ಸೋಮವಾರ, ಸೆಪ್ಟೆಂಬರ್ 21, 2020
22 °C

ಆರೋಗ್ಯ ಕೆಡಿಸುವ ಈ ಅಭ್ಯಾಸಗಳಿವು...

ಮನಸ್ವಿ Updated:

ಅಕ್ಷರ ಗಾತ್ರ : | |

Prajavani

ಕೋವಿಡ್– 19 ಕಾರಣದಿಂದ ಮನೆಯಿಂದಲೇ ಕಚೇರಿ ಕೆಲಸ ಮಾಡಲು ಶುರು ಮಾಡಿ 5–6 ತಿಂಗಳುಗಳೇ ಗತಿಸಿದವು. ಆದರೂ ನಾವು ಆರೋಗ್ಯ ಕೆಡಿಸುವಂತಹ ಕೆಲವು ಅಭ್ಯಾಸಗಳನ್ನು ಬಿಟ್ಟಿಲ್ಲ. ಇಂತಹ ಅಭ್ಯಾಸಗಳು ದೀರ್ಘಕಾಲದವರೆಗೂ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಎದ್ದ ತಕ್ಷಣ ಕಂಪ್ಯೂಟರ್ ಆನ್ ಮಾಡುವುದು

ಕೆಲಸದ ಬಗ್ಗೆ ಅತಿಯಾಗಿ ಯೋಚಿಸುತ್ತಾ ಮಲಗಿದಾಗ ಬೆಳಿಗ್ಗೆ ಎದ್ದ ತಕ್ಷಣ ಕಂಪ್ಯೂಟರ್ ಆನ್‌ ಮಾಡುತ್ತೇವೆ. ಇನ್ನೂ ಕೆಲವರು ವಾರದ ದಿನಗಳಲ್ಲೂ ಕೆಲಸದ ಅವಧಿ ಆರಂಭವಾಗುವವರೆಗೂ ಮಲಗಿರುತ್ತಾರೆ. ಆ ಕಾರಣಕ್ಕೆ ಅವರು ಎದ್ದ ತಕ್ಷಣ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಆನ್ ಮಾಡುವುದು ಅನಿವಾರ್ಯವಾಗುತ್ತದೆ. ಆದರೆ ಇದು ವರ್ಕ್‌ ಫ್ರಂ ಹೋಮ್‌ನಲ್ಲಿ ನಾವು ಬೆಳೆಸಿಕೊಳ್ಳುವ ಅತ್ಯಂತ ಕೆಟ್ಟ ಅಭ್ಯಾಸ. ಬೆಳಿಗ್ಗೆ ಎದ್ದ ತಕ್ಷಣ ನೀಲಿ ಬೆಳಕಿಗೆ ಕಣ್ಣೊಡ್ಡುವುದು ನಮ್ಮ ದೃಷ್ಟಿಗೆ ತುಂಬಾನೇ ಅಪಾಯ. ಜೊತೆಗೆ ಇದು ಒತ್ತಡದ ಮಟ್ಟ ಹೆಚ್ಚಿಸುತ್ತದೆ. ಇದು ನಿದ್ದೆಯ ಸಮಸ್ಯೆಗೂ ಕಾರಣವಾಗಬಹುದು. 

ಹಾಸಿಗೆ ಮೇಲೆ ಕೆಲಸ ಮಾಡುವುದು

ವರ್ಕ್ ಫ್ರಂ ಹೋಮ್ ಆರಂಭವಾದಾಗಿನಿಂದ ಅನೇಕರಿಗೆ ಬೆನ್ನುನೋವು ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಆದರೆ ಈ ಬೆನ್ನುನೋವಿನ ಸಮಸ್ಯೆಗೆ ಮುಖ್ಯ ಕಾರಣ ಹಾಸಿಗೆಯ ಮೇಲೆ ಕೆಲಸ ಮಾಡುವುದು. ಹಾಸಿಗೆಯ ಮೇಲೆ ಕುಳಿತು ಅಥವಾ ಮಲಗಿಕೊಂಡು ಕೆಲಸ ಮಾಡುವುದು ನಿಜಕ್ಕೂ ಕೆಟ್ಟ ಅಭ್ಯಾಸ. ಹಾಸಿಗೆಯ ಮೇಲೆ ಕೆಲಸ ಮಾಡುವುದರಿಂದ ನಮ್ಮ ದೈಹಿಕ ಆರೋಗ್ಯ ಮಾತ್ರವಲ್ಲ. ಇದು ನಮ್ಮ ಕೆಲಸದ ಸಾಮರ್ಥ್ಯದ ಮೇಲೂ ಪರಿಣಾಮ ಬೀರಬಹುದು. ಅಲ್ಲದೇ ಸಂಪೂರ್ಣ ಕೆಲಸದಲ್ಲಿ ತೊಡಗಿಕೊಳ್ಳಲು ಸಾಧ್ಯವಾಗದೇ ಇರಬಹುದು. 

ದಿನದ 24 ಗಂಟೆಯೂ ಕೆಲಸದಲ್ಲೇ ತೊಡಗಿರುವುದು

ಕೆಲವರು ಕೆಲಸವನ್ನು ಅತಿಯಾಗಿ ಪ್ರೀತಿಸುತ್ತಾರೆ. ಅಲ್ಲದೇ ದಿನದ 24 ಗಂಟೆಗಳಲ್ಲಿ ಯಾವ ಸಮಯದಲ್ಲಿ ಯಾವ ಕೆಲಸ ಕೇಳಿದರೂ ಮಾಡುತ್ತಾರೆ. ಅವರು ಪ್ರತಿಕ್ಷಣ ಕಚೇರಿಯ ವೆಬ್‌ಪೇಜ್‌ಗಳನ್ನು ರಿಪ್ರೆಶ್‌ ಮಾಡುವುದು, ಇಮೇಲ್‌ ಪರಿಶೀಲನೆ ಮಾಡುವುದು ಹಾಗೂ ಕರೆಗಳನ್ನು ಸ್ವೀಕರಿಸುವುದು ಮಾಡುತ್ತಿರುತ್ತಾರೆ. ಆದರೆ ಇದು ಒಳ್ಳೆಯ ಹವ್ಯಾಸವಲ್ಲ. ಇದು ಅವರ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕಚೇರಿಯಂತೆ ಮನೆಯಲ್ಲೂ ಒಂದು ನಿರ್ದಿಷ್ಟ ಅವಧಿಯಲ್ಲಿ ಕೆಲಸ ಮಾಡಿ. ಕೆಲಸವೂ ಮುಖ್ಯ. ಆದರೆ ಅದಕ್ಕಿಂತ ಆರೋಗ್ಯ ಹಾಗೂ ಜೀವನ ಮುಖ್ಯ ಎಂಬುದನ್ನು ತಿಳಿದುಕೊಳ್ಳಿ. ಪ್ರತಿದಿನ ಕಚೇರಿಯ ಕೆಲಸ, ಕರೆ ಎಂದು ಬ್ಯುಸಿಯಾಗಿದ್ದರೆ ನೀವು ಕುಟುಂಬದಿಂದಲೂ ದೂರವಾಗುವ ಭಯ ಕಾಡುಬಹುದು. 

ಬಿಡುವು ತೆಗೆದುಕೊಳ್ಳದೇ ಕೆಲಸ ಮಾಡುವುದು

ಕೆಲಸದ ಸಾಮರ್ಥ್ಯ ಹೆಚ್ಚಲು ಹಾಗೂ ಮನಸ್ಸು ಹಗುರಾಗಲು ವಿರಾಮ ಅತೀ ಅಗತ್ಯ. ಮನೆ
ಯಿಂದಲೇ ಕೆಲಸ ಮಾಡುವುದೇ ವಿರಾಮ ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು. ಮನೆಯಿಂದ ಕೆಲಸ ಮಾಡುವಾಗಲೂ ಕಚೇರಿಯಲ್ಲಿ ಕೆಲಸ ಮಾಡುವಾಗ ವಿರಾಮ ತೆಗೆದುಕೊಳ್ಳುವಂತೆ ಇಲ್ಲೂ ತೆಗೆದುಕೊಳ್ಳಿ. ಕಚೇರಿಯಂತೆ ಮನೆಯಲ್ಲೂ ಕೆಲಸ ಮಾಡಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು