‘ಯಮಧರ್ಮ’ನಿಂದ ಹೆಲ್ಮೆಟ್ ಜಾಗೃತಿ..!

7

‘ಯಮಧರ್ಮ’ನಿಂದ ಹೆಲ್ಮೆಟ್ ಜಾಗೃತಿ..!

Published:
Updated:
Deccan Herald

ವಿಜಯಪುರ:  ಹೆಲ್ಮೆಟ್ ಧರಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು, ಕಲಾವಿದ ಜೂನಿಯರ್ ಗಣೇಶ (ಶಕ್ತಿಕುಮಾರ) ಯಮಧರ್ಮರಾಯನ ವೇಷ ಧರಿಸಿ, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂದೇಶ ನೀಡಿದರು.

ಇಲ್ಲಿನ ಕೇಂದ್ರ ಬಸ್ ನಿಲ್ದಾಣ, ಮಹಾತ್ಮ ಗಾಂಧಿ ವೃತ್ತ, ಶಿವಾಜಿ ವೃತ್ತ, ಬಸವೇಶ್ವರ ವೃತ್ತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಬೈಕ್ ಸವಾರರನ್ನು ತಡೆದು ಹೆಲ್ಮೆಟ್ ಧರಿಸುವ ಕುರಿತು ತಿಳಿವಳಿಕೆ ನೀಡಿದರು.

‘ಹೇ ಮಾನವರೇ, ನಾನು ಯಮಧರ್ಮರಾಯ ನೋಡಿ... ಇಲ್ಲಿ ನನ್ನ ತಲೆಯ ಮೇಲೆ ಕೀರಿಟವಿದೆ. ಬೈಕ್ ಓಡಿಸುವ ನೀವು ಕಿರೀಟ ಅಂದರೇ ನಿಮ್ಮ ಪ್ರಾಣ ಉಳಿಸುವ ಶಿರಸ್ತ್ರಾಣ ಎಲ್ಲಿದೆ ? ನೋಡಿ ಚಿತ್ರಗುಪ್ತರೇ, ಈ ವ್ಯಕ್ತಿ ತಪ್ಪು ಮಾಡುತ್ತಿದ್ದಾನೆ, ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸುತ್ತಿದ್ದಾನೆ' ಎಂದು ಡೈಲಾಗ್ ಹೇಳುವ ಮೂಲಕ ಹೆಲ್ಮೆಟ್ ಧರಿಸುವಂತೆ ಬೈಕ್ ಸವಾರರಿಗೆ ವಿನಂತಿ ಮಾಡುತ್ತಿರುವ ದೃಶ್ಯ ಗಮನ ಸೆಳೆಯಿತು.

‘ಯಾಕೆ ನಿಮ್ಮ ಲೋಕ ನಿಮಗೆ ಸಾಕಾಗಿದೆಯೇ, ಎಚ್ಚರದಿಂದಿರಿ. ದ್ವಿಚಕ್ರ ವಾಹನ ಚಲಿಸುವ ನಿಮ್ಮ ಜೀವ ಹೆಲ್ಮೆಟ್‌ನಲ್ಲಿದೆ. ಕಾರಣ ನೀವು ತಕ್ಷಣ ಹೆಲ್ಮೆಟ್ ಖರೀದಿಸಿ. ಹೆಲ್ಮೆಟ್ ಖರೀದಿಸಲು ಏಕೆ ವಿಚಾರಿಸುತ್ತೀರಿ. ನೋಡಿ ಮಾನವರೇ ಜೀವ ಅಮೂಲ್ಯವಾದದ್ದು, ಒಮ್ಮೆ ಜೀವ ಮಾನವ ಶರೀರದಿಂದ ಹಾರಿ ಹೋದರೆ ಮತ್ತೆ ಆ ಶರೀರದಲ್ಲಿ ಮರಳಿ ಬರಲಾರದು’ ಎಂಬ ಸಂದೇಶವನ್ನು ಯಮನ ರೀತಿಯಲ್ಲಿಯೇ ಹೇಳುವ ಮೂಲಕ ಜೂನಿಯರ್ ಗಣೇಶ ಅರಿವು ಮೂಡಿಸಿದ. ಕಲಾವಿದ ಶ್ರೀಶೈಲ ಬಡಚಿ ಚಿತ್ರಗುಪ್ತನ ವೇಷ ಧರಿಸಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಸಾಥ್ ನೀಡಿದರು.

ಇದಕ್ಕೂ ಮೊದಲು ಕೇಂದ್ರ ಬಸ್ ನಿಲ್ದಾಣದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್‌ ಅಮೃತ್ ನಿಕ್ಕಂ, ‘ಹೆಲ್ಮೆಟ್ ಪ್ರಾಣ ರಕ್ಷಣೆಯ ಸಾಧನ. ಜನರ ಜೀವ ಉಳಿಸುವ ಉದ್ದೇಶದೊಂದಿಗೆ ಇದನ್ನು ಕಡ್ಡಾಯಗೊಳಿಸಲಾಗಿದೆ. ತಮ್ಮ ಪ್ರಾಣ ರಕ್ಷಣೆಗಾಗಿ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಬೇಕು. ಆಗ ಜೀವದ ಸುರಕ್ಷತೆ ಸಾಧ್ಯವಾಗಲಿದೆ. ಹೆಲ್ಮೆಟ್ ಧರಿಸುವ ಜತೆಗೆ ಸಂಚಾರ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಬೇಕು’ ಎಂದು ಹೇಳಿದರು.

ಸಂಚಾರ ವಿಭಾಗದ ಪಿಎಸ್ಐ ಶರಣಗೌಡ ಗೌಡರ, ಸೈಯದ್ ಶೇಖ್, ಸಿದ್ದಣ್ಣ ಶಿರೂರು, ದಾದಾಪೀರ ದಳವಾಯಿ, ರಾಜೇಂದ್ರ ಲಂಬು, ಚಿದಾನಂದ ಖತಿಜಾಪುರ, ಅಬ್ದುಲ್‌ಹಮೀದ್ ಇನಾಮದಾರ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !