ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನ್ನು ನೋವು ನಿವಾರಕ ಸುಪ್ತಭೇಕಾಸನ

ಯೋಗಾ ಯೋಗ
Last Updated 28 ಜುಲೈ 2019, 19:45 IST
ಅಕ್ಷರ ಗಾತ್ರ

ಬೆನ್ನುಭಾಗ, ಮಂಡಿಗಳು, ತೊಡೆ, ಕಾಲ್ಗಿಣ್ಣು, ಸೊಂಟ ಮತ್ತು ಕುತ್ತಿಗೆ ಭಾಗಗಳು ಉತ್ತಮ ಆರೋಗ್ಯ ಹೊಂದಲು ಸಂಪೂರ್ಣ ಪ್ರಮಾಣದಲ್ಲಿ ರಕ್ತಪರಿಚಲನೆ ಅಗತ್ಯವಿದೆ. ಅದಕ್ಕೆ ಸೂಪ್ತ ಬೇಕಾಸನ ನೆರವಾಗುತ್ತದೆ.

ಸುಪ್ತ ಎಂದರೆ ಮಲಗಿದ ಅಥವಾ ಓರೆಯಾಗಿರಿಸಿದ ಎಂದರ್ಥ. ಭೇಕ ಎಂದರೆ ಕಪ್ಪೆ ಅಥವಾ ಮಂಡೂಕ. ಭೇಕಾಸನದ ತಲೆಕೆಳಗಾದ ನಿಲುವು ಇದಾಗಿದೆ. ವೀರಾಸನ ಹಾಕಿ, ಬೆನ್ನು, ನೆತ್ತಿಯನ್ನು ನೆಲಕ್ಕೊರಗಿಸಿಟ್ಟು, ಎದೆಯನ್ನು ಹಿಗ್ಗಿಸಿ ಅಭ್ಯಾಸ ನಡೆಯುತ್ತದೆ. ಆದ್ದರಿಂದ, ಇದಕ್ಕೆ ಸುಪ್ತಭೇಕಾಸನ ಎಂದು ಹೆಸರಿಸಲಾಗಿದೆ.

ಅಭ್ಯಾಸಕ್ರಮ

ಕಾಲುಗಳನ್ನು ಮಡಿಚಿ, ಪಾದಗಳು ತೊಡೆಯ ಪಕ್ಕ ಬರುವಂತಿರಿಸಿ ವೀರಾಸನದಲ್ಲಿ ಕುಳಿತುಕೊಳ್ಳಿ. ಕೈಗಳ ನೆರವು ಪಡೆದು ಬೆನ್ನನ್ನು ನೆಲಕ್ಕೊರಗಿಸಿ ಹಿಂದಕ್ಕೆ ಮಲಗಿ. ಕೈಗಳನ್ನು ಪಾದಗಳ ಕೆಳಗೆ ಮೇಲ್ಮೊಗವಾಗಿ ಸೇರಿಸಿ, ಪಾದಗಳನ್ನು ಹಿಡಿದು ಮೇಲಕ್ಕೆತ್ತುತ್ತಾ, ಮೊಳಕೈಗಳನ್ನು ನೆಲಕ್ಕೂರಿಡಿ. ತೊಡೆ, ಪೃಷ್ಠ ಹಾಗೂ ಬೆನ್ನುಭಾಗವನ್ನು ಮೇಲಕ್ಕೆ ಹಿಗ್ಗಿಸಿ. ಬಳಿಕ ನೆತ್ತಿಯನ್ನು ನೆಲಕ್ಕೂರಿಡಿ.

ಇಡೀ ದೇಹವು ಮಂಡಿಗಳು, ಮೊಳಕೈಗಳು ಹಾಗೂ ನೆತ್ತಿಯ ಮೇಲೆ ನೆಲೆಸಿರುತ್ತದೆ. ದೇಹದ ಸಮತೋಲನ ಕಾಯ್ದು, ಅಂತಿಮ ಸ್ಥಿತಿಯಲ್ಲಿ ಸರಳ ಉಸಿರಾಟ ನಡೆಸುತ್ತಾ 15ರಿಂದ 20 ಸೆಕೆಂಡು ನೆಲೆಸಿ.

ಅವರೋಹಣ ಮಾಡುವಾಗ, ಮೊದಲು ತಲೆಯನ್ನು ನಿಧಾನವಾಗಿ ಬಿಡಿಸಿ ಹಿಂಬದಿಗೆ ಚಾಚಿ. ಕಾಲುಗಳನ್ನು ಕೆಳಕ್ಕೆ ತರುತ್ತಾ ದೇಹವನ್ನು ನೆಲಕ್ಕೊರಗಿಸಿಟ್ಟು ವಿಶ್ರಮಿಸಿ.

ಫಲಗಳು

* ಬೆನ್ನಿನ ನರಗಳು ಮತ್ತು ಸ್ನಾಯುಗಳನ್ನು ಸೆಳೆದಿಟ್ಟು ಅಭ್ಯಾಸ ನಡೆಯುವುದರಿಂದ ಬೆನ್ನುನೋವು ನಿವಾರಣೆಗೆ ಹೆಚ್ಚು ಪ್ರಯೋಜನಕಾರಿ.

* ಶ್ವಾಸಕೋಶಗಳು ಉತ್ತಮವಾಗಿ ಹಿಗ್ಗುತ್ತವೆ.

* ಬೆನ್ನು, ಮಂಡಿ, ತೊಡೆ, ಕಾಲ್ಗಿಣ್ಣು, ಸೊಂಟ ಹಾಗೂ ಕುತ್ತಿಗೆ ಭಾಗಕ್ಕೆ ಸರಿಯಾದ ರಕ್ತಪರಿಚಲನೆ ಉಂಟಾಗಲು ನೆರವಾಗುತ್ತದೆ.

* ಮಂಡಿಗಳ ಕೀಲುಗಳಲ್ಲಿನ ಸ್ಥಾನಪಲ್ಲಟದ ತೊಂದರೆ ನಿವಾರಿಸುತ್ತದೆ.

* ಚಪ್ಪಟೆ ಅಂಗಾಲಿನ ನ್ಯೂನತೆ ಸರಿಪಡಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT