ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಕ್ಟೋಪಿಕ್ ಪ್ರೆಗ್ನೆನ್ಸಿ ಎಂದರೇನು?

Last Updated 11 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ನನ್ನ ವಯಸ್ಸು 26, ಮದುವೆಯಾಗಿ 2ನೇ ತಿಂಗಳಿಗೆ ಗರ್ಭಧರಿಸಿದ್ದೆ. ಒಂದೂವರೆ ತಿಂಗಳ ನಂತರ ಗರ್ಭಪಾತ ಆಯಿತು. ನಂತರ ಆಸ್ಪತ್ರೆಗೆ ಹೋಗಿ ತೋರಿಸಿದ್ದೇನೆ. ಹಾರ್ಮೋನು ಅಸಮತೋಲನ ಇದೆ ಅಂತ ಹೇಳಿದ್ದಾರೆ. ಮೊದಲು ಚಿಕಿತ್ಸೆ ಪಡೆದಾಗ ಗರ್ಭಧರಿಸಿದೆ. ಆದರೆ ಅದು ಎಕ್ಟೋಪಿಕ್ ಪ್ರೆಗ್ನೆನ್ಸಿ ಆಯಿತು. ಈಗ ಅದನ್ನು ಕರಗಿಸಿದ್ದಾರೆ. ಮತ್ತೆ ಗರ್ಭ ಧರಿಸಲು 3 ತಿಂಗಳ ನಂತರ ಪ್ರಯತ್ನಿಸಿ ಅಂತ ಹೇಳಿದ್ದಾರೆ. ಆದರೆ ಮತ್ತೆ ಚಿಕಿತ್ಸೆ ಮುಂದುವರೆಸಿ ಗರ್ಭಧಾರಣೆಗೆ ಪ್ರಯತ್ನ ಮಾಡಬಹುದಾ? ಒಂದು ವೇಳೆ ಚಿಕಿತ್ಸೆ ಮುಂದುವರೆಸಿದರೆ ಮತ್ತೆ ಎಕ್ಟೋಪಿಕ್ ಪ್ರೆಗ್ನೆನ್ಸಿ ಆಗುವ ಸಾಧ್ಯತೆ ಇದೆಯಾ?

ಹೆಸರು, ಊರು ಬೇಡ

ನೀವು ಎಕ್ಟೋಪಿಕ್ ಪ್ರೆಗ್ನೆನ್ಸಿ ಅಥವಾ ಎಡೆತಪ್ಪಿದ ಗರ್ಭ ಏನೆಂಬುದನ್ನು ತಿಳಿಯುವ ಮೊದಲು ಸಹಜ ಗರ್ಭಧಾರಣೆ ಹೇಗಾಗುತ್ತದೆ ಎನ್ನುವುದನ್ನು ತಿಳಿದಿರಬೇಕು. ತಿಂಗಳಿಗೊಮ್ಮೆ ಒಂದು ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗುತ್ತದೆ. ಅದು ಗರ್ಭನಾಳದಿಂದ ಸೆಳೆಯಲ್ಪಟ್ಟು ವೀರ್ಯಾಣುವಿನಿಂದ ಫಲಿತಗೊಳ್ಳಲು ಗರ್ಭನಾಳದಲ್ಲಿಯೇ ಕಾಯುತ್ತಾ ಕುಳಿತಿರುತ್ತದೆ. ಈ ಸಂದರ್ಭದಲ್ಲಿ ಗಂಡು ಹೆಣ್ಣಿನ ಲೈಂಗಿಕ ಸಂಪರ್ಕವಾದರೆ ಅಂಡಾಣು ಪುರುಷರ ವೀರ್ಯಾಣುವಿನೊಂದಿಗೆ ಫಲಿತಗೊಂಡು ನಿಧಾನವಾಗಿ ಐದಾರು ದಿನದೊಳಗಾಗಿ ಗರ್ಭನಾಳದಲ್ಲಿ ಚಲಿಸಿ ಗರ್ಭಕೋಶವನ್ನು ತಲುಪಿ ಅಲ್ಲಿ ಹಂತಹಂತವಾಗಿ ಬೆಳೆದು ಮಗುವಾಗಿ 9 ತಿಂಗಳಿಗೆ ಜನನವಾಗುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಈ ಗರ್ಭಕೋಶಕ್ಕೆ ಚಲಿಸುವ ಪ್ರಕ್ರಿಯೆ ಸರಿಯಾಗಿ ಆಗದೇ ಗರ್ಭನಾಳದಲ್ಲೇ ಭ್ರೂಣ ಬೆಳೆಯಲು ಆರಂಭಿಸುತ್ತದೆ ಮತ್ತು ಗರ್ಭನಾಳಕ್ಕೆ ಚಲಿಸುವ ಸಾಮರ್ಥ್ಯ ವಿಲ್ಲದಿರುವುದರಿಂದ ಕೆಲವೊಮ್ಮೆ ಭ್ರೂಣ ಗರ್ಭನಾಳದಿಂದ ಹೊರಬರಬಹುದು (ಟ್ಯೂಬಲ್ ಅಬಾರ್ಷನ್) ಕೆಲವೊಮ್ಮೆ ಗರ್ಭನಾಳ ಒಡೆದು (ರಪ್ಚರ್ಡ ಎಕ್ಟೋಪಿಕ್) ಅದು ಅಪಾಯಕಾರಿಯಾಗಿ ಪರಿಣಮಿಸಬಹುದು. ರಕ್ತಸ್ರಾವ ಅಧಿಕವಾದಾಗ ರೋಗಿಗೆ ಆಘಾತವಾಗಲೂಬಹುದು (ಶಾಕ್‌). ಹೆಚ್ಚಿನ ಸಂದರ್ಭದಲ್ಲಿ ಗರ್ಭಧಾರಣೆಯಾಗಿ 6 ರಿಂದ 8 ವಾರದೊಳಗೆ ಇಂತಹ ಘಟನೆ ಸಂಭವಿಸುತ್ತದೆ. ನಿಮಗೆ ಆರಂಭದ ಹಂತದಲ್ಲೇ ತಜ್ಞರು ಎಕ್ಟೋಪಿಕ್‌ ಗುರುತಿಸಿ ಚಿಕಿತ್ಸೆ ಕೊಟ್ಟಿರುತ್ತಾರೆ. ಅಪರೂಪಕ್ಕೊಮ್ಮೆ ಅಂಡಾಶಯದಲ್ಲೂ, ಕರುಳಿನಲ್ಲೂ ಕೂಡಾ ಎಕ್ಟೋಪಿಕ್ (ಎಡೆತಪ್ಪಿದ ಗರ್ಭ)ಕಾಣಿಸಿಕೊಳ್ಳಬಹುದು.

ಎಕ್ಟೋಪಿಕ್‌ ಆಗಲು ಮುಖ್ಯ ಕಾರಣ ಹೆಚ್ಚಿನ ಸಂದರ್ಭಗಳಲ್ಲಿ ಗರ್ಭಕೋಶ ಮತ್ತು ಗರ್ಭನಾಳಕ್ಕೆ ಸೋಂಕಿನಿಂದ ಆಗುವ ಅಡೆತಡೆ. ಗರ್ಭನಾಳಕ್ಕಾಗುವ ಶಸ್ತ್ರಚಿಕಿತ್ಸೆ (ರೀಕಾನಲೈಜ್ಶನ್, ಟ್ಯುಬೆಕ್ಟಮಿ)ಭ್ರೂಣದ ಚಲನೆಗೆ ತಡೆಯನ್ನುಂಟುಮಾಡುವುದು. ಗರ್ಭಾಶಯದಲ್ಲಿ ಅಳವಡಿಸಿರುವ ಕಾಪರ್ಟಿ, ಪ್ರೊಜೆಸ್ಟ್ರಾನ್‌ ಹಾರ್ಮೋನ್‌ಭರಿತ ಐಯುಡಿ ಮತ್ತು ಮಾತ್ರೆಗಳು, ಕೃತಕ ಗರ್ಭಧಾರಣೆಗಾಗಿ ಕೊಡುವ ಮಾತ್ರೆಗಳು, ಎಂಡೋಮೆಟ್ರಿಯೋಸಿಸ್ ಮತ್ತು ಫೈಬ್ರಾಯಿಡ್ ಮತ್ತು ಇನ್ನಿತರ ಸ್ಥಿತಿಗಳಿದ್ದಾಗ, ಗರ್ಭನಾಳದಲ್ಲೇ ಹುಟ್ಟಿನಿಂದಲೇ ಬಂದ ವ್ಯತ್ಯಾಸಗಳಿದ್ದಾಗ ಹೀಗೆ ಹಲವು ಕಾರಣಗಳಿಗಾಗಿ ಎಕ್ಟೋಪಿಕ್ ಪ್ರೆಗ್ನೆನ್ಸಿ ಸಂಭವಿಸಬಹುದು. ಒಮ್ಮೆ ಎಕ್ಟೋಪಿಕ್ ಆದವರಿಗೆ ಇನ್ನೊಂದು ಬಾರಿ ಅಥವಾ ಎರಡನೇ ಬಾರಿ ಪುನಃ ಎಕ್ಟೋಪಿಕ್ ಆಗುವ ಸಾಧ್ಯತೆ ಶೇ 10–15 ರಷ್ಟು ಹೆಚ್ಚಿರುತ್ತದೆ. ಆದ್ದರಿಂದ ನೀವು ಸೂಕ್ತ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಇನ್ನೊಂದು ಮಗುವಿಗಾಗಿ ಪ್ರಯತ್ನಿಸಿ. ಮುಂಜಾಗ್ರತೆಗಾಗಿ ಗರ್ಭಕೋಶದ, ನಾಳದ ಸೋಂಕುಗಳು ಉಂಟಾಗದ ಹಾಗೆ ನೋಡಿಕೊಳ್ಳುವುದು. ಮುಟ್ಟಿನ ಸಮಯದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು, ಅನಗತ್ಯ ಗರ್ಭಧಾರಣೆಯಾಗಿ ಗರ್ಭಪಾತ ಮಾಡಿಸಿಕೊಳ್ಳದ ಹಾಗೆ ಮುಂಜಾಗ್ರತೆ ವಹಿಸುವುದು ಅತಿಮುಖ್ಯ.

ಯಾವುದೇ ಗರ್ಭಪಾತದಿಂದ ಗರ್ಭನಾಳದಲ್ಲಿ ಅಡೆತಡೆ (ಟ್ಯೂಬ್ ಬ್ಲಾಕ್) ಆಗುವುದು ಸಹಜ. ಗರ್ಭವತಿಯಾದ ಲಕ್ಷಣಗಳು ಕಂಡುಬಂದಲ್ಲಿ ಗರ್ಭಾಶಯದೊಳಗೆ ಗರ್ಭವಿದೆಯೇ, ಇಲ್ಲವೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಅನಗತ್ಯ ಭಯಬೇಡ, ಸಂದೇಹವಿದ್ದರೆ ಸೂಕ್ತ ಸಮಯದಲ್ಲಿ, ಸೂಕ್ತ ಚಿಕಿತ್ಸೆಯಿಂದ ಈ ನಳಿಕಾ ಗರ್ಭದ ಸಮಸ್ಯೆಯನ್ನು ಪರಿಹರಿಸಬಹುದು ಮತ್ತು ಅಲ್ಟ್ರಾಸೌಂಡ್ ಪರೀಕ್ಷೆಯಿಂದ ಸುಲಭವಾಗಿ ಎಕ್ಟೋಪಿಕ್‌ ಅನ್ನು ಪತ್ತೆಹಚ್ಚಿ ಚಿಕಿತ್ಸೆ ಕೊಡಬಹುದು. ನಿಯಮಿತವಾಗಿ ಫೋಲಿಕ್‌ ಆಸಿಡ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರಿ.

***

ನನಗೆ ಮದುವೆಯಾಗಿ ನಾಲ್ಕು ವರ್ಷ ಆರು ತಿಂಗಳು ಆಗಿದೆ. ಆದರೆ ಇನ್ನೂ ಮಗು ಆಗಿಲ್ಲ. ನನಗೆ ಓವ್ಯೂಲೇಶನ್ ತೊಂದರೆ ಇದೆ. ಆದರೆ ಅದಕ್ಕೆ ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಾ ಇದ್ದೀನಿ. ಆದರೂ ಗರ್ಭಧರಿಸುತ್ತಿಲ್ಲ. ಯಾಕೆ ಹೀಗೆ ?

ಹೆಸರು, ಊರು ತಿಳಿಸಿಲ್ಲ

ನಿಮಗೆ ಓವ್ಯೂಲೇಶನ್‌ ಆಗುವುದಿಲ್ಲ ಎಂದುತಿಳಿಸಿದ್ದೀರಿ. ಅದಕ್ಕೆ ಪಿಸಿಓಡಿ ಕಾರಣವಿರಬಹುದು. ಈ ಹಿಂದಿನ ಸಂಚಿಕೆಗಳಲ್ಲಿ ತಿಳಿಸಿದ ಹಾಗೆ ನಿಮ್ಮ ಜೀವನಶೈಲಿಯನ್ನು ಉತ್ತಮ ಪಡಿಸಿಕೊಂಡು ವೈದ್ಯರ ಸಲಹೆ ಮೇರೆಗೆ ಅಂಡಾಣು ಬಿಡುಗಡೆಯಾಗುವ ಮಾತ್ರೆಗಳನ್ನು ತೆಗೆದುಕೊಳ್ಳಿ. ಸಮತೂಕ ಹೊಂದಲು ಪ್ರಯತ್ನಿಸಿ. ನಿಮಗೆ ಮಗುವಾಗುತ್ತದೆ ಎಂಬಸಕಾರಾತ್ಮಕ ಭಾವನೆಯನ್ನು ಎಂದಿಗೂ ಬಿಡದೆ ನಿಮ್ಮ ಪ್ರಯತ್ನವನ್ನು ವೈದ್ಯರ ಮಾರ್ಗದರ್ಶನದಲ್ಲಿ ಮುಂದುವರೆಸಿ. ನಿಮಗೆ ಖಂಡಿತವಾಗಿಯೂ ಮಗುವಾಗುತ್ತದೆ.

***

ನನಗೆ ಮದುವೆ ಆಗಿ ಒಂದೂವರೆ ವರ್ಷ ಆಗಿದೆ. ಮಗು ಪಡೆಯುವ ಆಸೆ. ಆದರೆ ಪ್ರತಿಸಲವೂ ನನ್ನ ಹೆಂಡತಿಗೆ ತಿಂಗಳು ಸರಿಯಾಗಿ ಮುಟ್ಟಾಗುತ್ತಿದೆ. ನಾವು ಮೂರು ದಿನ ಬಿಟ್ಟು ಸೇರುತ್ತಿದ್ದೇವೆ.ಎಷ್ಟೇ ಪ್ರಯತ್ನಿಸಿದರೂ ಮಕ್ಕಳಾಗುತ್ತಿಲ್ಲ.

ಹೆಸರು ಬೇಡ, ಊರು ಬೇಡ

ಉತ್ತರ: ನೀವು ಸತಿ ಪತಿಯರಿಬ್ಬರೂ ಮಕ್ಕಳಾಗದಿರಲು ಕಾರಣವೇನೆಂಬುದನ್ನು ತಿಳಿಯಲು ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕು. ನಾನು ಈ ಮೊದಲೇ ತಿಳಿಸಿರುವ ಹಾಗೇ ಮಗು ಬೇಕೆಂದು ಪ್ರಯತ್ನಿಸುವ ದಂಪತಿ ಋತುಫಲಪ್ರದ ದಿನಗಳಲ್ಲಿ ನಿತ್ಯ ಅಥವಾ ದಿನಬಿಟ್ಟು ದಿನವಾದರೂ ಲೈಂಗಿಕಕ್ರಿಯೆ ನಡೆಸಬೇಕು. ಋತುಚಕ್ರದ ಆರಂಭವಾಗಿ 8 ನೇ ದಿನದಿಂದ 18ನೇ ದಿನದವರೆಗೆ ಋತುಫಲಪ್ರದ ದಿನಗಳು (30ದಿನಕ್ಕೊಮ್ಮೆ ಋತುಚಕ್ರ ಆಗುವವರಿಗೆ) ಈ ಬಗ್ಗೆ ಹಿಂದಿನ ಸಂಚಿಕೆಗಳಲ್ಲಿ ತಿಳಿಸಿದ್ದೇನೆ ಓದಿಕೊಳ್ಳಿ.

***

ನನಗೆ 24 ವರ್ಷ. ನನಗೆ ಮದುವೆ ಆಗಿ 1ವರ್ಷ ಆಗ್ತಾ ಬಂತು. ಗರ್ಭಿಣಿ ಆಗ್ತಾ ಇಲ್ಲಾ. ನನಗೆ ತುಂಬಾ ಬ್ಲೀಡಿಂಗ್ ಇರುತ್ತೆ ಏನು ಸಮಸ್ಯೆ ಅಂತ ಗೊತ್ತಾಗುತ್ತಿಲ್ಲಾ. ದಯವಿಟ್ಟು ಏನಾದ್ರು ಪರಿಹಾರ ತಿಳಿಸಿ?

ಹೆಸರು, ಊರು ಬೇಡ

ನಿಮಗೆ ಅತಿಯಾದ ರಕ್ತಸ್ರಾವ ಆಗುತ್ತಿದೆ ಎಂದರೆ ಗರ್ಭಕೋಶದಲ್ಲಿ ನಾರುಗಡ್ಡೆಗಳಿವೆಯೇ? ಅಥವಾ ಸೋಂಕಾಗಿದೆಯೇ ಅಥವಾ ಏನಾದರೂ ರಕ್ತಹೆಪ್ಪುಗಟ್ಟುವ ಸಮಸ್ಯೆ ಇದೆಯೇ ಎಂಬುದನ್ನ ವೈದ್ಯಕೀಯ ತಪಾಸಣೆಗೊಳಗಾಗಿ (ಸ್ಕ್ಯಾನಿಂಗ್, ರಕ್ತಪರೀಕ್ಷೆ) ತಿಳಿದುಕೊಂಡು ಸೂಕ್ತ ಪರಿಹಾರ ಪಡೆಯಲು ಪ್ರಯತ್ನಿಸಿ ನಿಮಗಿನ್ನೂ 24 ವರ್ಷಗಳಷ್ಟೇ ಚಿಂತಿಸಬೇಡಿ. ಪ್ರಯತ್ನಬಿಡಬೇಡಿ.‌

***

\

- ಡಾ. ವೀಣಾ ಎಸ್‌. ಭಟ್‌

ಸ್ಪಂದನ... ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್‌ ಮುಂತಾದ ಸಮಸ್ಯೆಗಳಿದ್ದರೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು.
ನಿಮ್ಮ ಪ್ರಶ್ನೆಗಳಿಗೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ವೀಣಾ ಎಸ್‌. ಭಟ್‌ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು bhoomika@prajavani.co.in ಗೆ ಕಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT