ಬಿಬಿಎಂಪಿ ನೌಕರರ ಮೇಲೆ ಹಲ್ಲೆ; ಜಾಮೀನು ಅರ್ಜಿಗಳೆಲ್ಲಾ ಹೈಕೋರ್ಟ್‌ಗೆ ವರ್ಗ

7

ಬಿಬಿಎಂಪಿ ನೌಕರರ ಮೇಲೆ ಹಲ್ಲೆ; ಜಾಮೀನು ಅರ್ಜಿಗಳೆಲ್ಲಾ ಹೈಕೋರ್ಟ್‌ಗೆ ವರ್ಗ

Published:
Updated:
Deccan Herald

ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ಫ್ಲೆಕ್ಸ್, ಬ್ಯಾನರ್‌, ಹೋರ್ಡಿಂಗ್ಸ್‌ ತೆರವು ಕಾರ್ಯಾಚರಣೆ ವೇಳೆ ಬಿಬಿಎಂಪಿ ನೌಕರರ ಮೇಲೆ ನಡೆದ ಹಲ್ಲೆ ಪ್ರಕರಣಗಳಲ್ಲಿ, ಆರೋಪಿಗಳು ಜಾಮೀನು ಅರ್ಜಿ ಸಲ್ಲಿಸಿದರೆ ಅವುಗಳನ್ನು ಹೈಕೋರ್ಟ್‌ಗೆ ವರ್ಗಾಯಿಸಬೇಕು’ ಎಂಬ ಮುಖ್ಯ ನ್ಯಾಯಮೂರ್ತಿಗಳ ಆದೇಶ ಕಾನೂನು ತಜ್ಞರ ಜಿಜ್ಞಾಸೆಗೆ ಗುರಿಯಾಗಿದೆ.

‘ಈ ಪ್ರಕರಣಗಳಲ್ಲಿ ಬಂಧನಕ್ಕೂ ಮುನ್ನ ಅಥವಾ ಬಂಧನದ ನಂತರ ಆರೋಪಿಗಳು ಜಾಮೀನು ಅರ್ಜಿ ಸಲ್ಲಿಸಿದರೆ ಅಧೀನ ನ್ಯಾಯಾಲಯ ಅವುಗಳನ್ನು ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್‌ಗೆ ಕಳುಹಿಸಿಕೊಡಬೇಕು. ಇವುಗಳನ್ನು ದಾಖಲಿಸಿಕೊಂಡ ರಿಜಿಸ್ಟ್ರಾರ್ ಜನರಲ್‌ ಅವರು, ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿಗಳನ್ನು ವಿಚಾರಣೆ ನಡೆಸುವ ನ್ಯಾಯಪೀಠಕ್ಕೆ ವರ್ಗಾಯಿಸಬೇಕು’ ಎಂದು ಮುಖ್ಯ ನ್ಯಾಯಮೂರ್ತಿ (ಸಿ.ಜೆ) ದಿನೇಶ್‌ ಮಾಹೇಶ್ವರಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಇದೇ 3ರಂದು ಆದೇಶಿಸಿದೆ.

ಈ ಆದೇಶಕ್ಕೆ ವಕೀಲ ವೃಂದ ಮಿಶ್ರ ಪ್ರತಿಕ್ರಿಯೆ ನೀಡಿದೆ. ‘ಈ ಆದೇಶ ಸಂಪೂರ್ಣ ಕಾನೂನುಬಾಹಿರ’ ಎನ್ನುವ ಭಾರತೀಯ ವಕೀಲರ ಪರಿಷತ್‌ನ ಸದಸ್ಯರೂ ಆದ ಹಿರಿಯ ವಕೀಲ ವೈ.ಆರ್. ಸದಾಶಿವ ರೆಡ್ಡಿ, ‘ಪ್ರಕರಣದ ಆರೋಪಗಳು ಜಾಮೀನು ಪಡೆಯಬಹುದಾದಂಥ ಸ್ವಭಾವ ಹೊಂದಿವೆ. ಇವೇನು ಮರ್ಡರ್‌ ಕೇಸಾ’ ಎಂದು ಪ್ರಶ್ನಿಸಿದ್ದಾರೆ.

‘ಇದೊಂದು ಸೂಕ್ಷ್ಮ ವಿಷಯ’ ಎನ್ನುವ ಜಿ.ಗುರುಮಠ ಅವರು, ‘ಈ ಆದೇಶ ಆರೋಪಿಯ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಂಡಂತೆ’ ಎಂದು ಬಣ್ಣಿಸಿದ್ದಾರೆ. ಮತ್ತೊಬ್ಬ ಹಿರಿಯ ವಕೀಲ ಎಸ್.ಪಿ. ಶಂಕರ್, ‘ನಿರೀಕ್ಷಣಾ ಜಾಮೀನು ಮತ್ತು ರೆಗ್ಯುಲರ್‌ ಜಾಮೀನುಗಳನ್ನು ಪಡೆಯಲು ಆರೋಪಿಗಳು ವಿಚಾರಣಾ ನ್ಯಾಯಾಲಯಗಳಿಗೇ ಮೊರೆ ಹೋಗಬೇಕು. ಅದು ಬಿಟ್ಟು ಇವುಗಳನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತದೆ ಎನ್ನುವುದು ಎಷ್ಟು ಸರಿ’ ಎನ್ನುತ್ತಾರೆ.

‘ಕಾನೂನು ತಿದ್ದುಪಡಿ ಆಗದೆ ಇಂತಹ ಆದೇಶ ಮಾಡುವುದು ಕಾನೂನು ಸಂಹಿತೆಗೆ ವಿರೋಧವಾದುದು’ ಎಂಬುದು ಅವರ ಅಭಿಪ್ರಾಯ.

ಆರೋಪಿ ಅರ್ಜಿ ವಿಚಾರಣೆ ಮುಂದೂಡಿಕೆ 
ಬೆಂಗಳೂರು:
ಫ್ಲೆಕ್ಸ್ ತೆರವು ಕಾರ್ಯಾಚರಣೆ ವೇಳೆ ಬಿಬಿಎಂಪಿ ನೌಕರನ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪಿ.ಜಿ. ಮಲ್ಲಿಕಾರ್ಜುನ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಈ ಅರ್ಜಿ‌ಯನ್ನು ಶ್ರೀನಿವಾಸ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶನಿವಾರ ವಿಚಾರಣೆ ನಡೆಸಿತು.

‘ನಾನು ಗುತ್ತಿಗೆದಾರ ಮಾತ್ರ. ಹಲ್ಲೆ ನಡೆದ ವೇಳೆ ನಾನು ಸ್ಥಳದಲ್ಲಿ ಇರಲಿಲ್ಲ. ಘಟನೆಗೂ ನನಗೂ ಸಂಬಂಧವಿಲ್ಲ. ಆದ್ದರಿಂದ ಜಾಮೀನು ನೀಡಬೇಕು’ ಎಂದು ಮನವಿ ಮಾಡಿದ್ದಾರೆ.

‘ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಬೇಕು’ ಎಂದು ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ಮನವಿ ಮಾಡಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ವಿಚಾರಣೆಯನ್ನು ಇದೇ 21ಕ್ಕೆ ಮುಂದೂಡಿದೆ. ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆ. 2ರಂದು ಮಧ್ಯಾಹ್ನ ಟಿನ್‌ ಫ್ಯಾಕ್ಟರಿ ಬಳಿ ಫ್ಲೆಕ್ಸ್ ತೆರವು ಕಾರ್ಯಾಚರಣೆ ವೇಳೆ ಕಾರ್ಮಿಕರ ಮೇಲೆ ನಡೆದಿದ್ದ ಹಲ್ಲೆ‌ಗೆ ಸಂಬಂಧಿಸಿದಂತೆ ದಾಖಲಿಸಿರುವ ಕ್ರಿಮಿನಲ್ ಪ್ರಕರಣ ಇದಾಗಿದೆ.

‘ಸಿ.ಜೆ ಆದೇಶಕ್ಕೆ ವಿಶೇಷಾಧಿಕಾರವಿದೆ’
‘ನಮ್ಮ ದೇಶದಲ್ಲಿ ಕಾನೂನಿನ ಸದ್ಬಳಕೆಯಾದರೆ ದೇವರುಗಳೂ ಜಾಗ ಖಾಲಿ ಮಾಡಬೇಕಾಗಬಹುದು...!’ ಎನ್ನುತ್ತಾರೆ ವಕೀಲ ಸಿ.ಎಚ್‌.ಹನುಮಂತರಾಯ.

‘ಸಿ.ಜೆ. ಆದೇಶ ಮೇಲ್ನೋಟಕ್ಕೆ ಕಾನೂನು ಬಾಹಿರ ಅನ್ನಿಸುವುದಿಲ್ಲ. ವಿಶೇಷ ಪ್ರಕರಣದಲ್ಲಿ ನ್ಯಾಯಪೀಠ ತನ್ನ ವಿಶೇಷಾಧಿಕಾರದ ಚಾಟಿ ಬೀಸಬಹುದು. ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗಳಿಗೆ ಈ ರೀತಿಯ ಅಂತರ್ಗತ (ಇನ್‌ಹರೆಂಟ್‌) ಅಧಿಕಾರಗಳಿವೆ. ಸದ್ಯದ ಪ್ರಕರಣದಲ್ಲಿ ಪರಿಪೂರ್ಣ (ಪ್ಲೀನರಿ) ಅಧಿಕಾರ ಪ್ರದರ್ಶಿಸಿದ್ದಾರೆ’ ಎನ್ನುತ್ತಾರೆ ಅವರು.

‘ನ್ಯಾಯ ಒದಗಿಸುವ ದೃಷ್ಟಿಯಿಂದ ಹೈಕೋರ್ಟ್‌ ತನ್ನ ಅಧಿಕಾರ ಬಳಸಲು ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಕಲಂ 482ರ ಅಡಿಯಲ್ಲಿ ಅವಕಾಶವಿದೆ. ಇದಕ್ಕೆ ಪುಷ್ಟಿ ನೀಡುವ ಅಧಿಕಾರವೂ ಕಲಂ 407,  ಉಪ ಕಲಂ 1, ಉಪ ಧಾರಾ 4, ಉಲ ಕಲಂ 2 ಮತ್ತು 8ರಲ್ಲಿದೆ. ಅಧೀನ ನ್ಯಾಯಾಲಯದ (ಮ್ಯಾಜಿಸ್ಟ್ರೇಟ್‌ ಅಥವಾ ಸೆಷನ್ಸ್‌ ಕೋರ್ಟ್‌) ಮುಂದೆ ಇರುವ ಯಾವುದೇ ಪ್ರಕರಣವನ್ನು ಇತ್ಯರ್ಥಪಡಿಸಲು ಹೈಕೋರ್ಟ್‌ ತನ್ನ ಮುಂದೆ ವಿಚಾರಣೆಗೆ ತರಿಸಿಕೊಳ್ಳಲು ಅವಕಾಶವಿದೆ’ ಎಂದು ಹನುಮಂತರಾಯ ವಿವರಿಸುತ್ತಾರೆ.

‘ಈ ರೀತಿ ತರಿಸಿಕೊಂಡ ಪ್ರಕರಣಗಳಲ್ಲಿ ಹೈಕೋರ್ಟ್‌, ವಿಚಾರಣಾ ನ್ಯಾಯಾಲಯಗಳ ಮುಂದೆ ನಡೆಯುವ ನ್ಯಾಯ ವಿತರಣಾ ಪ್ರಕ್ರಿಯೆಯನ್ನೇ ಅನುಸರಿಸಬೇಕಾಗುತ್ತದೆ’ ಎನ್ನುತ್ತಾರೆ.

 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !