ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕನ ಮಿತಿಯಲ್ಲಿ ಕನಸುಗಳ ನೇಯ್ಗೆ

Last Updated 10 ಜೂನ್ 2018, 19:49 IST
ಅಕ್ಷರ ಗಾತ್ರ

ಬೆಂಗಳೂರು: ಆರ್‌.ಅಶೋಕ್‌ ಸತತ ಆರನೇ ಬಾರಿ ಪದ್ಮನಾಭನಗರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯ ಹಿರಿಯ ಧುರೀಣ ಎನಿಸಿರುವ ಅವರು ಗಡಿಬಿಡಿಯೊಂದಿಗೇ ‘ಪ್ರಜಾವಾಣಿ’ ಜತೆ ತಮ್ಮ ಭವಿಷ್ಯದ ಯೋಜನೆಗಳನ್ನು ಹಂಚಿಕೊಂಡಿದ್ದಾರೆ.

*ಮುಂದಿನ ಐದು ವರ್ಷ ಶಾಸಕರಾಗಿ ನಿಮ್ಮ ಯೋಜನೆಗಳು ಏನು?

ಬೆಂಗಳೂರು ನಗರವನ್ನು ಟ್ರಾಫಿಕ್‌ ಮುಕ್ತ ಮಾಡಬೇಕು ಎಂಬ ಕನಸಿದೆ. ಸಿಗ್ನಲ್‌ ಮುಕ್ತ ರಿಂಗ್‌ರೋಡ್‌ ನಿರ್ಮಿಸುವ ಅಗತ್ಯವಿದೆ. ನಮ್ಮ ಕ್ಷೇತ್ರದಲ್ಲಿ ಮಕ್ಕಳಿಗಾಗಿ ವಿಶೇಷ ಆಟದ ಮೈದಾನಗಳನ್ನು ನಿರ್ಮಿಸಬೇಕು. ಈಗಾಗಲೇ ಕೆಲವು ಉದ್ಯಾನವನಗಳನ್ನು ಅಭಿವೃದ್ಧಿ ಮಾಡಲಾಗಿದೆ. ಆದರೆ ಅವುಗಳನ್ನು ಇನ್ನೂ ಉತ್ತಮ ಮಟ್ಟಕ್ಕೆ ಕೊಂಡೊಯ್ಯುವ ಯೋಜನೆ ಇದೆ. ಮಕ್ಕಳು ಹಾಗೂ ವಯಸ್ಸಾದವರಿಗೂ ಲಭ್ಯವಾಗುವಂತೆ ಉಚಿತ ಜಿಮ್ ವ್ಯವಸ್ಥೆ ಮಾಡುವ ಉದ್ದೇಶ ಇದೆ. ಇದೆಲ್ಲಾ ಆದಷ್ಟು ಬೇಗ ಆಗಲಿದೆ.

*ನಿಮ್ಮ ಕ್ಷೇತ್ರದ ಮುಖ್ಯ ಸಮಸ್ಯೆಗಳು ಏನು?

ಪದ್ಮನಾಭನಗರ ಬೆಂಗಳೂರಿನಲ್ಲಿಯೇ ಅತ್ಯುತ್ತಮ ಕ್ಷೇತ್ರ ಎಂದು ಹೆಸರು ಪಡೆದಿದೆ. ಇಲ್ಲಿ ಕೆಲವು ಭಾಗಗಳಲ್ಲಿ ಶುದ್ಧ ಕುಡಿಯುವ ನೀರು ದೊರಕುತ್ತಿಲ್ಲ. ಹೊಸಕೆರೆಹಳ್ಳಿ ಹಾಗೂ ಇಟ್ಟಮಡುವಿನಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಯಾಗಬೇಕಿದೆ.

*ರಾಜಕೀಯದ ಸವಾಲುಗಳೇನು?

ನಮ್ಮ ಕ್ಷೇತ್ರದಲ್ಲಿ ನನಗೆ ರಾಜಕೀಯದ ಸವಾಲುಗಳು ಅಂತಾ ಏನೂ ಇಲ್ಲ. ಇಲ್ಲಿ ಯಾರೂ ನನ್ನ ಸಮೀಪದ ಸ್ಪರ್ಧಿಗಳೂ ಇಲ್ಲ. ನನ್ನ ಕೆಲಸಕ್ಕೆ ತೊಂದರೆ ಕೊಡುವವವರೂ ಇಲ್ಲ. ಹಾಗಾಗಿ ನನಗೆ ಅಭಿವೃದ್ಧಿಯೇ ಸವಾಲುಗಳು. ಕ್ಷೇತ್ರದಲ್ಲಿ ಉತ್ತಮವಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗಿದೆ. ಇದನ್ನು ಮುಂದುವರಿಸಿಕೊಂಡು ಹೋಗಬೇಕಿದೆ.

*ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಏನಿರಬಹುದು?

ಬಿಜೆಪಿ ಇನ್ನೇನು ಅಧಿಕಾರಕ್ಕೆ ಬಂತು ಅಂದುಕೊಳ್ಳುವಷ್ಟರಲ್ಲಿ ಕೈತಪ್ಪಿತು. ಇನ್ನೂ 10 ಕ್ಷೇತ್ರಗಳಲ್ಲಿ ನಾವು ಗೆಲ್ಲಬೇಕಿತ್ತು. ಶೃಂಗೇರಿಯಲ್ಲಿ ಜೀವರಾಜ್‌ ಸೋತರು. ಅವರು ಒಳ್ಳೆಯ ಅಭ್ಯರ್ಥಿಯಾಗಿದ್ದರು. ಗೆಲ್ಲಬೇಕಿತ್ತು. ಬೆಂಗಳೂರಿನ ಒಂದೆರಡು ಕ್ಷೇತ್ರದಲ್ಲಿ ನಮಗೆ ಕಡಿಮೆ ಅಂತರದ ಸೋಲು ಎದುರಾಯಿತು. ಎಲ್ಲಾ ದುರಾದೃಷ್ಟ!

*ಕ್ಷೇತ್ರದ ಜನರ ಜೊತೆ ನಿಮ್ಮ ಸಂಬಂಧ ಹೇಗಿದೆ?

ಆರ್‌.ಅಶೋಕ್‌ ಎಂದರೆ ಸರಳ ಹಾಗೂ ಸ್ನೇಹಜೀವಿ ಅನ್ನುವ ಹೆಸರು ನನಗೆ ಮೊದಲಿನಿಂದಲೂ ಇದೆ. ಯಾವ ಸಮಯದಲ್ಲಿ ಬೇಕಾದರೂ ಜನರಿಗೆ ಸುಲಭವಾಗಿ ಸಿಗುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ಯಾರಿಗೂ ತೊಂದರೆ ಕೊಡುವುದಿಲ್ಲ. ನಮಗೂ ಯಾರೂ ತೊಂದರೆ ಕೊಡೊಲ್ಲ. ನಾನು ದ್ವೇಷದ ರಾಜಕಾರಣ ಮಾಡಲ್ಲ. ಹಾಗಾಗಿ ಕ್ಷೇತ್ರದ ಮತದಾ
ರರ ಜೊತೆ ಉತ್ತಮ ಸಂಬಂಧ ಇದೆ.

*ನಿಮ್ಮ ಗೆಲುವಿಗೆ ಕಾರಣ ಏನು?

ಇಲ್ಲಿ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳು ಹಾಗೂ ಪಕ್ಷದ ಮೇಲಿರುವ ನನ್ನ ನಿಷ್ಠೆ.

*ಈಗಿರುವ ಸರ್ಕಾರದ ಬಗ್ಗೆ ನಿಮ್ಮ ಅಭಿಪ್ರಾಯ?

ಈ ಮೈತ್ರಿ ಸರ್ಕಾರ ಬಹಳ ದಿನ ಉಳಿಯುವುದಿಲ್ಲ. ನೋಡಿ, ಇನ್ನು ಕೆಲವೇ ದಿನ ಅಷ್ಟೇ ಅವರ ಅಧಿಕಾರ. ಜಗಳ, ಹೊಡೆದಾಟ ಇದರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಇಂತಹವರಿಂದ ಯಾವ ರೀತಿಯ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ. ಆದಷ್ಟು ಬೇಗ ಸರ್ಕಾರ ಉರುಳಲಿದೆ.

*ಅಧಿವೇಶನದಲ್ಲಿ ನಿಮ್ಮ ಹಾಜರಾತಿ?

ಉತ್ತಮವಾಗಿದೆ. ಕ್ಷೇತ್ರದ ಸಮಸ್ಯೆಗಳನ್ನು ಮುಂದಿಡಲು ಸಾಧ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT