ಅವಳ ಪ್ರೀತಿಯೂ ಅದರ ರೀತಿಯೂ

7

ಅವಳ ಪ್ರೀತಿಯೂ ಅದರ ರೀತಿಯೂ

Published:
Updated:

ಈ ಹೃದಯವೇ ಹಾಗೆ. ‘ಲಬ್‌–ಡಬ್‌.. ಲಬ್‌–ಡಬ್‌..’ ಎನ್ನುತ್ತ ಅನುಕ್ಷಣವೂ ತನ್ನನ್ನು ಅಡಗಿಸಿಕೊಂಡ ಶರೀರಕ್ಕೆ ಜೀವದ್ರವವನ್ನು ಹರಿಸುತ್ತಲೇ ಇರುತ್ತದೆ. ಹಾಗೆಯೇ ಪ್ರತಿ ಕ್ಷಣವೂ ‘ಪ್ರೀತಿ– ಪ್ರೇಮ.. ಪ್ರೀತಿ– ಪ್ರೇಮ..’ ಎಂದು ಮಿಡಿಯುತ್ತ ತನ್ನ ಮನಸ್ಸನ್ನು ಅಡಗಿಸಿಕೊಂಡ ಇನಿಯ/ ಇನಿಯಳಿಗೆ ಒಲವಿನ ಧಾರೆ ಹರಿಸುತ್ತಲೇ ಇರುತ್ತದೆ. ಮೊದಲನೆಯದು ಬಯಾಲಜಿಯಾದರೆ, ಎರಡನೆಯದು ಲವ್ವಾಲಜಿ ಅಷ್ಟೆ.

ಹೃದಯವೆಂದರೆ ಮಾಂಸ, ಸ್ನಾಯುವಿನಿಂದಾದ ಮುಷ್ಟಿಯಷ್ಟಿರುವ ಒಂದು ಅಂಗ. ಎದೆಯ ಗೂಡಿನೊಳಗೆ ಅಡಗಿಕೊಂಡು ಸ್ವಲ್ಪ ಧಕ್ಕೆಯಾದರೂ ಸರಿ, ತನ್ನನ್ನು ಹೊತ್ತುಕೊಂಡು ಓಡಾಡುವ ಜೀವಕ್ಕೇ ಕುತ್ತು ತರುತ್ತದೆ. ಅದಕ್ಕೇನು ಗೊತ್ತು ಪ್ರೀತಿ– ಪ್ರೇಮದ ಅರ್ಥ. ಪ್ರೇಮವೆನ್ನಿ, ಕಾಮವೆನ್ನಿ.. ಅದೇನಿದ್ದರೂ ಮೆದುಳಿನಲ್ಲಿ ಹುಟ್ಟುವಂತಹದ್ದು. ಒಂದಲ್ಲ, ಹತ್ತಾರು ಹಾರ್ಮೋನ್‌ಗಳು ಮಿಕ್ಸ್‌ ಆಗಿ ತುಂಟಾಟ
ವಾಡುತ್ತವೆ. ಟೆಸ್ಟೋಸ್ಟೀರಾನ್‌, ಈಸ್ಟ್ರೋಜಿನ್‌ ಕಾಮನೆಯನ್ನು ಉಕ್ಕಿಸಿದರೆ, ಡೋಪೊಮೈನ್‌, ಸೆರೊಟೋನಿನ್‌, ಅಡ್ರೆನಲಿನ್‌ ಆಕರ್ಷಣೆ ಹೆಚ್ಚಿಸುತ್ತವೆ. ಆಪ್ತತೆಯನ್ನು ಹೆಚ್ಚಿಸುವುದು ಆಕ್ಸಿಟೋಸಿನ್‌ (ಬಿಗಿದಪ್ಪುವ ಆಸೆ ಹುಟ್ಟಿಸುವುದಂತೆ) ಎಂದು ವಿಜ್ಞಾನಿಗಳು ‘ಸೈನ್ಸ್‌ ಆಫ್‌ ಲವ್‌’ ಬಗ್ಗೆ ನಿರ್ಭಾವುಕರಾಗಿ ನುಡಿಯುತ್ತಾರೆ.

ಆದರೆ ಪ್ರೀತಿಯಲ್ಲಿ ಮುಳುಗೇಳುವ ಪ್ರೇಮಿಗಳು ಹೇಳುವುದೇ ಬೇರೆ– ಇಲ್ಲ. ನಾವು ಪ್ರೀತಿಸಿದವರ ಹೆಸರು ಹೇಳಿದರೆ ಸಾಕು ಹೃದಯಕ್ಕೆ ಗೊತ್ತಾಗಿ ಇನ್ನಷ್ಟು ಜೋರಾಗಿ ಲಬ್‌– ಡಬ್‌ ಎನ್ನುತ್ತದೆ. ಪ್ರೇಮಿಸಿದವರು ವಿದಾಯ ಹೇಳಿದರೆ ಹೃದಯಕ್ಕೆ ನೋವಾಗಿ ಶಾಕ್‌ ಕೊಡುವುದಿಲ್ಲವೇ ಎಂದು ‘ಸೈನ್ಸ್‌ ಬಿಹೈಂಡ್‌ ಲವ್‌’ ಬಗ್ಗೆ ವಾದಿಸುತ್ತಾರೆ.

ಸೈನ್ಸ್‌ ಆಫ್‌ ಲವ್‌

ಅದೇನೇ ಇರಲಿ, ‘ಸೈನ್ಸ್‌ ಆಫ್‌ ಲವ್‌’ ಲಿಂಗ ತಾರತಮ್ಯವನ್ನಂತೂ ಮಾಡಿಬಿಟ್ಟಿದೆ. ಪ್ರೇಮದ ಗ್ರೀಕ್‌ ದೇವತೆ ಅಫ್ರೋಡೈಟ್‌, ಪ್ರೇಮದ ರೂಪಕ ವೀನಸ್‌ ಎಲ್ಲವನ್ನೂ ಬದಿಗೆ ಸರಿಸಿಬಿಟ್ಟಿದೆ. ಪ್ರೀತಿ– ಪ್ರೇಮದ ವಿಷಯ ಬಂದಾಗ ಹುಡುಗ– ಹುಡುಗಿಯರ ಮಧ್ಯೆ ಅಗಾಧ ವ್ಯತ್ಯಾಸವಿದೆ, ಭೂಮಿ– ಆಕಾಶದಷ್ಟು; ಅವರ ನಡವಳಿಕೆಯೇ ವಿಭಿನ್ನ ಎಂದು ಅಮೆರಿಕದ ರುಟ್‌ಜರ್ಸ್‌ ವಿಶ್ವವಿದ್ಯಾನಿಲಯದ ಹೆಲೆನ್‌ ಫಿಶರ್‌ ಸುದೀರ್ಘ ಕಾಲ ನಡೆಸಿದ ಅಧ್ಯಯನದಲ್ಲಿ ಬಿಚ್ಚಿಟ್ಟಿದ್ದಾರೆ.

ಈಗ ಸ್ವಲ್ಪ ಗಂಭೀರ ವಿಷಯಕ್ಕೆ ಬರೋಣ. ಪ್ರೀತಿಯನ್ನು ವ್ಯಾಖ್ಯಾನಿಸುವುದು, ಅಳತೆ ಹಾಕುವುದು ಕಷ್ಟ. ಅದರಲ್ಲೂ ಗಂಡು– ಹೆಣ್ಣಿನ ವಿಷಯದಲ್ಲಿ ಇದು ಸಾಧ್ಯವೇ ಇಲ್ಲ. ಆದರೆ ಯುವತಿಯರಲ್ಲಿ ಕೆಲವರಾದರೂ ಕೇಳಿರಬಹುದು, ಹೇಳಿಕೊಂಡಿರಬಹುದು– ‘ನನ್ನವನಿಗೆ ಭಾವನೆಗಳೆ ಇಲ್ಲ, ಭಾವನಾತ್ಮಕವಾಗಿ ಹೊಂದಾಣಿಕೆಯೇ ಇಲ್ಲ’ ಎಂದು. ಹೊಂದಾಣಿಕೆಯಿಲ್ಲದ ಜೋಡಿ ಆಪ್ತ ಸಮಾಲೋಚಕರ ಬಳಿಗೆ ಬಂದಾಗ ಪತ್ನಿ ಹೇಳಿಕೊಳ್ಳುವುದೂ ಇದನ್ನೇ ‘ನನ್ನ ಜೊತೆ ಆಪ್ತವಾಗಿ ಮಾತನಾಡಿಯೇ ಅವನಿಗೆ ಗೊತ್ತಿಲ್ಲ’.

ಅಂದರೆ ಹುಡುಗಿಯರು ಸಂಬಂಧಗಳಿಗೆ ಹೆಚ್ಚು ಮಹತ್ವ ಕೊಡುತ್ತಾರಂತೆ. ಆದರೆ ಹುಡುಗರು ವ್ಯಕ್ತಪಡಿಸುವ ಪ್ರೀತಿಯ ಭಾವವೇ ಬೇರೆ. ಹುಡುಗಿಯರದ್ದು ಮನಸ್ಸಿನ ಭಾಷೆಯಾದರೆ, ಹುಡುಗರದ್ದು ದೈಹಿಕ ಭಾಷೆ. ಇದಕ್ಕೆ ಕಾರಣ ಅವರಿಬ್ಬರ ದೇಹಗಳ ರಚನೆಯಲ್ಲಿ ಎಷ್ಟು ವ್ಯತ್ಯಾಸವಿದೆಯೋ ಹಾಗೇ ಮೆದುಳಿನಲ್ಲೂ ಅಗಾಧ ವ್ಯತ್ಯಾಸಗಳಿರುವುದು. ಇದು ಎಂಆರ್‌ಐ ನಲ್ಲೂ ದೃಢಪಟ್ಟಿದೆ. ಇದನ್ನು ಅರಿಯಬೇಕಾದರೆ ವಿಕಾಸವಾದದ ಮೂಲಕ್ಕೇ ಹೋಗಬೇಕು. ಟೆಸ್ಟೋಸ್ಟೀರೋನ್‌ ಅಥವಾ ಈಸ್ಟ್ರೋಜಿನ್‌ ಕಿಡಿಗೇಡಿತನದ ಆಚೆಯೇ ಯೋಚಿಸಬೇಕು.

ಕಡಿವಾಣ ಇಲ್ಲ ಭಾವನೆಗಳಿಗೆ..

ಹೌದು, ಮಹಿಳೆಯರ ಮೆದುಳಿಗೆ ಹೋಲಿಸಿದರೆ ಪುರುಷನ ಮೆದುಳಿನ ಹೈಪೊಥಲಾಮಸ್‌ನಲ್ಲಿ ಎರಡೂವರೆ ಪಟ್ಟಿನಷ್ಟು ಹೆಚ್ಚು ಜಾಗ ಲೈಂಗಿಕ ಬಯಕೆಗೆ ಮೀಸಲಾಗಿದೆ. ಮೆದುಳಿನ ಹಿಂಭಾಗದಲ್ಲಿರುವ ವಿಸುವಲ್‌ ಕಾರ್ಟೆಕ್ಸ್‌ನಲ್ಲಿ ಲೈಂಗಿಕತೆಗೆ ಸಂಬಂಧಿಸಿದ ಯೋಚನೆಗಳು ಹಗಲು– ರಾತ್ರಿಯ ಪರಿವೆಯಿಲ್ಲದೇ ಪದೆ ಪದೆ ಬರುತ್ತಿರುತ್ತವೆ. ಪ್ರತಿ 52 ಸೆಕೆಂಡುಗಳಿಗೊಮ್ಮೆ ಆತ ಲೈಂಗಿಕ ವಿಷಯದ ಬಗ್ಗೆ ಆಲೋಚನೆ ಮಾಡಿದರೆ, ಹುಡುಗಿಯರಲ್ಲಿ ದಿನಕ್ಕೆ ಒಂದು ಬಾರಿ ಮಾತ್ರವಂತೆ. ವಯಸ್ಸು ಜಾಸ್ತಿಯಾಗುತ್ತ ಹೋದರೂ ಈ ಕಾಮನೆಗಳ, ಈ ಭಾವನೆಗಳ ಜಿಗಿದಾಟಕ್ಕೆ ಮಾತ್ರ ಯಾವುದೇ ಕಡಿವಾಣವಿಲ್ಲ, ಪುರುಷರ ವಿಷಯದಲ್ಲಿ.

‘ಪುರುಷನಿಗೆ ಅವಸರ. ಇದಕ್ಕೆ ಮತ್ತೆ ಆದಿಮಾನವನ ಮೂಲವನ್ನು ಕೆದಕಬೇಕಾಗುತ್ತದೆ. ಬೇಟೆಯನ್ನು ಬೆನ್ನತ್ತಿ ಹೋಗುವ ಅವಸರ, ಹೆಂಡತಿ– ಮಕ್ಕಳನ್ನು ನೋಡಿಕೊಳ್ಳಬೇಕಾದ ಜವಾಬ್ದಾರಿ, ಶತ್ರುಗಳನ್ನು ಹೆಮ್ಮೆಟ್ಟಿಸುವ ಆಕ್ರೋಶ.. ಇವುಗಳ ಮಧ್ಯೆ ಸಂಗಾತಿಯ ಭಾವನೆಗಳಿಗೆ ಸ್ಪಂದಿಸುವಷ್ಟು ಸಮಯ, ತಾಳ್ಮೆಯಾದರೂ ಎಲ್ಲಿತ್ತು’ ಎನ್ನುತ್ತಾರೆ ನಿವೃತ್ತ ಮಾನವಶಾಸ್ತ್ರ ಅಧ್ಯಯನದ ಅಧ್ಯಾಪಕ ಡಾ. ಚಿರಂತನ್‌ ಎಂ. ಪಾಟೀಲ.

ಅದೇ ಅಡ್ರೆನಲಿನ್‌ ಏರಿಕೆ ಈಗಲೂ ಮುಂದುವರಿದುಕೊಂಡು ಬಂದಿದೆ. ಹುಡುಗಿಯನ್ನು ಕಂಡೊಡನೆ ‘ಐ ಲವ್‌ ಯೂ’ ಎಂದು ಹೇಳಲು ಅವಸರ. ಸಮಯ ಕಳೆದಂತೆ ಆ ಪ್ರೀತಿಯ ಭಾಷೆ ಮಾತನಾಡಲಿಕ್ಕೆ ಎಲ್ಲಿಲ್ಲದ ಬೇಸರ. ಆದರೆ ಆಕೆಗೋ ಶುರುವಿಗೆ ಪ್ರೀತಿಯನ್ನು ವ್ಯಕ್ತಪಡಿಸಲು ಹಿಂಜರಿಕೆ ಇದ್ದರೂ ಸಂಬಂಧ ಗಟ್ಟಿಯಾದಂತೆ ಇನಿಯನಿಂದ ಮತ್ತೆ ಮತ್ತೆ ಕೇಳುವ ಬಯಕೆ.

ಹೆಲೆನ್‌ ಫಿಶರ್‌ ಪ್ರಕಾರ, ಸಂಬಂಧ ಗಟ್ಟಿಯಾದ ಮೇಲೆ ಯುವತಿಯರು ಗೆಳೆಯನಿಗೆ ಪದೇ ಪದೇ ‘ಐ ಲವ್‌ ಯೂ’ ಎಂದು ಹೇಳುತ್ತಿರುತ್ತಾರಂತೆ. ಆದರೆ ಯುವಕರು ಮಾತ್ರ ಅದೆಲ್ಲ ಮುಗಿದ ಕತೆ ಎಂದು ಮುಗುಮ್ಮಾಗಿ ಇರುತ್ತಾರಂತೆ; ಮನಸ್ಸನ್ನು ಅರಳಿಸುವ, ಕೆರಳಿಸುವ ಇನ್ನೊಂದು ಹುಡುಗಿಗೆ ಆ ಮಾತು ಹೇಳಲು ಕಾತರಿಸುತ್ತಾರಂತೆ. ಹದಿಹರೆಯದಲ್ಲೂ ಅಷ್ಟೆ, ಹುಡುಗರು ಕಣ್ಣಿಗೆ ಕಾಣುವ ಬಹುತೇಕ ಎಲ್ಲಾ ಹುಡುಗಿಯರಿಂದ ಆಕರ್ಷಿತರಾಗುವುದು ಜಾಸ್ತಿ. ಆದರೆ ಹುಡುಗಿಯರು ಮಾತ್ರ, ಹೃದಯಕ್ಕೆ, ಮನಸ್ಸಿಗೆ ಹತ್ತಿರುವಾಗುವವನನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ.

ಅಂದರೆ ಮತ್ತೆ ಮತ್ತೆ ಹೇಳಬೇಕಾಗಿಲ್ಲ, ‘ಮೆನ್‌ ಫ್ರಂ ಮಾರ್ಸ್‌; ವಿಮೆನ್‌ ಫ್ರಂ ವೀನಸ್‌’ ಎಂದು.

***
ಬದಲಾದ ಪ್ರೀತಿಯ ಪರಿಭಾಷೆ
ಪ್ರೀತಿಯನ್ನು ತ್ರಿಕೋನಕ್ಕೆ ಹೋಲಿಸಲಾಗುತ್ತದೆ. ಆಪ್ತತೆ, ಆಕರ್ಷಣೆ, ಬದ್ಧತೆ ಇವು ಮೂರೂ ತ್ರಿಕೋನದ ಬಾಹುಗಳಂತೆ ಪರಸ್ಪರ ಜೋಡಣೆಯಾಗಿದ್ದರೆ ಮಾತ್ರ ಸಂಬಂಧ ಗಟ್ಟಿಯಾಗಿ ದೀರ್ಘಕಾಲ ಬಾಳುತ್ತದೆ. ಆದರೆ ಇದು ಈಗ ಬದಲಾಗಿದೆ. ಇಂದಿನ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌, ಡೇಟಿಂಗ್‌ ಆ್ಯಪ್‌ಗಳ ಜಮಾನಾದಲ್ಲಿ ಎಲ್ಲವೂ ಅಲ್ಪಾಯುಷಿ. ಮೊಬೈಲ್‌ ಫೋನಿನಂತೆ ಸಂಗಾತಿ ಕೂಡ ‘ಅಪ್‌ಗ್ರೇಡೆಡ್‌ ವರ್ಷನ್‌’ ಅಗಿರಬೇಕು. ಹೊಸ ಫೋನ್‌ ಖರೀದಿಸಿದಾಗ ಉಂಟಾಗುವ ಥ್ರಿಲ್‌ ಸಂಬಂಧದಲ್ಲೂ ಇರಬೇಕು. ಜೊತೆಗೆ ‘ನಾನು’ ಎಂಬ ಅಹಂಭಾವ ನುಸುಳಿ ಸಂಬಂಧವನ್ನೇ ಹಾಳುಗೆಡವುತ್ತದೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !