ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Heart Day | ಇನ್ನಷ್ಟು ‘ಹೃದಯ’ವಂತರಾಗೋಣ...

ಒತ್ತಡದ ಬದುಕು ಹೃದಯಕ್ಕೆ ಕೆಡುಕು: ಜೀವನಶೈಲಿ ಬದಲಾವಣೆ ಅಗತ್ಯ
Last Updated 29 ಸೆಪ್ಟೆಂಬರ್ 2021, 6:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಶರವೇಗದಲ್ಲಿ ಓಡುತ್ತಿರುವ ನಾವು ನಮ್ಮ ಬುದ್ಧಿಯ ಮಾತನ್ನಷ್ಟೇ ಕೇಳುವುದಲ್ಲ; ಹೃದಯದ ಮಾತನ್ನೂ ಕೇಳಬೇಕು. ಆದಷ್ಟು ಹೃದಯವಂತರಾಗಿ ‘use heart to connect’– ಸಂವಹನಕ್ಕೆ, ಸಂಪರ್ಕಕ್ಕೆ ಹೃದಯವನ್ನು ಬಳಸಿ ಎಂದು ವಿಶ್ವ ಹೃದಯ ಒಕ್ಕೂಟ (World Heart Federation) ಕಾವ್ಯಾತ್ಮಕ ಅನ್ನಿಸುವಂತೆ ಹೇಳಿದೆ. ಇದೇ ಈಗಿನ ಸತ್ಯವೂ ಹೌದು.

ಇದನ್ನು ಇನ್ನಷ್ಟು ಮುಂದುವರಿಸಿದರೆ, ನಿಮ್ಮ ಜ್ಞಾನ, ಅಂತಃಕರಣ, ಸಹಾನುಭೂತಿ ಮತ್ತು ಕಾಳಜಿಯೊಂದಿಗೆ ನೀವು, ನಿಮ್ಮ ಪ್ರೀತಿಪಾತ್ರರು ಮತ್ತು ನೀವು ಭಾಗವಾಗಿರುವ ಸಮುದಾಯದ ಜನರಲ್ಲಿ ಆರೋಗ್ಯಕರ ಜೀವನವನ್ನು ನಡೆಸಲು ನೆರವಾಗಿ, ಈ ಮೂಲಕ ಹೃದಯದೊಂದಿಗೆ ಮಧುರ ಬಾಂಧವ್ಯ ಸಾಧಿಸಿ ಎನ್ನುತ್ತಿದೆ.

ಸೆ.29 ವಿಶ್ವ ಹೃದಯ ದಿನ. ‘ಜಾಗತಿಕವಾಗಿ ಹೃದ್ರೋಗ ಜಾಗೃತಿ, ತಡೆಗಟ್ಟುವಿಕೆ ಮತ್ತು ನಿರ್ವಹಣೆಯನ್ನು ಸುಧಾರಿಸಲು ಡಿಜಿಟಲ್ ಶಕ್ತಿಯ ಬಳಕೆ’ ಈ ವರ್ಷದ ಘೋಷವಾಕ್ಯ.

ನಮ್ಮ ದೇಶದಲ್ಲಿ ಪ್ರತಿ ವರ್ಷ 25 ಲಕ್ಷಕ್ಕೂ ಹೆಚ್ಚು ಜನರು ಹೃದಯ ಕಾಯಿಲೆಯಿಂದ ಸಾಯುತ್ತಿದ್ದಾರೆ. ಹೃದಯದ ಆರೋಗ್ಯಕ್ಕಾಗಿ ವಿಭಿನ್ನ ಮತ್ತು ಹೊಸ ಮಾರ್ಗಗಳನ್ನು ಕಂಡುಕೊಳ್ಳುವ ತುರ್ತು ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ. ‘40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಹೃದಯಾಘಾತ ಹೆಚ್ಚುತ್ತಿರುವುದು ಕಳವಳಕಾರಿ’ ಎನ್ನುತ್ತಾರೆ ಹುಬ್ಬಳ್ಳಿಯ ಹಿರಿಯ ಹೃದ್ರೋಗ ಹಾಗೂ ಮಧುಮೇಹ ತಜ್ಞ ಜಿ.ಬಿ. ಸತ್ತೂರ.

‘ದ್ವೇಷ ಬಿಟ್ಟು, ಇನ್ನಷ್ಟು ಸಹೃದಯತೆಯಿಂದ, ಸಹಬಾಳ್ವೆಯಿಂದ, ಮಮತೆಯಿಂದ ನಾವು ಬದುಕಬೇಕು. ಒತ್ತಡದ ಬದುಕಿನಿಂದ ನಮ್ಮ ಹೃದಯಕ್ಕೆ ಕೆಡುಕು’ ಎನ್ನುತ್ತಾರೆ ಅವರು.

-ಡಾ.ಜಿ.ಬಿ.ಸತ್ತೂರ
-ಡಾ.ಜಿ.ಬಿ.ಸತ್ತೂರ

ಹೃದಯದ ಆರೋಗ್ಯಕ್ಕೆ ವೈದ್ಯರ ಸಲಹೆ

* ಆರು ತಿಂಗಳಿಗೊಮ್ಮೆ, ಇಲ್ಲವೇ ವರ್ಷಕ್ಕೊಮ್ಮೆ ರಕ್ತದಲ್ಲಿ ಕೊಲೆಸ್ಟ್ರಾಲ್‌ ಮಟ್ಟ, ಇಸಿಜಿ, ಇಕೋ, ಟಿಎಂಟಿ ಪರೀಕ್ಷೆ ಮಾಡಿಸಿಕೊಳ್ಳಬೇಕು.

* ಸಿಗರೇಟ್, ತಂಬಾಕು, ಗುಟ್ಕಾ ಸೇವನೆ ಬಿಡಬೇಕು. ಇವು ಹೃದಯದ ವೈರಿ.

* ನಿರಂತರವಾಗಿ ದೀರ್ಘಕಾಲ ಒಂದೆಡೆ ಕುಳಿತುಕೊಳ್ಳುವುದು (prolonged sitting) ಕೂಡ ಹೃದಯಕ್ಕೆ ಅಪಾಯಕಾರಿ. ಹೀಗಾಗಿ ಕುಳಿತು ಕೆಲಸ ಮಾಡುವವರು ಕನಿಷ್ಠ 2 ತಾಸಿಗೊಮ್ಮೆಯಾದರೂ ಎದ್ದು ಓಡಾಡಬೇಕು. ಕೈಕಾಲು ಅಲ್ಲಾಡಿಸಬೇಕು, ಅಂಗಾಲಿನ ಚಲನೆ ಮಾಡಬೇಕು.

* ಪ್ರತಿದಿನ ಎರಡು ಬಗೆಯ ಹಣ್ಣು, ಮೂರು ತರಹದ ಕಾಯಿಪಲ್ಲೆಗಳನ್ನು ದಿನಕ್ಕೆ 5–6 ಸಲ ಸೇವನೆ ಮಾಡುವುದು ಶೇ 25ರಷ್ಟು ಹೃದಯಾಘಾತವನ್ನು ತಡೆಯುತ್ತದೆ. ಮಾಂಸಾಹಾರ ಸೇವನೆ ಶೇ 30ರಷ್ಟು ಹೃದಯಾಘಾತ ಹೆಚ್ಚಿಸುತ್ತದೆ.

* ಜಂಕ್‌ ಫುಡ್‌, ಕರಿದ ಆಹಾರ ಪದಾರ್ಥಗಳ ಸೇವನೆ ಹೃದಯಕ್ಕೆ ಮಾರಕ.

* ಅಡುಗೆಯಲ್ಲಿ ಶೇಂಗಾ ಎಣ್ಣೆ, ಸೂರ್ಯಕಾಂತಿ, ಎಳ್ಳೆಣ್ಣೆ, ಕುಸುಬಿ ಎಣ್ಣೆ ಬಳಕೆ ಉತ್ತಮ. ತುಪ್ಪ ಬಳಕೆ ದಿನಕ್ಕೆ 1 ಚಮಚಕ್ಕೆ ಸೀಮಿತವಾಗಿರಲಿ.

* ಕೋವಿಡ್‌ನಿಂದ ಗುಣವಾದವರಲ್ಲಿಯೂ ದೀರ್ಘಕಾಲದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸೇರಿದಂತೆ ಹಲವು ಸಮಸ್ಯೆಗಳು ಕಂಡು ಬಂದಿವೆ. ಹೀಗಾಗಿ ಪ್ರತಿಯೊಬ್ಬರೂ ದೈಹಿಕವಾಗಿ ಚಟುವಟಿಕೆಯಿಂದ ಕೂಡಿರುವ ಜೀವನ ಶೈಲಿ ತಮ್ಮದಾಗಿಸಿಕೊಳ್ಳಬೇಕು.

*
ಆನುವಂಶಿಕತೆಯೊಂದಿಗೆ ಬದಲಾದ ಆಹಾರ ಕ್ರಮ, ಜಂಕ್‌ಫುಡ್‌ ಸೇವನೆ, ಧೂಮಪಾನ ಹೃದಯಾಘಾತಕ್ಕೆ ರಹದಾರಿ. -ಡಾ.ಜಿ.ಬಿ.ಸತ್ತೂರ, ಹೃದ್ರೋಗ ಹಾಗೂ ಮಧುಮೇಹ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT