‘ನಿಮ್ಮೊಂದಿಗೆ ನೀವಿದ್ದಾಗ ಒತ್ತಡವಿಲ್ಲ’

7
ಸೆಲೆಬ್ರಿಟಿ ಅಡೆನ್ಷನ್‌

‘ನಿಮ್ಮೊಂದಿಗೆ ನೀವಿದ್ದಾಗ ಒತ್ತಡವಿಲ್ಲ’

Published:
Updated:

ಗೌತಮಬುದ್ಧ ಧ್ಯಾನಕ್ಕೆ ಕುಳಿತಿದ್ದ. ಅವನ ತಾಳ್ಮೆಯನ್ನು ಪರೀಕ್ಷಿಸಬೇಕು, ಅವನಿಗೆ ಕೋಪ ತರಿಸಬೇಕು ಎಂಬ ಉದ್ದೇಶದಿಂದ ಒಬ್ಬನು ಅವನ ಬಳಿ ಬಂದು ಗಲಾಟೆ ಮಾಡತೊಡಗಿದ. ಅವನಿಗೆ ಮನಸೋಯಿಚ್ಛೆ ಬೈಯತೊಡಗಿದ. ಅವನು ಏನೇ ಮಾಡಿದರೂ ಬುದ್ಧ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಬೇಸತ್ತ ಆ ವ್ಯಕ್ತಿ ಅವನನ್ನು ಕೇಳುತ್ತಾನೆ: ‘ನಾನು ವಿನಾ ಕಾರಣ ನಿಮ್ಮನ್ನು ಆಗಿನಿಂದ ಬೈಯುತ್ತಿದ್ದೇನೆ. ನಿಮಗೆ ಕೋಪ ಬರಲಿಲ್ಲವೇ?’.

‘ನಿನ್ನ ಮಾತುಗಳನ್ನು ನಾನು ಸ್ವೀಕರಿಸಿದರೆ ತಾನೆ ಕೋಪ ಬರುವುದು. ನಾನು ತೆಗೆದುಕೊಂಡಿಲ್ಲವಾದ ಕಾರಣ ಆ ಮಾತುಗಳು ಪೂರ್ತಿ ನಿನ್ನ ಆಸ್ತಿ’ ಎಂದು ಉತ್ತರಿಸುತ್ತಾನೆ ಬುದ್ಧ. 

ಜೀವನದಲ್ಲಿ ಹಲವು ಬಾರಿ ಇಂತಹ ಸನ್ನಿವೇಶಗಳು ನಮಗೆ ಎದುರಾಗುತ್ತವೆ. ಸಾಮಾನ್ಯರಾದ ನಮಗೆ ಬುದ್ಧನಷ್ಟು ತಾಳ್ಮೆ ಸಿದ್ಧಿಸದೇ ಇರಬಹುದು. ಆದರೆ, ಅವನ ದಾರಿಯಲ್ಲಿ ಸಾಗಿದರೆ ಒತ್ತಡ ಉಂಟಾಗುವ ಸಾಧ್ಯತೆ ತೀರಾ ಕಡಿಮೆಯಾಗುತ್ತದೆ. 

ಕರ್ಮಣ್ಯೇವಾಧಿಕಾರಸ್ತೆ ಮಾ ಫಲೇಷು ಕದಾಚನ ಎಂದು ಶ್ರೀಕೃಷ್ಣ ಪರಮಾತ್ಮ ಹೇಳುತ್ತಾನೆ. ಅಂದರೆ, ‘ನಿನ್ನ ಕೆಲಸ ನೀನು ಮಾಡು, ಫಲ ನನಗೆ ಬಿಡು’ ಎಂದರ್ಥ. ಹಾಗೆಂದು, ದೇವರು ಎಲ್ಲ ಮಾಡುತ್ತಾನೆಂದುಕೊಂಡು ಮನೆಯಲ್ಲಿ ಕುಳಿತರೆ ಕೆಲಸ, ದುಡ್ಡು ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ. ದುಡಿಯಬೇಕು, ಅದರ ಫಲವನ್ನು ಅವನಿಗೆ ಬಿಡಬೇಕು. 

ನನಗೆ ನಿರೂಪಣೆಯ ಕೆಲಸ ಸಿಕ್ಕಿತು. ಡ್ರಾಮಾ ಜೂನಿಯರ್ಸ್‌ ಮಾಡಿದೆ. ನಂತರ, ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ನಡೆಸಿಕೊಟ್ಟೆ. ಈ ಎರಡೂ ನಂಬರ್‌ ಒನ್‌ ಕಾರ್ಯಕ್ರಮಗಳಾದವು. ಈ ಎರಡೂ ಕಾರ್ಯಕ್ರಮಗಳು ನನಗೇ ಸಿಗಬೇಕು ಅನ್ನೋದೇನು? ಇವೆರಡೂ ನಂಬರ್‌ ಒನ್‌ ಆಗಬೇಕು ಅನ್ನೋದೇನು? ಇದರರ್ಥ ಇಷ್ಟೇ. ಯಾವುದೋ ಒಂದು ಶಕ್ತಿ ನನ್ನನ್ನು ಇಲ್ಲಿ ತಂದು ಕೂರಿಸಿದೆ. ಹೀಗೆ ನನ್ನನ್ನು ಕೂರಿಸಿದ ಆ ಶಕ್ತಿ, ನನ್ನ ಸ್ಥಾನಕ್ಕೆ ನಾಳೆ ಮತ್ತೊಬ್ಬನನ್ನು ತಂದು ಕೂರಿಸಬಹುದು; ಕೂರಿಸುತ್ತದೆ ಕೂಡ.

ನಾನು ಇಲ್ಲಿ ಕೆಳಕ್ಕೆ ಬೀಳಬಹುದು ಅಥವಾ ನನಗೆ ಇದಕ್ಕಿಂತ ಉತ್ತಮ ಅವಕಾಶ ಸಿಗಬಹುದು, ನಾನು ಮತ್ತಷ್ಟು ಎತ್ತರಕ್ಕೆ ಹೋಗಬಹುದು. ಎಲ್ಲದಕ್ಕೂ ನಾನು ಸಿದ್ಧನಾಗಿರಬೇಕು. Every promotion is the positive sign of nature ಅಥವಾ Every demotion is the negative sign of nature ಎಂದುಕೊಳ್ಳುವುದೇ ತಪ್ಪು. ಆಗಿದ್ದಾಗಲಿ, ಆದಾಗಲೇ ಆಗಲಿ ಎಂದುಕೊಳ್ಳಬೇಕು. 

ಇಷ್ಟು ಹೇಳುವ ನನಗೆ ಕೋಪ ಬರುವುದೇ ಇಲ್ಲ ಎಂದೇನಲ್ಲ. ಅಂದುಕೊಂಡಂತೆ ಯಾವುದೂ ಆಗದಿದ್ದಾಗ ಅಸಿಸ್ಟಂಟ್‌ಗಳ ಮೇಲೆ ರೇಗಾಡಿರುತ್ತೇನೆ, ಸಮಯಕ್ಕೆ ಸರಿಯಾಗಿ ಯಾರೂ ಬಾರದಿದ್ದಾಗ ಸಿಟ್ಟು ಬಂದಿರುತ್ತದೆ. ಕೂಗಾಡುತ್ತೇನೆ. ಆದರೆ, ಯಾವ ವ್ಯಕ್ತಿಗೆ ತಾನು ಹೀಗೆ ಮಾಡಬಾರದಿತ್ತು, ರೇಗಬಾರದಿತ್ತು ಎನಿಸುತ್ತದೋ, ಯಾರಿಗೆ ಅವನ ತಪ್ಪು ಅವನಿಗೆ ಅರಿವಾಗುತ್ತದೋ ಆಗ ಅವನು ಒತ್ತಡದಿಂದ ಮುಕ್ತನಾಗುತ್ತಾನೆ.

ನಮ್ಮೊಂದಿಗಿರುವ ಎಲ್ಲರೂ ನಮ್ಮ ಮನಃಸ್ಥಿತಿಯವರೇ ಆಗಿರುವುದಿಲ್ಲ. ಕೈಯ ಎಲ್ಲ ಬೆರಳುಗಳೂ ಸಮನಾಗಿರುವುದಿಲ್ಲ. ನಾವು ಯೋಚನೆ ಮಾಡುವ ರೀತಿಗೂ, ಬೇರೆಯವರು ಯೋಚನೆ ಮಾಡುವ ರೀತಿಗೂ ವ್ಯತ್ಯಾಸವಿರುತ್ತದೆ. ಇಂತಹ ಭಿನ್ನ ವ್ಯಕ್ತಿತ್ವಗಳ ಜೊತೆಗೆ ಹೊಂದಿಕೊಂಡು ಕೆಲಸ ಮಾಡುವುದು ಸವಾಲು. ಆ ಸವಾಲನ್ನು ತಾಳ್ಮೆಯಿಂದ ಎದುರಿಸಬೇಕು. 

ನಿಮ್ಮ ಪ್ರತಿಭೆಗೆ ತಕ್ಕ ಅವಕಾಶಗಳು ಸಿಗಲಿಲ್ಲ ಎಂದು ಹಲವರು ನನಗೆ ಹೇಳುತ್ತಾರೆ. ನನಗೂ ಸಾಕಷ್ಟು ಬಾರಿ ಹೀಗನಿಸಿದೆ. ಆಗ ನಾನೊಂದು ಪ್ರಸಂಗ ನೆನಪು ಮಾಡಿಕೊಳ್ಳುತ್ತೇನೆ. ದೇವಸ್ಥಾನದಲ್ಲಿ ಪ್ರಸಾದ ಕೊಡುವಾಗ ಎಲ್ಲರೂ ಸರದಿಯಲ್ಲಿ ನಿಂತಿರುತ್ತಾರೆ. ಒಬ್ಬರಿಗೆ ಜಾಸ್ತಿ ಪ್ರಸಾದ ಸಿಕ್ಕರೆ, ಕೆಲವರಿಗೆ ಕಡಿಮೆ ಸಿಗುತ್ತದೆ. ನನಗೆ ಪ್ರಸಾದ ಸಿಗುತ್ತದೋ ಇಲ್ಲವೋ ಎಂದುಕೊಂಡು ಕೊನೆಯಲ್ಲಿ ನಿಂತವನಿಗೆ ಗೋಡಂಬಿ, ದ್ರಾಕ್ಷಿ ತುಂಬಿರುವ ಪ್ರಸಾದವೇ ಸಿಗಬಹುದು ಅಥವಾ ಖಾಲಿಯೂ ಆಗಬಹುದು. ಆದರೆ, ಚಿಕ್ಕಂದಿನಲ್ಲಿಯೇ ದೇವರು ನನಗೆ ಕೈತುಂಬಾ ಪ್ರಸಾದ ಕೊಟ್ಟಿದ್ದಾನೆ.

ಆ ಪ್ರಸಾದವನ್ನು ತಿಂದುಬಿಟ್ಟು ಕೈ ಒರೆಸಿಕೊಂಡು ಮತ್ತೆ ಬಂದು ಸರದಿಯಲ್ಲಿ ನಿಂತಿದ್ದೇನೆ. ಕ್ಯೂ ದೊಡ್ಡದಿದೆ. ನಾನು ಅವಸರಪಟ್ಟರೆ, ಮುಂದೆ ಇರೋರನ್ನು ಕಂಡು ಹೊಟ್ಟೆಕಿಚ್ಚು ಪಟ್ಟರೆ ಜನ ನನ್ನನ್ನು ಹಿಂದಕ್ಕೆ ತಳ್ಳಬಹುದು. ಹಾಗಾಗಿ ನಾನು ಅವಸರಿಸುವುದಿಲ್ಲ. I am waiting for my turn ಅಷ್ಟೇ. 

ನನ್ನಲ್ಲಿ ಸಹನೆ, ಕಾಯುವ ಗುಣ, ವಿಶ್ವಾಸ ಬಂದಿದ್ದರೆ ಅದಕ್ಕೆ ಕಾರಣ ಧ್ಯಾನ ಮತ್ತು ವ್ಯಾಯಾಮ. ದೇಹ ಮತ್ತು ಮನಸ್ಸು – ಎರಡೂ  ಯಾವಾಗಲೂ ಜೊತೆಯಾಗಿ ಇದ್ದರೆ ಒತ್ತಡ ಆಗುವುದಿಲ್ಲ. ದಿನಕ್ಕೆ ಒಂದು ತಾಸು ಪ್ರಶಾಂತ ಸ್ಥಳದಲ್ಲಿ ಕುಳಿತು ಧ್ಯಾನ ಮಾಡಬೇಕು. ನಮ್ಮ ಹೃದಯದ ಬಡಿತ ನಮಗೆ ಕೇಳಿಸುವಷ್ಟು ಪ್ರಶಾಂತವಾಗಿ ಕೂರಬೇಕು. ಜೊತೆಗೆ, ನಿಯಮಿತವಾಗಿ ವ್ಯಾಯಾಮ ಮಾಡಬೇಕು. ವ್ಯಾಯಾಮ ಮಾಡಿದರೆ ಮುಕ್ಕಾಲು ದಿನದವರೆಗೆ ನೀವು ಒತ್ತಡವನ್ನು ನಿಯಂತ್ರಿಸಿಕೊಂಡಂತೆಯೇ. ಅದು ಉಸಿರಾಟವನ್ನು ನಿಯಂತ್ರಣದಲ್ಲಿಡುತ್ತದೆ. ರಕ್ತಸಂಚಲನ ಮತ್ತು ನಿಮ್ಮ ಉಸಿರಾಟದ ವ್ಯವಸ್ಥೆ ಚೆನ್ನಾಗಿದ್ದರೆ ಯಾರೇ ಬಂದು ಡಿಸ್ಟರ್ಬ್‌ ಮಾಡಿದರೂ, ಬೈದರೂ ನಿಮ್ಮ ಮೇಲೆ ಪರಿಣಾಮ ಬೀರುವುದಿಲ್ಲ.

ನನಗೆ ಚಿಕ್ಕಂದಿನಿಂದಲೂ ಅಧ್ಯಾತ್ಮದತ್ತ ಒಲವು. ಹೀಗಾಗಿ, ಅಧ್ಯಾತ್ಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ನಿಯಮಿತವಾಗಿ ಓದುತ್ತಿರುತ್ತೇನೆ. ಇದರಿಂದ ಮನಸ್ಸು ನಿರಾಳವಾಗಿರುತ್ತದೆ. ಜೊತೆಗೆ ದಿನದಲ್ಲಿ ಒಂದು ತಾಸಾದರೂ ನನ್ನೊಂದಿಗೆ ನಾನು ಕಳೆಯುತ್ತೇನೆ. ನಮ್ಮನ್ನು ನಾವು ಮಾತನಾಡಿಸಿಕೊಳ್ಳುತ್ತಿದ್ದರೆ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. So, be with yourself.

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !