ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗಾರೋಗ್ಯ

Last Updated 19 ಜೂನ್ 2019, 19:30 IST
ಅಕ್ಷರ ಗಾತ್ರ

ರೀರದ ಎಲ್ಲಾ ಅಂಗಾಂಗಳು ಸಾಮರಸ್ಯದಿಂದ ಕೆಲಸ ನಿರ್ವಹಿಸುತ್ತವೆ. ಶರೀರ ಯಾವಾಗಲೂ ವಿಶ್ರಾಂತಿಯ ಸ್ಥಿತಿಯಲ್ಲಿರುತ್ತದೆ. ದೇಹದ ಚಲನವಲನಗಳಿಂದಾಗಿ ಉಸಿರಾಟದ ಹೊಂದಾಣಿಕೆಯಾಗಿ ಚೈತನ್ಯ ಉಂಟಾಗುತ್ತದೆ. ಜೀರ್ಣಾಂಗಗಳ ಕಾರ್ಯ ಹೆಚ್ಚು ಕ್ರಿಯಾಶೀಲವಾಗಿ ನಡೆಯುತ್ತದೆ. ಶರೀರದಲ್ಲಿ ನಿರ್ನಾಳ ಗ್ರಂಥಿಗಳ ಪಾತ್ರ ಪ್ರಮುಖವಾದದ್ದಾಗಿದೆ. ಶರೀರದ ಬೆಳವಣಿಗೆ ಶರೀರದ ಸಂರಕ್ಷಣೆ ಅಪಘಾತಗಳನ್ನು ಸಹಿಸುವ ಶಕ್ತಿ ಹೆಚ್ಚಾಗುತ್ತದೆ. ಹೀಗೆ ಹೆಚ್ಚಿನ ಚಟುವಟಿಕೆಗಳು ಕ್ರಿಯಾಶೀಲವಾಗಿ ಎಲ್ಲ ಚಟುವಟಿಕೆಗಳ ಮೇಲೆ ಸಾಮರಸ್ಯವನ್ನು ಪಡೆಯುತ್ತವೆ.

ಪ್ರಾಣಾಯಾಮ

ಮನಸ್ಸು ಒಂದು ವಿಶಿಷ್ಟ ಶಕ್ತಿಯೂ ಹೌದು. ವಿಚಿತ್ರವೂ ಹೌದು. ಅನೇಕ ಸಾರಿ ಕಾಯಿಲೆಗಳು ಭಾವನೆಯಿಂದಾಗಿ ಉಂಟಾಗುವ ಮನಸ್ಸಿನ ಸೆಳೆತ, ಬಿಗಿತ ತಳಮಳ ಇವುಗಳಿಂದಾಗಿ ಹಲವು ವಿವಿಧ ಕಾಯಿಲೆಗಳು ಕ್ರಮೇಣವಾಗಿ ಉದ್ಭವಿಸುತ್ತವೆ. ನಮ್ಮ ಪರಿಸರದಲ್ಲಿ ನಡೆಯುವಂಥ ಯಾವುದೇ ಪ್ರಚಲಿತ ವಿದ್ಯಮಾನಕ್ಕೆ, ನಾವು ಹೊಂದಿಕೊಳ್ಳದಿದ್ದಾಗ ಅದರ ಪ್ರತಿಕ್ರಿಯೆ, ಶರೀರ ಮತ್ತು ಮನಸ್ಸಿನ ಮೇಲೆ ಉಂಟಾಗುತ್ತದೆ. ನಮ್ಮ ಮನಸ್ಸು ಮಾತು ಕೃತಿಗಳಲ್ಲಿ ಸಾಮರಸ್ಯವಿದ್ದಾಗ ಅಂತರಾತ್ಮ ಶುದ್ಧವಾಗಿ ಆತ್ಮವಿಶ್ವಾಸ ಮೂಡುತ್ತದೆ. ಹೀಗೆ ಮನಸ್ಸು ಮತ್ತು ಉಸಿರಾಟದ ಹೊಂದಾಣಿಕೆಯನ್ನು ಪ್ರಾಣಾಯಾಮದ ಮೂಲಕ ಕ್ರಮಬದ್ಧತೆಗೆ ಒಳಪಡಿಸಲಾಗುತ್ತದೆ.

ಪ್ರಾಣ ಎಂದರೆ ಚೈತನ್ಯ ಶಕ್ತಿಯಾಗಿದೆ. ಸ್ಥೂಲವಾಗಿ ಪ್ರಾಣವನ್ನು ಉಸಿರಿನಿಂದ ಗುರುತಿಸುತ್ತೇವೆ. ಪ್ರಾಣ ಎಂದರೆ ಉಸಿರು ಆಯಾಮ ಎಂದರೆ ನಿಯಂತ್ರಿಸು ಎಂದಾಗುತ್ತದೆ. ಪ್ರಾಚೀನ ಮಹರ್ಷಿಗಳು ಪ್ರಾಣವನ್ನು ವಶಕ್ಕೆ ತೆಗೆದುಕೊಳ್ಳಲು ಉಸಿರನ್ನು ಮಾಧ್ಯಮವನ್ನಾಗಿ ಬಳಸಿದ್ದಾರೆ. ಈ ಶರೀರದಲ್ಲಿ ಹರಿಯುವ ಪ್ರಾಣ ಶಕ್ತಿಯ ಮಾರ್ಗಗಳಿಗೆ ನಾಡಿಗಳೆಂದು ಕರೆಯುತ್ತಾರೆ.

ಮನುಷ್ಯನ ದೇಹದಲ್ಲಿ 72 ಸಾವಿರ ನಾಡಿಗಳಿವೆ ಎಂದು ಯೋಗಶಾಸ್ತ್ರ ಉಲ್ಲೇಖಿಸುತ್ತದೆ. ಇಡ-ಪಿಂಗಳ ಸುಷಮ್ನ ಎಂಬ ಮೂರು ನಾಡಿಗಳು ಪ್ರಾಣಾಯಾಮ ಸಾಧನೆಯಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದಿವೆ. ಜನಸಾಮಾನ್ಯರು ಈ ಪ್ರಾಣಾಯಾಮವನ್ನು ಸತತವಾಗಿ ಶಾಸ್ತ್ರಬದ್ಧವಾಗಿ ಸಾಧನೆ ಮಾಡುವುದರಿಂದ ಮನೋದೈಹಿಕ ತೊಂದರೆಗಳೆಲ್ಲವನ್ನು ದೂರ ಮಾಡಲು ಸಾಧ್ಯವಾಗುತ್ತದೆ. ಹಠಯೋಗದಲ್ಲಿ ಎಂಟು ವಿಧವಾದ ಕುಂಭಕ ಸಹಿತ ಪ್ರಾಣಾಯಾಮಗಳನ್ನು ಉಲ್ಲೇಖಿಸಲಾಗಿದೆ. ಅವುಗಳಲ್ಲಿ ನಾಡಿ ಶೋಧನ ಪ್ರಾಣಾಯಾಮವು ಅತ್ಯಂತ ಉಪಯುಕ್ತವಾಗಿದೆ.

ಪ್ರಾಣಾಯಾಮದಲ್ಲಿ ಹಲವಾರು ಪ್ರಕಾರಗಳಿದ್ದರೂ ಅವುಗಳ ಗುರಿ ಒಂದೇ ಆಗಿದೆ. ಜನಸಾಮಾನ್ಯರು ಯೋಗ ಗುರುಗಳ ಮಾರ್ಗದರ್ಶನದಲ್ಲಿ ಶಾಸ್ತ್ರೋಕ್ತವಾಗಿ ನಾಡಿಶೋಧನ ಪ್ರಾಣಾಯಾಮವನ್ನು ಪ್ರತಿನಿತ್ಯ ಸಾಧನೆ ಮಾಡುವುದರಿಂದ ಅನೇಕ ಲಾಭಗಳು ದೊರೆಯುತ್ತವೆ. ಉಸಿರಾಟದ ದೋಷಗಳು ನಿವಾರಣೆಯಾಗಿ ಕ್ರಮಬದ್ಧತೆ ಉಂಟಾಗುತ್ತದೆ. ಉಸಿರಾಟದ ಕ್ರಮ ನಿಧಾನವಾಗಿ ಜೀವಕೋಶಗಳಿಗೆ ಆಮ್ಲಜನಕ ಹೆಚ್ಚಿನ ಪ್ರಮಾಣದಲ್ಲಿ ದೊರೆತು ಅವುಗಳ ಆರೋಗ್ಯ ಹೆಚ್ಚಾಗುತ್ತದೆ. ಮನಸ್ಸಿನ ಚಂಚಲತೆಯನ್ನು ನಿವಾರಿಸಿ ಏಕಾಗ್ರತೆಯನ್ನು ಹೆಚ್ಚಿಸಲು ಪ್ರಾಣಾಯಾಮ ಸಹಾಯಕವಾಗುತ್ತದೆ.

ಪ್ರತ್ಯಾಹಾರ

ಬಂದ ಮತ್ತು ಮುದ್ರೆಗಳಿಂದ ನರ ಮತ್ತು ಸ್ನಾಯುಗಳ ಮೇಲೆ ಹಿಡಿತ, ಪಂಚ ಪ್ರಾಣಗಳ ಸಮಾಗಮ, ಮಿದುಳಿನ ಚಟವಟಿಕೆಗಳಿಗೆ ಕ್ರಿಯಾಶೀಲತೆ ದೊರೆಯುತ್ತವೆ. ಇಂದ್ರೀಯಗಳು ಬಾಹ್ಯ ವಸ್ತುಗಳತ್ತ ಹರಿಯದಂತೆ ತಡೆಹಿಡಿದು ಇಚ್ಛಾಶಕ್ತಿಯನ್ನು ಅಂತರಮುಖವಾಗಿ ಪ್ರವಹಿಸುವಂತೆ ಮಾಡುವುದೇ ಪ್ರತ್ಯಾಹಾರ. ಒಂದು ನಿರ್ದಿಷ್ಟ ವಸ್ತುವಿನಲ್ಲಿ ಪ್ರಯತ್ನದಿಂದ ಮನಸ್ಸನ್ನು ನಿಲ್ಲಿಸುವುದೇ ಧಾರಣ. ಈ ಧಾರಣದಿಂದ ಆತ್ಮ ಸಾಕ್ಷಾತ್ಕಾರ ಉಂಟಾಗುತ್ತದೆ.

ಧ್ಯಾನ-ಸಮಾಧಿ

ಭಾರತೀಯ ಸಂಸ್ಕೃತಿಯಲ್ಲಿ ಧ್ಯಾನದ ಬಳಕೆ ಹಾಸು ಹೊಕ್ಕಾಗಿದೆ. ಹರ್ಬಟಬೆನ್ಸನ್ ಎಂಬ ಪ್ರಖ್ಯಾತ ಮನೋವಿಜ್ಞಾನಿ ಧ್ಯಾನದ ಕುರಿತು ಸಾಕಷ್ಟು ಸಂಶೋಧನೆಗಳನ್ನು ನಡೆಸಿದ್ದಾರೆ. ಪ್ರಪಂಚದ ಹಲವು ಧರ್ಮಗಳಲ್ಲಿ ಧ್ಯಾನದ ಕುರಿತು ಉಲ್ಲೇಖಗಳಿವೆ. ಧ್ಯಾನದಿಂದ ಮೆದುಳಿನಲ್ಲಿ ಮುಖ್ಯವಾದ ಬದಲಾವಣೆ ಉಂಟಾಗುತ್ತದೆ. ಮೆದುಳಿನಲ್ಲಿರುವ ಸಾಧಾರಣ ಅಲೆಗಳು ತಮ್ಮ ಲಕ್ಷಣಗಳನ್ನು ಬದಲಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಮನುಷ್ಯರು ಜಾಗ್ರತಾವಸ್ಥೆಯಲ್ಲಿದ್ದು, ಚಟುವಟಿಕೆಯಲ್ಲಿದ್ದರೆ ಇಇಜಿ ಯಂತ್ರವು ಮೆದುಳಿನ ಅಲೆಯನ್ನು ದಾಖಲು ಮಾಡುತ್ತದೆ. ಇದನ್ನು ಬೀಟಾ ರಿದಮ್ ಎನ್ನುವರು.

ಸಮಾಧಿ ಧ್ಯಾನದ ಮುಂದುವರಿದ ಸ್ಥಿತಿಯಾಗಿದೆ. ಧ್ಯಾನದ ಸ್ಥಿತಿಯಲ್ಲಿಯೇ ಮನಸ್ಸು ಇದ್ದಾಗ ಸಮಾಧಿ ಸ್ಥಿತಿಗೆ ಮನಸ್ಸು ಏರುವುದು ಆಗ ಮನಸ್ಸು ಜಾಗೃತವಾಗಿದ್ದರು ಆಲೋಚಿಸುವ ಆಲೋಚನೆಯ ಜೊತೆಗೆ ಐಕ್ಯವಾಗಿಬಿಡುವುದು. ದೇಹ ಮನಸ್ಸು ಬುದ್ಧಿ ಎಲ್ಲವೂ ಲೀನವಾಗಿ ನಾನು, ನನ್ನದು ಎಂಬ ಭಾವನೆಗಳೇ ಇರುವುದಿಲ್ಲ. ಬುದ್ಧಿ ಶಕ್ತಿಗೆ ನಿಲುಕದ ಶಾಂತಿ ಅನುಭವಕ್ಕೆ ಬರುವುದು. ಈ ಸ್ಥಿತಿಯಿಂದ ಮನಸ್ಸಿನ ಸುಪ್ತಶಕ್ತಿಗಳು ಹೊರಬರುವವು. ನೀರಿನಲ್ಲಿ ಕರಗಿದ ಉಪ್ಪಿನಂತೆ ಮನಸ್ಸು ಆತ್ಮದಲ್ಲಿ ಬೆರೆತು ಒಂದಾಗುವುದೇ ಸಮಾಧಿ. ಸಮಾಧಿಯ ಸ್ಥಿತಿಯಲ್ಲಿ ಯೋಗಿಯ ಮನಸ್ಸು ಪ್ರಾಪಂಚಿಕ ವ್ಯವಹಾರಗಳಿಂದ ಬಿಡುಗಡೆಯನ್ನು ಹೊಂದಬಹುದು.

ಹಗುರವಾದ ಶರೀರ, ಕ್ರಮಬದ್ಧವಾದ ಉಸಿರಾಟ, ಪ್ರಶಾಂತವಾದ ಮನಸ್ಸು, ಭಾವನೆಗಳ ಮೇಲೆ ಹಿಡಿತ, ವಿಶ್ರಾಂತಿ ಭಾವನೆಯಿಂದ ಸಕಲಕರ್ಮಗಳನ್ನು ಮಾಡುವುದು, ಸದಾ ಆನಂದಮಯ ಪ್ರಜ್ಞೆಯಿಂದಿರುವುದು–ಪರಿಪೂರ್ಣ ಆರೋಗ್ಯದ ಈ ಆರು ಅಂಶಗಳು ಯೋಗ ಸಾಧನೆಯಿಂದ ದೊರೆಯುತ್ತವೆ. ಆದ್ದರಿಂದ ಯೋಗವು ಒಂದು ಸಮಗ್ರ ಆರೋಗ್ಯ ಪದ್ಧತಿ ಆಗಿದೆ.

ವೇಗದಿಂದ ಅತಿ ವೇಗದತ್ತ ಸಾಗುತ್ತಿರುವ ಇಂದಿನ ಸಮಾಜದಲ್ಲಿ ಅಷ್ಟಾಂಗ ಯೋಗವನ್ನು ಅಳವಡಿಸಿಕೊಂಡು ಸುಖ, ಶಾಂತಿ, ನೆಮ್ಮದಿ ಮತ್ತು ಸಂತೃಪ್ತಿಯ ಜೀವನವನ್ನು ನಡೆಸಿ ತನ್ಮೂಲಕ ಇಡೀ ಸಮಾಜ, ದೇಶ, ವಿಶ್ವವನ್ನು ನಿಜವಾದ ಆರೋಗ್ಯದತ್ತ ಕೊಂಡಯ್ಯಬಹುದು.

– ಡಾ.ಪ್ರಕಾಶ ಪಿ.ಪವಾಡಶೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT