‘ಇತಿಹಾಸ’ ಪುಟ ಸೇರಿದ ‘ಕರ್ನಾಟಕ ಹಿಸ್ಟರಿ ಕಾಂಗ್ರೆಸ್‌’ !

ಬುಧವಾರ, ಮಾರ್ಚ್ 27, 2019
26 °C
ತಪ್ಪು ಮಾಹಿತಿ ನೀಡಿ ಬೆಂಗಳೂರು ವಿವಿಯಿಂದ ₹6 ಲಕ್ಷ ಅನುದಾನ

‘ಇತಿಹಾಸ’ ಪುಟ ಸೇರಿದ ‘ಕರ್ನಾಟಕ ಹಿಸ್ಟರಿ ಕಾಂಗ್ರೆಸ್‌’ !

Published:
Updated:

ಬೆಂಗಳೂರು: ಇತಿಹಾಸಕ್ಕೆ ಸಂಬಂಧಿಸಿದ ಸಂಶೋಧನೆಗಳನ್ನು ಒಂದೇ ವೇದಿಕೆಯಲ್ಲಿ ಸಮಾಲೋಚಿಸಲು ವಿವಿಧ ವಿಶ್ವವಿದ್ಯಾಲಯಗಳ ಇತಿಹಾಸ ಪ್ರಾಧ್ಯಾಪಕರು ಸೇರಿ ಸ್ಥಾಪಿಸಿದ ‘ಕರ್ನಾಟಕ ಹಿಸ್ಟರಿ ಕಾಂಗ್ರೆಸ್‌’ ಈಗ ಇತಿಹಾಸದ ಪುಟ ಸೇರಿದೆ!

ಅಚ್ಚರಿ ಎಂದರೆ, ‘ಕರ್ನಾಟಕ ಹಿಸ್ಟರಿ ಕಾಂಗ್ರೆಸ್‌’ ಸಂಘಟನೆಯಲ್ಲಿ ಇದ್ದ ಕೆಲವು ವ್ಯಕ್ತಿಗಳು ‘ದಿ ಕರ್ನಾಟಕ ಇತಿಹಾಸ ಕಾಂಗ್ರೆಸ್‌’ ಎಂಬ ಹೊಸ ಸಂಘಟನೆಯನ್ನು ಹುಟ್ಟು ಹಾಕಿದ್ದಾರೆ. ಇದೀಗ ‘ಕರ್ನಾಟಕ ಇತಿಹಾಸ ಕಾಂಗ್ರೆಸ್‌ ಸಂಘಟನೆ’ಯು ಇತಿಹಾಸ ಅಧಿವೇಶನ ನಡೆಸಲು ‘ಕರ್ನಾಟಕ ಹಿಸ್ಟರಿ ಕಾಂಗ್ರೆಸ್‌’ ಹೆಸರಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಅನುದಾನ ಪಡೆದಿರುವುದು ವಿವಾದಕ್ಕೆ ಕಾರಣವಾಗಿದೆ.

‘ಕರ್ನಾಟಕ ಹಿಸ್ಟರಿ ಕಾಂಗ್ರೆಸ್‌’ ಅನ್ನು 1981 ರ ಜೂನ್‌ 26 ರಂದು ಸ್ಥಾಪಿಸಲಾಯಿತು (ನೋಂದಣಿ ಸಂಖ್ಯೆ 117/81–82). ಷ.ಷಟ್ಟರ್‌, ಪ್ರೊ.ಶೇಖ್‌ ಅಲಿ ಮುಂತಾದ ಹೆಸರಾಂತ ಇತಿಹಾಸಕಾರರು ಇದರ ಸ್ಥಾಪನೆಗೆ ಕಾರಣರು. ಸುಮಾರು ಎರಡು ದಶಕಗಳವರೆಗೆ ಸುಗಮವಾಗಿಯೇ ನಡೆದುಕೊಂಡು ಬಂದಿತ್ತು. ಮೊದಲ ತಲೆಮಾರಿನ ಇತಿಹಾಸ ಪ್ರಾಧ್ಯಾಪಕ ನಿರ್ಗಮನ ಆದ ಬಳಿಕ ಸಂಸ್ಥೆಯು ಅನೇಕ ಸಮಸ್ಯೆಗಳಿಗೆ ತುತ್ತಾಯಿತು ಎಂದು ಕರ್ನಾಟಕ ಹಿಸ್ಟರಿ ಕಾಂಗ್ರೆಸ್‌ನ ಕೆಲವು ಸದಸ್ಯರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನೋಂದಣಿ ನಿಯಮಾವಳಿ ಪ್ರಕಾರ, ಸಂಸ್ಥೆಯ ಆಡಿಟ್‌ ವರದಿಯನ್ನು ಸಲ್ಲಿಸಿ ಪ್ರತಿ ವರ್ಷ ನೋಂದಣಿ ನವೀಕರಿಸಬೇಕು. ಆದರೆ, ನವೀಕರಣ ಮಾಡದೇ ಸಂಸ್ಥೆಯು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿತು. ಆ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ನಡೆದ ಇತಿಹಾಸ ಸಮ್ಮೇಳನದಲ್ಲಿ ನೋಂದಣಿ ನವೀಕರಿಸುವ ಸಂಬಂಧ ತೀರ್ಮಾನ ತೆಗೆದುಕೊಳ್ಳಲಾಯಿತು. ಅನೇಕ ಸದಸ್ಯರು ಈ ಕಾರ್ಯಕ್ಕಾಗಿ ತಲಾ ₹5,000 ಹಣವನ್ನು ನೀಡಿದ್ದರು. ಆದರೆ, ನವೀಕರಣ ನಡೆಯಲಿಲ್ಲ’ ಎಂದು ಅವರು ಹೇಳಿದರು.

‘ಸಂಸ್ಥೆಯ ನೋಂದಣಿ ನವೀಕರಿಸದೇ ಮಂಗಳೂರು ಮತ್ತು ಚಿಂತಾಮಣಿಗಳಲ್ಲಿ ಇತಿಹಾಸ ಸಮ್ಮೇಳನ ನಡೆಸಲಾಯಿತು. 2017 ರ ಜನವರಿಯಲ್ಲಿ ‘ಕರ್ನಾಟಕ ಹಿಸ್ಟರಿ ಕಾಂಗ್ರೆಸ್‌’ನಲ್ಲಿದ್ದ ಕೆಲವು ಪ್ರತಿನಿಧಿಗಳೇ ಹೊಸ ಸಂಸ್ಥೆ ‘ದಿ ಕರ್ನಾಟಕ ಇತಿಹಾಸ ಕಾಂಗ್ರೆಸ್‌’ (ನೋಂದಣಿ ಸಂಖ್ಯೆ ಡಿಬಿಆರ್‌–41/ಎಸ್‌ಡಿಆರ್‌/166/2016–17) ಹುಟ್ಟು ಹಾಕಿದರು’ ಎಂದರು. 

ಹಿಸ್ಟರಿ ಕಾಂಗ್ರೆಸ್‌ ಹೆಸರಲ್ಲಿ ಅಧಿವೇಶನ: ಈಗ ‘ದಿ ಕರ್ನಾಟಕ ಇತಿಹಾಸ ಕಾಂಗ್ರೆಸ್‌’ ಇದೇ 16, 17 ಮತ್ತು 18 ರಂದು ಹಿಸ್ಟರಿ ಕಾಂಗ್ರೆಸ್‌ ಹೆಸರಿನಲ್ಲಿ 28 ನೇ ಅಧಿವೇಶನ ನಡೆಸಲು ಮುಂದಾಗಿದ್ದಾರೆ. ಆಹ್ವಾನ ಪತ್ರಿಕೆಯಲ್ಲಿ ‘ಕರ್ನಾಟಕ ಹಿಸ್ಟರಿ ಕಾಂಗ್ರೆಸ್‌’ ಬದಲಿಗೆ ‘ದಿ ಕರ್ನಾಟಕ ಹಿಸ್ಟರಿ ಕಾಂಗ್ರೆಸ್’ ಎಂದು ನಮೂದಿಸಿದ್ದಾರೆ. ಇದು ಅಕ್ರಮ ಎಂದು ಇತಿಹಾಸ ಪ್ರಾಧ್ಯಾಪಕರೊಬ್ಬರು ವಿವರಿಸಿದರು.

‘ಹೊಸ ಸಂಘಟನೆ ಹುಟ್ಟು ಹಾಕಿದ ವ್ಯಕ್ತಿಗಳು ‘ಕರ್ನಾಟಕ ಹಿಸ್ಟರಿ ಕಾಂಗ್ರೆಸ್‌’ ಹೆಸರಿನಲ್ಲಿ ಅಧಿವೇಶನ ನಡೆಸಲು ಸಾಧ್ಯವಿಲ್ಲ. ಹಾಗೆ ನಡೆಸುವುದಿದ್ದರೆ, ಪ್ರತ್ಯೇಕ ಅಧಿವೇಶನ ನಡೆಸಬಹುದೇ ಹೊರತು ಕರ್ನಾಟಕ ಹಿಸ್ಟರಿ ಕಾಂಗ್ರೆಸ್‌ ಹೆಸರಿನಲ್ಲಿ ನಡೆಸಲು ಸಾಧ್ಯವಿಲ್ಲ. ಅಲ್ಲದೆ, ಈ ಅಧಿವೇಶನಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯದಿಂದ ‘ದಿ ಕರ್ನಾಟಕ ಇತಿಹಾಸ ಕಾಂಗ್ರೆಸ್‌’ ಹೆಸರಿನಲ್ಲಿ ₹ 6 ಲಕ್ಷ ಅನುದಾನ ಪಡೆದಿದ್ದಾರೆ’ ಎಂದು ದೂರಿದರು.

ಕರ್ನಾಟಕ ಇತಿಹಾಸ ಕಾಂಗ್ರೆಸ್‌ಗೆ ಅಧಿವೇಶನ ನಡೆಸಲು ಅನುದಾನ ಮಂಜೂರು ಮಾಡಿರುವುದು ನಿಜ
ಬಿ.ಕೆ.ರವಿ, ಕುಲಸಚಿವ, ಬೆಂಗಳೂರು ವಿಶ್ವವಿದ್ಯಾಲಯ

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !