ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ಅಲರ್ಜಿಯಾದರೆ ಪರ್ಯಾಯ ಏನಿದೆ?

Last Updated 15 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಕಳೆದ 6–7 ವರ್ಷಗಳಿಂದ ಆಸ್ತಮಾದಿಂದ ಬಾಧೆಪಡುತ್ತಿರುವ 53ರ ಹರೆಯದ ಗೃಹಿಣಿ ಲತಾಗೆ ಹಾಲು, ಮೊಸರು, ತುಪ್ಪ ಸೇವನೆ ಕಡಿಮೆ ಮಾಡಿ ಎಂದಿದ್ದಾರೆ ವೈದ್ಯರು. ಡೇರಿ ಪದಾರ್ಥಗಳ ಸೇವನೆಗೆ ಮಿತಿ ಹಾಕಿಕೊಂಡರೆ ಕಫದ ಸಮಸ್ಯೆಗೆ ಕಡಿವಾಣ ಹಾಕಬಹುದೆಂದು ಲತಾ ಕೂಡ ಕಟ್ಟುನಿಟ್ಟಾಗಿ ವೈದ್ಯರ ಸಲಹೆಯನ್ನು ಪಾಲಿಸುತ್ತಿದ್ದಾರೆ.

ಈಗಿನ್ನೂ ಪಿಯುಸಿ ಓದುತ್ತಿರುವ ವಿನಯ್‌ಗೆ ಗ್ಯಾಸ್ಟ್ರಿಕ್‌ ಸಮಸ್ಯೆ. ಹಾಲು ಕುಡಿದರೆ ಜಾಸ್ತಿಯಾಗುತ್ತದೆಂದು ಕಳೆದ ಆರು ತಿಂಗಳಿಂದ ಹಾಲು ಬೆರೆಸಿದ ಯಾವ ಪದಾರ್ಥವನ್ನೂ ಆತ ಸೇವಿಸುತ್ತಿಲ್ಲ.

ಈ ರೀತಿ ಹಾಲಿನ ಅಲರ್ಜಿಯೆಂದು ಹಸು, ಎಮ್ಮೆಯ ಹಾಲು ಸೇವನೆಯಿಂದ ದೂರ ಉಳಿಯುವವರ ಸಂಖ್ಯೆ ಇತ್ತೀಚೆಗೆ ಜಾಸ್ತಿಯಾಗಿದೆ. ಇನ್ನು ವೇಗಾನ್‌ ಡಯಟ್ ಪಾಲಿಸುವವರು ಕೂಡ ಹಾಲು ಸೇರಿದಂತೆ ಡೇರಿ ಪದಾರ್ಥಗಳನ್ನು ಸೇವಿಸುವುದಿಲ್ಲ. ಹಾಗೆ ನೋಡಿದರೆ ಹಾಲು ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತದೆ. ನಮ್ಮ ದೇಹಕ್ಕೆ ಬೇಕಾದ ಪ್ರೊಟೀನ್‌, ಕ್ಯಾಲ್ಸಿಯಂ ಮತ್ತಿತರ ಪೌಷ್ಟಿಕಾಂಶಗಳನ್ನು ನೈಸರ್ಗಿಕವಾಗಿ ಹಾಲಿನ ಮೂಲಕ ಪಡೆಯಬಹುದು.

ಹಸು, ಎಮ್ಮೆ, ಆಡು, ಒಂಟೆ ಮೊದಲಾದ ಸಸ್ತನಿ ಪ್ರಾಣಿಗಳ ಹಾಲಿನಲ್ಲಿ ಕ್ಯಾಲ್ಸಿಯಂ, ಪ್ರೊಟೀನ್‌, ವಿಟಮಿನ್‌ ಬಿ12, ವಿಟಮಿನ್‌ ಎ, ಮೊದಲಾದ ಪೋಷಕಾಂಶಗಳು ಹೇರಳವಾಗಿರುತ್ತವೆ. ಹಾಗೆಯೇ ಹಸುವಿನ ಹಾಲಿನಲ್ಲಿರುವ ಪ್ರೊಟೀನ್‌ ಪ್ರಮಾಣ ಮತ್ತು ಗುಣಮಟ್ಟ ಕೂಡ ಹೆಚ್ಚು. ಕ್ಯಾಲ್ಸಿಯಂ ಅಧಿಕ ಪ್ರಮಾಣದಲ್ಲಿರುವುದರಿಂದ ಹಾಲು ಕುಡಿಯುವುದು ಎಲುಬಿನ ಆರೋಗ್ಯಕ್ಕೂ ಒಳ್ಳೆಯದು ಎನ್ನುತ್ತಾರೆ ತಜ್ಞರು. ಇದರಲ್ಲಿ ಸ್ಯಾಚುರೇಟೆಡ್‌ ಕೊಬ್ಬಿದ್ದರೂ ಕೂಡ ಕೆನೆ ತೆಗೆದ ಹಾಲನ್ನು ಸೇವಿಸಬಹುದು.

‘ಹಸುವಿನ ಹಾಲಿನಲ್ಲಿರುವ ಹೆಚ್ಚಿನ ಪೋಷಕಾಂಶಗಳನ್ನು ಇನ್ನಿತರ ಆಹಾರ ಪದಾರ್ಥಗಳಿಂದಲೂ ಪಡೆಯಬಹುದು’ ಎನ್ನುತ್ತಾರೆ ಪೌಷ್ಟಿಕಾಂಶ ತಜ್ಞ ವೀರೇಶ್‌ ಹಂಪಣ್ಣ.

ಪರ್ಯಾಯವೇನು?: ಅಲರ್ಜಿಯೆಂದು ಹಸುವಿನ ಹಾಲು ಕುಡಿಯದವರಿಗೆ ಬೇರೆ ಪರ್ಯಾಯವೇನಿದೆ? ಇತ್ತೀಚೆಗೆ ಮಾರುಕಟ್ಟೆಯಲ್ಲಿ ಸೋಯಾ, ಓಟ್ಸ್‌, ಬಾದಾಮಿ... ಹೀಗೆ ಸಸ್ಯಮೂಲದ ಸಾರ ಟೆಟ್ರಾ ಪ್ಯಾಕ್‌ಗಳಲ್ಲಿ ಲಭ್ಯ. ಸ್ಯಾಚುರೇಟೆಡ್‌ ಕೊಬ್ಬು ಈ ಸಾರಗಳಲ್ಲಿ ಕಡಿಮೆ. ಕ್ಯಾಲ್ಸಿಯಂ ಅನ್ನು ಹೆಚ್ಚುವರಿಯಾಗಿ ಸೇರಿಸುವುದರಿಂದ ಆರೋಗ್ಯದ ಬಗ್ಗೆ ಕಾಳಜಿ ಇರುವವರು ಸೇವಿಸಬಹುದು ಎನ್ನುತ್ತಾರೆ ವೀರೇಶ್‌.

ಹಸುವಿನ ಹಾಲಿಗೆ ಒಳ್ಳೆಯ ಪರ್ಯಾಯವೆಂದರೆ ಸೋಯಾ ಹಾಲು. ಸೋಯಾ ಅವರೆಯ ಬೀಜಗಳನ್ನು ಕಡೆದು ಈ ಹಾಲನ್ನು ಪಡೆಯಬಹುದು. ಸಾಮಾನ್ಯವಾಗಿ ಸೋಯಾ ಪುಡಿ, ನೀರು ಸೇರಿಸಿ ವಿಟಮಿನ್‌ ಹಾಗೂ ಖನಿಜಾಂಶಯುಕ್ತ ಹಾಲನ್ನು ತಯಾರಿಸಲಾಗುವುದು. ಸಸ್ಯ ಮೂಲದ ಪ್ರೊಟೀನ್‌ ಅಧಿಕ ಪ್ರಮಾಣದಲ್ಲಿದ್ದು, ಕಾರ್ಬೊಹೈಡ್ರೇಟ್ಸ್‌, ವಿಟಮಿನ್‌ ಬಿ ಮತ್ತು ಹೆಚ್ಚುವರಿಯಾಗಿ ಸೇರಿಸಿದ ಕ್ಯಾಲ್ಸಿಯಂನಿಂದಾಗಿ ಸಂಪೂರ್ಣವಾಗಿ ಅಲ್ಲದಿದ್ದರೂ ಕೆಲವು ಮಟ್ಟಿಗೆ ಹಸುವಿನ ಹಾಲಿನ ಪೋಷಕಾಂಶಗಳನ್ನು ಹೊಂದಿದೆ ಎನ್ನಬಹುದು.

ಇದರಲ್ಲಿ ಆರೋಗ್ಯಕರ ಅನ್‌ಸ್ಯಾಚುರೇಟೇಡ್‌ ಕೊಬ್ಬು ಹಾಗೂ ನಾರಿನಾಂಶ ಕೂಡ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ‘ಆದರೆ ಸ್ತನ ಕ್ಯಾನ್ಸರ್‌ ಇರುವವರು ಇದನ್ನು ಸೇವಿಸದೆ ಇರುವುದು ಒಳಿತು’ ಎನ್ನುತ್ತಾರೆ ಲೈಫ್‌ಸ್ಟೈಲ್‌ ಕಾಯಿಲೆಗಳ ತಜ್ಞ ಡಾ. ಟಿ.ಎಸ್‌. ತೇಜಸ್‌.

ಇನ್ನು ಬಾದಾಮಿ ಹಾಲು ಕೂಡ ಸಸ್ಯಮೂಲದ ಪ್ರೊಟೀನ್‌ ಅನ್ನು ಹೊಂದಿದ್ದರೂ ಪ್ರಾಣಿ ಜನ್ಯ ಹಾಲಿಗೆ ಹೋಲಿಸಿದರೆ ಕಡಿಮೆ ಪ್ರಮಾಣದಲ್ಲಿರುತ್ತದೆ. ಆರೋಗ್ಯಕರ ಅನ್‌ಸ್ಯಾಚುರೇಟೆಡ್‌ ಕೊಬ್ಬು, ವಿಟಮಿನ್‌ ಇ ಕೂಡ ಇದರಲ್ಲಿರುತ್ತದೆ. ಬಾದಾಮಿ ಪುಡಿಯನ್ನು ಮನೆಯಲ್ಲೇ ತಯಾರಿಸಿಕೊಳ್ಳುವುದು ಒಳ್ಳೆಯದು. ಪುಡಿಯನ್ನು ಬಿಸಿ ನೀರಿಗೆ ಕದಡಿ, ರುಚಿಗೆ ಬೇಕಾದರೆ ಸಕ್ಕರೆ ಅಥವಾ ಬೆಲ್ಲ ಸೇರಿಸಿ ಕುಡಿಯಬಹುದು.

ಇದೇ ರೀತಿ ಓಟ್‌ ಹಾಲಿನಲ್ಲಿ ಕೂಡ ನಾರಿನಾಂಶ, ವಿಟಮಿನ್‌ ಇ ಅಂಶವಿರುತ್ತದೆ. ಆದರೆ ಕಾರ್ಬೊಹೈಡ್ರೇಟ್‌ ಪ್ರಮಾಣ ಅಧಿಕ; ಮಧುಮೇಹಿಗಳಿಗೆ ಅಷ್ಟು ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ತೆಂಗಿನ ಹಾಲನ್ನು ಕೂಡ ಸೇವಿಸಬಹುದು. ವಿಶೇಷವಾಗಿ ತೆಂಗಿನಕಾಯಿ ಹೆಚ್ಚಾಗಿ ಬೆಳೆಯುವ ಹಳ್ಳಿಗಳಲ್ಲಿ ಕೆಲವರು ತೆಂಗಿನಕಾಯಿ ಹಾಲು ಸೇವಿಸುವ ಅಭ್ಯಾಸವಿಟ್ಟುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT