ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ಯವೂ ನೆಮ್ಮದಿ ಸಿಗಬಹುದೇ?

Last Updated 23 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

‘ಏನಿದ್ದರೆಷ್ಟು ಬಿಟ್ಟರೆಷ್ಟು, ಜೀವನದಲ್ಲಿ ನೆಮ್ಮದಿ ಇಲ್ಲದಮೇಲೆ? ನನಗೇನೂ ಬೇಡಪ್ಪ, ಆಸ್ತಿ, ಅಂತಸ್ತು, ಅತಿಶಯವಾದ ಯಶಸ್ಸು - ಈ ಏನನ್ನೂ ಬಯಸಲಾರೆ, ಮನಸ್ಸಿಗೆ ಶಾಂತಿ ಒಂದು ಬೇಕು ಅಷ್ಟೆ’ ಎಂದು ಎಲ್ಲರೂ ಹೇಳ್ತಾರೆ. ಕೆಲವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ನಾನ್ಯಾರಿಗೂ ಕೆಟ್ಟದ್ದು ಬಯಸಿಲ್ಲ, ಕೆಟ್ಟದ್ದು ಮಾಡಿಲ್ಲ, ಕಷ್ಟಪಟ್ಟು ದುಡಿತಾ ಇದ್ದೀನಿ, ನನ್ನ ಕೈಲಾದಷ್ಟು ಎಲ್ಲರಿಗೂ ಒಳ್ಳೆಯದನ್ನೇ ಮಾಡ್ತೀನಿ ಆದರೂ ನನಗೆ ನೆಮ್ಮದಿಯೇ ಇಲ್ಲ, ಎಲ್ಲ ಕಷ್ಟಗಳು, ಚಿಂತೆಗಳು ನನ್ನನ್ನೇ ಯಾಕೆ ಬೆನ್ನಟ್ಟಿ ಬರುವುದೋ ಗೊತ್ತಿಲ್ಲ’ ಎಂದು ಕೊರಗುತ್ತಾರೆ.

ಅಂದರೆ ಒಳ್ಳೆಯವರಾಗಿರುವುದು (ಹಾಗೆಂದರೇನು?) ನೆಮ್ಮದಿಯಾಗಿರುವುದಕ್ಕೆ ಅಗತ್ಯವಾಗಿ ಬೇಕಾದ ಪೂರ್ವಭಾವಿ ತಯಾರಿಯೇ? ಹಾಗೆಯೇ ನೆಮ್ಮದಿ, ಶಾಂತಿ ಸಮಾಧಾನ ಎಂಬುದು ನಮ್ಮೆಲ್ಲಾ ಸಾಧನೆ, ಗಳಿಕೆ, ಹೆಸರು, ಕೀರ್ತಿ, ಪದವಿ – ಇವುಗಳನ್ನು ಮೀರಿದ್ದು ಎಂದಾದರೆ ನಾವ್ಯಾಕೆ ನೆಮ್ಮದಿಯನ್ನು ಸಾಧಿಸುವುದನ್ನೇ ನಮ್ಮ ಮುಖ್ಯ ಗುರಿಯಾಗಿಸಿಕೊಂಡಿಲ್ಲ; ಬದಲಾಗಿ ಅನೇಕ ದೂರ ಮತ್ತು ಸಮೀಪದ ಗುರಿಗಳನ್ನು ಏಕೆ ಹೊಂದಿದ್ದೇವೆ? ಕೊನೆಗೆ ನೆಮ್ಮದಿಯಾಗಿರೋದು ಎಂದರೇನು? ಏನೂ ಹೆಚ್ಚಿನ ತಲೆಬಿಸಿ ಮಾಡಿಕೊಳ್ಳದೆ, ಯಾವುದನ್ನು ತೀವ್ರವಾಗಿ ಹಚ್ಚಿಕೊಳ್ಳದೆ, ಯಾವುದೇ ರೀತಿಯ ಹೊಸತನಕ್ಕೆ ತೆರೆದುಕೊಳ್ಳದೆ, ಇದ್ದುದರಲ್ಲೇ ತೃಪ್ತಿಯಾಗಿ, ಏನನ್ನೂ ಅರಸದೆ, ಹುಡುಕದೆ, ಮಿಡುಕದೆ ಸ್ತಬ್ಧವಾಗಿ ಇರುವುದು ಅಂತಲೋ? ಹಾಗಿರುವುದು ಬದುಕೇ? ಆಸೆ, ಅಭೀಪ್ಸೆ, ಅರಸುವಿಕೆ, ಅನ್ವೇಷಣೆ, ಅನುರಕ್ತಿ – ಇವೇ ನಮ್ಮನ್ನು ಮನುಷ್ಯರಾಗಿಸುವುದು; ಅದಿಲ್ಲದೇ ಬಾಳುವುದಾದರೆ ಅಂತಹ ರಸಹೀನ ಬಾಳು ಯಾಕಾದರೂ ಬೇಕು? ಸದಾ ಶಾಂತಿ, ನೆಮ್ಮದಿಯಿಂದ ಬಾಳುವುದೆಂದರೆ, ಏನೂ ಏರುಪೇರುಗಳಿಲ್ಲದ, ಉದ್ವೇಗಗಳಿಲ್ಲದ, ಆವೇಶವಿಲ್ಲದ, ಭಾವೋದ್ರೇಕಗಳಿಲ್ಲದ, ಸುಪ್ತಾವಸ್ಥೆ ಎಂಬಂತಹ ಕಲ್ಪನೆ ಉಂಟಾಗುವುದೇ? ಶಾಂತಿ ಎಂದರೆ ಏನೋ? ಕೆಲವರು ಹೇಳುವಂತೆ ಧ್ಯಾನದಲ್ಲಿ, ಮಹಾಮೌನದಲ್ಲಿ, ತಪಸ್ಸಿನಲ್ಲಿ ಸಿದ್ಧಿಸಿಕೊಳ್ಳುವ ಸ್ಥಿತಿಯೇ ಅಥವಾ ಸಾವಿರ ಸುಖ–ದುಃಖಗಳು ಒಮ್ಮೆಲೆ ಬಂದೊದಗಿದರೂ ವಿಚಲಿತಗೊಳ್ಳದ ನಿರ್ಲಿಪ್ತ, ಸ್ಥಿತಪ್ರಜ್ಞತೆಯೇ?

ಸಮಸ್ಥಿತಿಯ ಕದಡುವಿಕೆ

ಮನುಷ್ಯ ಮೂಲತಃ ಆಸೆಯಿಂದ ಪ್ರೇರೇಪಿತನಾಗಿ, ಕ್ರಿಯೆಯ ಮೂಲಕ ಆ ಆಸೆಯನ್ನು ನೆರವೇರಿಸಿಕೊಳ್ಳುವ ಸ್ವಭಾವ ಹೊಂದಿದ ಆಶಾಜೀವಿಯೂ ಹೌದು, ಕರ್ಮಜೀವಿಯೂ ಹೌದು. ಹೀಗೆ ಹೊಸ ಆಲೋಚನೆ, ಬಯಕೆಗಳು ಶುರುವಾಗಿ ಅದಕ್ಕೆ ಪೂರಕವಾದ ಕ್ರಿಯೆಯನ್ನು ಪ್ರಾರಂಭಿಸಿದೊಡನೆಯೇ ಬದಲಾವಣೆಗಳು ಸಾಗರೋಪಾದಿಯಲ್ಲಿ ಅಪ್ಪಳಿಸಿ ಸಮಸ್ಥಿತಿಯು ಕದಲುವುದು. ಈ ಕದಲುವಿಕೆ ಅನೇಕ ಸಾಧ್ಯತೆಗಳನ್ನು, ಹೊಸ ಬೆಳಕನ್ನು ಗರ್ಭದಲ್ಲಿ ಹೊತ್ತಿದ್ದರೂ, ಈಗ ಬಹುಕಾಲದಿಂದ ನೆಚ್ಚಿಕೊಂಡ ಭದ್ರವಾದ ನೆಲೆಯಿಂದ ಪದಚ್ಯುತಗೊಂಡ ಮನಸ್ಸು ಆತಂಕದಿಂದ ಅಲ್ಲೋಲಕಲ್ಲೋಲವಾಗಿ ಅಶಾಂತಿಯ ಬೀಡಾಗುವುದು ನಮ್ಮೆಲ್ಲರ ಬದುಕಿನಲ್ಲಿ ಒಮ್ಮೆಯಾದರೂ ಅನುಭವಕ್ಕೆ ಬಂದಿರುವುದು ನಿಜವೇ. ಬದಲಾವಣೆಗಳು ಹೀಗೆ ಕೇವಲ ನಮ್ಮ ವೈಯುಕ್ತಿಕ ನಿರ್ಧಾರಗಳಿಂದ ಉಂಟಾದುವೆಂದು ತಿಳಿಯಬೇಕಾದ್ದಿಲ್ಲ.

ಪ್ರಾಕೃತಿಕ, ಕೌಟುಂಬಿಕ, ಸಾಮಾಜಿಕ, ಆರ್ಥಿಕ, ರಾಜಕೀಯ, ಜಾಗತಿಕವಾದ ಯಾವುದೇ ಕಾರಣಗಳಿಗಾಗಿಯೂ ನಾವು ಬದಲಾವಣೆಗಳನ್ನು ಎದುರಿಸುತ್ತಿರಬಹುದು; ಅವು ಸಹಜವಾಗಿ ತರುವ ಸವಾಲುಗಳನ್ನು ಸ್ವೀಕರಿಸಲಾಗದೆ ಚಡಪಡಿಸುವುದೇ ಅಶಾಂತಿಗೆ, ಅಸಮಾಧಾನಕ್ಕೆ ಮೂಲ. ಹಾಗಂತ ಬದಲಾವಣೆಗಳನ್ನು ನಿರಾಕರಿಸಿ ಬದುಕುವುದೆಂದರೆ ಅದು ಸಾವಿಗಿಂತ ಬೇರೆ ಸ್ಥಿತಿಯಲ್ಲ ಎಂಬುದು ಖಚಿತ.

ಬದುಕಿನ ಯಾವುದೇ ಕ್ಷಣದಲ್ಲಿಯೂ ಹಿಂದೆ ಆಗಿದ್ದ, ಬದುಕಿನ ಭಾಗವಾಗಿದ್ದ ಎಲ್ಲವನ್ನೂ ನಿರಾಕರಿಸಿ, ಮತ್ತೆ ಹೊಸದಾಗಿ ಬಾಳುವ ಸಾಮರ್ಥ್ಯವೇ ಮಾನವ ಜೀವನಕ್ಕಿರುವ ಸೌಭಾಗ್ಯ, ಸೌಂದರ್ಯ. ಹಾಗಿಲ್ಲದೆ ನಿನ್ನೆ ಬದುಕಿದ ಬದುಕನ್ನೇ ಮತ್ತೆ ಇಂದು, ನಾಳೆ, ನಾಡಿದ್ದು ಇನ್ನೂ ನೂರು ವರ್ಷ ಬದುಕುವುದರಲ್ಲಿ ಯಾವ ಧನ್ಯತೆ ಇದೆ? ಹಾಗೆಂದು ದಿನವೂ ಪ್ರಪಂಚವೇ ತಲೆಕೆಳಗಾಗುವ ಬದಲಾವಣೆಗಳನ್ನು ತಡೆದುಕೊಳ್ಳುವ ಶಕ್ತಿ ಯಾರಿಗೂ ಇಲ್ಲ ಬಿಡಿ. ಹಾಗಾದರೆ ಸಮಸ್ಥಿತಿ ಮತ್ತು ಬದಲಾವಣೆ – ಇವುಗಳ ತಾಕಲಾಟದಲ್ಲೇ ಮನುಷ್ಯನ ಶಾಂತಿ, ಅಶಾಂತಿಗಳು ಅವಿರ್ಭವಿಸಿ ಅರ್ಥ ಪಡೆದು ಅನುಭವದ ಭಾಗವಾಗುವುದು ಎಂದಾಯಿತು.

ಚಿಂತೆ–ನಿಶ್ಚಿಂತೆ

ಮನುಷ್ಯ ಜೀವನದ ದುಃಖ, ಯಾತನೆಗಳ ಬಗ್ಗೆ ಅಪಾರ ಒಳನೋಟ ಹೊಂದಿದ, ಹೃದಯಂಗಮವಾದ, ಪ್ರೇಮಭರಿತವಾದ ಮಾತುಗಳಿಂದ ನಮ್ಮ ಅಂತರಂಗದ ನೋವಿಗೆ ಸ್ಪಂದಿಸುವಂತಹ, ಬದುಕಿಗೆ ಹೊಸ ಹುರುಪು ನೀಡಿವಂತಹ ಅದ್ಭುತ ಕೃತಿಗಳನ್ನು ರಚಿಸಿರುವ ಅಮೆರಿಕದ ಬೌದ್ಧಗುರು, ಸನ್ಯಾಸಿನಿ ಪೇಮ ಚೋಡ್ರೋನ್ (Pema chodron)ರ ಮಾತುಗಳು ಇಲ್ಲಿ ಸಮಂಜಸ ಎನಿಸುತ್ತವೆ. ನಮ್ಮೆಲ್ಲ ನೋವಿಗೂ ಮೂಲ ನಮ್ಮ ಅನುಭವಗಳ ಕೊರಳನ್ನು ಒತ್ತಿ ಹಿಡಿದು, ಉಸಿರುಗಟ್ಟಿಸಿ, ಅನುಭವದ ದನಿಯಡಗಿಸಿಬಿಡುವ ನಮ್ಮ ಆಲೋಚನೆಗಳ ಅಬ್ಬರ ಎಂಬುದು ಪೇಮ ಚೋಡ್ರೋನ್‌ರ ವಿಚಾರ.

ಸದಾ ಏರುದನಿಯಲ್ಲಿ ಬಡಬಡಿಸುವ, ಕಣ್ಣು ಕುಕ್ಕುವ, ವಿಚಿತ್ರ ರಂಗಿನ ಪೋಷಾಕು ಧರಿಸಿ ವೀರಾವೇಶದಿಂದ ಕುಣಿಯುತ್ತ, ಇದ್ದದ್ದನ್ನು ಇಲ್ಲವಾಗಿಸುವ, ಇಲ್ಲದ್ದನ್ನು ಸೃಷ್ಟಿಸಿಬಿಡುವ, ಎಲ್ಲವನ್ನು ವಕ್ರದೃಷ್ಟಿಯಲ್ಲಿ ನೋಡುವ, ಎಲ್ಲದಕ್ಕೂ ಹಣೆಪಟ್ಟಿ ಹಚ್ಚುವ, ನಮ್ಮ ಮೂಗಿನ ನೇರಕ್ಕಷ್ಟೇ ಮಾತನಾಡಲು ಪ್ರೇರೇಪಿಸುವ ನಮ್ಮ ಆಲೋಚನೆಗಳೇ ನಮ್ಮ ನಿಜವಾದ ಶತ್ರುಗಳು. ರಚ್ಚೆ ಹಿಡಿದು ಅಳುವ ಮಗುವನ್ನು ತಾಯಿ ಲಾಲಿಸಿ, ಮಮತೆಯುಣಿಸಿ, ಜೋಗುಳ ಹಾಡಿ ಮಲಗಿಸುವಂತೆ, ರಂಪ ರಾದ್ಧಾಂತ ನಡೆಸಿರುವ ನಮ್ಮ ಆಲೋಚನೆಗಳನ್ನು ಶಾಂತಗೊಳಿಸಲು ಒಂದು ಪ್ರೇಮದ, ಅಂತಃಕರಣದ, ವಾತ್ಸಲ್ಯದ ದೀವಿಗೆ ಬೇಕು. ಆ ದೀವಿಗೆ ಮತ್ತೆಲ್ಲೋ ಇಲ್ಲ. ಅದು ನಮ್ಮೊಳಗೆ ಇದೆ. ಆ ದೀವಿಗೆಯೇ ‘mindfulness’ ಅಥವಾ ‘ಸಾವಧಾನತೆ’ ಎನಿಸಿದೆ.

ಯಾರನ್ನು, ಏನನ್ನೂ ಟೀಕೆ ಮಾಡದ, ತಿರಸ್ಕರಿಸದ, ನಮ್ಮ ಸುತ್ತಲಿನ ಚರಾಚಾರಗಳನ್ನು, ಮೂರ್ತ–ಆಮೂರ್ತಗಳನ್ನು, ಭಾವಗಳನ್ನು, ಆಲೋಚನೆ, ಕ್ರಿಯೆ, ಪ್ರಕ್ರಿಯೆ, ಪ್ರತಿಕ್ರಿಯೆ – ಮುಂತಾದ ಸಮಸ್ತವನ್ನು ಸಾಕ್ಷಿಪ್ರಜ್ಞೆಯಂತೆ ಧರಿಸುವ ಧ್ಯಾನಸ್ಥ ಸ್ಥಿತಿ. ಆ ಸ್ಥಿತಿಯಲ್ಲಿ ‘ನನ್ನ ಇಲ್ಲಿ, ಈ ಕ್ಷಣದ ಅನುಭವ ಮುಖ್ಯವಾಗಿರುತ್ತದಷ್ಟೇ ಹೊರತು ನಾನು ಬೌದ್ಧಿಕವಾಗಿ ಅನ್ವೇಷಿಸಿದ, ಇತರರು ಹೇಳಿಕೊಟ್ಟ, ಅರಿವಿನ ಮೂಲಕ ತಿಳಿದ ಯಾವ ಸತ್ಯವೂ, ತತ್ತ್ವವೂ ಅಲ್ಲ’. ನೀವು ಅನುಭವಿಸುತ್ತಿರುವ ಎಲ್ಲವನ್ನೂ ಮನಸಾರೆ ಅನುಭವಿಸಿ ಮತ್ತು ಆ ಅನುಭವದ ಸುತ್ತ ನಿಮ್ಮ ವಿಮರ್ಶಾತ್ಮಕ ಬುದ್ಧಿ ಹೆಣೆದಿರುವ ‘ನಿಮ್ಮ ಕಥೆಯನ್ನು’ ಕಳಚಿ ಎನ್ನುವುದೇ ಪೇಮ ಚೋಡ್ರೋನ್ ಸಂಕಟದಲ್ಲಿರುವವರಿಗೆ ಕೊಡುವ ಸಾಂತ್ವನ.

**

ದೇವರ ಮೊರೆಯಿಂದ ನಿಶ್ಚಿಂತೆ...

ನಮ್ಮ ಅನುಭವಗಳಿಗೆ ನಾವು ಕೊಡುವ ವ್ಯಾಖ್ಯಾನಗಳನ್ನು ಬದಲಿಸಿ ನೋಡಿದಾಗ ಬದುಕು ಬದಲಾಗುತ್ತದೆ ಮತ್ತು ಅನಿವಾರ್ಯವಾದ ಬದಲಾವಣೆಗಳಿಗೆ ನಾವು ಹೊಂದಿಕೊಳ್ಳುತ್ತೇವೆ. ಸೋಲು, ಕಷ್ಟ ಎದುರಾದಾಗ ಸಾಧಾರಣವಾಗಿ ನೀವೇನು ಮಾಡುವಿರೋ ಅದಕ್ಕಿಂತ ಭಿನ್ನವಾಗಿ ಏನಾದರೂ ಮಾಡಿ, ಭಿನ್ನವಾಗಿ ಪ್ರತಿಕ್ರಿಯಿಸಿ ನೋಡಿ. ಉದಾಹರಣೆಗೆ ನಿಮ್ಮಲ್ಲಿರುವ ಅಸಾಮರ್ಥ್ಯದ ಬಗ್ಗೆ ಕೊರಗುವ ಬದಲು, ನೀವು ‘ಕೊರಗುತ್ತಿರುವುದನ್ನು’ ಗಮನಿಸುತ್ತಾ ಹೋಗಿ. ‘ಎಲ್ಲರೂ ಮೋಸಗಾರರು’ ಎನ್ನುವ ಬದಲು ‘ನನಗೆ ಯಾರನ್ನು ನಂಬುವುದೂ ಕಷ್ಟವಾಗಿದೆಯಲ್ಲವೇ’ ಎಂಬುದನ್ನು ಗಮನಿಸಿ ಅದರ ಹಿಂದಿರುವ ನೋವನ್ನು ಗುರುತಿಸಿ. ‘ನಮ್ಮೆಲ್ಲಾ ಸಮಸ್ಯೆಗಳಿಗೆ ನಿರ್ದಿಷ್ಟ ಪರಿಹಾರವಿದೆ’ ಅದನ್ನು ಹುಡುಕಬೇಕು ಎಂಬುದೇ ಒಂದು ದೊಡ್ಡ ಭ್ರಮೆ.

ನಾವು ಬದುಕುತ್ತಾ ಹೋದಂತೆ ನಮಗೆ ನಮ್ಮ ಸಮಸ್ಯೆ, ಚಿಂತೆ, ನೋವು, ಅಶಾಂತಿಯ ಹಿಂದಿರುವ ವ್ಯಕ್ತಿಯ, ಅಂದರೆ ನಮ್ಮದೇ ಪರಿಚಯ ನಮಗಾಗುತ್ತ ಹೋಗುತ್ತದೆ. ಬುದ್ಧಿ, ವಿವೇಚನೆ ಹೆಣೆದ ‘ನನ್ನ ಕಥೆ’ಯೇ ಬೇರೆ, ಅನುಭವ ತೋರಿಸಿಕೊಡುವ ಕಥಾ ನಾಯಕ/ನಾಯಕಿಯೇ ಬೇರೆ ಎಂಬುದು ತಿಳಿಯುತ್ತ ಹೋಗುತ್ತದೆ. ಕಥೆಗಾರ ಜಯಂತ್ ಕಾಯ್ಕಿಣಿಯವರು ಒಮ್ಮೆ ತಮ್ಮ ಮಾತಿನ ಮಧ್ಯೆ ‘ತಿಳಿದದ್ದನ್ನು ಬರೆಯುವುದು ಕಥೆಯಲ್ಲ, ತಿಳಿಯುವುದಕ್ಕಾಗಿ ಬರೆಯುವುದು ಕಥೆ’ ಎಂದರು. ಅದು ಕಥೆಗಷ್ಟೇ ಅಲ್ಲದೇ ಜೀವನಕ್ಕೂ ಅನ್ವಯಿಸುವ ಮಾತು. ನಮ್ಮೆಲ್ಲಾ ನೋವಿಗೂ, ಚಿಂತೆಗೂ ಪರಿಹಾರ ನಾವು ನೋವಿಲ್ಲದ, ಚಿಂತೆ ಇಲ್ಲದ ಯಾವುದೋ ಅಲೌಕಿಕ ಸ್ಥಿತಿಗೆ ತಲುಪಬೇಕೆನ್ನುವ ಪ್ರಯತ್ನವಲ್ಲ. ‘ಅನುಗಾಲವು ಚಿಂತೆ ಜೀವಕ್ಕೆ’ ಎಂದು ದಾಸರು ಹೇಳಿರುವ ಮಾತು ಸುಳ್ಳಲ್ಲ.

ಯಾವುದು ಇದ್ದರೂ, ಇಲ್ಲದಿದ್ದರೂ, ಹೀಗಿದ್ದರೂ, ಹಾಗಿದ್ದರೂ, ಹೇಗಿದ್ದರೂ, ಎಲ್ಲಿದ್ದರೂ ಚಿತೆ ಏರುವವರೆಗೂ ಚಿಂತೆ. ಆದರೆ ನಮ್ಮೆಲ್ಲ ಚಿಂತೆಗಳಿಗೂ ಸೃಜನಾತ್ಮಕವಾದ, ಸ್ವಾರಸ್ಯಕರವಾದ, ಸಮಾಧಾನವನ್ನು ಬದುಕೇ ನಮಗೆ ತೆರೆದಿಡುತ್ತದೆ. ನಾವು ತಿಳಿದ ನಮ್ಮ ಬದುಕೊಂದೆ ನಮ್ಮ ಕಥೆಯಲ್ಲ. ನಾವು ತಿಳಿದ ನಮ್ಮ ಬದುಕು ನಮ್ಮ ‘ಒಂದು ಕಥೆ’ ಮಾತ್ರ. ನಮ್ಮ ಬದುಕಿಗೆ ಅನೇಕ ಕಥನಗಳು ಸಾಧ್ಯ. ಹೀಗಿದ್ದಾಗ ಒಂದೇ ಕಥೆಗೆ ಜೋತುಬೀಳುವುದೇಕೆ? ನಮ್ಮ ಅನೇಕ ಮರೆತುಹೋದ, ಕಳೆದು ಹೋದ, ಹೂತು ಹೋದ ನಮ್ಮ ಕಥೆಗಳನ್ನು ನಮಗೆ ದಕ್ಕಿಸಿಕೊಡುವ ಅನುಭವವೇ ನಮ್ಮ ದೇವರು. ಆ ದೇವರ ಮೊರೆ ಹೋದಾಗ ಮಾತ್ರ ಚಿಂತೆ ನಿಶ್ಚಿಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT