ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನವೇ ವರಯೋಗ

Last Updated 21 ಜೂನ್ 2019, 14:44 IST
ಅಕ್ಷರ ಗಾತ್ರ

ಚತುರ್ವಿಧ ಪುರುಷಾರ್ಥಗಳ ಸಿದ್ಧಿಗೆ ಉತ್ತಮ ಆರೋಗ್ಯವೇ ಮೂಲ - ಎನ್ನುತ್ತದೆ ಚರಕಸಂಹಿತೆ. ಅಂತಹ ಸ್ವಾಸ್ಥ್ಯ ಸಾಧನೆಗೆ ಯೋಗವೇ ಸೋಪಾನ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ - ಯೋಗದ ಈ ಅಷ್ಟಾಂಗಗಳು ನಮ್ಮ ತನು-ಮನ, ಚೈತನ್ಯದ ಸತ್ತ್ವವನ್ನು ಹೆಚ್ಚಿಸುವ ಸಾಧನಗಳು ಮಾತ್ರವಲ್ಲ, ಜೀವನ್ಮುಕ್ತಿಗೆ ಇರುವ ರಾಜಮಾರ್ಗವೂ ಹೌದು! ಲೌಕಿಕ ಸುಖ - ಅಧ್ಯಾತ್ಮಿಕತೆಯ ಆನಂದ ಎರಡಕ್ಕೂ ಯೋಗವು ಹೆಬ್ಬಾಗಿಲು.

ಸಂಸ್ಕೃತದ 'ಯುಜ್ ' ಧಾತುವಿನಿಂದಾದ 'ಯೋಗ'ದ ಪದಶಃ ಅರ್ಥ 'ಒಂದುಗೂಡಿಸುವುದು' ಎಂದು. ಜೀವಾತ್ಮನನ್ನು ದಿವ್ಯಾತ್ಮನಲ್ಲಿ ಲೀನವಾಗಿಸುವುದೇ ಅದರ ಪರಮೋದ್ದೇಶ.

ದೇಹೋ ದೇವಾಲಯಃ ಪ್ರೋಕ್ತೋ ಜೀವೋ ದೇವಃ ಸನಾತನಃ l

ತ್ಯಜೇದಜ್ಞಾನ ನಿರ್ಮಾಲ್ಯಂ ಸೋಹಂ ಭಾವೇನ
ಪೂಜಯೇತ್ ll

- ಎಂಬ ಮಾನಸಪೂಜೆಯ ನಿರ್ದೇಶವನ್ನು ಪಾಲಿಸುವುದಾದರೆ ಅಲ್ಲಿಯ ಪೂಜಾವಿಧಿಯು ಯೋಗವೇ ಆಗಿದೆ. ದೇಹ ದೇವಾಲಯವು ಸದೃಢವೂ, ಬುದ್ಧಿಯು ಅಜ್ಞಾನ ರಹಿತವೂ ಆಗಿ, ಆತ್ಮನಲ್ಲಿ ಪರಮಾತ್ಮನನ್ನು ಕಂಡರಿಯಬಲ್ಲಷ್ಟು ಮನಸ್ಸು ತಿಳಿಯಾಗಲು ಯೋಗಾಭ್ಯಾಸ ಸಹಕಾರಿ.

ಯೋಗಪ್ರವರ್ತಕ ಪತಂಜಲಿ ಮಹರ್ಷಿ 'ಯೋಗಶ್ಚಿತ್ತವೃತ್ತಿನಿರೋಧಃ' - ಮನಸ್ಸಿನ ಚಾಂಚಲ್ಯವನ್ನು ನಿಗ್ರಹಿಸಿ ಅದನ್ನು ಆತ್ಮಸಾಕ್ಷಾತ್ಕಾರದತ್ತ ಕೇಂದ್ರೀಕರಿಸುವುದೇ ಯೋಗ ಎಂದು ವ್ಯಾಖ್ಯಾನಿಸಿದ್ದಾರೆ. ಪಾತಂಜಲ ಯೋಗಸೂತ್ರದಲ್ಲಿ ಮಾತ್ರವಲ್ಲದೇ ವೇದ, ಉಪನಿಷತ್ತುಗಳು, ಭಗವದ್ಗೀತೆ, ಚರಕ-ಸುಶ್ರುತ ಸಂಹಿತೆಗಳು, ಸ್ಮೃತಿ, ಮಹಾಕಾವ್ಯಗಳು - ಹೀಗೆ ಅನೇಕಾನೇಕ ಕೃತಿರತ್ನಗಳಲ್ಲಿ ಯೋಗವು ವಿವರವಾಗಿ ಹಲವು ಆಯಾಮಗಳಿಂದ ಚರ್ಚಿಸಲ್ಪಟ್ಟಿದೆ.

ಮೋಕ್ಷಪ್ರಾಪ್ತಿಗಿರುವ ಕರ್ಮ, ಭಕ್ತಿ, ಜ್ಞಾನ, ಧ್ಯಾನ (ರಾಜಯೋಗ) - ಎಲ್ಲ ಮಾರ್ಗಗಳಿಗೂ "ಯೋಗ' ಎಂದೇ ಹೆಸರು. ಭಗವದ್ಗೀತೆಯ ಅಷ್ಟೂ ಅಧ್ಯಾಯಗಳನ್ನೂ ‘ಯೋಗ’ಗಳೆಂದೇ ಕರೆದಿರುವುದು ಆ ಶಬ್ದದ ಅರ್ಥವೈಶಾಲ್ಯಕ್ಕೊಂದು ನಿದರ್ಶನ. ಸಾಂಖ್ಯಯೋಗದ 50ನೇ ಶ್ಲೋಕದಲ್ಲಿ ಗೀತಾಚಾರ್ಯನು ಹೇಳಿರುವಂತೆ:

ಬುದ್ಧಿಯುಕ್ತೋ ಜಹಾತೀಹ ಉಭೇ ಸುಕೃತ ದುಷ್ಕೃತೇ l
ತಸ್ಮಾದ್ಯೋಗಾಯ ಯುಜ್ಯಸ್ವ ಯೋಗಃ ಕರ್ಮಸು ಕೌಶಲಮ್ ll

‘ಬುದ್ಧಿವಂತನಾದವನು ಯೋಗದಿಂದಲೇ ಒಳಿತು ಕೆಡುಕುಗಳನ್ನು ವಿವೇಚಿಸುವ, ಅವುಗಳ ಪರಿಣಾಮವನ್ನು ನಿರ್ವಹಿಸುವ ಶಕ್ತಿಯನ್ನು ಹೊಂದುತ್ತಾನೆ. ಆದ್ದರಿಂದ ಯೋಗವನ್ನು ಅಭ್ಯಸಿಸಬೇಕು. ಸಕಲ ಕಾರ್ಯಗಳನ್ನೂ ಧರ್ಮಯುತವಾಗಿ, ಅಚ್ಚುಕಟ್ಟಾಗಿ ಮಾಡಬಲ್ಲ ಕುಶಲತೆಯೇ ಯೋಗ.’

ಯೋಗವೆನ್ನುವುದು ದೈನಂದಿನ ಕೆಲವು ನಿಮಿಷಗಳ ದೇಹದಂಡನೆಯಷ್ಟೇ ಆಗದೆ ನಮ್ಮ ಪ್ರತಿ ಉಸಿರಿನಲ್ಲಿ (ಪ್ರಾಣಾಯಾಮ), ನಿದ್ರೆ-ಎಚ್ಚರಗಳಲ್ಲಿ, ಸಣ್ಣ-ಪುಟ್ಟ-ದೊಡ್ಡ ಯಾವುದೇ ಕೆಲಸದಲ್ಲೂ ಹಾಸುಹೊಕ್ಕಾಗಲಷ್ಟೇ, ಜೀವನಮಾರ್ಗವೇ ಆದಾಗಲಷ್ಟೇ ಅದರ ಸಾರ್ಥಕ್ಯ ಮತ್ತು ತತ್ಪರಿಣಾಮವಾಗಿ ಆನಂದಾವಸ್ಥೆ ಸಾಧ್ಯವಾಗುತ್ತದೆ.

ಆಲೋಕ್ಯ ಸರ್ವಶಾಸ್ತ್ರಾಣಿ ವಿಚಾರ್ಯ ಚ ಪುನಃ ಪುನಃ l

ಇದಮೇಕಂ ಸುನಿಷ್ಪನ್ನಂ ಯೋಗಶಾಸ್ತ್ರಂ ಪರಮ್ಮತಮ್ ll

‘ಸಕಲ ಶಾಸ್ತ್ರಗಳನ್ನೂ ಅವಲೋಕಿಸಿ ಮತ್ತೆ ಮತ್ತೆ ವಿಚಾರ ಮಾಡಿದರೂ ಕೊನೆಗೆ ಯೋಗಶಾಸ್ತ್ರವೇ ಅತ್ಯುನ್ನತವಾದುದೆಂದು ಸುಸ್ಪಷ್ಟವಾಗುತ್ತದೆ’ ಎಂಬುದಾಗಿ ಯೋಗದ ಶ್ರೇಷ್ಠತೆಯನ್ನು ಆದಿಯೋಗಿಯಾದ ಮಹಾದೇವನೇ ‘ಶಿವಸಂಹಿತೆ’ಯಲ್ಲಿ ಎತ್ತಿಹಿಡಿದಿದ್ದಾನೆ. ಶಿವ–ಪಾರ್ವತಿಯರ ನಾಟ್ಯ, ತಪಸ್ಸು, ಧ್ಯಾನ, ಸಮಾಧಿ, ಅರ್ಧನಾರೀಶ್ವರತತ್ತ್ವ – ಪ್ರತಿಯೊಂದೂ ಯೋಗದ ವಿವಿಧ ವ್ಯಾಖ್ಯಾನಗಳೇ ಆಗಿವೆ ಎಂದರೆ ತಪ್ಪಾಗಲಾರದು.

ಯೋಗಗುರು ಬಿಕೆಎಸ್ ಅಯ್ಯಂಗಾರರು ಯೋಗವನ್ನು ಸಂಗೀತಕ್ಕೆ ಹೋಲಿಸುತ್ತಾ, ಅದು ದೇಹದ ತಾಳ, ಮನಸ್ಸಿನ ರಾಗ, ಆತ್ಮದ ಶ್ರುತಿ ಎಲ್ಲವನ್ನು ಸಮರಸಗೊಳಿಸಿ ಜೀವನವನ್ನು ನಾದಮಯವಾಗಿಸುತ್ತದೆ ಎಂದಿರುವುದು ಆಪ್ಯಾಯಮಾನವಾಗಿದೆ. (Yoga is like music: the rhythm of the body, the melody of the mind and the harmony of the soul create the symphony of life.)

ರಾಜಯೋಗದ ಮಾರ್ಗ ಹಿತಮಿತಿಗಳಭ್ಯಾಸ

ನೈಜಕನುವಾದ ಶೋಧನೆ ಪರಿಷ್ಕಾರ l

ಯೋಜಿಸಿಹುದಲ್ಲಿ ಶುಚಿ ಭೋಗದೊಡನೆ ವಿರಾಗ

ಸಾಜವರಿತಾ ಶಿಕ್ಷೆ - ಮರುಳಮುನಿಯ ll

ರಾಜಯೋಗದ ಮಾರ್ಗದಲ್ಲಿ ಸಾಗುತ್ತಾ ಯೋಗ್ಯರಾಗಿ, ಭೋಗ್ಯರಾಗಿ, ಆರೋಗ್ಯಭಾಗ್ಯವಂತರಾಗಿ, ವೈರಾಗ್ಯವನ್ನೂ ಸಿದ್ಧಿಸಿಕೊಳ್ಳಬಹುದು. ಪರಮಸತ್ಯದ ಅನ್ವೇಷಣೆ, ಅನುಸಂಧಾನ ಎಲ್ಲವನ್ನೂ ಒಳಗೊಂಡಿರುವ ಸಹಜಶಿಕ್ಷಣವಾದ ಯೋಗವನ್ನು ಎಲ್ಲರೂ ಕಲಿಯಬೇಕೆಂಬ ಡಿವಿಜಿಯವರ ಸೂಚನೆ ನಮಗೆ ಪ್ರೇರಣೆ ನೀಡಲಿ, ಜೀವನವೇ ವರಯೋಗವಾಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT