ಐತಿಹಾಸಿಕ ಸೋಮೇಶ್ವರ ದೇವಾಲಯ

7

ಐತಿಹಾಸಿಕ ಸೋಮೇಶ್ವರ ದೇವಾಲಯ

Published:
Updated:
Prajavani

ರಾಜಧಾನಿ ಬೆಂಗಳೂರಿನಲ್ಲಿರುವ ಪ್ರಾಚೀನ ಮತ್ತು ಆಕರ್ಷಕ ವಾಸ್ತುಶೈಲಿ ಹೊಂದಿರುವ ದೇವಾಲಯಗಳಲ್ಲಿ ಹಲಸೂರಿನ ಸೋಮೇಶ್ವರ ದೇವಾಲಯವೂ ಒಂದು. ಇದು ಅತ್ಯಂತ ಮಹತ್ವದ ಪಾರಂಪರಿಕ ಮತ್ತು ಐತಿಹಾಸಿಕ ತಾಣ. ಧಾರ್ಮಿಕ ಕೇಂದ್ರವೂ ಆಗಿರುವ ಇದು ನಮ್ಮ ನಾಡಿನ ಶ್ರೀಮಂತ ವಾಸ್ತುಶೈಲಿ ಮತ್ತು ಶಿಲ್ಪ ಕಲೆಯ ಬೀಡು.

ಹಲಸೂರು, ಬೆಂಗಳೂರು ಸ್ಥಾಪನೆಗೂ ಪೂರ್ವದ ನೆಲೆ. ಇದರ ಸಮೀಪ ಬ್ರಿಟಿಷರು 1806–07ರಲ್ಲಿ ದಂಡು ಪ್ರದೇಶ (ಕಂಟೋನ್ಮೆಂಟ್) ಸ್ಥಾಪಿಸಿದರು. ನಂತರ ಹಲಸೂರು ಆಧುನಿಕ ಜೀವನ ಶೈಲಿ ಮತ್ತು ನಗರೀಕರಣಕ್ಕೆ ತೆರೆದುಕೊಂಡಿತು. ತಮಿಳು ಭಾಷಿಕರೇ ಹೆಚ್ಚಿರುವ ಈ ಪ್ರದೇಶದ ಸಮೀಪದಲ್ಲಿಯೇ ಮಿಲಿಟರಿ ನೆಲೆಗಳೂ ಇವೆ. ನಗರೀಕರಣದಿಂದ ಈ ಪ್ರದೇಶದಲ್ಲಿ ವಿವಿಧ ಧರ್ಮ, ಜಾತಿ, ಭಾಷಿಕರು, ಹೊರ ರಾಜ್ಯ ಮತ್ತು ವಿದೇಶಿಯರೂ ನೆಲೆಸಿದ್ದಾರೆ.

ಇಲ್ಲಿ ಹಲವು ದೇವಾಲಯಗಳಿದ್ದರೂ ಹೆಚ್ಚು ಪ್ರಸಿದ್ಧವಾಗಿರುವುದು ಸೋಮೇಶ್ವರ ದೇವಾಲಯ. ಐತಿಹಾಸಿಕ ಮಹತ್ವ ಹೊಂದಿರುವ ಇದೊಂದು ಶೈವ ದೇವಾಲಯ. ಪೌರಾಣಿಕ ಕತೆಗಳ ಪ್ರಕಾರ ಮಹರ್ಷಿ ಮಾಂಡವ್ಯರು ತಪಸ್ಸು ಮಾಡುತ್ತಿದ್ದ ಪುಣ್ಯಾಶ್ರಮದ ಪ್ರದೇಶವಿದು. ಅವರು ಅರ್ಚನೆ ಮಾಡುತ್ತಿದ್ದ ಸೋಮೇಶ್ವರ ಲಿಂಗವೇ ಈ ದೇವಾಲಯದ ಭೂಷಣ. ನಂತರ ಯಲಹಂಕ ನಾಡಪ್ರಭು ಜಯಪ್ಪಗೌಡ, ದೈವ ಪ್ರೇರಣೆಯಿಂದ ಇಲ್ಲಿ ದೇವಸ್ಥಾನ ಕಟ್ಟಿಸಿದ್ದ ಎಂದು ಹೇಳಲಾಗುತ್ತದೆ. ಇಲ್ಲಿ ಚೋಳರ, ವಿಜಯನಗರ ಅರಸರ, ಯಲಹಂಕ ನಾಡಪ್ರಭುಗಳ ಕಾಲದ ವಾಸ್ತುಶೈಲಿ, ಶಿಲ್ಪಕಲಾ ಪ್ರಕಾರಗಳ ಪರಿಚಯವಾಗುತ್ತವೆ.

ಪೂರ್ವಾಭಿಮುಖವಾಗಿ ನಿರ್ಮಿಸಲಾಗಿರುವ ಈ ದೇವಾಲಯದಲ್ಲಿ ಚೌಕಾಕಾರದ ಗರ್ಭಗೃಹ, ಅಂತರಾಳ, ಅರ್ಧಮಂಟಪ, ನವರಂಗ, ಪ್ರದಕ್ಷಿಣಾ ಪಥ, ಮುಖಮಂಟಪ, ಧ್ವಜಸ್ತಂಭ, ಬಲಿಪೀಠವಿದೆ. ಮುಖ್ಯ ದೇಗುಲದ ಎಡಬದಿಯಲ್ಲಿ ಕಾಮಾಕ್ಷಿ ಅಮ್ಮನವರ ಗುಡಿಯಿದೆ. ಈ ದೇವಾಲಯಕ್ಕೆ ದೊಡ್ಡ ಗೋಪುರಯುಕ್ತ ದ್ವಾರಬಾಗಿಲು ಇದೆ. ಅದರ ಎದುರಿಗೆ ನಂದಿ ಧ್ವಜಸ್ತಂಭವಿದೆ. ದೇವಸ್ಥಾನದ ಎಡಬದಿಯಲ್ಲಿ ಕಲ್ಯಾಣಿಯಿದೆ.


ಹಲಸೂರಿನ ಸೋಮೇಶ್ವರ ದೇವಾಲಯದ ಮಹಾ ಮುಖಮಂಟಪ

ವಿವಿಧ ಕಾಲದಲ್ಲಿ ಅಭಿವೃದ್ಧಿ: ಈ ದೇವಾಲಯದ ಇತಿಹಾಸ ಕೆದಕುತ್ತಾ ಹೋದರೆ ಕ್ರಿ.ಶ 10ನೇ ಶತಮಾನಕ್ಕೂ ಹಿಂದಕ್ಕೆ ಹೋಗುತ್ತದೆ. ಇದು ಏಕಕಾಲದಲ್ಲಿ ನಿರ್ಮಾಣಗೊಂಡಿರುವ ದೇವಾಲಯವಲ್ಲ. ಹಲವು ಬಾರಿ ಪುನರ್‌ ನಿರ್ಮಾಣಗೊಂಡು ವಿಸ್ತಾರಗೊಂಡಿದೆ. ಕ್ರಿ.ಶ 9ನೇ ಶತಮಾನದ ಉತ್ತರಾರ್ಧದಲ್ಲಿ ಚೋಳರ ಕಾಲದಲ್ಲಿ ಆರಂಭಗೊಂಡ ಇದು ನಾಡಪ್ರಭುಗಳ ಕಾಲದಲ್ಲಿ ಹಂತ ಹಂತವಾಗಿ ನಿರ್ಮಾಣಗೊಂಡಿದೆ. ಕ್ರಿ.ಶ 16, 17ನೇ ಶತಮಾನದಲ್ಲಿ ದೇವಾಲಯಕ್ಕೆ ಹೊಸ ಸೇರ್ಪಡೆಗಳು ಆಗಿವೆ. ದೇವಾಲಯದ ಗರ್ಭಗೃಹ, ನವರಂಗ, ಮುಖಮಂಟಪಗಳ ರಚನೆ, ವಿನ್ಯಾಸ, ಶಿಲ್ಪಕಲೆಗಳಿಂದ ಅವುಗಳ ಕಾಲವನ್ನು ಲೆಕ್ಕ ಹಾಕಬಹುದು ಎನ್ನುತ್ತಾರೆ ಇತಿಹಾಸಕಾರರು.

ಈ ದೇವಾಲಯದಲ್ಲಿ ಐದು ಲಿಂಗಗಳಿವೆ (ಸೋಮೇಶ್ವರ, ನಂಜುಂಡೇಶ್ವರ, ಅರುಣಾಚಲೇಶ್ವರ, ಭೀಮೇಶ್ವರ, ಚಂದ್ರಮೌಳೇಶ್ವರ). ಗರ್ಭಗೃಹದ ಪ್ರದಕ್ಷಿಣಾಪಥದ ಕೋಷ್ಠಗಳಲ್ಲಿರುವ ಜೇಷ್ಠಾದೇವಿ, ದಕ್ಷಿಣಾಮೂರ್ತಿ ಬಿಂಬಗಳು ಪ್ರಾಚೀನ ಶಿಲ್ಪಗಳಾಗಿವೆ. ನವರಂಗದ ಕಂಬಗಳು ನಂತರದ ಕಾಲದವು. ರಾವಣನು ಕೈಲಾಸವನ್ನು ಎತ್ತುತ್ತಿರುವ ಶಿಲ್ಪ, ಗಿರಿಜಾ ಕಲ್ಯಾಣ ಮೊದಲಾದ ಪುರಾಣ ಕತೆಗಳನ್ನು ಬಿಂಬಿಸುವ ಉಬ್ಬು ಶಿಲ್ಪಗಳು ಗಮನಾರ್ಹವಾಗಿವೆ. ದೇವಾಲಯದ ಆವರಣದಲ್ಲಿ ಗಣಪತಿ, ಆಂಜನೇಯ ದೇವಾಲಯವೂ ಇದೆ.

ವಿಜಯನಗರ ಶೈಲಿ: ‘10ನೇ ಶತಮಾನಕ್ಕಿಂತ ಮೊದಲೇ ನಿರ್ಮಿಸಿದ ಗರ್ಭಗೃಹ, ಅಂತರಾಳಗಳಿದ್ದು, ಗರ್ಭಗೃಹದ ನಡುವೆ ಪ್ರಾಚೀನ ಶಿವಲಿಂಗವಿದೆ. ಕೆಂಪೇಗೌಡರ ಕಾಲದ ದೇವಾಲಯದ ನವರಂಗ, ಮುಖಮಂಟಪ ಮತ್ತು ದ್ವಾರಗೋಪುರಗಳು ವಿಜಯನಗರ ಶೈಲಿಯದ್ದಾಗಿವೆ. ಇದು ಹಂಪಿಯ ವಿರೂಪಾಕ್ಷ ದೇವಾಲಯದ ವಾಸ್ತುಶೈಲಿ, ಶಿಲ್ಪಕಲೆಯೊಂದಿಗೆ ಸಾಮ್ಯತೆ ಹೊಂದಿದೆ. ಇಲ್ಲಿ 54 ಕಂಬಗಳಿಂದ ಕೂಡಿರುವ ಮಹಾ ಮುಖಮಂಟಪವಿದ್ದು ವಿರೂಪಾಕ್ಷ, ವಿಜಯ ವಿಠ್ಠಲ ದೇವಾಲಯಗಳಂತೆ ಆಕರ್ಷಣೀಯವಾಗಿದೆ. ಇಲ್ಲಿನ ಕಂಬಳಗಳ ಮೇಲೂ ಉಬ್ಬುಶಿಲ್ಪಗಳಿವೆ ಎನ್ನುತ್ತಾರೆ ಐಸಿಎಚ್‌ಆರ್‌ನ ಬೆಂಗಳೂರು ವಿಭಾಗದ ನಿರ್ದೇಶಕ ಡಾ. ಎಸ್‌.ಕೆ. ಅರುಣಿ.

ಆಕರ್ಷಕ ಶಿಲ್ಪಗಳು: ‘ದಕ್ಷಿಣಾಮೂರ್ತಿ, ಭೈರವ, ವೀರಭದ್ರ, ಶಿವಲಿಂಗ, ಕಾಲಭೈರವ, ನಂದಿ ಮತ್ತು ಶಿವ, ಸ್ಥಾನಿಕ ವಿಷ್ಣು, ಬಾಲಕೃಷ್ಣ, ಯೋಗಾನರಸಿಂಹ, ಕಾಳಿಂಗ ಮರ್ದನ, ಗೋವರ್ಧನ, ಮೋಹಿನಿ ವಿಷ್ಣು, ಮತ್ಸ್ಯಾವತಾರ, ಹಿರಣ್ಯಕಶ್ಯಪನನ್ನು ಸಂಹರಿಸುವ ನರಸಿಂಹ, ಗರುಡ, ಯಾಳಿ, ಹಂಸ, ಕುಳಿತಿರುವ ಸಿಂಹ, ಗಂಡಭೇರುಂಡ, ಶರಭ, ಕಿನ್ನರ, ಗಂಧರ್ವರು, ಸಿದ್ಧರು, ಭೃಂಗಿ, ಮಾನವ ದೇಹವಿರುವ ನಂದೀಶ್ವರ,  ಇತ್ಯಾದಿ ವಿವಿಧ ದೇವ-ದೇವತೆಗಳ ಶಿಲ್ಪಗಳನ್ನು ಇಲ್ಲಿ ಕಾಣಬಹುದು. ಇವುಗಳಲ್ಲದೆ, ಜಟ್ಟಿಗಳು, ಅರ್ಚಕರು, ವೀರಗಾಸೆ, ಸಂಗೀತಗಾರರು, ನರ್ತಕಿಯರು, ಭಕ್ತರು, ತಮಟೆ ಬಾರಿಸುವವರು, ಸನಾದಿ, ಘಟ, ವೀಣೆ, ತಂಬೂರಿ, ಶಂಖ ನುಡಿಸುತ್ತಿರುವ ಸಂಗೀತಗಾರರು, ಕಂಬಾರರು, ಚಾಮರಧಾರಿಗಳು, ಗೋಪಾಳ ಬುಟ್ಟಿ ದಾಸರು, ಹರಿಕೀರ್ತನೆ ಮಾಡುವ ದಾಸರು, ಇತ್ಯಾದಿ ಸಮಾಜದ ವಿವಿಧ ವರ್ಗದ ಕಸುಬುದಾರರ ಶಿಲ್ಪಗಳು ಇಲ್ಲಿವೆ. ಹಂಸ, ಹಸು, ಸಿಂಹ, ಗಂಡಭೇರುಂಡ, ನಾಗರಹಾವು, ಮೀನು ಮತ್ತು ಹಂಸದೇಹ, ಪ್ರಾಣಿಯ ಮುಖಗಳಿರುವ ಮಿಶ್ರಿತ ಪ್ರಾಣಿಗಳ ಶಿಲ್ಪಗಳೂ ಇಲ್ಲಿ ರಚಿಸಲಾಗಿದ್ದು ಆಕರ್ಷಣೀಯವಾಗಿವೆ’ ಎಂದು ಅವರು ಮಾಹಿತಿ ನೀಡುತ್ತಾರೆ.

ಇಲ್ಲಿ ಮುಚ್ಚಿ ಹೋಗಿದ್ದ ಕಲ್ಯಾಣಿಗೆ 2010ರಲ್ಲಿ ಮರುಜೀವ ನೀಡಲಾಗಿದ್ದು, ಈಗ ನೀರಿನಿಂದ ಭರ್ತಿಯಾಗಿದೆ. ಬ್ರಿಟನ್‌ ಪ್ರಧಾನಿ ತೆರೆಸಾ ಮೇ ಅವರು 2016ರಲ್ಲಿ ಇಲ್ಲಿಗೆ ಭೇಟಿ ನೀಡಿ ದೇವಾಲಯದ ವಾಸ್ತುಶೈಲಿಗೆ ಮಾರು ಹೋಗಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು. ಭಾರತೀಯ ಸ್ತ್ರೀಯಂತೆ ಅವರು ಸೀರೆಯುಟ್ಟು ದೇವಾಲಯಕ್ಕೆ ಬಂದಿದ್ದು ವಿಶೇಷವಾಗಿತ್ತು.

ದರ್ಶನದ ಸಮಯ: ನಿತ್ಯ ಬೆಳಿಗ್ಗೆ 6ರಿಂದ ಮಧ್ಯಾಹ್ನ 12 ಹಾಗೂ ಸಂಜೆ 5.30ರಿಂದ 8.30. ಮಾರ್ಚ್‌ನಲ್ಲಿ ಬ್ರಹ್ಮರಥೋತ್ಸವ, ಕರಗ, ಶಿವರಾತ್ರಿ, ಕಾರ್ತಿಕ ಮಾಸದ ಪ್ರತಿ ಸೋಮವಾರ ವಿಶೇಷ ಪೂಜೆಗಳು ಇರುತ್ತವೆ.

ಸಂರಕ್ಷಿತ ಸ್ಮಾರಕವಲ್ಲ
ಹತ್ತಾರು ಶತಮಾನಗಳ ಇತಿಹಾಸ ಹೊಂದಿರುವ ಸೋಮೇಶ್ವರ ದೇವಾಲಯವನ್ನು ಇಲ್ಲಿಯವರೆಗೂ ಸಂರಕ್ಷಿತ ಸ್ಮಾರಕ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಪುರಾತತ್ವ ಇಲಾಖೆಗಳು ಘೋಷಿಸಿಲ್ಲ. ರಾಜ್ಯದ ಮುಜುರಾಯಿ ಇಲಾಖೆಯ ಸುಪರ್ದಿಯಲ್ಲಿರುವ ಈ ದೇವಾಲಯದಲ್ಲಿ ಜೀರ್ಣೋದ್ಧಾರ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ಈ ಕಾರ್ಯಗಳಿಂದ ದೇವಾಲಯದ ಮೂಲ ಸ್ವರೂಪಕ್ಕೆ ಕೆಲವೆಡೆ ಧಕ್ಕೆಯೂ ಆಗಿದೆ. ಗೋಪುರಗಳಿಗೆ ಬಣ್ಣ ಬಳಿಯಲಾಗಿದೆ. ಒಳ ಗೋಡೆಗಳು ಮತ್ತು ಮೇಲ್ಛಾವಣಿಗೆ ಸಿಮೆಂಟ್‌ ಸ್ಪರ್ಶ ನೀಡಲಾಗಿದೆ. ಅಲ್ಲದೆ ದೇವಾಲಯದ ಆವರಣದಲ್ಲಿ ಹೊಸ ಕಟ್ಟಡಗಳೂ ತಲೆಯೆತ್ತಿವೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !