ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡವರಿಗೆ ಹೋಲಿಸಿದರೆ ಚಿಕ್ಕಮಕ್ಕಳಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚು!

ಅಮೆರಿಕದ ಮಕ್ಕಳ ಆಸ್ಪತ್ರೆಯ ತಜ್ಞರ ಅಧ್ಯಯನ
Last Updated 31 ಜುಲೈ 2020, 8:09 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ವಯಸ್ಕರು ಮತ್ತು ದೊಡ್ಡವರಿಗೆ ಹೋಲಿಸಿದರೆ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಮಕ್ಕಳಿಂದ ಸೋಂಕು ಹರಡುವ ಸಾಧ್ಯತೆ ಕುರಿತು ಹೇಳಿರುವ ಈ ಅಧ್ಯಯನ,ಕೊರೊನಾ ಸೋಂಕು ಹೆಚ್ಚಾಗಿರುವ ರಾಷ್ಟ್ರಗಳಲ್ಲಿಶಾಲೆಗಳು ಮತ್ತು ಡೇಕೇರ್‌ಗಳನ್ನು ತೆರೆಯುವ ಬಗ್ಗೆಯೂ ಆತಂಕ ವ್ಯಕ್ತಪಡಿಸಿದೆ.

ಜೆಎಎಂಎ ಪಿಡಿಯಾಟ್ರಿಕ್ಸ್‌ ಎಂಬ ಮ್ಯಾಗಜಿನ್‌ನಲ್ಲಿ ಪ್ರಕಟವಾಗಿರುವ ಈ ಅಧ್ಯಯನ ವರದಿಯ ಪ್ರಕಾರ ಕೊರೊನಾ ಸೋಂಕಿನ ಸೌಮ್ಯ ಮತ್ತು ಸಾಧಾರಣ ಲಕ್ಷಣಗಳಿರುವ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೂಗಿನಲ್ಲಿನ ದ್ರವದ ಮಾದರಿಯಲ್ಲಿರುವ ಕೋವಿಡ್‌ ವೈರಸ್‌ನಲ್ಲಿ ಜೈವಿಕ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ.

ಅಮೆರಿಕದ ಆನ್‌ ಅಂಡ್ ರಾಬರ್ಟ್‌ ಎಚ್‌. ಲ್ಯೂರೆ ಮಕ್ಕಳ ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ತಜ್ಞ ಹೀಲ್ಡ್‌ ಸಾರ್ಜೆಂಟ್ ಈ ಅಧ್ಯಯನ ನಡೆಸಿದ್ದಾರೆ. ಆ ಪ್ರಕಾರ, ‘ದೊಡ್ಡ ಮಕ್ಕಳು ಮತ್ತು ವಯಸ್ಕರಿಗೆ ಹೋಲಿಸಿದರೆ ಸೋಂಕಿನ ಸೌಮ್ಯ ಲಕ್ಷಣಗಳಿರುವ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೂಗಿನ ದ್ರವದ ಮಾದರಿಯಲ್ಲಿ ಸೋಂಕು ಹರಡುವ ‘ಸಾರ್ಸ್‌–ಕೋವ್‌–2 ವೈರಲ್‌ – ಆರ್‌ಎನ್‌ಎ‘ ಜೈವಿಕ ಅಂಶ‌ ಹೆಚ್ಚಿರುತ್ತದೆ.ಇದು ಬೇಗ ಸೋಂಕು ಹರಡಲು ಕಾರಣವಾಗುತ್ತದೆ. ಹೀಗಾಗಿ ವಯಸ್ಕರಿಗೆ ಹೋಲಿಸಿದರೆ, ಸೌಮ್ಯ ಲಕ್ಷಣಗಳಿರುವ ಚಿಕ್ಕಮಕ್ಕಳಲ್ಲಿ ಸೋಂಕು ಹರಡುವ ಪ್ರಮಾಣ ಹೆಚ್ಚು.

ಈ ಅಧ್ಯಯನದಲ್ಲಿ ಒಂದು ವಾರದಿಂದ ಸೋಂಕು ಲಕ್ಷಣ ಕಾಣಿಸಿಕೊಂಡಿರುವ 145 ವಿವಿಧ ವಯೋಮಾನದ ವ್ಯಕ್ತಿಗಳನ್ನು ಮೂರು ಗುಂಪುಗಳಾಗಿ ಬಳಸಿಕೊಳ್ಳಲಾಗಿತ್ತು. ಅದರಲ್ಲಿ ಐದು ವರ್ಷಕ್ಕಿಂತ ಚಿಕ್ಕವರು, 5 ರಿಂದ 17 ವಯಸ್ಸಿನವರು ಹಾಗೂ 18 ರಿಂದ 65 ವರ್ಷಗಳ ಒಳಗಿನ ವ್ಯಕ್ತಿಗಳನ್ನು ಅಧ್ಯಯನದಲ್ಲಿ ಬಳಸಿಕೊಳ್ಳಲಾಗಿದೆ.

‘ನಮ್ಮ ಅಧ್ಯಯನದ ಉದ್ದೇಶ, ಕಿರಿಯ ಮಕ್ಕಳಿಂದ ಕೋವಿಡ್‌ ಹರಡುತ್ತದೆ ಎಂದು ಸಾಬೀತಪಡಿಸುವುದಲ್ಲ, ಹೀಗೊಂದು ಸಾಧ್ಯತೆ ಇದೆ ಎಂದು ಹೇಳುವ ಪ್ರಯತ್ನವಷ್ಟೇ‘ ಎಂದು ಅಧ್ಯಯನದ ರೂವಾರಿ ಹೀಲ್ಡ್‌ ಸಾರ್ಜೆಂಟ್ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT