ಇಲ್ಲಿದೆ ಬ್ರಿಟನ್‌ ದೇಶದ ಹದಿನಾರನೇ ವಯಸ್ಸಿನ ತರುಣಿ ಎಲನ್‌ ಸಮಾಧಿ

7

ಇಲ್ಲಿದೆ ಬ್ರಿಟನ್‌ ದೇಶದ ಹದಿನಾರನೇ ವಯಸ್ಸಿನ ತರುಣಿ ಎಲನ್‌ ಸಮಾಧಿ

Published:
Updated:
Deccan Herald

ಸಿರಾ ಪ್ರವಾಸಿ ಮಂದಿರಕ್ಕೆ ಹೋದಾಗಲೆಲ್ಲಾ ಅಲ್ಲಿಯ ಸಮಾಧಿಯೊಂದು ಗಮನ ಸೆಳೆಯುತ್ತದೆ. ಜಗತ್ತಿನೆಲ್ಲರ ಚಿತ್ತ ಸೆಳೆದಿರುವ ತಾಜ್ ಮಹಲ್ ಕೂಡ ಒಂದು ಸಮಾಧಿಯೇ. ಹಾಗೆಂದು ನಮ್ಮೂರಲ್ಲಿರುವ ಈ ಸಮಾಧಿಗೆ ತಾಜ್‌ಮಹಲ್ ವೈಭವದ ಲವಲೇಶವೂ ಇಲ್ಲ. ಇದು ಒಂದು ಸಾಧಾರಣ ಸಮಾಧಿ.

ಈ ಸಮಾಧಿ ಆಪ್ತವಾಗಲು ನಮ್ಮೂರ ವಂಶಸ್ಥರದೇನೂ ಅಲ್ಲ. ಸ್ವತಂತ್ರ ಹೋರಾಟಗಾರರದೂ ಅಲ್ಲ. ಈ ದೇಶದವರದಂತೂ ಮೊದಲೇ ಅಲ್ಲ. ಆದರೂ ಅದನ್ನು ಸೂಕ್ಷವಾಗಿ ಗಮನಿಸಿದರೆ ದೇಶಾಂತರ, ಕಾಲಾಂತರ, ಪುರಾಣ, ಇತಿಹಾಸವೆಂದೆಲ್ಲಾ ಹರಿದಾಡುತ್ತಾ ಕೊನೆಗೆ ಈ ಸಮಾಧಿಯ ಬಳಿಗೆ ಬಂದುಬಿಡುತ್ತದೆ.

ಇದು ಬ್ರಿಟನ್ ದೇಶದ ಹದಿನಾರನೇ ವಯಸ್ಸಿನ ತರುಣಿಯೊಬ್ಬಳ ಸಮಾಧಿ. ಅಲ್ಲಿರುವ ಮರಣ ಶಾಸನದ ಪ್ರಕಾರ ಆಕೆಯ ಹೆಸರು ಎಲನ್. ಹೆಲನ್ ಅಲ್ಲ. ಏಕೆಂದರೆ ‘ಹೆಲನ್’ ಅಂದ ಕೂಡಲೇ ಜಗತ್ತಿನ ಅಪ್ರತಿಮ ಚೆಲುವೆ ಗ್ರೀಕ್ ಪುರಾಣದ ಆ ಹೆಲನ್ ನೆನಪು ಮೂಡುತ್ತದೆ. ‘ಹೆಲನಳ ರೂಪದ ಮಾಂತ್ರಿಕತೆಗೆ ಗಂಡಸರ ಕಣ್ಣುಗಳು ಸೋಲುವವು; ನಗರಗಳು ಹೊತ್ತಿ ಉರಿಯುವವು’ ಎಂದು ಆ ಗ್ರೀಕ್ ಪುರಾಣದಲ್ಲೇ ಉಲ್ಲೇಖವಾಗಿದೆ. ಆದರೆ, ಇಲ್ಲಿ ಸಮಾದಿಯಾಗಿರುವ ಎಲನ್‌ಗೂ ಗ್ರೀಕ್ ಪುರಾಣದ ಹೆಲನ್‍ಗೂ ಯಾವುದೇ ಸಂಬಂಧ ಇಲ್ಲ.

ಈಗ ಈ ಸಮಾಧಿ ವಿಷಯಕ್ಕೆ ಬರೋಣ. ಸಾಮಾನ್ಯವಾಗಿ ಭಾರತೀಯ ರೀತಿನೀತಿಗಳ ಪ್ರಕಾರ ಸಮಾಧಿಗಳು ಊರ ಹೊರಗಡೆ ಇರುತ್ತವೆ. ಆದರೆ ಅಂದು ಆಂಗ್ಲರು ನಮ್ಮನ್ನು ಆಳ್ವಿಕೆ ಮಾಡುತ್ತಿದ್ದ ಏಕೈಕ ಕಾರಣಕ್ಕಾಗಿಯೋ ಏನೋ ಅವರ ಹೆಣಗಳಿಗೂ ಪ್ರತಿಷ್ಠಿತ ಪ್ರವಾಸಿ ಮಂದಿರದ ಆವರಣದಲ್ಲೇ ಸಮಾಧಿಯಾಗುವ ಅವಕಾಶ ಲಭ್ಯವಾಗಿದೆ. 

ಅಂದಹಾಗೆ ಇಲ್ಲಿ ಮೃತ ಎಲನ್‍ಗೆ ಸಮಾಧಿ ಕಟ್ಟಿಸಿದವರು ಆಕೆಯ ಪತಿ ಆಂಗ್ಲರ ಸೈನ್ಯದ ತುಕಡಿಯೊಂದರ ಉಪನಾಯಕ ಡಬ್ಲ್ಯೂ.ಎಚ್.ಫರ್ಗೂಸನ್. ಆತ ಸಮಾಧಿ ಮೇಲೆ ಚರಮಗೀತೆಯನ್ನೇನೂ ಕೆತ್ತಿಸಿಲ್ಲ. ಆಂಗ್ಲ ಭಾಷೆಯಲ್ಲಿ ಶಿಲಾಶಾಸನ ಬರೆಸಿದ್ದಾನೆ. ಅದರಲ್ಲಿ ಕಾವ್ಯಮಯವಾದ ಶಬ್ದಗಳಿಲ್ಲ. ಆದರೆ ಆ ಸೈನ್ಯಾಧಿಕಾರಿಯು ಪ್ರಿಯತಮೆ ಅಥವಾ ಚಿಕ್ಕವಯಸ್ಸಿನ ಮಡದಿಯ ಸಾವಿನಿಂದ ಕಂಗಾಲಾಗಿ ತೋಡಿಕೊಂಡ ದುಃಖ ಕಾವ್ಯದಷ್ಟೇ ತೀವ್ರವಾಗಿ ಶಿಲಾಶಾಸನದಲ್ಲಿ ದಾಖಲಾಗಿದೆ.

ಆ ಶಾಸನದ ಪ್ರಕಾರ ಡಬ್ಲ್ಯೂ.ಎಚ್.ಫರ್ಗೂಸನ್ ಸೈನ್ಯದ ತುಕಡಿಯೊಂದಿಗೆ ತುಮಕೂರು ಜಿಲ್ಲೆಯ ಸಿರಾ ಪಟ್ಟಣದ ಪ್ರವಾಸಿಮಂದಿರದಲ್ಲಿ ಕೆಲಕಾಲ ಬೀಡುಬಿಟ್ಟಿದ್ದ. ಅವನ ಜೊತೆ ಪತ್ನಿ ಎಲನ್ ಕೂಡ ತಂಗಿದ್ದಳು. ಆಗ ಸಿರಾ ಪ್ರದೇಶದ ಸುತ್ತಲೂ ಭೀಕರ ಪ್ಲೇಗ್ ರೋಗ ಹರಡಿತು. ಆಗ ಪ್ಲೇಗ್ ರೋಗಕ್ಕೆ ಮದ್ದು ಇರಲಿಲ್ಲ. ಎಲನ್ ಕೂಡ ಪ್ಲೇಗ್ ರೋಗಕ್ಕೆ ತುತ್ತಾದಳು.

ಪ್ಲೇಗನ್ನು ಪೂರ್ವಿಕರು ಮಹಾಮಾರಿ ರೋಗವೆಂದೇ ಕರೆದಿದ್ದಾರೆ. ಆ ರೋಗಕ್ಕೆ ತುತ್ತಾದವರನ್ನು ಉಪಚರಿಸಲು ಯಾವ ಬಂಧು-ಬಳಗವೂ ಹತ್ತಿರ ಸುಳಿಯುತ್ತಿರಲಿಲ್ಲ. ಆ ರೋಗಕ್ಕೆ ತುತ್ತಾದವರನ್ನು ಇದ್ದಲ್ಲಿಯೇ ಬಿಟ್ಟು ದೂರದ ಕಾಡಿಗೆ ಹೋಗಿ ವಾಸಿಸುತ್ತಿದ್ದರು. ಏಕೆಂದರೆ ಪ್ಲೇಗ್ ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿತ್ತು.

ಆದರೆ ಆಂಗ್ಲ ಸೈನ್ಯಾಧಿಕಾರಿ ಫರ್ಗೂಸನ್ ರೋಗಕ್ಕೆ ತುತ್ತಾದ ಪ್ರಿತಿಯ ಮಡದಿಯನ್ನು ಬಿಟ್ಟು ಓಡಿ ಹೋಗಲಿಲ್ಲ. ಆಕೆಯ ಸಾಮಿಪ್ಯದಲ್ಲೇ ಇದ್ದು ಸುಮಾರು 40 ದಿನಗಳ ಕಾಲ ಉಪಚರಿಸಿದ. ರೋಗ ವಾಸಿಯಾಗಲಿಲ್ಲ. 1846 ಮಾರ್ಚ್ 14ರಂದು ಎಲನ್ ಮೃತಳಾದಳು. ಆಗ ತೀವ್ರವಾಗಿ ದುಃಖಿಸುವ ಸೇನಾಧಿಕಾರಿಯು ಪತ್ನಿಯ ಮೃತದೇಹಕ್ಕೆ ಪ್ರವಾಸಿ ಮಂದಿರದ ಆವರಣದಲ್ಲೇ ಸಮಾಧಿ ಕಟ್ಟಿಸುತ್ತಾನೆ. ‘ಕ್ರೂರ ಪ್ಲೇಗ್ ರೋಗ ತನ್ನ ಮಡದಿಯನ್ನು ಕಿತ್ತುಕೊಂಡ ದುಃಖದಲ್ಲೂ ಅವಳ ಜೊತೆ ಕಳೆದ ನಲವತ್ತು ದಿನಗಳು ಮಧುರವಾಗಿದ್ದವು’ ಎಂದು ಸಮಾಧಿ ಮೇಲಿನ ಮರಣ ಶಾಸನದಲ್ಲಿ ಸ್ಮರಿಸಿದ್ದಾನೆ.

ಇಲ್ಲಿಯ ಶಾಸನದಲ್ಲಿರುವ 1846ನೇ ಇಸವಿಯನ್ನು ಗಮನಿಸಿದರೆ ಎಲನ್ ಸಮಾಧಿಯಾದ ನೂರು ವರ್ಷಕ್ಕೆ ಭಾರತಕ್ಕೆ ಸ್ವತಂತ್ರ ಸಿಕ್ಕಿದೆ. ಅಂದರೆ ಇಂದಿಗೆ 172 ವರ್ಷಗಳಷ್ಟು ಹಳೆಯದಾದ ಸಮಾಧಿ ಈಗಲೂ ಸುಸ್ಥಿಯಲ್ಲಿದೆ. ಅಲ್ಲದೆ ಮರಣ ಶಾಸನ ಓದುತಿದ್ದರೆ ‘ಎಲನ್ ನಿನ್ನೆಯಷ್ಟೇ ಈ ಪ್ರವಾಸಿ ಮಂದಿರದಲ್ಲಿ ಪ್ಲೇಗ್ ರೋಗದಿಂದ ನರಳಿದಳೇನೋ..’ಅನ್ನಿಸಿಬಿಡುತ್ತದೆ. ಯಾಕೆಂದರೆ ದೇಶಾಂತರ, ಕಾಲಾಂತರ ಹೋದರೂ ಸಾವು ಮಾತ್ರ ಎಲ್ಲೆಡೆಯೂ ಇದ್ದಂತೆಯೇ ಇದೆ. ಅದಕ್ಕೆ ಸಾವೇ ಇಲ್ಲ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !