ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗ ಜೀವನದ ಒಂದು ಮಾರ್ಗ

Last Updated 21 ಜೂನ್ 2020, 4:46 IST
ಅಕ್ಷರ ಗಾತ್ರ

ಪ್ರಾಚೀನ ಭಾರತದ ಅದ್ಭುತವಾದ ಋಷಿಗಳು ಮಾನವಕುಲಕ್ಕೆ ನೀಡಿದ ಅತ್ಯಮೂಲ್ಯವಾದ ಕೊಡುಗೆ ಎಂದರೆ ಯೋಗ. ಇಂದು, ವಿಶ್ವದಾದ್ಯಂತ ಲಕ್ಷಾಂತರ ಜನರು ಯೋಗವನ್ನು ಸಕ್ರಿಯವಾಗಿ ಅಭ್ಯಾಸ ಮಾಡುತ್ತಿದ್ದಾರೆ ಮತ್ತು ಅದನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಆದರೆ, ಈ ಯೋಗ ಇತರೆ ಸಾಮಾನ್ಯ ದೈಹಿಕ ವ್ಯಾಯಾಮದ ರೀತಿಯಲ್ಲಿ ದಿನದಲ್ಲಿ ಒಂದೆರಡು ಗಂಟೆಗಳ ಕಾಲ ಅಭ್ಯಾಸ ಮಾಡುವಂತಹದ್ದಲ್ಲ.

ಯೋಗದಿಂದ ಸಂಪೂರ್ಣವಾದ ಪ್ರಯೋಜನವನ್ನು ಪಡೆಯಲು, ಒಬ್ಬರು ಪರಿಶುದ್ಧತೆ ಮತ್ತು ದೈಹಿಕ ಹಾಗೂ ಮಾನಸಿಕ ಶಿಸ್ತನ್ನು ಅಭ್ಯಾಸ ಮಾಡಿಕೊಳ್ಳಬೇಕು. ಔಷಧಿಗಳನ್ನು ತೆಗೆದುಕೊಳ್ಳುವುದರ ಜತೆಗೆ ದೀರ್ಘಾವಧಿಯ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಕಠಿಣವಾದ ಆಹಾರ ಪದ್ಧತಿಗಳನ್ನು ಪಾಲಿಸಬೇಕಾಗುತ್ತದೆ. ಇದರ ಜತೆಗೆ ಸಾಕಷ್ಟು ವಿಶ್ರಾಂತಿ ಮತ್ತು ನಿದ್ದೆಯನ್ನು ಮಾಡಬೇಕಾಗುತ್ತದೆ. ಇದೇ ರೀತಿಯಲ್ಲಿ, ಯೋಗದಿಂದ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಲು ಶಿಸ್ತುಬದ್ಧವಾಗಿ ಯೋಗಾಭ್ಯಾಸವನ್ನು ಮಾಡಬೇಕು ಮತ್ತು ಮೌಲ್ಯಾಧಾರಿತ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು.

ಜೀವನಶೈಲಿ
ತಪ್ಪಾದ ಜೀವನಶೈಲಿಯನ್ನು ಪಾಲಿಸುತ್ತಿರುವುದು ಸಮಾಜದ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಇಂದಿನ ಜಗತ್ತಿನಲ್ಲಿ ಎಲ್ಲಾ ದೈಹಿಕ ಆರಾಮಗಳು ಬೆರಳತುದಿಯಲ್ಲಿವೆ. ಹಾಸಿಗೆಯಲ್ಲಿ ಆರಾಮವಾಗಿ ಮಲಗಿಕೊಂಡು ನೀವು ಟಿವಿಯನ್ನು ತಿರುಗಿಸಬಹುದು, ಏರ್ ಕಂಡೀಶನಿಂಗ್‌ಗಳನ್ನು ಸ್ವಿಚ್ ಆನ್ ಮತ್ತು ಆಫ್ ಮಾಡಬಹುದು, ರೈಲು ಅಥವಾ ವಿಮಾನದ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಮತ್ತು ರೆಸ್ಟೋರೆಂಟ್‌ಗಳಿಂದ ನಿಮ್ಮ ನೆಚ್ಚಿನ ಆಹಾರ ಪದಾರ್ಥಗಳನ್ನು ಆರ್ಡರ್ ಮಾಡಬಹುದು. ಆರಾಮಗಳು ಅಥವಾ ಸೌಲಭ್ಯಗಳು ಹೆಚ್ಚಾಗುತ್ತಿದ್ದಂತೆಯೇ, ನಮ್ಮ ದೇಹ ಸದೃಢವಾಗಿರಲು ಅಗತ್ಯವಾದ ವ್ಯಾಯಾಮಗಳನ್ನು ಪಡೆಯುವುದಿಲ್ಲ.

ಇದಲ್ಲದೇ ಮನಸ್ಸಿನ ಸ್ಥಿತಿ ಏನು? ಇದು ನಿರಂತರವಾಗಿ ಓಡುತ್ತಲೇ ಇರುತ್ತದೆ. ಮನಸ್ಸು ನೂರಾರು ಯೋಚನೆಗಳಿಂದ ತುಂಬಿರುತ್ತದೆ. ಮನೆಯಲ್ಲಿರಲಿ ಅಥವಾ ಕಚೇರಿಯಲ್ಲಿರಲಿ, ಜನರು ಒತ್ತಡ ರಹಿತವಾಗಿರುವ ಒಂದು ಕ್ಷಣವೂ ಇಲ್ಲ. ದೇಹಕ್ಕೆ ವ್ಯಾಯಾಮ ಎಷ್ಟು ಬೇಕೋ ಅಷ್ಟೇ ಸದೃಢವಾದ ಮತ್ತು ಆರೋಗ್ಯವಾದ ಮನಸ್ಸು ಇರಬೇಕು. ಪ್ರತಿದಿನ ನಾವು ಕನಿಷ್ಠ ಸ್ವಲ್ಪ ಸಮಯದವರೆಗಾದರೂ ಮನಸ್ಸನ್ನು ಸಂಪೂರ್ಣವಾಗಿ ಶಾಂತಚಿತ್ತದಿಂದ ಇಟ್ಟುಕೊಳ್ಳಬೇಕಾಗುತ್ತದೆ. ಆದರೆ, ನಾವು ಇದಕ್ಕೆ ತದ್ವಿರುದ್ಧವಾಗಿ ಮಾಡುತ್ತೇವೆ: ನಮ್ಮ ದೇಹಕ್ಕೆ ನಾವು ಯಥೇಚ್ಛವಾದ ವಿಶ್ರಾಂತಿಯನ್ನು ನೀಡುತ್ತೇವೆ ಮತ್ತು ನಮ್ಮ ಮನಸ್ಸನ್ನು ನಿರಂತರವಾಗಿ ಓಡುವಂತೆ ಮಾಡುತ್ತೇವೆ.

ಒತ್ತಡ ಕಡಿಮೆ ಮಾಡಲು..
ಈ ಆಧುನಿಕ ಸಮಯಗಳಲ್ಲಿ ಯೋಗ ಒಂದು ಅತ್ಯದ್ಭುತವಾದ ಆಶೀರ್ವಾದವಾಗಿದೆ. ಇದು ನಮ್ಮ ದೇಹವನ್ನು ಪುನಶ್ಚೇತನಗೊಳಿಸುತ್ತದೆ. ಇದೇ ವೇಳೆ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮನಸ್ಸನ್ನು ಶಾಂತಗೊಳಿಸುವುದು ಮತ್ತು ಸಶಕ್ತಗೊಳಿಸುತ್ತದೆ.

ಮಾನಸಿಕ ದೃಢತೆ
ಇದೆಲ್ಲದಕ್ಕಿಂತ, ಯೋಗವು ಆರೋಗ್ಯಕರವಾದ ಜೀವನವನ್ನು ನೀಡುತ್ತದೆ. ಇದು ಅತ್ಯಂತ ಸಂತೋಷದ ಮೂಲವನ್ನು ಹೇಳಿಕೊಡುತ್ತದೆ ಮತ್ತು ನಮ್ಮ ಮನಸ್ಸಿನಲ್ಲಿ ಶಾಂತಿಯನ್ನು ತಂದುಕೊಡುತ್ತದೆ. ಯೋಗ ನಮ್ಮ ಆಹಾರ, ಹವ್ಯಾಸಗಳಲ್ಲಿ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ತರುತ್ತದೆ. ಅಲ್ಲದೇ, ಇತರರೊಂದಿಗೆ ವ್ಯವಹರಿಸುವ ಪ್ರಕ್ರಿಯೆಗಳಲ್ಲಿ ಬದಲಾವಣೆ ತರುತ್ತದೆ. ಆಹಾರವು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೇ, ನಮ್ಮ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ನಾವು ಸಮತೋಲಿತ, ಅಗತ್ಯವಾದ ಮತ್ತು ಸೀಮಿತವಾದ ಆಹಾರವನ್ನು ಸೇವಿಸಬೇಕು. ಯೋಗವನ್ನು ಅಭ್ಯಾಸ ಮಾಡುವವರು ಕಟ್ಟುನಿಟ್ಟಾಗಿ ಸಾತ್ವಿಕ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಶುದ್ಧ ಮತ್ತು ಉತ್ತಮ ಪೌಷ್ಟಿಕಾಂಶದ ಆಹಾರವನ್ನು ಸೇವಿಸಬೇಕು.

ಸಮಗ್ರ ಜೀವನಶೈಲಿಯನ್ನು ಅಭ್ಯಾಸ ಮಾಡಿದಲ್ಲಿ ನಮ್ಮ ದೈಹಿಕ ಮತ್ತು ಮಾನಸಿಕ ಸ್ಥಿತಿಯಲ್ಲಿ ಬದಲಾವಣೆಯನ್ನು ತರುತ್ತದೆ. ವಿಶೇಷವಾಗಿ ಸುದೀರ್ಘವಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಇದು ವರದಾನವಿದ್ದಂತೆ. ಯೋಗವು ಆರೋಗ್ಯ, ಸಂತೋಷಕರ ಮತ್ತು ಸಂತೃಪ್ತಿಯ ಬಾಗಿಲನ್ನು ತೆರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT