ಶುಕ್ರವಾರ, ಜೂನ್ 25, 2021
30 °C

ಹಬ್ಬದ ಖುಷಿಯ ಜೊತೆ ಇರಲಿ ಆರೋಗ್ಯದ ಕಾಳಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌–19 ಪಿಡುಗಿನ ಮಧ್ಯೆಯೂ ಹಬ್ಬಗಳ ಆಚರಣೆ ಸಾಂಪ್ರದಾಯಿಕವಾಗಿಯೇ ನಡೆಯುತ್ತಿದೆ. ಗಣೇಶನ ಹಬ್ಬದ ಮೂಡ್‌ ಕಳೆದ ವರ್ಷಕ್ಕೆ ಹೋಲಿಸಿದರೆ ಸಹಜವಾಗಿಯೇ ಕಡಿಮೆ ಇದ್ದರೂ ಆಚರಣೆಯನ್ನು ಮನೆಗೆ ಸೀಮಿತಗೊಳಿಸಿಕೊಂಡು ಹೊಸ ಜನಜೀವನದ ರೀತಿಗೆ ಹಬ್ಬಗಳನ್ನೂ ಸೇರಿಸಿಕೊಂಡಿದ್ದಾರೆ. ಹಬ್ಬವೆಂದರೆ ಶಾಪಿಂಗ್‌; ಹಬ್ಬವೆಂದರೆ ಹೊಸ ಉಡುಪು, ಸೀರೆ, ಬಳೆಗಳ ಖರೀದಿ; ಹಬ್ಬವೆಂದರೆ ತರಕಾರಿ, ಹಣ್ಣು, ಸಿಹಿಗಳ ಭರಾಟೆ ಇತ್ತು. ಆದರೆ ಈ ಬಾರಿ ಬಟ್ಟೆಯ ಖರೀದಿಗೆ ಬಹುತೇಕರು ತಿಲಾಂಜಲಿ ನೀಡಿ ಸಂಪ್ರದಾಯಕ್ಕೆ ಒತ್ತು ಕೊಟ್ಟು ಹಬ್ಬಗಳನ್ನು ಸರಳವಾಗಿಯೇ ಆಚರಿಸುತ್ತಿದ್ದಾರೆ.

ಗಣಪನ ಪೂಜಿಸುವ ಈ ಹತ್ತು ದಿನಗಳ ಹಬ್ಬ ಆರಂಭವಾಗಿದೆ. ಮನೆಯಲ್ಲೇ ಕುಟುಂಬದ ಸದಸ್ಯರು, ಬಂಧುಗಳು, ಸ್ನೇಹಿತರು ಸೇರಿ ಆಚರಿಸುವುದಕ್ಕೆ ತಯಾರಿ ನಡೆದಿದೆ. ಹಬ್ಬವೆಂದರೆ ತಿಂಡಿ– ತಿನಿಸುಗಳ ವೈಭೋಗ. ತರಾವರಿ ಸಿಹಿ ತಿಂಡಿಗಳು, ಸಾಂಪ್ರದಾಯಕ ಮೋದಕ, ಕರ್ಜಿಕಾಯಿ (ಕರಿಗಡುಬು), ಕಾಯಿಗಡುಬು, ಹೋಳಿಗೆ, ಪಾಯಸ, ಲಡ್ಡು.. ಹೀಗೆ ನಾನಾ ಬಗೆಯ ಸಿಹಿಗಳು ನೈವೇದ್ಯಕ್ಕೆ ತಯಾರಾಗುತ್ತವೆ. ಸಕ್ಕರೆ, ತುಪ್ಪ, ಎಣ್ಣೆಯ ಬಳಕೆ ಧಾರಾಳವಾಗಿಯೇ ಇರುತ್ತದೆ. ತಿನ್ನುವುದು ಕೂಡ ನಾವು ಅಂದುಕೊಂಡಿದ್ದಕ್ಕಿಂತ ಜಾಸ್ತಿಯೇ. ಹಬ್ಬದ ದಿನ ಆಸೆಪಟ್ಟು ತಿಂದರೂ ನಂತರದ ದಿನಗಳಲ್ಲಿ ಆರೋಗ್ಯದ ಬಗ್ಗೆ ಈಗಂತೂ ಜಾಸ್ತಿ ಗಮನ ನೀಡಬೇಕಾಗಿರುವುದು ಅನಿವಾರ್ಯ. ಆರೋಗ್ಯದಲ್ಲಿ ಕೊಂಚ ಏರುಪೇರಾದರೂ ಕೋವಿಡ್‌ ಪಿಡುಗಿನ ಈ ಸಂದರ್ಭದಲ್ಲಿ ತಕ್ಷಣಕ್ಕೆ ವೈದ್ಯರ ಬಳಿ ಧಾವಿಸುವುದು ಕಷ್ಟವಾಗುತ್ತದೆ.

ಹಬ್ಬದ ದಿನ ಹಾಗೂ ನಂತರ ಸೇವಿಸುವ ಆಹಾರದ ಬಗ್ಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ ತಜ್ಞ ವೈದ್ಯ ಡಾ. ಟಿ.ಎಸ್‌.ತೇಜಸ್‌. ಸಿಹಿ ಇಷ್ಟವಿಲ್ಲದವರು ಯಾರಿಲ್ಲ ಹೇಳಿ. ಹಬ್ಬದ ದಿನ ಸಿಹಿ ತಿನಿಸುಗಳನ್ನು ತಯಾರಿಸುವಾಗ ಸಕ್ಕರೆ ಬದಲು ಬೆಲ್ಲ ಬಳಸಬಹುದು. ಮಧುಮೇಹಿಗಳು ನೈಸರ್ಗಿಕ ಸಿಹಿ ಸ್ಟೀವಿಯ ಬಳಕೆ ಮಾಡಬಹುದು. ಕಾರ್ಬೊಹೈಡ್ರೇಟ್‌ ಸೇವನೆ ಮಾಡುವಾಗ ಕೊಂಚ ಎಚ್ಚರಿಕೆ ಇರಲಿ. ಅಂದರೆ ಅಂದು ಸಿಹಿ ಭಕ್ಷ್ಯಗಳು ಜಾಸ್ತಿ ಇರುವುದರಿಂದ ಅನ್ನದ ಸೇವನೆ ಕಡಿಮೆ ಇರಲಿ. ಆಗ ಎರಡನ್ನೂ ಸಮತೋಲನ ಮಾಡಬಹುದು. ಹಾಗೆಯೇ ಸಿಹಿ ಭಕ್ಷ್ಯಗಳಿಗೆ ಭಾರತೀಯ ಸಂಬಾರು ಪದಾರ್ಥಗಳನ್ನು ಬಳಸಿ. ಲಡ್ಡು ತಯಾರಿಕೆಗೆ ಲವಂಗ ಬಳಸಬಹುದು. ಹೋಳಿಗೆಗೆ ಧಾರಾಳವಾಗಿ ಎಳ್ಳು ಬೆರೆಸಿ. ಸುವಾಸನಾಭರಿತ ದಾಲ್ಚಿನ್ನಿಯನ್ನು ಕಾಯಿಗಡುಬಿಗೆ ಕೊಂಚ ಸೇರಿಸಬಹುದು. ಹಾಗೆಯೇ ಒಣ ದ್ರಾಕ್ಷಿ, ಖರ್ಜೂರವನ್ನು ಬೆಲ್ಲ ಅಥವಾ ಸಕ್ಕರೆ ಬದಲಾಗಿ ಮಿಶ್ರಣ ಮಾಡಬಹುದು. ಖಾರ ಹಾಗೂ ಎಣ್ಣೆಯಲ್ಲಿ ಕರಿಯುವ ಚಕ್ಕುಲಿ, ಮಸಾಲೆ ವಡೆ ಮೊದಲಾದವುಗಳಿಗೆ ಓಂಕಾಳು (ಅಜವಾನ) ಸೇರಿಸುವುದರಿಂದ ಅಜೀರ್ಣದಿಂದ ಪಾರಾಗಬಹುದು. ಹಬ್ಬದ ದಿನ ಬಹುತೇಕರು ಬೆಳ್ಳುಳ್ಳಿ ಬಳಸುವುದಿಲ್ಲ. ಹೀಗಾಗಿ ಇಂಗನ್ನು ಚಿತ್ರಾನ್ನ‌, ಬಜ್ಜಿ ಮೊದಲಾದವುಗಳಿಗೆ ಹಾಕಬಹುದು. ಇದು ಕೂಡ ಜೀರ್ಣಕಾರಿ. ಹಾಗೆಯೇ ಜೀರಿಗೆಯನ್ನು ಒಗ್ಗರಣೆಗೆ ಹಾಕಿ. ಇದು ಕೂಡ ಪಚನಕಾರಿ.

ಊಟದ ನಂತರವೂ ಅಷ್ಟೆ. ಹೊಟ್ಟೆ ಉಬ್ಬರಿಸಿದಂತಾದರೆ ಉಗುರು ಬೆಚ್ಚಗಿನ ನೀರಿಗೆ ಲಿಂಬೆ ರಸ, ಸ್ವಲ್ಪ ಉಪ್ಪು ಅಥವಾ ಅಡುಗೆ ಸೋಡಾ ಬೆರೆಸಿ ಕುಡಿಯಿರಿ. ಓಂಕಾಳು ಅಥವಾ ಜೀರಿಗೆಯನ್ನು ಬಾಯಲ್ಲಿ ಹಾಕಿಕೊಂಡು ನಿಧಾನವಾಗಿ ಅಗಿದು ರಸ ನುಂಗಿ. ಇದೆಲ್ಲ ಬಹುತೇಕರಿಗೆ ಗೊತ್ತಿರುವಂತಹ ವಿಷಯವಾದರೂ ಆ ಕ್ಷಣಕ್ಕೆ ನೆನಪಾಗದೆ ಚಡಪಡಿಸುವುದು ಸಹಜ. ಆ್ಯಸಿಡಿಟಿ ಸಮಸ್ಯೆ ಇರುವವರು ಹೊಟ್ಟೆಯೊಳಗೆ ಉರಿ ಎನಿಸಿದರೆ ಕೊತ್ತಂಬರಿ ಕಾಳನ್ನು ನೀರಿನಲ್ಲಿ ನೆನೆ ಹಾಕಿ, ಆ ನೀರನ್ನು ಕುಡಿಯಿರಿ. ಒಣಗಿಸಿದ ನೆಲ್ಲಿಕಾಯಿ ಚೂರುಗಳಿದ್ದರೆ ಅಗಿದು ರಸ ನುಂಗಿ. ಇದರಿಂದ ಹೊಟ್ಟೆಯುಬ್ಬರದಿಂದ ಉಂಟಾಗುವ ವಾಕರಿಕೆ ಶಮನವಾಗುತ್ತದೆ. ಹೊಟ್ಟೆಯುಬ್ಬರಕ್ಕೆ ಇನ್ನೊಂದು ಪರಿಹಾರವೆಂದರೆ ಓಡಾಟ. ಮನೆಯೊಳಗೆ ಅರ್ಧ ತಾಸು ಓಡಾಡುವುದರಿಂದ ತೇಗು ಬಂದಂತಾಗಿ ಆರಾಮವೆನಿಸುತ್ತದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು