ಕದ್ದ ಬೈಕ್‌ನಲ್ಲಿ ಸುತ್ತಾಡಿ ಸುಲಿಗೆ

7
₹9.50 ಲಕ್ಷ ಮೊತ್ತದ ಚಿನ್ನಾಭರಣ ಜಪ್ತಿ

ಕದ್ದ ಬೈಕ್‌ನಲ್ಲಿ ಸುತ್ತಾಡಿ ಸುಲಿಗೆ

Published:
Updated:

ಬೆಂಗಳೂರು: ಆಟೊಗಾಗಿ ಕಾಯುತ್ತ ನಿಂತಿದ್ದ ಮಹಿಳೆಗೆ ಚಾಕು ತೋರಿಸಿ ಚಿನ್ನಾಭರಣ ಸುಲಿಗೆ ಮಾಡಿದ್ದ ಆರೋಪದಡಿ ಮೂವರನ್ನು ಹೆಬ್ಬಾಳ ಪೊಲೀಸರು ಸೋಮವಾರ ಬಂಧಿಸಿದ್ದಾರೆ. 

ನಾಗವಾರದ ಸೈಫ್ ಖಾನ್ ಅಲಿಯಾಸ್ ಸಮ್ಮು (28), ಗೋವಿಂದಪುರದ ನಯಾಬ್ ರಸುಲ್ ಅಲಿಯಾಸ್ ನಯಾಬ್ (29) ಮತ್ತು ಹೆಗಡೆ ನಗರದ ಸಬ್ದಾರ್ ಅಹಮದ್ ಅಲಿಯಾಸ್ ನೀಗ್ರೊ (29) ಬಂಧಿತರು. ಅವರಿಂದ ₹9.50 ಲಕ್ಷ ಮೊತ್ತದ ಚಿನ್ನಾಭರಣ ಹಾಗೂ 4 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ.

‘ಎಂ.ಶಂಕರಿ ಎಂಬುವರು ಜ. 22ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಹೆಬ್ಬಾಳದ ಸುಲ್ತಾನ್‍ಪಾಳ್ಯ ಮುಖ್ಯರಸ್ತೆಯಲ್ಲಿ ಆಟೊಗಾಗಿ ಕಾಯುತ್ತ ನಿಂತಿದ್ದರು. ಎರಡು ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ಆರೋಪಿಗಳು, ಚಾಕು ತೋರಿಸಿ ಚಿನ್ನದ ಸರ ಕಿತ್ತೊಯ್ದಿದ್ದರು. ಆ ಸಂಬಂಧ ದಾಖಲಾಗಿದ್ದ ಪ್ರಕರಣದ ತನಿಖೆ ಕೈಗೊಂಡು ಆರೋಪಿಗಳನ್ನು ಸೆರೆಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು. 

‘ಮನೆ ಮುಂದೆ ಹಾಗೂ ಪಾರ್ಕಿಂಗ್‌ ಜಾಗಗಳಲ್ಲಿ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡುತ್ತಿದ್ದ ಆರೋಪಿಗಳು, ಅವುಗಳ ಮೂಲಕ ನಗರದಲ್ಲಿ ಸುತ್ತಾಡಿ ಸುಲಿಗೆ ಮಾಡುತ್ತಿದ್ದರು. ಅವರ ಬಂಧನದಿಂದ ಹೆಬ್ಬಾಳ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಐದು ಪ್ರಕರಣ, ನಂದಿನಿ ಲೇಔಟ್, ಜಾಲಹಳ್ಳಿ ಹಾಗೂ ಎಚ್‌ಎಎಲ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ತಲಾ ಒಂದು ಪ್ರಕರಣ ಪತ್ತೆಯಾಗಿವೆ’.

‘ಆರೋಪಿಗಳ ಪೋಷಕರು ಜೋಪಡಿಗಳಲ್ಲಿ ವಾಸವಿದ್ದಾರೆ. ತಿಂಗಳಿಗೊಮ್ಮೆ ಜೋಪಡಿಗೆ ಹೋಗಿ ಬರುತ್ತಿದ್ದ ಆರೋಪಿಗಳು, ಉಳಿದ ದಿನಗಳಲ್ಲಿ ಊರೂರು ಸುತ್ತುತ್ತಿದ್ದರು. ನಸುಕಿನ 4 ಗಂಟೆಯಿಂದ 6 ಗಂಟೆ ಅವಧಿಯಲ್ಲಿ ಮಾತ್ರ ಕಳ್ಳತನ ಹಾಗೂ ಸುಲಿಗೆ ಮಾಡುತ್ತಿದ್ದರು. ಅದರಿಂದ ಬಂದ ಹಣವನ್ನು ಐಷಾರಾಮಿ ಜೀವನಕ್ಕೆ ಖರ್ಚು ಮಾಡುತ್ತಿದ್ದರು’ ಎಂದು ಹೇಳಿದರು.

‘ಈ ಹಿಂದೆ ಕಳ್ಳತನ ಪ್ರಕರಣವೊಂದರಲ್ಲಿ ಇದೇ ಆರೋಪಿಗಳನ್ನು ಬಂಧಿಸಲಾಗಿತ್ತು. ಜಾಮೀನು ಮೇಲೆ ಹೊರಬಂದಿದ್ದ ಆರೋಪಿಗಳು, ತಮ್ಮ ಹಳೇ ಚಾಳಿಯನ್ನು ಮುಂದುವರಿಸಿದ್ದರು. ಚಾಕು ಹಾಗೂ ಮಚ್ಚು–ಲಾಂಗ್‌ಗಳನ್ನು ಜೊತೆಯಲ್ಲಿ ಇಟ್ಟುಕೊಂಡು ಓಡಾಡುತ್ತಿದ್ದ ಮೂವರು, ರಸ್ತೆಯಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದರು’ ಎಂದು ಪೊಲೀಸರು ವಿವರಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !