ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚಲಿತ: ಜಾಗತಿಕ ಆರೋಗ್ಯಕ್ಕೆ ಭಾರತದ ‘ಯೋಗ’

Last Updated 13 ಜುಲೈ 2022, 22:30 IST
ಅಕ್ಷರ ಗಾತ್ರ

ಯೋಗ ಎಂಬುದು ‘ಯುಜ್‌‘ ಎಂಬಪದದಿಂದ ವ್ಯುತ್ಪತ್ತಿಯಾಗಿದ್ದು ಇದರರ್ಥ ‘ಒಗ್ಗೂಡಿಸಲು’ ಎಂದಾಗಿದೆ. ಆಕ್ಸ್‌ಫರ್ಡ್ ನಿಘಂಟಿನ ಪ್ರಕಾರ ಯೋಗ ಎಂಬ ಪದದ ಅರ್ಥ ‘ಯೂನಿಯನ್’ (ಒಗ್ಗೂಡಿಸುವುದು) ಎಂದಾಗಿದೆ. ಆದ್ದರಿಂದ ಇದನ್ನು ಜೀವಾತ್ಮದ ಜತೆಗೆ ಪರಮಾತ್ಮನ ಬೆಸುಗೆ ಎನ್ನಬಹುದು. ಯೋಗವು ಹಲವು ರೀತಿಯ ಅಭ್ಯಾಸಗಳ ಸಂಯೋಜನೆಯಾಗಿದೆ.

ಯೋಗ ಭಾರತದ ಸನಾತನ ಪರಂಪರೆಯಿಂದ ಹರಿದು ಬಂದ ಒಂದು ಶಿಸ್ತು. ಮನುಷ್ಯ ತನ್ನನ್ನು ತಾನು ತೊಡಗಿಸಿಕೊಳ್ಳಲು, ಭಾಗವಹಿಸಲು, ಸ್ವಯಂ ಒಳಗೊಳ್ಳಲು ಮತ್ತು ಸಹಜನರ ಜತೆ ಸಂಪರ್ಕಿಸಲು ಇರುವ ಒಂದು ಶಿಸ್ತಾಗಿದೆ. ಈ ಶಿಸ್ತನ್ನು ಸಂತರು ಮತ್ತು ಋಷಿಗಳು ಸ್ಥಾಪಿಸಿದ್ದು ಇವುಗಳ ಮಹತ್ವದ ಬಗ್ಗೆ ಅವರು ತಮ್ಮದೇ ತರ್ಕಬದ್ಧ ವ್ಯಾಖ್ಯಾನಗಳನ್ನು ಪ್ರಸ್ತುತಪಡಿಸಿದ್ದಾರೆ.

lಯೋಗವು ಕಾಲದ ಹಾದಿಯಲ್ಲಿ ನಡೆದುಬಂದ ಒಂದು ಜೀವನಕ್ರಮವಾಗಿದ್ದು, ಸಾವಿರಾರು ವರ್ಷಗಳ ಹಿಂದೆಯೇ ಆತ್ಮವನ್ನು ಶಾಂತಗೊಳಿಸಲು ತಿಳಿದಿರುವ ಅತ್ಯುತ್ತಮ ಅಭ್ಯಾಸಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಯೋಗಾಭ್ಯಾಸವು ವ್ಯಕ್ತಿಯ ಅಂತರ್ಗತ ಶಕ್ತಿಯನ್ನು ಸಮತೋಲಿತ ರೀತಿಯಲ್ಲಿ ಸುಧಾರಿಸುವ ಮೂಲಕ ಸ್ವಯಂ-ಸಾಕ್ಷಾತ್ಕಾರವನ್ನು ಸಾಧಿಸುವ ಗುರಿಯನ್ನು ಹೊಂದಿದೆ.

lಯೋಗದ ಮೊದಲ ಉಲ್ಲೇಖವು ಅತ್ಯಂತ ಹಳೆಯ ಪವಿತ್ರ ಗ್ರಂಥಗಳಲ್ಲಿ ಒಂದಾದ ಋಗ್ವೇದದಲ್ಲಿದೆ. ಈ ಆಧ್ಯಾತ್ಮಿಕ ಶಿಸ್ತು ದೇಹ ಮತ್ತು ಮನಸ್ಸಿನ ನಡುವೆ ಸಾಮರಸ್ಯವನ್ನು ತರುವ ಗುರಿಯನ್ನು ಹೊಂದಿರುವ ಸೂಕ್ಷ್ಮ ವಿಜ್ಞಾನವನ್ನು ಆಧರಿಸಿದೆ.

ಯೋಗ ಮತ್ತು ಮಹರ್ಷಿ ಪತಂಜಲಿ

ಯೋಗದ ಪಿತಾಮಹ ಮಹರ್ಷಿ ಪತಂಜಲಿ. ಅವರು ಯೋಗದ ಬಹು ಅಂಶಗಳನ್ನು ಸಂಯೋಜಿಸಿದ್ದು ಅವುಗಳನ್ನು ‘ಯೋಗ ಸೂತ್ರಗಳು’ ಅಥವಾ ಪೌರುಷಗಳು ಎಂದು ಕರೆದರು. ಯೋಗವು ವ್ಯಕ್ತಿಯ ಮನಸ್ಸು, ಶಕ್ತಿ ಮತ್ತು ಭಾವನಾತ್ಮಕ ಮಟ್ಟಗಳ ಮೇಲೆ ಕೆಲಸ ಮಾಡುತ್ತದೆ, ಹೀಗಾಗಿ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ.

ಪತಂಜಲಿ ಮುನಿಗಳು ‘ಅಷ್ಟಾಂಗ ಯೋಗ’ವನ್ನು ಪ್ರತಿಪಾದಿಸಿದ್ದು ಯೋಗವು ಮಾನವನ ಸರ್ವತೋಮುಖ ಬೆಳವಣಿಗೆಯನ್ನು ಸುಗಮಗೊಳಿಸುತ್ತದೆ.

ಅಷ್ಟಾಂಗ ಯೋಗಗಳು ಹೀಗಿವೆ: ಯಮ, ನಿಯಮ, ಪ್ರತ್ಯಾಹಾರ, ಧಾರಣ, ಆಸನ, ಪ್ರಾಣಾಯಾಮ, ಧ್ಯಾನ ಮತ್ತು ಸಮಾಧಿ. ಈ ಎಂಟು ವಿವಿಧ ಯೋಗಾಭ್ಯಾಸದ ಮೂಲಕ ಮನಸ್ಸಿನಲ್ಲಿರುವ ಸಂವೇದನೆಗಳನ್ನು ಮತ್ತು ಸಂಸ್ಕಾರಗಳನ್ನು ಸಂಸ್ಕರಿಸುವುದೇ ಅಷ್ಟಾಂಗ ಯೋಗದ ಪ್ರಮುಖ ಉದ್ದೇಶವಾಗಿದೆ.

ಅಷ್ಟಾಂಗ ಯೋಗದ ಉದ್ದೇಶ :

1. ಚಿತ್ತ ವೃತ್ತಿಗಳು ನಿರೋಧಿಸಿ ವ್ಯಕ್ತಿಗೆ ಮುಕ್ತಿ ದೊರಕಿಸಿ ಕೊಡುವುದು.

2. ಏಕಾಗ್ರತೆಯಿಂದ ಮನಸ್ಸನ್ನು ಶಾಂತ ಗೊಳಿಸುವುದು.

3. ಆತ್ಮವನ್ನು ಶುದ್ಧಿಯಾಗಿರಿಸುವುದು

4. ದುಃಖಕ್ಕೆ ಕಾರಣವಾಗುವ ಕ್ಲೇಶಗಳನ್ನು ನಿವಾರಿಸುವುದು.

5. ಆತ್ಮಶೋಧನೆ ಮತ್ತು ಸಾಕ್ಷಾತ್ಕಾರಗಳನ್ನು ಸುಲಭಗೊಳಿಸುವುದು.

6. ಮಾನವ ಪ್ರಜ್ಞೆಯ ಆಳದಲ್ಲಿರುವ ನಿಗೂಢವಾದ ರಹಸ್ಯವನ್ನು ಅರಿಯಲು ಪ್ರಯತ್ನಿಸುವುದು.

7. ಅಪಾರವಾದ ದೈಹಿಕ ಉಲ್ಲಾಸ ಮತ್ತು ಮಾನಸಿಕ ಶಕ್ತಿಯನ್ನು ಗಳಿಸಿಕೊಳ್ಳುವುದು.

8. ಅಷ್ಟಾಂಗ ಯೋಗವನ್ನು ಅದರ ಮಹತ್ವದ ಕಾರಣದಿಂದಾಗಿ ‘ರಾಜಯೋಗ’ ಎಂದು ಕೂಡ ಕರೆಯಲಾಗಿದೆ.

9. ಈ ಎಲ್ಲವೂ ದೈಹಿಕ ಶಿಸ್ತನ್ನು ತರುತ್ತವೆ. ಉಸಿರಾಟದ ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆವೆ. ಇಂದ್ರಿಯಗಳನ್ನು ನಿಗ್ರಹಿಸುತ್ತವೆ ಮತ್ತು ಚಿಂತನೆ ಮತ್ತು ಧ್ಯಾನವನ್ನು ಉತ್ತೇಜಿಸುತ್ತವೆ.

ಯೋಗವನ್ನು ಅತ್ಯಂತ ಸಿಹಿಯಾದ ಫಲವನ್ನು ಬಿಡುವ ಒಂದು ಮರಕ್ಕೆ ಹೋಲಿಸಲಾಗುತ್ತದೆ. ಈ ಯೋಗ ವೃಕ್ಷದ ಬೀಜವು ‘ಯಮ’ ಮತ್ತು ‘ನಿಯಮ’ಗಳಿಂದ ಪೋಷಿಸಲ್ಪಡುತ್ತದೆ ಮತ್ತು ಆ ಬೀಜವು ಮೊಳೆಯುವಾಗ ‘ಆಸನ’ ಮತ್ತು ‘ಪ್ರಾಣಾಯಾಮ’ಗಳು ಅದಕ್ಕೆ ಆಹಾರ ನೀಡುತ್ತವೆ. ವೃಕ್ಷವು ಬೆಳೆದು ದೊಡ್ಡ ಮರವಾಗಿ ಪ್ರತ್ಯಾಹಾರ ರೂಪದ ಹೂವನ್ನು ನೀಡುತ್ತದೆ. ಆನಂತರ ಧಾರಣೆ, ‘ಧ್ಯಾನ’ ಮತ್ತು ‘ಸಮಾಧಿ’ ರೂಪದಲ್ಲಿ ಅನೇಕ ಫಲಗಳನ್ನು ನೀಡುತ್ತವೆ.

ಜೂನ್ 21, 2022 ರಂದು 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಮೈಸೂರಿನ ಅರಮನೆ ಮೈದಾನದಲ್ಲಿ ನಡೆದ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಸರ್ವಾನಂದ ಸೋನೋವಾಲ್ ಉಪಸ್ಥಿತರಿದ್ದರು.

ಪತಂಜಲಿ ಮುನಿಗಳ ಪ್ರಕಾರ ಯೋಗ ಎಂದರೆ ’ಚಿತ್ತವೃತ್ತಿನಿರೋಧ' ಅಂದರೆ ಚಿತ್ತವನ್ನು ಶಮನಗೊಳಿಸುವುದು. ಅಂದರೆ ಪತಂಜಲಿ ಮುನಿಗಳ ಪ್ರಕಾರ ಚಿತ್ತವು ಮನಸ್ಸು, ಬುದ್ಧಿ ಮತ್ತು ಅಹಂಕಾರಗಳೆಂಬ ಮೂರು ಘಟಕಗಳಿಂದ ಕೂಡಿದೆ.

ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ :

* ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಯೋಗವು ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಇದನ್ನು ಸೊಸೈಟಿಗಳ ನೋಂದಣಿ ಕಾಯಿದೆ, 1860 ರ ಅಡಿಯಲ್ಲಿ ನೋಂದಾಯಿಸಲಾಗಿದೆ.

* ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಬರುವ ಆಯುಶ್ ಇಲಾಖೆಯು ಇದಕ್ಕೆ ಸಂಪೂರ್ಣ ಧನಸಹಾಯವನ್ನು ಒದಗಿಸುತ್ತದೆ.

* ಭಾರತದ ರಾಜಧಾನಿ ನಗರದಲ್ಲಿರುವ ಲುಟ್ಯೆನ್ಸ್ ವಲಯದಲ್ಲಿರುವ ಈ ಸಂಸ್ಥೆಯು "ಯೋಗದ ಮೂಲಕ ಆರೋಗ್ಯ, ಸಂತೋಷ ಮತ್ತು ಸಾಮರಸ್ಯ" ಎಂಬ ಉದ್ದೇಶ ಮತ್ತು ದೃಷ್ಟಿಯೊಂದಿಗೆ ಕಾರ್ಯನಿರ್ವಹಿಸುತ್ತದೆ.

ಕೀವರ್ಡ್‌ಗಳು: ಯೋಗ, ಮಹರ್ಷಿ ಪತಂಜಲಿ, ಅಷ್ಟಾಂಗ ಯೋಗ, ಜೂನ್ 21, ಯೋಗ ಸೂತ್ರ, ಆಯುಷ್ ಇಲಾಖೆ, ಇತ್ಯಾದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT