ಶುಕ್ರವಾರ, ನವೆಂಬರ್ 15, 2019
20 °C

ಸುಳ್ವಾಡಿ ಸ್ವಾಮೀಜಿ ಜಾಮೀನು ಅರ್ಜಿ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

Published:
Updated:

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಸುಳ್ವಾಡಿಯ ಕಿಚ್ಚುಗತ್ತಿ ಮಾರಮ್ಮ ದೇಗುಲದ ಪ್ರಸಾದದಲ್ಲಿ ವಿಷ ಬೆರೆಸಿದ್ದ ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ಕುರಿತ ತೀರ್ಪನ್ನು ಹೈಕೋರ್ಟ್‌ ಕಾಯ್ದಿರಿಸಿದೆ.

ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ಏಕಸದಸ್ಯಪೀಠ ಶುಕ್ರವಾರ ಪೂರ್ಣಗೊಳಿಸಿದೆ. ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ‘ಮಹದೇವಸ್ವಾಮಿ ಅವರನ್ನು ಈ ಪ್ರಕರಣದಲ್ಲಿ ಅನಗತ್ಯವಾಗಿ ಸಿಲುಕಿಸಲಾಗಿದೆ’ ಎಂದರು.

ಆಕ್ಷೇಪಿಸಿದ ಸರ್ಕಾರಿ ವಕೀಲರು, ಮಹದೇವಸ್ವಾಮಿ ಪ್ರಕರಣದ ಪ್ರಮುಖ ಆರೋಪಿ.16 ಜನರನ್ನು ಬಲಿ ತೆಗೆದುಕೊಂಡ ಘಟನೆ ಅತ್ಯಂತ ಗಂಭೀರವಾದದ್ದು. ಸ್ವಾಮೀಜಿ ಜಾಮೀನಿನ ಮೇಲೆ ಬಿಡುಗಡೆಯಾದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರಲಿದ್ದಾರೆ’ ಎಂದು ಹೇಳಿದರು.

2018ರ ಡಿಸೆಂಬರ್‌ನಲ್ಲಿ ಹನೂರು ತಾಲೂಕಿನ ಸುಳ್ವಾಡಿಯ ಕಿಚ್ಚುಗತ್ತಿ ಮಾರಮ್ಮ ದೇವಾಲಯದ ಗೋಪುರ ಶಂಕುಸ್ಥಾಪನೆ ವೇಳೆ ವಿಷ ಬೆರೆಸಿದ್ದ ಪ್ರಸಾದವನ್ನು ಸೇವಿಸಿ ನೂರಾರು ಮಂದಿ ಅಸ್ವಸ್ಥರಾಗಿದ್ದರು. ಅಸ್ವಸ್ಥರ ಪೈಕಿ 16 ಜನ ಮೃತಪಟ್ಟಿದ್ದರು. ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಾಲೂರು ಮಠದ ಇಮ್ಮಡಿ ಮಹದೇವಸ್ವಾಮಿ ಹಾಗೂ ಅಂಬಿಕಾ ಸೇರಿ ಹಲವರನ್ನು ಬಂಧಿಸಿದ್ದರು.

ಅಧೀನ ನ್ಯಾಯಾಲಯ ಜಾಮೀನು ನೀಡದ ಕಾರಣಕ್ಕೆ ಸ್ವಾಮೀಜಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಪ್ರತಿಕ್ರಿಯಿಸಿ (+)