ಸಂಚಾರದಟ್ಟಣೆ ಜಾಲದಲ್ಲಿ ‘ಜಾಲಹಳ್ಳಿ ಕ್ರಾಸ್‌’

ಮಂಗಳವಾರ, ಜೂನ್ 18, 2019
26 °C
ಬೆಳಿಗ್ಗೆ, ಸಂಜೆ ಜಂಕ್ಷನ್‌ನಲ್ಲಿ ಸಾಲುಗಟ್ಟಿ ನಿಲ್ಲುವ ವಾಹನಗಳು: ಸವಾರರ ಪಡಿಪಾಟಲು

ಸಂಚಾರದಟ್ಟಣೆ ಜಾಲದಲ್ಲಿ ‘ಜಾಲಹಳ್ಳಿ ಕ್ರಾಸ್‌’

Published:
Updated:
Prajavani

ಬೆಂಗಳೂರು: ಅಡ್ಡಾದಿಡ್ಡಿ ನಿಲ್ಲುವ ಬಿಎಂಟಿಸಿ ಬಸ್‌ಗಳು, ಎಲ್ಲೆಂದರಲ್ಲಿ ನುಗ್ಗುವ ಆಟೋರಿಕ್ಷಾಗಳು, ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಲ್ಲುವ ವಾಹನಗಳು... ತುಮಕೂರು ರಸ್ತೆಯ ಜಾಲಹಳ್ಳಿ ಕ್ರಾಸ್‌ ಜಂಕ್ಷನ್‌ನಲ್ಲಿ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಕಂಡುಬರುವ ಸಾಮಾನ್ಯ ದೃಶ್ಯವಿದು.

ಜಾಲಹಳ್ಳಿ ಕ್ರಾಸ್‌ ಜಂಕ್ಷನ್‌ ಎಂದಾಗ ಗಿಜಿಗುಡುವ ಟ್ರಾಫಿಕ್ ಕಣ್ಮುಂದೆ ಬರುತ್ತದೆ. ಭಾನುವಾರ ಹೊರತುಪಡಿಸಿ ವಾರದ ಉಳಿದ ದಿನಗಳಲ್ಲಿ ಬೆಳಿಗ್ಗೆ 8ರಿಂದ 10.30 ಮತ್ತು ಸಂಜೆ 4.30ರ ನಂತರ ಇಲ್ಲಿ ವಾಹನ ದಟ್ಟಣೆ ವಿಪರೀತ. ಪ್ರತಿ ಸೋಮವಾರ ಬೆಳಿಗ್ಗೆ ಮತ್ತು ಹಬ್ಬದ ದಿನಗಳಲ್ಲಿ ಈ ಪ್ರದೇಶದ ಮೂಲಕ ಹಾದುಹೋಗುವುದೆಂದರೆ ವಾಹನಗಳ ಸವಾರರಿಗೆ ನರಕಯಾತನೆ. ಬಿಎಂಟಿಸಿ ಬಸ್‌ಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವುದು ಇಲ್ಲಿನ ಸಮಸ್ಯೆ ಇನ್ನಷ್ಟು ಹೆಚ್ಚಾಗಲು ಕಾರಣವಾಗಿದೆ.

100 ಅಡಿ ರಸ್ತೆ ಮೂಲಕ ಪೀಣ್ಯ ಮೊದಲ ಹಂತದ ಕಡೆಗೆ ಹೋಗುವ ಬಸ್‌ಗಳ ನಿಲುಗಡೆಗಾಗಿ ಜಂಕ್ಷನ್‌ದಿಂದ 200 ಅಡಿ ದೂರದಲ್ಲಿ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಆದರೆ, ಯಾವ ಬಸ್‌ ಕೂಡ ಅಲ್ಲಿ ನಿಲ್ಲುವುದೇ ಇಲ್ಲ. ಯಶವಂತಪುರ, ಗೊರಗುಂಟೆಪಾಳ್ಯ ಕಡೆಯಿಂದ ಬರುವ ಬಸ್‌ಗಳು ಜಾಲಹಳ್ಳಿ ಕ್ರಾಸ್‌ ಸಿಗ್ನಲ್ ಬಳಿಯೇ ಅಡ್ಡಾದಿಡ್ಡಿ ನಿಲ್ಲುತ್ತವೆ. ಹೀಗಾಗಿ, ತುಮಕೂರು ಕಡೆಗೆ ಹೋಗುವ ವಾಹನಗಳಿಗೆ ಜಾಗವಿಲ್ಲದೆ ದಟ್ಟಣೆ ಹೆಚ್ಚಾಗುತ್ತಿದೆ. ಸಂಚಾರ ಪೊಲೀಸರು ಸ್ಥಳದಲ್ಲಿದ್ದರೂ ಬಸ್‌ಗಳು ಎಲ್ಲೆಂದರಲ್ಲಿ ನಿಲ್ಲುವುದು ತಪ್ಪಿಲ್ಲ ಎನ್ನುತ್ತಾರೆ ಸ್ಥಳೀಯರು.

‘ಪೀಣ್ಯ ಕಡೆಯಿಂದ ಬರುವ ಆಟೋರಿಕ್ಷಾಗಳು ಈ ಜಂಕ್ಷನ್‌ನಲ್ಲೇ ಯೂ–ಟರ್ನ್ ತೆಗೆದುಕೊಳ್ಳುವುದು ಟ್ರಾಫಿಕ್ ಸಮಸ್ಯೆ ಹೆಚ್ಚಳಕ್ಕೆ ಮತ್ತೊಂದು ಕಾರಣ. ಇದರಿಂದ ಅಯ್ಯಪ್ಪಸ್ವಾಮಿ ದೇಗುಲದ ರಸ್ತೆಯಿಂದ ಬರುವ ವಾಹನಗಳು ರಸ್ತೆ ಮಧ್ಯದಲ್ಲೇ ನಿಲ್ಲುವಂತಾಗಿದೆ. ಪೀಣ್ಯ ಕಡೆಗೆ ಹೋಗುವ 100 ಅಡಿ ರಸ್ತೆ ಮಧ್ಯದಲ್ಲೇ ವಿಭಜಕ ನಿರ್ಮಿಸಲಾಗಿದೆ. ಒಂದು ಕಡೆ ಹೋಗಲು ಮತ್ತೊಂದು ಕಡೆ ಬರಲು ಅವಕಾಶ ಕಲ್ಪಿಸಲಾಗಿದೆ. ಆದರೂ ಬೈಕ್ ಸವಾರರು, ವ್ಯಾನ್‌ಗಳು ಏಕಮುಖ ಸಂಚಾರ ನಿಯಮ ಉಲ್ಲಂಘಿಸಿ  ಸಂಚರಿಸುವುದು ಅಪಘಾತಗಳಿಗೆ ಕಾರಣವಾಗಿದೆ’ ಎಂಬುದು ಸ್ಥಳೀಯರ ದೂರು.

‘ತುಮಕೂರು ರಸ್ತೆ ಮತ್ತು ಪೀಣ್ಯ ಕಡೆಯಿಂದ ಬಂದು ಅಯ್ಯಪ್ಪಸ್ವಾಮಿ ದೇಗುಲದ ರಸ್ತೆಯಲ್ಲಿ ಸಾಗಬೇಕಾದ ಬಿಎಂಟಿಸಿ ಬಸ್‌ಗಳು ಜಂಕ್ಷನ್‌ ತುದಿಯಲ್ಲೇ ನಿಲ್ಲುತ್ತವೆ. ಈ ರಸ್ತೆಯಲ್ಲಿ ಕೂಡ 100 ಅಡಿ ದೂರದಲ್ಲಿ ನಿಲ್ದಾಣ ಇದೆ. ಅಲ್ಲಿ ಬಸ್ ನಿಲ್ಲಿಸದ ಬಗ್ಗೆ ಚಾಲಕರನ್ನು ಪ್ರಶ್ನೆ ಮಾಡಿದರೂ ಕಿವಿಗೆ ಹಾಕಿಕೊಳ್ಳುವುದಿಲ್ಲ. ಟ್ರಾಫಿಕ್ ಪೊಲೀಸರು ಕಣ್ಣಿದ್ದೂ ಕಾಣದಂತೆ ವರ್ತಿಸುತ್ತಾರೆ’ ಎಂದು ಸ್ಥಳೀಯರಾದ ಬಿ. ಸತ್ಯ ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ತುಮಕೂರು ಕಡೆಗೆ ಹೋಗುವ ಕೆಎಸ್‌ಆರ್‌ಟಿಸಿ ಬಸ್‌ಗಳು ಕೂಡ ರಸ್ತೆಗೆ ಅಡ್ಡಲಾಗಿಯೇ ನಿಲ್ಲುತ್ತವೆ. ಸಿಗ್ನಲ್ ದಾಟಿದ ಕೂಡಲೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಚಾಲಕರು ಬಸ್ ನಿಲ್ಲಿಸುತ್ತಾರೆ. ಹಿಂದೆ ಬರುವ ಬಸ್‌ಗಳು ಜಾಗವಿಲ್ಲದೆ ಜಂಕ್ಷನ್‌ ಮಧ್ಯದಲ್ಲಿ ನಿಲ್ಲುತ್ತವೆ. ಅಯ್ಯಪ್ಪಸ್ವಾಮಿ ದೇಗುಲ ರಸ್ತೆ, ತುಮಕೂರು ಕಡೆಯಿಂದ ಬರುವ ಬಸ್‌ಗಳು ಪೀಣ್ಯ ಕಡೆಗೆ ಸಾಗಲು ದಾರಿಯೇ ಇಲ್ಲದಂತಾಗುತ್ತದೆ’ ಎಂದು ದಾಸರಹಳ್ಳಿ ನಿವಾಸಿ ಮಂಜುನಾಥ್ ವಿವರಿಸಿದರು.

ಅಂಡರ್ ಪಾಸ್ ಪರಿಹಾರ
‘ಜಾಲಹಳ್ಳಿ ಕ್ರಾಸ್ ಜಂಕ್ಷನ್‌ನ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಅಂಡರ್ ಪಾಸ್ ನಿರ್ಮಿಸುವ ಯೋಜನೆ ಇದೆ’ ಎಂದು ಶಾಸಕ ಆರ್. ಮಂಜುನಾಥ್ ತಿಳಿಸಿದರು.

‘ಯೋಜನೆಗೆ ಸಂಬಂಧಿಸಿದ ಸರ್ವೆ ಮುಗಿದಿದ್ದು, ಭೂಸ್ವಾಧೀನ ಪ್ರಕ್ರಿಯೆ ನಡೆಯಬೇಕಿದೆ. ಈ ಕೆಲಸ ಮುಗಿದರೆ ಕಾಮಗಾರಿ ಆರಂಭವಾಗಲಿದೆ. ಅಂಡರ್ ಪಾಸ್ ನಿರ್ಮಾಣವಾದರೆ ಟ್ರಾಫಿಕ್ ಸಮಸ್ಯೆ ಪರಿಹಾರವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ‘ಬಿಎಂಟಿಸಿ ಬಸ್‌ಗಳು ಅಡ್ಡಾದಿಡ್ಡಿ ನಿಲ್ಲುವುದನ್ನು ತಪ್ಪಿಸಲು ಪೊಲೀಸರಿಗೆ ಈ ಹಿಂದೆಯೂ ಹೇಳಿದ್ದೇನೆ. ಮತ್ತೊಮ್ಮೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ’ ಎಂದರು.

ಪಡಿಪಾಟಲು
‘ಇಲ್ಲಿ ವಾಹನ ದಟ್ಟಣೆ ಹೆಚ್ಚಿರುವ ಕಾರಣ ಪಾದಚಾರಿಗಳು ರಸ್ತೆ ದಾಟಲು ಸಮಸ್ಯೆ ಎದುರಿಸುತ್ತಾರೆ. ವಾಹನಗಳು ಸಂಚರಿಸುವಾಗಲೇ ಅವರು ದಾಟುವ ಪ್ರಯತ್ನ ಮಾಡುತ್ತಾರೆ. ಇದು ಅಪಘಾತಕ್ಕೂ ಕಾರಣವಾಗುತ್ತಿದೆ. ಒಮ್ಮೊಮ್ಮೆ ಪಾದಚಾರಿಗಿಂದಾಗಿಯೂ ಸಂಚಾರ ವ್ಯತ್ಯಯ ಉಂಟಾಗುತ್ತದೆ. ಅವರನ್ನು ನಿಯಂತ್ರಿಸಲು ಪೊಲೀಸರು ಪ್ರಯತ್ನ ಪಡುವುದೇ ಇಲ್ಲ’ ಎಂದು ಎಂಟನೇ ಮೈಲಿ ನಿವಾಸಿ ಚಂದ್ರಶೇಖರ್ ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !