ಗುರುವಾರ , ಜನವರಿ 21, 2021
28 °C

PV Web Exclusive: ಟೆಲಿಮೆಡಿಸಿನ್‌ನತ್ತ ಹೆಚ್ಚಿದ ಆಸಕ್ತಿ

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

Prajavani

ಸುಲಭ ಲಭ್ಯತೆ, ಕಡಿಮೆ ಖರ್ಚು, ಪ್ರಯಾಣದ ಶ್ರಮವಿಲ್ಲ, ವೈದ್ಯರಿಗಾಗಿ ಅಥವಾ ಪಾಳಿಯಲ್ಲಿ ಕಾಯುವ ಅಗತ್ಯವಿಲ್ಲ, ಭೌಗೋಳಿಕ ಅಂತರದ ಚಿಂತೆ ಇಲ್ಲ, ಎಲ್ಲಿಂದಲಾದರೂ, ಯಾವ ಮೂಲೆಯ ವೈದ್ಯರನ್ನಾದರೂ ಸಂಪರ್ಕಿಸಬಹುದು... ಇಂತಹ ಹಲವು ಕಾರಣಗಳಿಂದಾಗಿ ಹೆಚ್ಚು ಪ್ರಚಲಿತವಾಗುತ್ತಿದೆ ಟೆಲಿಮೆಡಿಸಿನ್...

ಕೋವಿಡ್ -19 ಹಾಗೂ ಲಾಕ್‌ಡೌನ್‌ ಅವಧಿಯಲ್ಲಿ ಅತಿ ಹೆಚ್ಚು ಸವಾಲುಗಳನ್ನೆದುರಿಸಿದ ಕ್ಷೇತ್ರ ವೈದ್ಯಕೀಯ ವಲಯ. ಆರಂಭದಲ್ಲಿ ವೈದ್ಯಲೋಕವೂ ಗೊಂದಲಕ್ಕೀಡಾಗಿದ್ದು ನಿಜ. ಕೆಲವರಂತೂ ತಿಂಗಳುಗಳವರೆಗೆ ಆಸ್ಪತ್ರೆ–ಕ್ಲಿನಿಕ್‌ಗಳ ಬಾಗಿಲನ್ನೇ ಮುಚ್ಚಿದ್ದರು. ರೋಗಿಗಳಲ್ಲೂ ಅಂಥದ್ದೇ ದಿಗಿಲು. ಸಾಮಾನ್ಯ–ಕೆಮ್ಮು ನೆಗಡಿ ಅಂತ ಹೋದರೂ ಒಳಕ್ಕೆ ಸೇರಿಸಿಕೊಳ್ಳದ ಆಸ್ಪತ್ರೆಗಳು, ಮಧುಮೇಹ, ರಕ್ತದೊತ್ತಡ, ಅಸ್ತಮಾದಂತಹ ದೀರ್ಘಕಾಲೀನ ಕಾಯಿಲೆಗಳ ಚಿಕಿತ್ಸೆಗೂ ಪರದಾಟ, ಯಾವ ಸಮಸ್ಯೆಗಳಿಗೆ, ಯಾವ ವೈದ್ಯರ ಬಳಿ ಹೋಗಬೇಕು ಎನ್ನುವ ಗೊಂದಲ, ಆಸ್ಪತ್ರೆಗಳು ಎಷ್ಟು ಸುರಕ್ಷಿತ ಎನ್ನುವ ಚಿಂತೆ... ಈಗಲೂ ಮುಂದುವರಿದ ಆತಂಕದ ಛಾಯೆ...

ಇದೇ ಅವಧಿಯಲ್ಲಿ, ವೈದ್ಯ–ರೋಗಿಯ ನಡುವೆ ಸೇತುವೆಯಾಗಿ ಕೆಲಸ ಮಾಡಿದ್ದು ‘ಟೆಲಿಮೆಡಿಸಿನ್‌’. ಲಾಕ್‌ಡೌನ್‌ ಅವಧಿಯಲ್ಲಿ ಅತಿಹೆಚ್ಚು ಜನರನ್ನು ತಲುಪಿದ ಈ ವ್ಯವಸ್ಥೆ ಅನಂತರವೂ ಏರುಗತಿಯನ್ನು ಸಾಧಿಸುತ್ತಿದೆ. ಮಾತ್ರವಲ್ಲ, ಅನೇಕ ತಜ್ಞ ವೈದ್ಯರು ತಮ್ಮದೇ ಆದ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನದಲ್ಲಿದ್ದಾರೆ. ಆಸ್ಪತ್ರೆಗಳಂತೂ ಹಿಂದೆಂದಿಗಿಂತಲೂ ಇಂದು ಟೆಲಿಮೆಡಿಸಿನ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿವೆ. ಈ ಎಲ್ಲಾ ಕಾರಣಗಳಿಂದಾಗಿ ಟೆಲಿಮೆಡಿಸಿನ್‌ ಕಳೆದ ಆರು ತಿಂಗಳ ಅವಧಿಯಲ್ಲಿ ಶೇ 25ರಷ್ಟು ಅಭಿವೃದ್ಧಿ ಸಾಧಿಸಿದೆ.

ಲಾಕ್‌ಡೌನ್ ಅವಧಿಯಲ್ಲಿ ಶೇ 300ರಷ್ಟು ಬೆಳವಣಿಗೆಯನ್ನು ವರದಿ ಮಾಡಿದ್ದ ಟೆಲಿಮೆಡಿಸಿನ್ ಕ್ಷೇತ್ರ ಅನಂತರದ ದಿನಗಳಲ್ಲಿಯೂ ಜನಪ್ರಿಯತೆಯನ್ನು ಉಳಿಸಿಕೊಂಡಿದೆ.

‘ಮೈಉಪಚಾರ್‌’ ಎನ್ನುವ ಸಂಸ್ಥೆ ಲಾಕ್‌ಡೌನ್ ನಂತರ ಭಾರತದಲ್ಲಿ ಟೆಲಿಕನ್ಸಲ್ಟೇಶನ್/ ಟೆಲಿಮೆಡಿಸಿನ್ ವೈದ್ಯಕೀಯ ವಲಯವನ್ನು ಹೇಗೆ ನಿಯಂತ್ರಿಸಿದೆ ಎನ್ನುವ ವಿಷಯ ಕುರಿತು ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ವ್ಯಕ್ತವಾಗಿದೆ. ಟೆಲಿಕನ್ಸಲ್ಟೇಶನ್/ ಟೆಲಿಮೆಡಿಸಿನ್ ಸೌಲಭ್ಯಗಳನ್ನು ಯಾರೆಲ್ಲಾ ಬಳಸುತ್ತಿದ್ದಾರೆ, ಎಲ್ಲಿ, ಎಷ್ಟು ಮತ್ತು ಯಾವ ಕಾಯಿಲೆಗಳಿಗಾಗಿ ಇದು ಹೆಚ್ಚು ಬಳಕೆಯಾಗುತ್ತಿದೆ ಎನ್ನುವ ಕುರಿತ ಪ್ರಮುಖ ಒಳನೋಟಗಳು ಈ ವರದಿಯಲ್ಲಿವೆ.

ಅವಲಂಬಿತರಿಗಾಗಿ ಟೆಲಿಮೆಡಿಸಿನ್‌ ಸೌಲಭ್ಯಗಳನ್ನು ಬಳಸುತ್ತಿರುವವರೇ ಅಧಿಕ. ಅಂದರೆ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಪೋಷಕರ ಆರೋಗ್ಯಕ್ಕೆ ಸಂಬಂಧಿಸಿದಂತೆ ಈ ಸೇವೆಗಳ ಪ್ರಯೋಜನ ಪಡೆಯುವವರ ಸಂಖ್ಯೆ ಶೇ 80ರಷ್ಟು ಹೆಚ್ಚಳವಾಗಿದೆ ಎಂದು ಸಮೀಕ್ಷೆ ಹೇಳಿದೆ.

ಇತ್ತೀಚೆಗೆ ಮೆಟ್ರೋ ನಗರ ನಿವಾಸಿಗಳಷ್ಟೇ ಅಲ್ಲದೆ, ಸಣ್ಣಪುಟ್ಟ ನಗರ/ಪಟ್ಟಣ ಪ್ರದೇಶದ ಜನರೂ ಈ ಸೌಲಭ್ಯಕ್ಕೆ ಮನಸ್ಸು ಮಾಡುತ್ತಿದ್ದಾರೆ. ಆರೋಗ್ಯ ಸೌಲಭ್ಯಗಳು ಚೆನ್ನಾಗಿರದ ಪ್ರದೇಶಗಳು ಹಾಗೂ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಪಡೆಯಲು ಬಹಳ ದೂರ ಕ್ರಮಿಸಬೇಕಾದ ಅನಿವಾರ್ಯತೆ ಇರುವ ಪ್ರದೇಶದ ಜನರು ಹೆಚ್ಚಾಗಿ ಈ ಸೇವೆಗಳನ್ನು ಅವಲಂಬಿಸಿದ್ದಾರೆ. ಇಂಥವರ ಪ್ರಮಾಣ ಶೇ 90ರಷ್ಟು ಅಧಿಕವಾಗಿದೆ. ಸ್ಮಾರ್ಟ್‌ ಫೋನ್‌ ಬಗ್ಗೆ ತಿಳಿವಳಿಕೆ ಇಲ್ಲದ ಜನರೂ ಸಹ ಮನೆಯಲ್ಲಿರುವ ಅಥವಾ ಊರಿನ ಕಿರಿಯರ ಸಹಾಯದಿಂದ ಫೋನ್‌ ಮೂಲಕ ವೈದ್ಯರನ್ನು ಸಂಪರ್ಕಿಸುವ ಪ್ರವೃತ್ತಿ ಬೆಳೆಯುತ್ತಿದೆ.

ಈ ಸೌಲಭ್ಯದ ಉಪಯೋಗ ಪಡೆಯುತ್ತಿರುವವರಲ್ಲಿ ಪುರುಷರೇ ಹೆಚ್ಚು. ಶೇ 71.5 ರಷ್ಟು ಜನ ಪುರುಷರು ಈ ಸೌಲಭ್ಯ ಬಳಸುತ್ತಿದ್ದರೆ, ಮಹಿಳೆಯರ ಪಾಲು ಶೇ 28.5ರಷ್ಟಿದೆ. ಅತಿ ಹೆಚ್ಚು ಜನರು ಅಲೋಪತಿಯತ್ತ (ಶೇ 64ರಷ್ಟು) ಆಸಕ್ತಿ ಹೊಂದಿದ್ದು, ನಂತರದ ಸ್ಥಾನದಲ್ಲಿ ಆಯುರ್ವೇದ (ಶೇ 24.3%) ಹಾಗೂ ಹೋಮಿಯೊಪತಿ (ಶೇ 11.4% ) ಪರಿಹಾರಗಳಿವೆ.

ಟೆಲಿಮೆಡಿಸಿನ್‌ ಸೌಲಭ್ಯಗಳು ಬಹಳ ಹಿಂದಿನಿಂದಲೂ ಲಭ್ಯವಿದ್ದವು. ಕಳಕೆದಾರರೂ ಇದ್ದರು. ಆದರೆ ಇಷ್ಟೊಂದು ಜನಪ್ರಿಯತೆ ಇರಲಿಲ್ಲ. ಅದಕ್ಕೆ ಸ್ಪಷ್ಟವಾದ ನಿರ್ದೇಶನಗಳು, ಮಾರ್ಗಸೂಚಿಗಳು ಇರದ ಕಾರಣ ಬಳಕೆದಾರರೂ, ಸೇವೆ ಪೂರೈಕೆದಾರರೂ ಒಂದು ರೀತಿಯ ಗೊಂದಲದಲ್ಲಿದ್ದರು. ಆದರೆ ಕೋವಿಡ್‌–19 ಅವಧಿಯಲ್ಲಿ ಸರ್ಕಾರ ಈ ಸೇವೆಗಳಿಗೆ ಹೆಚ್ಚು ಆದ್ಯತೆ ನೀಡಿದ ಪರಿಣಾಮ ಈ ಸೌಲಭ್ಯ ಪಡೆದುಕೊಳ್ಳುವವರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ ಎನ್ನುತ್ತಾರೆ ತಜ್ಞರು.


ಡಾ. ಅರ್ಚನಾ ನಿರುಲಾ.

‘ರೋಗಿಗಳಿಗೂ, ವೈದ್ಯರಿಗೂ ಟೆಲಿಮೆಡಿಸಿನ್‌ ಬಗ್ಗೆ ಗೊಂದಲಗಳಿದ್ದವು. ಸರಿಯಾದ ನಿಯಮಗಳು ಇರಲಿಲ್ಲ. ಆದರೆ ಲಾಕ್‌ಡೌನ್‌ ಅವಧಿಯ ನಂತರ ವೈದ್ಯಕೀಯ ವಲಯಕ್ಕೆ ಟೆಲಿಮೆಡಿಸಿನ್‌/ ಟೆಲಿಕನ್ಸಲ್ಟೇಶನ್‌ನಂತಹ ಸೌಲಭ್ಯಗಳು ಎಷ್ಟು ಮುಖ್ಯ ಎನ್ನುವುದು ಮನದಟ್ಟಾಗಿದೆ. ‘ಟೆಲಿಮೆಡಿಸಿನ್‌ ಸೊಟೈಟಿ ಆಫ್‌ ಇಂಡಿಯಾ’ ಇದಕ್ಕಾಗಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದರಿಂದ ಹೆಚ್ಚು ಹೆಚ್ಚು ವೈದ್ಯರು, ಆಸ್ಪತ್ರೆಗಳು ಈ ಸೇವೆಗಳನ್ನು ನೀಡಲು ಸಾಧ್ಯವಾಗಿದೆ’ ಎನ್ನುತ್ತಾರೆ ಸ್ತ್ರೀರೋಗ ತಜ್ಞೆ ಡಾ. ಅರ್ಚನಾ ನಿರುಲಾ.

ಆದರೆ ಯಾವುದೇ ಹೊಸ ಬೆಳವಣಿಗೆಗೆ ಎರಡು ಮುಖಗಳಿರುತ್ತವೆ. ಹಾಗೆಯೇ ಇದಕ್ಕೂ ಅದರದೇ ಆದ ಸವಾಲುಗಳಿವೆ. ಗಂಭೀರ ಸ್ವರೂಪದ ಕಾಯಿಲೆಗಳು ಈ ಸೇವೆಯ ವ್ಯಾಪ್ತಿಗೆ ಬರುವುದಿಲ್ಲ. ತುರ್ತು ಸಂದರ್ಭದಲ್ಲಿ, ವೈದ್ಯರು ಬರುವವರೆಗೆ ಏನು ಮಾಡಬೇಕು ಎನ್ನುವ ಸಲಹೆಗಳನ್ನು ಫೋನ್‌ ಮೂಲಕ ನೀಡಬಹುದಷ್ಟೇ. ಇನ್ನು, ಗ್ರಾಮೀಣ ಪ್ರದೇಶದ ಜನರಿಗೆ ಈ ಸೇವೆಗಳ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಕೈಯಲ್ಲಿ ಸ್ಮಾರ್ಟ್‌ ಫೋನ್‌ ಇದ್ದರೂ ಇಂತಹ ವ್ಯವಸ್ಥೆಗಳನ್ನು ಬಳಸಲು ತಿಳಿವಳಿಕೆ, ಆತ್ಮವಿಶ್ವಾಸದ ಕೊರತೆ ಅವರಲ್ಲಿ ಎದ್ದು ಕಾಣುತ್ತದೆ.  ಮುಖ್ಯವಾದ ಇನ್ನೊಂದು ಸವಾಲು ಎಂದರೆ ಇದರಲ್ಲಿ ನೇರ ಭೇಟಿಗೆ ಆಸ್ಪದ ಇಲ್ಲದೇ ಇರುವುದು. ಇದರಿಂದ ‘ವೈದ್ಯ–ರೋಗಿಯ’ ನಡುವೆೆ ಬಾಂಧವ್ಯದ ಕೊರತೆ ಉಂಟಾಗುತ್ತದೆ. ಆದರೂ, ಈ ಕೆಲವು ಅಡೆತಡೆಗಳನ್ನು ಬದಿಗಿಟ್ಟು ನೋಡಿದರೆ ಟೆಲಿಮೆಡಿಸಿನ್‌ ಈ ಕಾಲದ ಅನಿವಾರ್ಯ ಮತ್ತು ಅತ್ಯುತ್ತಮ ಸೇವೆ ಎಂದೇ ಹೇಳಬಹುದು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು