ರಥದ ಬೀದಿಗೆ ‘ಪಾರಂಪರಿಕ ದೀಪ’ದ ಮೆರುಗು

7
₹ 1.80 ಕೋಟಿ ಯೋಜನೆಯ ಪಾರಂಪರಿಕ ದೀಪ ಅಳವಡಿಕೆ ಕಾರ್ಯ ಆರಂಭ

ರಥದ ಬೀದಿಗೆ ‘ಪಾರಂಪರಿಕ ದೀಪ’ದ ಮೆರುಗು

Published:
Updated:
Prajavani

ಚಾಮರಾಜನಗರ: ನಗರದ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ರಥದ ಬೀದಿ ಇನ್ನೆರಡು ತಿಂಗಳಲ್ಲಿ ಪಾರಂಪರಿಕ ದೀಪಗಳಿಂದ ಜಗಮಗಿಸಲಿದೆ. ಬೀದಿಯಲ್ಲಿ ಪಾರಂಪರಿಕ ಶೈಲಿಯ ಕಂಬ ಅಳವಡಿಕೆ ಕಾರ್ಯವನ್ನು ನಗರಸಭೆ ಆರಂಭಿಸಿದೆ.

ನಗರದ ಚಾಮರಾಜೇಶ್ವರಸ್ವಾಮಿ ರಥ ಸಾಗುವ ಮಾರ್ಗವೇ ರಥದ ಬೀದಿ. ರಥವು ಗುರುನಂಜಶೆಟ್ಟರ ಛತ್ರ ಮಾರ್ಗವಾಗಿ ವೀರಭದ್ರಸ್ವಾಮಿ ದೇವಸ್ಥಾನ, ಪಟ್ಟಣ ಪೊಲೀಸ್‌ ಠಾಣೆ, ಭುವನೇಶ್ವರಿ ವೃತ್ತದವರೆಗೆ ಸಾಗಿ ನಂತರ ದೇವಸ್ಥಾನದ ಮುಂಭಾಗದಲ್ಲಿ ನಿಲ್ಲುವುದು ವಾಡಿಕೆ. ಈ ಮಾರ್ಗದಲ್ಲಿ ಪಾರಂಪರಿಕ ದೀಪ ಅಳವಡಿಕೆಯಾಗಲಿದೆ. ಕಂಬದ ವಿನ್ಯಾಸ ನಂದಿ ಧ್ವಜದ ಕಂಬವನ್ನು ಹೋಲುತ್ತದೆ.

₹ 1.80 ಕೋಟಿ ಯೋಜನೆ: ಈಗಿರುವ ವಿದ್ಯುತ್‌ ಕಂಬಗಳನ್ನು ತೆರವುಗೊಳಿಸಿ, ನೆಲೆದಡಿಯಲ್ಲಿ ವಿದ್ಯುತ್‌ ತಂತಿ ಅಳವಡಿಸುವ ಯೋಜನೆ ಇದಾಗಿದ್ದು, ₹ 1.80 ಕೋಟಿ ವೆಚ್ಚವಾಗಲಿದೆ. ಇದರ ಭಾಗವಾಗಿ ರಥದ ಬೀದಿಯ ಎರಡು ಬದಿಗಳಲ್ಲಿ ಫುಟ್‌ಪಾತ್‌ ಕೂಡ ನಿರ್ಮಾಣವಾಗಲಿದೆ.

‘ಯೋಜನೆಗಾಗಿ ಸೆಸ್ಕ್‌ನ ಅನುಮತಿಗೆ ಬರೆಯಲಾಗಿದ್ದು, ಒಂದು ವಾರದಲ್ಲಿ ಅನುಮತಿ ಸಿಗಲಿದೆ’ ಎಂದು ನಗರಸಭೆ ಆಯುಕ್ತ ಎಂ.ರಾಜಣ್ಣ ‘ಪ್ರಜಾವಾಣಿ’ಗೆ ಹೇಳಿದರು.

ರಥ ಹೊರಡುವಾಗ ಮೇಲ್ಭಾಗದಲ್ಲಿ ಯಾವುದೇ ಅಡಚಣೆ ಆಗಬಾರದು ಎಂಬ ಉದ್ದೇಶದಿಂದ ನೆಲದಡಿಯಲ್ಲಿ ವೈರ್‌ ಅಳವಡಿಸಲಾಗುತ್ತಿದೆ. 

₹ 90 ಲಕ್ಷ ಕಾರ್ಯ ಆರಂಭ: ‘ಈಗಾಗಲೇ ₹ 1.80 ಕೋಟಿ ವೆಚ್ಚದ ಟೆಂಡರ್‌ ಪೂರ್ಣಗೊಂಡಿದೆ. ಮೊದಲ ಹಂತವಾಗಿ ₹ 90 ಲಕ್ಷ ವೆಚ್ಚದಲ್ಲಿ ಕಂಬ ಅಳವಡಿಕೆ ಕಾರ್ಯ ನಡೆಯುತ್ತಿದೆ. ಒಟ್ಟು 50 ದೀಪ ಅಳವಡಿಕೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಉಳಿದ ಕೆಲಸವನ್ನೂ ಆರಂಭಿಸಲಾಗುತ್ತದೆ’ ಎಂದು ಎಇಇ ಸತ್ಯಮೂರ್ತಿ ‘ಪ್ರಜಾವಾಣಿ’ಗೆ ಹೇಳಿದರು.

ಭಕ್ತರಿಗೆ ಅನುಕೂಲ

ದೇವಸ್ಥಾನದ ಸುತ್ತಲೂ ಭಕ್ತರ ಅನುಕೂಲಕ್ಕಾಗಿ ಪ್ರದಕ್ಷಿಣೆ ಮಾರ್ಗ ನಿರ್ಮಾಣಕ್ಕೆ ನಗರಸಭೆ ಯೋಜನೆ ರೂಪಿಸಿದೆ. ಸುತ್ತಲೂ ಪ್ರದಕ್ಷಿಣೆ ಮಾರ್ಗ ನಿರ್ಮಿಸಿ, ಗ್ರೀಲ್‌ ಅಳವಡಿಸಲಿದೆ. ಈಗಾಗಲೇ ದೇವಸ್ಥಾನ ಜೀರ್ಣೋದ್ಧಾರ ಕಾರ್ಯವೂ ನಡೆಯುತ್ತಿದೆ. ಫುಟ್‌ಪಾತ್‌ ಮಾದರಿಯಲ್ಲೇ ಮಾರ್ಗ ನಿರ್ಮಾಣವಾಗಲಿದೆ.

ವಿಶಾಲ ಜಾಗ: ದೇವಸ್ಥಾನದ ಹಿಂಭಾಗ ಇದ್ದ ಮಳಿಗೆಗಳನ್ನು ತೆರವುಗೊಳಿಸಿದ ಬಳಿಕ ಸುತ್ತಲೂ ವಿಶಾಲ ಜಾಗವಿದೆ. ಇದರ ಸುತ್ತಲೂ ಗ್ರೀಲ್‌ಗಳನ್ನು ಅಳವಡಿಸಲಾಗುತ್ತದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪ್ರದಕ್ಷಿಣಿ ಹಾಕಲು ಹೆಚ್ಚಿನ ಅನುಕೂಲವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !