ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇಮ ಕುಶಲ | ಸಂತೋಷಕ್ಕೆ ಕೆಲವು ಸೂತ್ರಗಳು...

Last Updated 4 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಸರಳತೆಯೇ ಸಂತೋಷದ ಸೂತ್ರ. ಆದರೆ ಸರಳತೆಯನ್ನು ಸಾಧಿಸುವುದು ಮಾತಿನಲ್ಲಿ ಹೇಳಿದಷ್ಟು ಸರಳವಾದ ಕೆಲಸವಲ್ಲ. ನಾವು ನಮ್ಮ ಜೀವನವನ್ನು ಅನವಶ್ಯಕವಾಗಿ ಸಂಕೀರ್ಣಗೊಳಿಸಿಕೊಂಡಿರುವುದರಿಂದಲೇ ಸಂತೋಷ ಎನ್ನುವುದು ಗಗನಕುಸುಮದಂತೆ ಕಾಣುತ್ತಿರುತ್ತದೆ.

ನಾವೇಕೆ ನಮ್ಮ ಬದುಕನ್ನು, ನಮ್ಮ ವ್ಯಕ್ತಿತ್ವವನ್ನು ಇಷ್ಟು ಸಂಕೀರ್ಣಗೊಳಿಸಿಕೊಂಡಿರುತ್ತೇವೆ? ಉತ್ತರ ಸರಳವಾದದ್ದಲ್ಲ. ಬಹುಶಃ ನಮ್ಮ ಅವಶ್ಯಕತೆಗಳೂ ಅಷ್ಟು ಸರಳವಾಗಿಲ್ಲವೇನೋ? ಆಹಾರ, ನಿದ್ರೆ, ರಕ್ಷಣೆಗಳನ್ನು ಮೀರಿದ ಅವಶ್ಯಕತೆಗಳು ಮನುಷ್ಯರಿಗಿವೆ. ಬದುಕಿನಲ್ಲಿನ ನಮ್ಮ ಅಪೇಕ್ಷೆಗಳೂ ಸುಲಭವಾಗಿ ನೆರವೇರುವಂಥದ್ದಲ್ಲ. ಸವಾಲುಗಳೇ ನಮ್ಮ ಬದುಕನ್ನು ರೋಚಕವಾಗಿಸುವುದು. ಸವಾಲುಗಳೇ ಇರದ ದಾರಿ ನೀರಸವೆನಿಸುತ್ತದೆ. ಹಾಗಾಗಿ ಸುಲಭವಾಗಿ ನೆರವೇರುವಂಥದ್ದನ್ನು ನಾವು ಬಯಸುವುದೇ ಇಲ್ಲ! ನಾವು ಬಯಸುವಂಥದ್ದು ಹೇಗಿರುತ್ತವೆ? ನಮ್ಮ ನಿದ್ದೆ ಕೆಡಿಸುವಂತಹ, ನಮ್ಮನ್ನು ಚಡಪಡಿಸುವಂತೆ ಮಾಡುವ, ಈಗಿರುವ ನಮ್ಮ ಬದುಕಿನಿಂದ ಬಹು ದೂರಹೋಗಿ ಸಪ್ತಸಾಗರಗಳನ್ನು ದಾಟಿ ಪಡೆಯಬೇಕಾಗಿರುವ ಏನೋ ಅಮೂಲ್ಯವಾದಂಥದ್ದು. ಹೀಗೆ ನಮ್ಮ ಗುರಿಗಳೇ ನಾವು ಕಠಿಣವಾದ ಹಾದಿಯನ್ನು ಸವೆಸುವಂತಹ ಅನಿವಾರ್ಯತೆಯನ್ನು ತಂದಿಟ್ಟುಬಿಡುತ್ತವೆ. ನಮ್ಮ ಆಸೆಗಳಲ್ಲಿ ಏನೂ ತಪ್ಪಿಲ್ಲ ನಿಜ; ಆದರೆ ಒಂದು ಆಸೆ, ಒಂದು ಕನಸು ಕೈಗೂಡಿದ ತಕ್ಷಣವೇ ಮತ್ತೊಂದರ ಬೆನ್ನಟ್ಟಿ ಹೋಗುತ್ತೇವಲ್ಲ, ಈ ಸ್ವಭಾವಕ್ಕೆ ಕಾರಣವೇನು?

‘ಕಣ್ಮುಂದೆ ಇರೋದು ನಿಕೃಷ್ಟ, ಕಣ್ಮರೆಯಾಗಿ ದೂರದಲ್ಲೆಲ್ಲೋ ಇದ್ದುಕೊಂಡು ನಮ್ಮನ್ನು ಕೆಣಕುವುದೇ ಶ್ರೇಷ್ಠ’ ಎಂದುಕೊಳ್ಳುವ ನಮ್ಮ ಜಾಯಮಾನವೇ ಬದುಕಿನ ಕುರಿತು ಅಚ್ಚರಿಯನ್ನು, ಕುತೂಹಲವನ್ನು ಕಾಪಾಡುತ್ತದೆ. ಹಾಗಿಲ್ಲದೇ ‘ನಾನು ಯೋಜಿಸಿಕೊಂಡಿದ್ದೆಲ್ಲವನ್ನೂ ಮಾಡಿ ಮುಗಿಸಿದ್ದೇನೆ, ಇನ್ನು ಮಾಡಬೇಕಾದ್ದು ಏನೂ ಇಲ್ಲ’ ಎಂದು ಭಾವಿಸಿಕೊಂಡುಬಿಟ್ಟರೆ ಬದುಕಿನ ಬಗ್ಗೆ ಆಸಕ್ತಿಯೂ ಪ್ರೀತಿಯೂ ಕಳೆದುಹೋಗುತ್ತದೆ. ಹೀಗೆ ನಮ್ಮ ಜೀವನವನ್ನು ಸಂಕೀರ್ಣಗೊಳಿಸುವುದು ಮನುಷ್ಯನ ಸಾಹಸಪ್ರವೃತ್ತಿ, ಸವಾಲುಗಳನ್ನು ಇಷ್ಟಪಡುವ ಸ್ವಭಾವ; ಇದುವರೆಗೂ ಕಾಣದ್ದನ್ನು, ಕೇಳದ್ದನ್ನು, ಅನುಭವಿಸದ್ದನ್ನು ಹೊಂದಬೇಕೆನ್ನುವ ತುಡಿತ ಮತ್ತು ಎಲ್ಲವನ್ನೂ ಪ್ರಶ್ನಿಸುವ, ಎಲ್ಲದರ ಬಗ್ಗೆಯೂ ಚಿಂತಿಸುವ, ಎಲ್ಲದರ ಅರ್ಥ ಹುಡುಕುವ ಮೂಲಗುಣ.

ಹೀಗೆ ನಮ್ಮ ಬುದ್ಧಿಗೆ, ಅಸ್ತಿತ್ವಕ್ಕೆ ಸವಾಲೊಡ್ಡುವ ಕೆಲಸವನ್ನು ಮಾಡುವ ಪ್ರಚೋದನೆ ಇಲ್ಲದಿರುತ್ತಿದ್ದರೆ ನಾವು ಪ್ರಾಣಿಗಳಂತೆ ಸುಮ್ಮನೆ ಇರುತ್ತಿದ್ದೆವಷ್ಟೇ. ಪ್ರಾಣಿಗಳು ಸಂತೋಷವಾಗಿರುತ್ತವೋ ಇಲ್ಲವೋ ಗೊತ್ತಿಲ್ಲ; ಆದರೆ ಅವು ‘ಸಂತೋಷವಾಗಿರುವುದು ಹೇಗೆ’ – ಎಂಬ ಪ್ರಶ್ನೆಯನ್ನಂತೂ ಕೇಳಿಕೊಳ್ಳುವುದಿಲ್ಲ!

ನಮಗೆಲ್ಲರಿಗೂ ನಮ್ಮದೇ ಆದ ಸಂತೋಷದ ಕಲ್ಪನೆಗಳಿರುತ್ತವೆ. ಅವುಗಳಲ್ಲಿ ಮುಖ್ಯವಾದುವು: ಪ್ರಕೃತಿಯೊಂದಿಗೆ ನಿಕಟವಾದ ಸಂಬಂಧ ಹೊಂದಿದ ಅಕ್ಕರೆ ತುಂಬಿದ್ದ ಬಾಲ್ಯ, ಸುಗಮವಾಗಿ ಸಾಗುವ ಶೈಕ್ಷಣಿಕ ಪಯಣ, ಉತ್ತಮ ಉದ್ಯೋಗ, ಯಶಸ್ಸು, ಕೀರ್ತಿ, ಮನ್ನಣೆ, ಸಂತೃಪ್ತ ಕೌಟುಂಬಿಕ ಬದುಕು, ಆರೋಗ್ಯ, ದೇಶ–ವಿದೇಶಗಳನ್ನು ಸುತ್ತುವ ಅವಕಾಶಗಳು, ಸ್ನೇಹಮಯ ಸಂಬಂಧಗಳು, ಮನೆ, ವಾಹನ ಮುಂತಾದ ಸೌಕರ್ಯಗಳು... ಹೀಗೆ ಇನ್ನೂ ಕೆಲವು. ಇವುಗಳಲ್ಲಿ ಯಾವುದನ್ನೇ ಪಡೆಯುವ ದಾರಿಯಲ್ಲಿ ಎಡರುತೊಡರುಗಳು ಎದುರಾದರೂ ‘ನಾನು ಸಂತೋಷವಾಗಿಲ್ಲವಲ್ಲ’ ಎಂದು ಕೊರಗಲು ಶುರುಮಾಡುತ್ತೇವೆ. ನಮ್ಮ ಸಂತೋಷದ ಕಲ್ಪನೆಯೇ ನಮ್ಮ ಸಂತೋಷವನ್ನು ನಿಜವಾಗಿಯೂ ನಿಯಂತ್ರಿಸುವುದು ಹೌದು. ಹಾಗೆ ನೋಡಿದರೆ ನಮ್ಮ ಸಂತೋಷದ ಕಲ್ಪನೆಯೂ ಪೂರ್ತಿ ನಮ್ಮ ಸ್ವಂತದ್ದೇನಲ್ಲ. ಅದೂ ನಮಗೆ ಸಮಾಜವೇ ಕಟ್ಟಿಕೊಟ್ಟಿರುವ ಚಿತ್ರಣ. ಹಾಗಾಗಿ ಸಂತೋಷ ಎನ್ನುವುದು ಕೇವಲ ವೈಯಕ್ತಿಕವಾಗಿ ಸಾಧಿಸುವಂತಹದ್ದೇನಲ್ಲ; ಅದು ನಮ್ಮ ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಪರಿಸ್ಥಿತಿಗಳಿಂದಲೂ ನಿರ್ಧಾರವಾಗುತ್ತದೆ. ಹೀಗಾಗಿ ‘ನಮ್ಮ ಸಂತೋಷ ನಿಜವಾಗಲೂ ನಮ್ಮ ಕೈಯಲ್ಲಿದೆಯೇ?’ ಎನ್ನುವ ಪ್ರಶ್ನೆಯೇಳುತ್ತದೆ.

ವಿಷಯ ಹೀಗಿದ್ದರೂ ನಮ್ಮ ಸಂತೋಷದ ಚಿತ್ರಣವನ್ನು ಆದಷ್ಟೂ ಸರಳವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಸಹಾಯಕವಾಗಬಲ್ಲ ಕೆಲವು ಅಂಶಗಳು ಹೀಗಿವೆ:

ಮಹತ್ವಾಕಾಂಕ್ಷೆಗಳು ಗುರಿಸಾಧನೆಗೆ ಹೇಗೆ ಪ್ರೇರಕವೋ ಹಾಗೆ ಸಂತೋಷಕ್ಕೆ ಮಾರಕವೂ ಹೌದು. ವಾಸ್ತವಕ್ಕೆ ಸರಿಹೊಂದದ ಮಹತ್ವಾಕಾಂಕ್ಷೆಗಳನ್ನು ಮತ್ತೊಮ್ಮೆ ವಿಮರ್ಶಿಸುವುದು ಕ್ಷೇಮ; ಇಲ್ಲದಿದ್ದರೆ ಒತ್ತಡ ಖಂಡಿತ. ಗುರಿಗಳನ್ನು ಪ್ರಾಕ್ಟಿಕಲ್ ಆಗಿಟ್ಟುಕೊಳ್ಳುವುದು ಸಂತೋಷದ ಮೊದಲ ಮೆಟ್ಟಿಲು.

‘ಜನರು ನನ್ನ ಬಗ್ಗೆ ಏನಂದುಕೊಳ್ಳುತ್ತಾರೆ’ – ಎಂದು ಯೋಚಿಸುವುದರಿಂದ ಸಂತೋಷ ಸಾಯುತ್ತದೆ. ಜನರನ್ನು ಮೆಚ್ಚಿಸುವ ಭ್ರಮೆಯನ್ನು ಬಿಟ್ಟು ನಮ್ಮ ಅಂತರಂಗದ ದನಿಗೆ ಬೆಲೆ ಕೊಡಬೇಕು.

ಸಂತೋಷವಾಗಿರುವುದು ಸಾಧ್ಯವಿದ್ದರೂ ಸದಾ ನಕಾರಾತ್ಮಕ ಭಾವಗಳನ್ನೇ ತೋರ್ಪಡಿಸುವ, ಎಲ್ಲದಕ್ಕೂ ಕೊರಗುವ, ಎಲ್ಲರ ವಿಷಯಕ್ಕೂ ಮೂಗು ತೂರಿಸುವ ಅತೃಪ್ತ ಜನರ ಸಹವಾಸವನ್ನು ಬಿಟ್ಟುಬಿಡುವುದರಿಂದ ತಲೆಯ ಮೇಲಿನ ಅಗಾಧ ಭಾರವನ್ನು ಇಳಿಸಿದಂತಾಗುತ್ತದೆ.

ನಮ್ಮ ಬದುಕು ಸಂಪೂರ್ಣವಾಗಿ ನಮ್ಮ ನಿಯಂತ್ರಣದಲ್ಲಿಲ್ಲ. ನಮ್ಮ ಕೈಲಿರುವುದನ್ನು ಚೆನ್ನಾಗಿ ನಿರ್ವಹಿಸಿ, ಕೈಮೀರಿದ್ದನ್ನು ಒಪ್ಪಿಕೊಳ್ಳುವುದರಿಂದ ನೆಮ್ಮದಿ ತಾನಾಗೇ ಉಂಟಾಗುತ್ತದೆ.

ಎಲ್ಲರ ಬದುಕು ಬೇರೆ ಬೇರೆ. ಎಲ್ಲರ ಹಾದಿಯೂ ವಿಭಿನ್ನ. ಹಾಗಾಗಿ ನಮ್ಮನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳದಿರುವುದೇ ಒಳ್ಳೆಯದು. ತುಂಬಾ ಆದರ್ಶದ ಬದುಕು ನಡೆಸಬೇಕೆನ್ನುವುದೂ ಅಶಾಂತಿಗೆ ಕಾರಣವಾಗುತ್ತದೆ. ಅಪೂರ್ಣತೆಯನ್ನು, ಮಾಡಿದ ತಪ್ಪುಗಳನ್ನು, ನಮ್ಮಲ್ಲಿರುವ ದೋಷಗಳನ್ನು ಸಹಜವಾಗಿ ಸ್ವೀಕರಿಸುವುದೊಳಿತು.

‘ನಾನೇನೂ ಅಲ್ಲ’ ಎಂಬ ಕೀಳರಿಮೆ, ‘ನಾನೇ ಎಲ್ಲ’ ಎಂಬ ಅಹಂಭಾವದ ನಡುವಿನ ಸಮತೋಲನವೇ ಮುಖದ ಮೇಲಿನ ಮಾಸದ ನಗುವಿಗೆ ಕಾರಣ.

ನಮ್ಮ ಮನಸ್ಸಿನ ಎಲ್ಲ ಕಿಟಕಿ–ಬಾಗಿಲುಗಳನ್ನು ತೆರೆದು, ನಮ್ಮ ಆಂತರ್ಯದ ಮಾತುಗಳನ್ನೆಲ್ಲಾ ಆಡಲು ಸಾಧ್ಯವಾಗುವಂತಹ ಒಬ್ಬ ವ್ಯಕ್ತಿಯಾದರೂ ನಮ್ಮ ಜೀವನದಲ್ಲಿರಲೇಬೇಕು.

ಯಾವಾಗಲೂ ಸಂತೋಷವಾಗಿಯೇ ಇರಬೇಕೆನ್ನುವ ಆಗ್ರಹವನ್ನು ತೊರೆದು ಒಮ್ಮೊಮ್ಮೆ ದುಃಖದಲ್ಲಿ, ಅಶಾಂತಿಯಲ್ಲಿ ಇರುವುದಕ್ಕೂ ನಮಗೆ ನಾವೇ ಅನುಮತಿ ಕೊಟ್ಟುಕೊಳ್ಳಬೇಕು.

ನಾವು ಮಾಡುವ ಕೆಲಸ ನಮ್ಮ ಸ್ವ-ಅಭಿವ್ಯಕ್ತಿಯೂ ಆಗಿದ್ದಾಗ ‘ಸಮಾಜಕ್ಕೂ ನಾವೇನೋ ಕೊಡುತ್ತಿದ್ದೇವೆ’ ಎನ್ನುವ ತೃಪ್ತಿ ಇರುತ್ತದೆ. ಅದು ಸುತ್ತಲಿನ ಪ್ರಪಂಚದೊಡನೆ ನಮ್ಮನ್ನು ಬೆಸೆಯುತ್ತದೆ. ಅರ್ಥಪೂರ್ಣವೂ ಮೌಲ್ಯಯುತವೂ ಆದ ಕೆಲಸದಿಂದ ಸಿಗುವ ಆನಂದ ಎಲ್ಲ ಸಂತೋಷಕ್ಕೂ ಮಿಗಿಲಾದದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT