಪು, ಪರಿಮಳಕ್ಕಾಗಿ ಏಲಕ್ಕಿ ಪುಡಿ ಬೆರೆಸಿ ಸೇವಿಸಬಹುದು. ಇದು ತಕ್ಷಣ ತಯಾರಾಗುವುದರಿಂದ ಇದನ್ನು ‘ದಿಢೀರ್ ಪಾನೀಯ‘ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT