ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಯಾಮದ ಮತ್ತೊಂದು ಆಯಾಮ ಝುಂಬಾ ನೃತ್ಯ

Last Updated 3 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ, ದೇಹವನ್ನು ವ್ಯಾಯಾಮದ ಭಾಷೆಗೆ ಒಗ್ಗಿಸುವುದಿದೆಯಲ್ಲ ಅದುವೇ ಝುಂಬಾ. ಎಷ್ಟೋ ಜನಕ್ಕೆ ವ್ಯಾಯಾಮ ಶಾಲೆಯಲ್ಲಿ ವ್ಯಾಯಾಮ ಪರಿಕರಗಳನ್ನು ಇಟ್ಟುಕೊಂಡು ಬೆವರಿಳಿಸುವುದಕ್ಕೆ ಸುತರಾಂ ಇಷ್ಟ ಇರುವುದಿಲ್ಲ. ಅಂಥವರಿಗೆಲ್ಲ ಅಚ್ಚುಮೆಚ್ಚು ಈ ಝುಂಬಾ.

ಹೆಜ್ಜೆ ಹಾಕುವುದೆಂದರೆ ಎಳವೆಯಿಂದಲೂ ಇಷ್ಟವಿದ್ದು, ಯಾವುದೋ ಕಾರಣಕ್ಕೆ ಅದಕ್ಕೆ ಆಸ್ಪದೇ ಇಲ್ಲದ ಹಾಗೇ ಇರುವವರೆಲ್ಲರೂ ಈ ಝುಂಬಾವನ್ನು ಇಷ್ಟಪಡುತ್ತಾರೆ. ಅದರಲ್ಲೂ ಒಂದು ಗಂಟೆಗಳ ಕಾಲ ಯಾವುದೇ ಜಂಜಾಟವಿಲ್ಲದೇ, ಸಂಗೀತಕ್ಕೆ ತಕ್ಕ ಹೆಜ್ಜೆ ಹಾಕುತ್ತ ಬೊಜ್ಜು ಕರಗಿಸುವ ಆಟದಲ್ಲಿ ಮುಳುಗುವುದೆಂದರೆ ಹೆಚ್ಚಿನವರಿಗೆ ಖುಷಿಯ ಸಂಗತಿ ಎನ್ನುತ್ತಾರೆ ಝುಂಬಾ ಇನ್‌ಸ್ಟ್ರಕ್ಟರ್‌ ನಿಶ್ಚಿತಾ ಉತ್ತಯ್ಯ.

ಕೊಡಗು ಮೂಲದ ನಿಶ್ಚಿತಾ ಡಿಜಿಟಲ್‌ ಮಾರ್ಕೆಟಿಂಗ್‌ ಅನ್ನು ವೃತ್ತಿಯಾಗಿಸಿಕೊಂಡಿದ್ದಾರೆ. ಜತೆಗೆ ಪ್ರವೃತ್ತಿಯಾಗಿ ಸೈಕ್ಲಿಂಗ್‌, ಝುಂಬಾ, ಬಾಡಿಬಿಲ್ಡಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಮೂರು ವರ್ಷಗಳಿಂದ ಝುಂಬಾ ಇನ್‌ಸ್ಟ್ರಕ್ಟರ್‌ ಆಗಿ, ಒಂದು ವರ್ಷದಿಂದ ಬಾಡಿ ಬಿಲ್ಡಿಂಗ್‌ ಕಡೆ ಗಮನ ಹರಿಸಿದ್ದಾರೆ.ಸದ್ಯಕ್ಕೆ ಜಯನಗರ, ಕೋರಮಂಗಲ, ವಿಜಯನಗರ, ರಿಚಮಂಡ್‌ ಟೌನ್‌, ಬಸವನಗುಡಿ‌ಗಳಲ್ಲಿ ಸಮೂಹ ತರಬೇತಿ ನೀಡುತ್ತಿರುವ ಅವರು ಕಾರ್ಪೋರೇಟ್‌ ಇವೆಂಟ್‌ಗಳಲ್ಲಿಯೂ ಝುಂಬಾ ಹೇಳಿಕೊಡುತ್ತಿದ್ದಾರೆ.

‘ಇದೊಂದು ಕಾರ್ಡಿಯೋ ಫಿಟ್‌ನೆಸ್‌. ಏರೋಬಿಕ್ಸ್‌ನಲ್ಲಿ ಜಂಪಿಂಗ್‌ ಇರುತ್ತೆ. ಕೌಂಟ್ಸ್‌ಗೆ ಅನುಸಾರವಾಗಿ ವ್ಯಾಯಾಮದ ಅವಧಿಯಿದ್ದರೆ, ಝುಂಬಾದಲ್ಲಿ ದೇಹವನ್ನು ಸತತವಾಗಿ ಒಂದು ಗಂಟೆಗಳ ಕಾಲ ನೃತ್ಯದ ಮೂಲಕವೇ ದಂಡಿಸಲಾಗುತ್ತದೆ. ಆದರೆ, ಜತೆಗೆ ಸಂಗೀತವೂ ಇರುವುದರಿಂದ ಉಲ್ಲಾಸದಿಂದ ತೊಡಗಿಸಿಕೊಳ್ಳಬಹುದು. ಸದ್ಯಕ್ಕೆ ಒಂದು ತರಗತಿಯಲ್ಲಿ 25 ಸದಸ್ಯರಿರುತ್ತಾರೆ’ ಎನ್ನುತ್ತಾರೆ ಅವರು.

ತರಬೇತಿ ನೀಡುವ ಮುಂಚೆ ವಿದ್ಯಾರ್ಥಿ ಸಮೂಹದ ಉತ್ಸಾಹವನ್ನು ಅರ್ಥ ಮಾಡಿಕೊಳ್ಳಲಾಗುತ್ತದೆ. ಅದಕ್ಕೆ ಅನುಗುಣವಾಗಿ ಹಾಡು ಹಾಗೂ ನೃತ್ಯದ ಹೆಜ್ಜೆಗಳನ್ನು ರೂಪಿಸಲಾಗುತ್ತದೆ. ಪ್ರತಿ ದಿನ ತರಬೇತಿ ನೀಡುವ ಮುಂಚೆ ಇನ್‌ಸ್ಟ್ರಕ್ಟರ್‌ ತಾಲೀಮು ನಡೆಸುವುದು ಅಗತ್ಯ. ಆಗಷ್ಟೆ ಉತ್ತಮವಾಗಿ ತರಬೇತಿ ನೀಡಲು ಸಾಧ್ಯ ಎನ್ನುವ ಅಭಿಪ್ರಾಯ ಅವರದ್ದು.

ದೇಹದಾರ್ಢ್ಯ ಹಾಗೂ ಶಕ್ತಿವರ್ಧನೆ ತರಬೇತಿಯಲ್ಲಿ ಇರುವಂತೆಝುಂಬಾದಲ್ಲಿ ಎಂದಿಗೂ ಮಾಂಸಖಂಡಗಳ ಬೆಳವಣಿಗೆಯತ್ತ ಗಮನ ಹರಿಸುವುದಿಲ್ಲ. ಸತತವಾಗಿ ದೇಹ ಚಟುವಟಿಕೆಯಿಂದ ಇದ್ದರೆ ಹೃದಯಬಡಿತ ಹೆಚ್ಚುತ್ತದೆ. ಇದರಿಂದ ಚಯಾಪಚಯ (ಮೆಟಬಾಲಿಸಂ) ಹೆಚ್ಚಾಗಿ, ಕೊಬ್ಬು ಕರಗುತ್ತದೆ. ಕೊಬ್ಬು ಕರಗಿಸಲೆಂದೇ ಝುಂಬಾಗೆ ಬರುವವರು ಹೆಚ್ಚು. ಮಾನಸಿಕ ಒತ್ತಡವನ್ನು ನೀಗಿಸಿಕೊಳ್ಳಲು, ಸಮೂಹ ಚಟುವಟಿಕೆಯಲ್ಲಿ ಖುಷಿಯಿಂದ ಪಾಲ್ಗೊಳ್ಳಲು ಇಂಥ ತರಗತಿಗೆ ಬರುತ್ತಾರೆ ಎಂದು ನಿಶ್ಚಿತಾ ಹೇಳುತ್ತಾರೆ.

ನಾವು ಯಾವುದೇ ಬಗೆಯ ವ್ಯಾಯಾಮ ಮಾಡಿದರೂ ಸಮತೋಲಿತ ಆಹಾರ ಸೇವಿಸುವುದು ಬಹಳ ಮುಖ್ಯ. ಆಹಾರವೇ ಆರೋಗ್ಯದ ಗುಟ್ಟು. ಪೌಷ್ಟಿಕಾಂಶ ಹಾಗೂ ಸತ್ವಯುತ ಆಹಾರವು ನಮ್ಮ ನಿತ್ಯದ ಭಾಗವಾಗಬೇಕು. ಆಗ ಮಾತ್ರ ದೇಹದಾರ್ಢ್ಯತೆಯನ್ನು ಹೊಂದಲು ಸಾಧ್ಯ. ಇದು ಜಿಮ್‌ನಲ್ಲಿ ಬೆವರಿಳಿಸುವಷ್ಟೇ ಮುಖ್ಯ ಎನ್ನುತ್ತಾರೆ ಅವರು.

ತರಬೇತಿ ಪಡೆಯುತ್ತಿರುವವರ ವಯಸ್ಸಿಗೆ ಅನುಗುಣವಾಗಿ ಝುಂಬಾದಲ್ಲಿ ಸಂಗೀತವನ್ನು ಅಳವಡಿಸಲಾಗುತ್ತದೆ. ಕೆಲವರಿಗೆ ತಾರಕ ಸ್ವರದ ಸಂಗೀತ ಇಷ್ಟವಾದರೆ, ಇನ್ನು ಕೆಲವರು ಮಂದ್ರದಲ್ಲಿರುವ ಸಂಗೀತಕ್ಕೆ ಹೆಜ್ಜೆ ಹಾಕಲು ಶಕ್ತರು. ತಿಂಗಳಿಗೊಮ್ಮೆ ಝುಂಬಾ ಕಮ್ಯುನಿಟಿಯಿಂದಲೇ ಸಂಗೀತದ ಸಿ.ಡಿಗಳನ್ನು ನೀಡಲಾಗುತ್ತದೆ. ಇವು ಝುಂಬಾ ಹಾಡುಗಳೆಂದೇ ಪ್ರಸಿದ್ಧಿ. ಇದರ ಜತೆಗೆ ಬೇಡಿಕೆಯನುಸಾರ ಬಾಲಿವುಡ್‌ ಹಾಗೂ ಸ್ಯಾಂಡಲ್‌ವುಡ್‌ನ ಟ್ರೆಂಡಿ ಹಾಡುಗಳನ್ನು ಹಾಕಲಾಗುತ್ತದೆ ಎಂದು ಮಾಹಿತಿ ನೀಡಿದರು.

ಚಂದದ ಬದುಕಿಗೆ ವ್ಯಾಯಾಮ, ಪೌಷ್ಟಿಕಾಂಶಯುಕ್ತ ಆಹಾರ, ಒಂದಷ್ಟು ಉತ್ತಮ ಹವ್ಯಾಸಗಳು ಇರಲೇಬೇಕು. ಆಗಷ್ಟೆ ದೇಹದಂತೆ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಒಳ್ಳೆಯ ಆಲೋಚನೆಗಳು ರೂಪುಗೊಳ್ಳಲು ಪರಿಸರದಷ್ಟೆ ಇವೆಲ್ಲವೂ ಅಗತ್ಯ ಎಂದು ಭಾವಿಸುತ್ತೇನೆ. ಜತೆಗೆ ದೇಹಕಷ್ಟೆ ಅಲ್ಲ ಮನಸ್ಸಿನ ಆರೋಗ್ಯ ವ್ಯಾಯಾಮವೇ ಮದ್ದು ಎನ್ನುವ ಅಭಿಪ್ರಾಯ ಅವರದ್ದು.

ಮೂರು ವರ್ಷದಿಂದ ಜಿಮ್‌ನಲ್ಲಿ ಸಕ್ರಿಯವಾಗಿದ್ದ ಅವರು, ವರ್ಷದಿಂದ ಈಚೆಗೆ ಬಾಡಿ ಬಿಲ್ಡಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಬೆಂಗಳೂರು ಮತ್ತು ಅಸ್ಸಾಂನಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಇನ್ನು ಹೆಚ್ಚಿನ ಸ್ಪರ್ಧೆಯಲ್ಲಿ ಭಾಗವಹಿಸುವ ಇರಾದೆಯನ್ನು ನಿಶ್ಚಿತಾ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT