ಬಾಲ್ಡ್‌ವಿನ್‌ ಶಾಲೆ ವಿರುದ್ಧದ ಕ್ರಮಕ್ಕೆ ಹೈಕೋರ್ಟ್ ಮಧ್ಯಂತರ ತಡೆ

7
ಹೈಕೋರ್ಟ್‌ ಸುದ್ದಿ

ಬಾಲ್ಡ್‌ವಿನ್‌ ಶಾಲೆ ವಿರುದ್ಧದ ಕ್ರಮಕ್ಕೆ ಹೈಕೋರ್ಟ್ ಮಧ್ಯಂತರ ತಡೆ

Published:
Updated:

ಬೆಂಗಳೂರು: ‘ನಗರದ ಬಾಲ್ಡ್‌ವಿನ್ ಶಾಲೆಗೆ ನೀಡಿರುವ ಸಂಯೋಜನೆ ರದ್ದುಗೊಳಿಸಿ' ಎಂದು ಐಸಿಎಸ್‌ಇಗೆ ಮಾಡಿರುವ ಮನವಿ ಹಾಗೂ ‘ನಿರಾಕ್ಷೇಪಣ ಪ್ರಮಾಣ ಪತ್ರ ವಾಪಸು ಪಡೆಯಿರಿ’ ಎಂದು ಶಿಕ್ಷಣ ಇಲಾಖೆಗೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ನೀಡಿರುವ ನಿರ್ದೇಶನಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ಬಾಲ್ಡ್‌ವಿನ್‌ ಮೆಥಾಡಿಸ್ಟ್‌ ಶಿಕ್ಷಣ ಸಂಸ್ಥೆ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

‘ಮಕ್ಕಳ ಆರೋಗ್ಯ ಪರೀಕ್ಷೆ ನಡೆಸಬೇಕು ಹಾಗೂ ಶಾಲೆಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂಬ ಆಯೋಗದ ಅಂಶಗಳಿಗೆ ನ್ಯಾಯಪೀಠ ತಡೆ ನೀಡಿ ಆದೇಶಿಸಿದೆ.

‘ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಲು ಅಧಿಕ ಶುಲ್ಕ ವಿಧಿಸಲಾಗುತ್ತಿದೆ’ ಎಂದು ಪೋಷಕರು ನೀಡಿದ್ದ ದೂರಿನ ಆಧಾರದ ಮೇಲೆ, ಆಯೋಗವು ಸರ್ಕಾರಕ್ಕೆ ಈ ಕುರಿತಂತೆ ನಿರ್ದೇಶಿಸಿತ್ತು.

‘ಪೂರ್ವಭಾವಿ ನೋಟಿಸ್ ನೀಡಿ ವಿಚಾರಣೆ ನಡೆಸದೆ ಆಯೋಗವು ಈ ಕ್ರಮಕ್ಕೆ ಮುಂದಾಗಿದೆ. ಆದ್ದರಿಂದ ಈ ನಿರ್ದೇಶನ ರದ್ದುಗೊಳಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ಅರ್ಜಿದಾರರ ಪರ ಹಿರಿಯ ವಕೀಲ ಶಶಿಕಿರಣ ಶೆಟ್ಟಿ ವಾದ ಮಂಡಿಸಿದರು. ಪ್ರತಿವಾದಿಗಳಾದ ರಾಜ್ಯ ಮಕ್ಕಳ ರಕ್ಷಣಾ ಆಯೋಗ, ದಕ್ಷಿಣ ವಲಯದ ಡಿಡಿಪಿಐ, ದಕ್ಷಿಣ–1 ಹಾಗೂ ದಕ್ಷಿಣ–2ರ ಬಿಇಒಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿರುವ ನ್ಯಾಯಪೀಠ, ವಿಚಾರಣೆಯನ್ನು ಒಂದು ವಾರ ಮುಂದೂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !