ಗುರುವಾರ , ಸೆಪ್ಟೆಂಬರ್ 23, 2021
24 °C
'ಯೋಜನೆ ಸಜ್ಜು'

ತುಬಚಿ–ಬಬಲೇಶ್ವರ ಏತ ನೀರಾವರಿ: ಇತಿಹಾಸದಲ್ಲೇ ಹೊಸ ಅಧ್ಯಾಯ ಸೃಷ್ಟಿ– ಎಂ.ಬಿ.ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘₹ 3600 ಕೋಟಿ ವೆಚ್ಚದ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಂಡಿದ್ದು, 6.5 ಟಿಎಂಸಿ ಅಡಿ ನೀರಿನ ಬಳಕೆಯೊಂದಿಗೆ 1.33 ಲಕ್ಷ ಎಕರೆ ಪ್ರದೇಶಕ್ಕೆ ನೀರೊದಗಿಸಲಾಗುವುದು. ಇದು ನೀರಾವರಿ ಇಲಾಖೆಯ ಇತಿಹಾಸದಲ್ಲಿಯೇ ಹೊಸ ಅಧ್ಯಾಯವನ್ನು ಸೃಷ್ಟಿಸಲಿದೆ’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಬಬಲೇಶ್ವರ ತಾಲ್ಲೂಕಿನ ಶೇಗುಣಶಿಯಲ್ಲಿ ಬುಧವಾರ ಮಳಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಹಾಗೂ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆ, ಕಳಸಾರೋಹಣ ನೆರವೇರಿಸಿ ಮಾತನಾಡಿದ ಅವರು ‘ನಾನು ಜಲಸಂಪನ್ಮೂಲ ಸಚಿವನಿದ್ದ ಸಂದರ್ಭ, ಜಿಲ್ಲೆಯ 16ಲಕ್ಷ ಎಕರೆ ಪ್ರದೇಶವನ್ನು ನೀರಾವರಿಗೆ ಒಳಪಡಿಸುವ ಜತೆಗೆ 212 ಕೆರೆಗಳನ್ನು ತುಂಬಿಸುವ ಕೆಲಸ ಮಾಡಿರುವೆ’ ಎಂದರು.

‘ಜಿಲ್ಲೆಯ ಅತ್ಯಂತ ಎತ್ತರದ ಪ್ರದೇಶವಾಗಿದ್ದ ಕಾರಣಕ್ಕೆ ತಿಕೋಟಾ ಹೋಬಳಿ ಶಾಶ್ವತವಾಗಿ ನೀರಾವರಿ ಯೋಜನೆಗಳಿಂದ ವಂಚಿತವಾಗಿತ್ತು. ತುಬಚಿ-ಬಬಲೇಶ್ವರ ಯೋಜನೆ ರೂಪಿಸಿ, 20 ವರ್ಷಗಳಲ್ಲಿ ಆಗಬಹುದಾಗಿದ್ದ ಕಾರ್ಯವನ್ನು, 3 ವರ್ಷಗಳಲ್ಲಿ ಪೂರ್ಣಗೊಳಿಸಿರುವೆ. ಮುಂದಿನ ಮೂರು ತಿಂಗಳಿನಲ್ಲಿ ರೈತರ ಜಮೀನಿಗೆ ನೀರು ಹರಿಯಲಿದೆ’ ಎಂದು ಹೇಳಿದರು.

‘ನೀರಾವರಿ ಮಾಡಿದರೆ, ಅಭಿವೃದ್ಧಿ ಕೆಲಸ ಮಾಡಿದರೆ ಯಾರಾದರೂ ವೋಟು ಹಾಕುತ್ತಾರೆಯೇ ? ಎಂದು ಹಲವರು ಪ್ರಶ್ನಿಸುತ್ತಿದ್ದರು. ಆದರೆ ನನ್ನ ಬಬಲೇಶ್ವರ ಕ್ಷೇತ್ರದ ಜನ ನಾವು ಅಭಿವೃದ್ಧಿ ಪರವಾಗಿದ್ದೇವೆ ಎಂಬುದನ್ನು ಭಾರಿ ಬಹುಮತ ನೀಡುವ ಮೂಲಕ ಬೆಂಬಲಿಸಿದ್ದಾರೆ’ ಎಂದರು.

‘ಬಬಲೇಶ್ವರ ಕ್ಷೇತ್ರದಲ್ಲಿ ನಾನು ಮಾಡಿದ ನೀರಾವರಿ ಯೋಜನೆಗಳಿಂದ ಪ್ರತಿ 4-5ಹಳ್ಳಿಗೆ 5000 ಟನ್ ಕಬ್ಬು ನುರಿಸುವ ಸಕ್ಕರೆ ಕಾರ್ಖಾನೆ ಆರಂಭಿಸುವಷ್ಟು ಕಬ್ಬು ಬೆಳೆಯುತ್ತಿದ್ದು, ಕೈಗಾರಿಕೆಗಳಿಗೆ ವಿಫುಲ ಅವಕಾಶ ಸೃಷ್ಠಿಯಾಗಿದೆ’ ಎಂದರು.

‘ಬಬಲೇಶ್ವರ-ಗಲಗಲಿ ರಸ್ತೆಯಿಂದ ವಿಜಯಪುರ-ಹುಬ್ಬಳ್ಳಿ ಎನ್.ಎಚ್ 218ವರೆಗೆ, ಶೇಗುಣಶಿ-ಮಮದಾಪುರ-ದೂಡಿಹಾಳ ಮಾರ್ಗವಾಗಿ ರಸ್ತೆಯನ್ನು ಹೆದ್ದಾರಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಶೇಗುಣಶಿಯಿಂದ ದೂಡಿಹಾಳವರೆಗೆ 16 ಕಿ.ಮೀ. ರಸ್ತೆಯನ್ನು ₹ 17.30 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಈಗಾಗಲೇ ಟೆಂಡರ್ ಕರೆಯಲಾಗಿದೆ.

ದೂಡಿಹಾಳದಿಂದ 218 ರಾಷ್ಟ್ರೀಯ ಹೆದ್ದಾರಿಯವರೆಗೆ 5 ಕಿ.ಮೀ. ರಸ್ತೆಯನ್ನು ₹ 5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಒಟ್ಟು 21 ಕಿ.ಮೀ. ದೂರದ ಈ ರಸ್ತೆಯನ್ನು ವಿಜಯಪುರ-ಗಲಗಲಿ ರಸ್ತೆಯಂತೆ ಹೆದ್ದಾರಿ ಮಾದರಿಯಲ್ಲಿ ನಿರ್ಮಿಸಲಾಗುವುದು’ ಎಂದು ಹೇಳಿದರು.

ಮಮದಾಪುರ ವಿರಕ್ತಮಠದ ಅಭಿನವ ಮುರುಘೇಂದ್ರ ಸ್ವಾಮೀಜಿ, ಸಂಗಾಪುರ ಕಮರಿಮಠದ ಸಿದ್ಧಲಿಂಗ ಸ್ವಾಮೀಜಿ, ಖಾದಿ ಗ್ರಾಮದ್ಯೋಗ ಮಂಡಳಿ ಅಧ್ಯಕ್ಷ ಬಾಪುಗೌಡ ಪಾಟೀಲ, ಅಪ್ಪುಗೌಡ ಪಾಟೀಲ, ಡಾ.ಕೆ.ಎಚ್.ಮುಂಬಾರೆಡ್ಡಿ, ಕೃಷ್ಣಪ್ಪ ದೇಸಾಯಿ ಅರ್ಜುಣಗಿ, ಕೆ.ಎಂ.ಎಫ್ ನಿರ್ದೇಶಕ ಶ್ರೀಶೈಲಗೌಡ ಪಾಟೀಲ, ಗ್ರಾ.ಪಂ. ಅಧ್ಯಕ್ಷೆ ಸಂಗವ್ವ ಹೊಸಮನಿ, ಎಪಿಎಂಸಿ ನಿರ್ದೇಶಕಿ ಸಾರವ್ವ ಪೂಜಾರಿ, ಭೀಮಪ್ಪ ಶಿವಗೊಂಡ, ಭೀಮಣ್ಣ ಬಡಿಗೇರ, ಮಲ್ಲಪ್ಪ ಪೂಜಾರಿ, ಮುತ್ತಪ್ಪ ವಾಲಿಕಾರ, ಸಾಬು ಪೂಜಾರಿ, ಕಾಶೆಪ್ಪ ಪೂಜಾರಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು