ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಷೇಮ–ಕುಶಲ: ಕಂಪ್ಯೂಟರ್‌ಗಳೂ ಕಣ್ಣುಗಳೂ....

– ಡಾ. ಲಕ್ಷ್ಮಿ ಕೆ. ಎಸ್‌. ಮೂರ್ತಿ
Published 5 ಆಗಸ್ಟ್ 2024, 23:01 IST
Last Updated 5 ಆಗಸ್ಟ್ 2024, 23:01 IST
ಅಕ್ಷರ ಗಾತ್ರ

ಈಗ ಕಂಪ್ಯೂಟರ್‌ನ ಬಳಕೆ ಮನೆಮಾತಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಕಂಪ್ಯೂಟರ್‌ಗಳು ಅನಿವಾರ್ಯ ಎನಿಸಿವೆ. ಮಕ್ಕಳಿಂದ ಮೊದಲುಗೊಂಡು ವೃದ್ಧರ ತನಕ ಎಲ್ಲರೂ ಇಂದು ಕಂಪ್ಯೂಟರನ್ನು ಆಶ್ರಯಿಸಿದ್ದಾರೆ. ಹೀಗಾಗಿ ಸಹಜವಾಗಿಯೇ ನಮ್ಮೆಲ್ಲರ ಕಣ್ಣುಗಳ ಮೇಲೆ ಕಂಪ್ಯೂಟರ್‌ನ ಪ್ರಭಾವ ಹೆಚ್ಚಾಗಿದೆ; ಅದರೊಂದಿಗೆ ತೊಂದರೆಗಳೂ ಸಹಜವಾಗಿಯೇ ಎದುರಾಗುತ್ತಿವೆ. ಅವುಗಳಲ್ಲಿ ಮುಖ್ಯವಾದವು:

1. ಕಣ್ಣಿನ ಆಯಾಸ (eye strain)

2. ಕಡಿಮೆ ಕಣ್ಣೀರಂಶ (Dry Eye disease)

ಇವೆರಡನ್ನೂ ಸೇರಿಸಿ ನೇತ್ರತಜ್ಞರು ‘ಕಂಪ್ಯೂಟರ್ ವಿಷನ್ಸ್ ಸಿಂಡ್ರೋಮ್’ ಎಂದು ನಾಮಕರಣ ಮಾಡಿದ್ದಾರೆ.

ಕಂಪ್ಯೂಟರ್ ಉಪಯೋಗಿಸುವವರಲ್ಲಿ ಯಾಕೆ ಇದು ಆಗುತ್ತಿದೆ ಎಂದು ತಿಳಿಯಲು ಸಾವಿರಾರು ವರ್ಷಗಳ ಮಾನವನ ವಿಕಾಸದ ಬಗ್ಗೆ ಮಾಹಿತಿ ಅವಶ್ಯಕ. ಮೊದಲು ಮಾನವ ಬೇಟೆಗಾರನಾಗಿದ್ದರಿಂದ ಅವನು ದೂರ ಹೆಚ್ಚು ನೋಡುತ್ತಿದ್ದ. ಆದ್ದರಿಂದ ದೂರ ನೋಡಿದರೆ ಕಣ್ಣಿನ ಸ್ನಾಯುಗಳಿಗೆ ವಿಶ್ರಾಂತಿ ನೀಡಿದಂತೆ, ಸಮೀಪ ನೋಡಿದಲ್ಲಿ ಸ್ನಾಯುಗಳನ್ನು ಬಿಗಿಯಾಗಿ ಎಳೆದಂತೆ ಆಗುವುದು ಮಾನವನ ಕಣ್ಣಿನ ಸ್ವಭಾವ. ಆದರೆ ಇಂದಿನ ನಮ್ಮ ಜೀವನವು ಸಮೀಪವಾದವುಗಳನ್ನು ನೋಡುವುದರಲ್ಲಿಯೇ ಕಳೆಯುತ್ತದೆ. ಓದುವುದು, ಬರೆಯುವುದು, ಕೈಗಾರಿಕೆಗಳಲ್ಲಿ ಕೆಲಸ, ಮೊಬೈಲ್ ಫೋನ್, ಕಂಪ್ಯೂಟರ್ – ಹೀಗೆ ಬಹುಪಾಲು ನಮ್ಮ ಜೀವನವಿಧಾನವು ಸಮೀಪವಾದುದನ್ನು ನೋಡುವುದನ್ನೇ ಅವಲಂಬಿಸಿದೆ. ಹೀಗಾಗಿ ಇದು ಕಣ್ಣಿನ ಆಯಾಸಕ್ಕೆ ಕಾರಣವಾಗುತ್ತಿದೆ. ಅದರಲ್ಲೂ ಕಂಪ್ಯೂಟರನ್ನು ಹೆಚ್ಚು ಉಪಯೋಗಿಸುವವರಲ್ಲಿ ಇದು ಹೆಚ್ಚಾಗ ಕಾಣಿಸಿಕೊಳ್ಳುತ್ತದೆ. ಆಯಾಸದ ಜೊತೆಗೆ, ತಲೆನೋವು, ಕಣ್ಣುನೋವು ಮುಂತಾದ ತೊಂದರೆಗಳನ್ನೂ ಕಾಣಬಹುದು.

ಇದಕ್ಕೊಂದು ಸುಲಭವಾದ ಪರಿಹಾರವಿದೆ. ನಮ್ಮ ಜೀವನಶೈಲಿಯನ್ನು ಸ್ವಲ್ಪ ಬದಲಾಯಿಸಬೇಕು. ಇದನ್ನು ‘20-20-20 ರೂಲ್’ ಎಂದು ಕರೆಯುತ್ತೇವೆ. ಕಂಪ್ಯೂಟರ್ ನೋಡುವ ಸಮಯದಲ್ಲಿ ಪ್ರತಿ 20 ನಿಮಿಷಕ್ಕೊಮ್ಮೆ 20 ಸೆಕೆಂಡುಗಳ ಕಾಲ, 20 ಮೀಟರ್‌ಗಳಿಗಿಂತ ದೂರವಿರುವ ವಸ್ತುವನ್ನು (ಉದಾಹರಣೆಗೆ, ದೂರದ ಪಕ್ಷಿ, ಮೋಡ, ನಕ್ಷತ್ರ, ವಾಹನ ಮುಂತಾದವುಗಳನ್ನು) ನೋಡಿ, ನಂತರ ಕಂಪ್ಯೂಟರ್‌ನ ಪರದೆಯ ಕಡೆಗೆ ಕಣ್ಣಿನ ದೃಷ್ಟಿಯನ್ನು ಹಾಯಿಸುವುದು. ಹೀಗೆ ಮಾಡುವುದರಿಂದ ಕಣ್ಣುಗಳ ಸ್ನಾಯುಗಳು ‘ಸಡಿಲ‘ಗೊಂಡು (ರಿಲ್ಯಾಕ್ಸ್‌) ಕಣ್ಣುಗಳ ಆಯಾಸ ಕಡಿಮೆಯಾಗುತ್ತದೆ.

ಈಗ ಎರಡನೇ ತೊಂದರೆ ಎಂದರೆ ಕಣ್ಣೀರಿನ ಅಂಶ ಕಡಿಮೆಯಾಗುವುದು. ಕಣ್ಣಿನ ರೆಪ್ಪೆಯ ಕೆಳಗೆ ಹಾಗೂ ಕರಿಗುಡ್ಡೆಯ ಮೇಲೆ ಕಣ್ಣೀರಿನ ಸುರಕ್ಷಾ ಕವಚವಿರುತ್ತದೆ. ಈ ಕಣ್ಣೀರಿನಂಶ ಕಡಿಮೆಯಾದಲ್ಲಿ ಅದನ್ನು ‘ಡ್ರೈ ಐಸ್’ ಎಂದು ಕರೆಯುತ್ತೇವೆ. ಸಾಮಾನ್ಯವಾಗಿ ಒಂದು ನಿಮಿಷಕ್ಕೆ ನಾವು ಸುಮಾರು 15 ಬಾರಿ ಕಣ್ಣು ಮಿಟುಕಿಸುಕತ್ತೇವೆ. ಹೆಚ್ಚು ಓದುವವರಲ್ಲಿ ಇದು ಸಹಜವಾಗಿ ಒಂದು ನಿಮಿಷಕ್ಕೆ ಒಂದೇ ಬಾರಿ ಮಿಟುಕಿಸುವಂಥತಾಗುತ್ತದೆ. ಹೆಚ್ಚು ಕಂಪ್ಯೂಟರನ್ನು ಬಳಸುವವರಲ್ಲಿ ಈ ಕಣ್ಣು ಮಿಟುಕಿಸುವುದು ಎರಡು ನಿಮಿಷಕ್ಕೆ ಒಂದು ಬಾರಿಯಂತೆ ಬಹಳ ಕಡಿಮೆ ಆಗುತ್ತದೆ. ಇದರ ಜೊತೆಗೆ ಕಂಪ್ಯೂಟರ್‌ ಹೊರಸೂಸುವ ಶಾಖದಿಂದ ಕಣ್ಣೀರು ಆವಿಯಾಗಿ, ನೀರಿನ ಅಂಶ ಕಣ್ಣುಗಳಲ್ಲಿ ಕಡಿಮೆಯಾಗುತ್ತದೆ. ಈ ಕಾರಣದಿಂದಲೇ ಕಣ್ಣು ಕೆಂಪಾಗುವುದು, ಕಣ್ಣುರಿ ಮತ್ತಿತರ ತೊಂದರೆಗಳು ಕಂಡುಬರುವುದು. ಇದರ ಪರಿಹಾರವೂ ಸುಲಭ. ನಿಮಿಷಕ್ಕೆ ಸುಮಾರು ಐದರಿಂದ ಆರು ಬಾರಿ ಪೂರ್ಣವಾಗಿ ಕಣ್ಣನ್ನು ಮಿಟುಕಿಸುವ ಪ್ರಯತ್ನ ಮಾಡಬೇಕು; ಇದನ್ನು ಒಂದು ಅಭ್ಯಾಸವಾಗಿಯೇ ರೂಢಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಕಣ್ಣೀರು ಆವಿಯಾಗುವುದು ಕಡಿಮೆಯಾಗುತ್ತದೆ; ಕಣ್ಣೀರಿನ ಕವಚ ಕರಿಗುಡ್ಡೆಯ ಮೇಲೆ ಸರಿಯಾಗಿ  ಹರಡುತ್ತದೆ.

ಕೆಲವು ಸಲಹೆಗಳು:

1. ಕಂಪ್ಯೂಟರ್‌ನ ಹೊಳಪು ಅತಿ ಹೆಚ್ಚು ಇರದಂತೆ, ಅತಿ ಕಡಿಮೆಯೂ ಇರದಂತೆ ನೋಡಿಕೊಳ್ಳಿ.

2. ನಿಮಗೆ ಕಣ್ಣಿನ ‘ಪವರ್’ ಇದ್ದಲ್ಲಿ, ನೀವು ಕಂಪ್ಯೂಟರನ್ನು ಉಪಯೋಗಿಸುವಾಗ ಕನ್ನಡಕದ ಉಪಯೋಗವನ್ನು ಮಾಡದಿದ್ದರೆ ಕಣ್ಣಿನ ಮೇಲಿನ ಒತ್ತಡ ಹೆಚ್ಚಾಗುತ್ತದೆ. ಆದ್ದರಿಂದ ಸಮೀಪದೃಷ್ಟಿ ಇರಲಿ, ದೂರದೃಷ್ಟಿ ಇರಲಿ, ಕಂಪ್ಯೂಟರ್ ಬಳಸುವ ಸಮಯದಲ್ಲಿ ಖಂಡಿತವಾಗಿಯೂ ಕನ್ನಡಕವನ್ನು ಉಪಯೋಗಿಸಬೇಕು.

3. ‘ನೀಲಿ ಕವಚದ ಕನ್ನಡಕ’ಗಳನ್ನು (blue filter glasses) ಕಂಪ್ಯೂಟರನ್ನು ಬಳಸುವವರು ಉಪಯೋಗಿಸಬೇಕೆಂಬ ಜಾಹೀರಾತುಗಳು ಬರುತ್ತಿವೆ. ಆದರೆ ಈ ತರಹದ ಕನ್ನಡಕಗಳಿಂದ ಯಾವುದೇ ಉಪಯೋಗವಿಲ್ಲವೆಂದು ವೈಜ್ಞಾನಿಕ ಪ್ರಯೋಗಗಳು ಸಾಬೀತುಮಾಡಿವೆ. ಅದಲ್ಲದೆ ಚಿಕ್ಕ ಮಕ್ಕಳಲ್ಲಿ ಈ ತರಹದ ಕನ್ನಡಕದ ಬಳಕೆಯಿಂದ ‘ಸಮೀಪದೃಷ್ಟಿ’(myopia) ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ ಇದರ ಬಳಕೆಯನ್ನು ನಿಷೇಧಿಸಬೇಕು.

4. ಮಕ್ಕಳನ್ನು ಹೊರತು ಪಡಿಸಿ, ಇನ್ನೆಲ್ಲರಿಗೂ ಅವರ ಶರೀರದ ಆರೋಗ್ಯಕ್ಕೆ ಯಾವ ಆಹಾರ ಅವಶ್ಯಕವೋ ಅದೇ ಕಣ್ಣಿಗೂ ಅವಶ್ಯಕ. ಇದಕ್ಕೆ ಹೊಸ ಆಹಾರಪದ್ಧತಿಯ ಅವಶ್ಯಕತೆ ಇಲ್ಲ. ಮಕ್ಕಳಿನ ಕಣ್ಣಿನ ನರದ ಬೆಳವಣಿಗೆಗೆ ವಿಟಮಿನ್ ಎ ಅವಶ್ಯಕ. ಆಹಾರದಲ್ಲಿ ಕ್ಯಾರೆಟ್, ಹಸಿರು ತರಕಾರಿಗಳು, ಪಾಲಕ್‌, ಮೆಂತ್ಯ, ಗೆಣಸು, ಪಪಾಯ, ಮಾವಿನ ಹಣ್ಣು, ಮೊಟ್ಟೆ, ಮೀನು – ಇವುಗಳಲ್ಲಿ ವಿಟಮಿನ್ ಎ ಅಂಶ ಹೆಚ್ಚಾಗಿದೆ. ಇವನ್ನು ಮಕ್ಕಳು ಸೇವಿಸಿದರೆ ಅವರ ಕಣ್ಣುಗಳ ಆರೋಗ್ಯ ಚೆನ್ನಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT