ಎಚ್‍ಎಂಟಿ ಯಾತ್ರೆ!

ಸೋಮವಾರ, ಏಪ್ರಿಲ್ 22, 2019
31 °C

ಎಚ್‍ಎಂಟಿ ಯಾತ್ರೆ!

Published:
Updated:
Prajavani

ಚಿಕ್ಕೇಶಿ ಅವಸರದಿಂದ ಸೂಟ್‍ಕೇಸ್‍ಗೆ ಬಟ್ಟೆ ತುಂಬುತ್ತಿದ್ದುದನ್ನು ನೋಡಿದ ಹೆಂಡತಿ ಚಿನ್ನಮ್ಮ ಕೇಳಿದಳು- ‘ಸಾಹೇಬ್ರ ಸವಾರಿ ಎಲ್ಲಿಗೋ?’

ಚಿಕ್ಕೇಶಿ ಗದರಿಕೊಂಡ- ‘ಅಪಶಕುನ. ಕೆಲಸಕ್ಕೆ ಹೊರಟಾಗ ಎಲ್ಲಿಗೆ ಅಂತ ಕೇಳ್ಬಾರ್ದೂಂತ ಎಷ್ಟು ಸಾರಿ ಹೇಳಿದೀನಿ? ನಮ್ಮ ಹಗರನಹಳ್ಳಿ ವೇದಣ್ಣ ತಮ್ಮ ಪಾರ್ಟಿ ಅಧಿಕಾರಕ್ಕೆ ಬಂದ್ರೆ, ಹಿಂಗೆ ಅಪಶಕುನ ಮಾಡೋರನ್ನ ಒಳಗೆ ಹಾಕಿಸ್ತಾರಂತೆ!’

‘ಹಗರನಹಳ್ಳಿ ವೇದಣ್ಣ ಯಾವಾಗ್ನಿಂದ ನಿಮ್ಮ ವೇದಣ್ಣ ಆದರು?’

‘ಇನ್ನೂ ಆಗಿಲ್ಲ, ಮಾಡ್ಕೋಬೇಕು. ನೋಡಿಲ್ಲಿ ಫ್ರೆಂಡ್ ಮೆಸೇಜ್ ಹಾಕಿದಾನೆ- ಕೂಡ್ಲೇ ಹೊರಟು ಬಾ. ಹೈ ವೋಲ್ಟೇಜ್ ಕ್ಷೇತ್ರ ಇದು. ಕ್ಯಾಂಪೇನ್ ಮ್ಯಾನೇಜ್‍ಮೆಂಟ್‍ಗೆ ಭಾಳಾ ಜನಾ ಬೇಕು, ಕೇಳಿದಷ್ಟು ಸಂಭಾವನೇಂತ. ಅದ್ಕೇ ಗೊಮಟೇಶ್ವರನ ಕ್ಷೇತ್ರಕ್ಕೆ ಹೊಂಟಿರೋದು’.

‘ಇಷ್ಟೊಂದು ಬಟ್ಟೆ!?’

‘ಸಕ್ಕರೆ ನಾಡು, ತೆಂಗಿನ ನಾಡುಗಳಲ್ಲೂ ಹೈ ವೋಲ್ಟೇಜೇ. ಬಾ ಅಂತ ಅಲ್ಲಿಂದ್ಲೂ ಕರೆ ಬರ್ತಿವೆ’.

‘ಇವು ಮಾತ್ರ ಯಾಕ್ರೀ ಹೈ ವೋಲ್ಟೇಜ್ ಕ್ಷೇತ್ರಗಳು?’

‘ರಾಷ್ಟ್ರ ರಾಜಕಾರಣದಲ್ಲಿ ಇವು ಸಂಚಲನ ಉಂಟು ಮಾಡ್ತಿವೆ. ಮಾಜಿ ಪ್ರಧಾನಿ/ ಭಾವೀ ಪ್ರಧಾನಿ ಸೇರಿದಂತೆ ಮೂರು ತಲೆಮಾರು ಅಖಾಡಕ್ಕೆ ಇಳಿದಿದೆ. ಜ್ಯೋತಿಷ- ರಾಶಿಕೂಟ, ರಾಜಕೀಯ ಮೈತ್ರಿ ಜೊತೆಗೆ ಕುಟುಂಬ
ಸಾಮರಸ್ಯವನ್ನೂ ಅವ್ರು ಸಾಧಿಸಬೇಕಿದೆ’.

‘ಅದೇ ಕುಟುಂಬ ಯಾಕ್ರೀ?’

‘ದೇಶಭಕ್ತಿ, ಉತ್ಕಟ ದೇಶಪ್ರೇಮ. ಪುತ್ರ-ಪೌತ್ರರೆಲ್ಲಾ ರಾಜಕೀಯಕ್ಕೆ ಬರದಿದ್ರೆ ದೇಶಕ್ಕೆ ಒಳ್ಳೇದಾಗೋಲ್ಲ, ಯಜಮಾನರಿಗೂ ಗಂಡಾಂತರ ಅಂತ ಗಿಳಿ ಶಾಸ್ತ್ರ ಹೇಳಿದೆಯಂತೆ!’

‘ಆಗ್ಲಿ ಹೋಗ್ಬನ್ನಿ. ನನ್ನ ಅಕೌಂಟ್‍ಗೆ ಆಗಾಗ್ಗೆ ಮನಿ ಟ್ರಾನ್ಸ್‌ಫರ್ ಮಾಡ್ತಿರಿ. ಜಾಸ್ತಿ ಇಟ್ಕೊಂಡ್ರೆ ಸ್ಕ್ವಾಡ್‍ನವರ ಕಾಟ’.

‘ಯಾರಾದ್ರೂ ಕೇಳಿದ್ರೆ ಎಚ್ಎಂಟಿ ಯಾತ್ರೆಗೆ ಹೋಗಿದೀನೀಂತ ಹೇಳು’.

‘ಅಂದ್ರೆ? ಎಚ್‌ಎಂಟಿ ಫ್ಯಾಕ್ಟರೀನಾ?’

‘ಅಲ್ಲ ಕಣೇ. ಎಚ್ ಅಂದ್ರೆ ಹಾಸನ, ಎಂ ಅಂದ್ರೆ ಮಂಡ್ಯ...’

‘ಓ... ಟಿ ಅಂದ್ರೆ ತುಮಕೂರು’ ಎಂದು ನಕ್ಕ ಚಿನ್ನಮ್ಮ, ಚಿಕ್ಕೇಶಿಗೆ ದೃಷ್ಟಿ ನಿವಾಳಿಸಿ ಬೀಳ್ಕೊಟ್ಟಳು!

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !