ಶುಕ್ರವಾರ, ನವೆಂಬರ್ 22, 2019
26 °C

ಹವ್ಯಾಸದ ಚುಂಗು; ಆದಾಯದ ರಂಗು

Published:
Updated:

ಅಮೆರಿಕದ ನ್ಯೂಜೆರ್ಸಿಯಲ್ಲಿನ ಪ್ರತಿಷ್ಠಿತ ಡಿಸೈನರ್‌ ಸ್ಟುಡಿಯೊದಲ್ಲಿ ವಸ್ತ್ರವಿನ್ಯಾಸಕಿಯಾಗಿದ್ದವರು ಮೀನೂ ಶರವಣನ್‌. ನಿಫ್ಟ್‌ ಫ್ಯಾಷನ್‌ ಡಿಸೈನ್‌ ಕಾಲೇಜಿನಲ್ಲಿ ಓದುತ್ತಿರುವಾಗಲೇ ಕ್ಯಾಂಪಸ್‌ ಸೆಲೆಕ್ಷನ್‌ ಮೂಲಕ ಉದ್ಯೋಗಕ್ಕೆ ಸೇರಿದರು. ನ್ಯೂಜೆರ್ಸಿಯ ಕ್ಯಾಪ್‌ ಫ್ಯಾಷನ್‌ ಸ್ಟುಡಿಯೊದಲ್ಲಿ ಕೆಲಸ ಮಾಡುತ್ತಿದ್ದರು. ಮದುವೆಯಾದ ನಂತರ ಹೈದರಾಬಾದ್‌ನಲ್ಲಿ ಉದ್ಯೋಗಕ್ಕೆ ಸೇರಿದರು. ಆದರೆ ಮಗುವಾದ ನಂತರ ವೃತ್ತಿ ಮುಂದುವರಿಸಲಾಗದೆ ರಾಜೀನಾಮೆ ನೀಡಿದರು. ಮಗುವಿಗೆ ಮೂರು ವರ್ಷವಾದಾಗ ನಗರದಲ್ಲಿ ಸ್ವಂತ ಡಿಸೈನರ್‌ ಸ್ಟುಡಿಯೊ ಆರಂಭಿಸುವಂತೆ ಗಂಡ ಸಲಹೆ ನೀಡಿದರು. ಮೀನೂ ಯಶವಂತಪುರದಲ್ಲಿ ‘ಸಾಮುದ್ರಿಕಾ ಡಿಸೈನರ್‌ ಸ್ಟುಡಿಯೊ’ ಆರಂಭಿಸಿದರು. 

ಈಗ ನಗರದಲ್ಲಿ ಪ್ರತಿಷ್ಠಿತ ಸೆಲೆಬ್ರೆಟಿ ಡಿಸೈನರ್‌ ಬುಟಿಕ್‌ ಆಗಿ ಗುರುತಿಸಿಕೊಂಡಿದೆ ಮೀನೂ ಅವರ ಸ್ಟುಡಿಯೊ. ಹೊಸತರಲ್ಲಿ ಅವರು ಅನೇಕ ಕಷ್ಟಗಳನ್ನು ಕಂಡರು. ಆನ್‌ಲೈನ್‌, ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌ಗಳಲ್ಲಿ ತಮ್ಮ ಡಿಸೈನರ್‌ ಸ್ಟುಡಿಯೊ ಬಗ್ಗೆ, ತಮ್ಮ ವಸ್ತ್ರಗಳ ವಿನ್ಯಾಸಗಳನ್ನು ಪೋಸ್ಟ್‌ ಹಾಕಲು ಆರಂಭಿಸಿದ ನಂತರ ಗ್ರಾಹಕರು ನಿಧಾನವಾಗಿ ಬರಲಾರಂಭಿಸಿದರು.

ಅಡುಗೆ ಕಾರ್ಯಕ್ರಮವೊಂದಕ್ಕೆ ನಟಿ, ನಿರೂಪಕಿ ಸುಜಾತಾ ಅವರಿಗೆ ಕಾಸ್ಟ್ಯೂಮ್‌ ಡಿಸೈನ್‌ ಮಾಡಿದ್ದು ಹಾಗೂ  2018ರ ಮಿಸ್‌ ವರ್ಲ್ಡ್‌ನ ಅಂತಿಮ ಸ್ಪರ್ಧಿಗೆ ಗೌನ್‌ ಡಿಸೈನ್‌ ಮಾಡಲು ದೊರೆತ ಅವಕಾಶ ಮೀನೂ ಜೀವನದ ಟರ್ನಿಂಗ್‌ ಪಾಯಿಂಟ್‌. ಅಲ್ಲಿಂದ ಅವರ ಹಾಗೂ ಅವರ ಸ್ಟುಡಿಯೊ ಹೆಸರು ಜನಪ್ರಿಯವಾಗತೊಡಗಿತು. ಈಗ ಸೆಲೆಬ್ರೆಟಿ ಫ್ಯಾಷನ್‌ ಡಿಸೈನರ್‌ ಎಂದು ಜನಪ್ರಿಯರಾಗಿರುವ ಅವರು, ಮೂರು– ನಾಲ್ಕು ತಮಿಳು ಚಿತ್ರ, ನಟಿಯರಾದ ತಮನ್ನಾ, ಕಾಜಲ್‌ ಅಗರವಾಲ್‌, ಬಿಂದು ಮಾಧವಿ, ಪ್ರಿಯಾಮಣಿ, ರಚಿತಾ ರಾಮ್‌, ಪ್ರಿಯಾಂಕಾ ಉಪೇಂದ್ರ, ನಟರಾದ ಕಾರ್ತಿಕ್‌, ಶಿವಕಾರ್ತಿಕೇಯನ್‌ ಮೊದಲಾದವರಿಗೆ ವಸ್ತ್ರವಿನ್ಯಾಸ ಮಾಡಿದ್ದಾರೆ.  

‘ಮಹಿಳಾ ಸಬಲೀಕರಣ ಆಶಯದ ಮಹಿಳಾ ಸಾಧಕಿಯರ ಫೋಟೊಶೂಟ್‌ ಮಾಡಿಸಿದ್ದಾರೆ.  ಲ್ಯಾಕ್ಮೆ ಫ್ಯಾಷನ್‌ ವೀಕ್‌, ಕೇರ್‌ ಆ್ಯಂಡ್‌ ಟಾಮಿ ಫ್ಯಾಷನ್‌ ರನ್‌ವೇ, ಬೆಂಗಳೂರು ಫ್ಯಾಷನ್‌ ಸಾಗಾ, ಬೆಂಗಳೂರು ಫ್ಯಾಷನ್‌ ವೀಕ್‌, ಮಿಸ್ಟ್ರೆಸ್‌ ಇಂಡಿಯಾ ಮೊದಲಾದ ಷೋಗಳಲ್ಲಿ ಇವರ ವಿನ್ಯಾಸದ ವಸ್ತ್ರಗಳಲ್ಲಿ ರೂಪದರ್ಶಿಯರು ಮಿಂಚಿದ್ದಾರೆ. ದೇಶದ ಬೇರೆ ಬೇರೆ ಭಾಗಗಳಿಂದಲ್ಲದೇ ಅಮೆರಿಕ, ಸಿಡ್ನಿಗಳಲ್ಲೂ ಇವರ ವಿನ್ಯಾಸಕ್ಕೆ ಗ್ರಾಹಕರಿದ್ದಾರೆ.

‘ಇಂಡಿಯನ್ ಬ್ರೈಡ್‌, ವೆಸ್ಟರ್ನ್‌, ಇಂಡೋ ವೆಸ್ಟರ್ನ್‌, ಕಿಡ್ಸ್‌ ಫ್ಯಾಷನ್‌ ಸಿಗ್ನೇಚರ್‌ ಡಿಸೈನ್‌ಗಳು. ಮಾರುಕಟ್ಟೆ ಬದಲಾದಂತೆ ಅದಕ್ಕೆ ತಕ್ಕಂತೆ ವಸ್ತ್ರವಿನ್ಯಾಸವೂ ಬದಲಾಗಬೇಕು. ಸ್ವಂತ ಸ್ಟುಡಿಯೊ ಹೊಂದಿರುವುದರಿಂದ ಮನೆ, ಸ್ಟುಡಿಯೊ ಕೆಲಸಕ್ಕೆ ಸಾಕಷ್ಟು ಸಮಯ ಸಿಗುತ್ತದೆ’ ಎಂದು ಅವರು ನುಡಿಯುತ್ತಾರೆ. 

ಮೀನೂ ಶರವಣನ್‌, ಸಾಮುದ್ರಿಕಾ ಡಿಸೈನ್‌ ಸ್ಟುಡಿಯೊ ಮಾಲಕಿ

ಮಾಹಿತಿಗೆ –www.samudrikas.com

ಇನ್‌ಸ್ಟಾಗ್ರಾಮ್‌– samudrikad designer studio

 

ನಾದಿಯಾ ಮಿರ್ಜಾ– ಡಾಟೆಡ್‌ ಐ ಸ್ಥಾಪಕಿ

ರಕ್ಷಾ ಬಂಧನ, ಮದುವೆ ವಾರ್ಷಿಕೋತ್ಸವ, ಹುಟ್ಟುಹಬ್ಬ, ಕ್ರಿಸ್‌ಮಸ್‌, ದೀಪಾವಳಿ...ಹೀಗೆ ಹಬ್ಬ ಅಥವಾ ವಿಶೇಷ ದಿನಗಳಲ್ಲಿ ಆಯಾ ಸಂದರ್ಭಕ್ಕೆ ತಕ್ಕಂತೆ ಉಡುಗೊರೆ ನೀಡಬೇಕು. ಉಡುಗೊರೆಗಳ ಆಯ್ಕೆ, ಯಾರಿಗೆ ಏನು ಗಿಫ್ಟ್‌ ಮಾಡಬಹುದು ಎಂದು ತಿಳಿಸುತ್ತದೆ ‘ಡಾಟೆಡ್‌ ಐ’ ಆನ್‌ಲೈನ್‌ ವೆಬ್‌ಸೈಟ್‌. ಈ ವೆಬ್‌ಸೈಟ್‌ಗೆ ಭೇಟಿ ಕೊಟ್ಟರೆ  ಹಬ್ಬ, ವಿಶೇಷ ದಿನಗಳಿಗೆ ತಕ್ಕಂತೆ ಪರ್ಫೆಕ್ಟ್‌ ಉಡುಗೊರೆಗಳನ್ನು ಖರೀದಿಸಿ ಪ್ರೀತಿಪಾತ್ರರಿಗೆ ಕಳುಹಿಸಬಹುದು. 

ಈ ವೆಬ್‌ಸೈಟ್‌ ಆರಂಭಿಸಿದವರು ನಾದಿಯಾ ಮಿರ್ಜಾ. ಅವರು ಲಂಡನ್‌ನ ಮ್ಯಾಂಚೆಸ್ಟರ್‌ ಬ್ಯುಸಿನೆಸ್‌ ಸ್ಕೂಲ್‌ನಲ್ಲಿ ಕ್ರಿಯೇಟಿವ್‌ ಬ್ಯುಸಿನೆಸ್ಸಸ್‌ ಬಗ್ಗೆ ಓದಿದ್ದಾರೆ. ಅನಂತರ ಸ್ವೀಡಿಶ್‌ ಸ್ಟ್ರೀಟ್‌ ಕನೆಕ್ಟ್‌ ಎಂಬ ಕಂಪನಿಯಲ್ಲಿ ಉದ್ಯೋಗ ಸೇರಿದರು. ಬಳಿಕ ಕೆಲಸ ಬಿಟ್ಟ ಅವರು ಬೆಂಗಳೂರಿಗೆ ಬಂದು, ‘ಡಾಟೆಡ್‌ ಐ’ ಆರಂಭಿಸಿದರು.

‘ಯುರೋಪ್‌, ಸೌತ್‌ ಏಷ್ಯಾ, ಅಮೆರಿಕ ಸುತ್ತಿದ್ದೇನೆ. ಆಗ ಅಲ್ಲಿ ಸೃಜನಾತ್ಮಕ ವ್ಯಾಪಾರಗಳ ಬಗ್ಗೆ ತಿಳಿದುಕೊಂಡೆ. ಇದೊಂದು ಗಿಫ್ಟಿಂಗ್‌ ಬ್ರಾಂಡ್‌. ನಮ್ಮ ವೆಬ್‌ಸೈಟ್‌ನಲ್ಲಿ ಬೇರೆ ಬೇರೆ ವಿಭಾಗದಲ್ಲಿ ಬೇರೆ ಬೇರೆ ಹಬ್ಬ, ದಿನಗಳ ಮಹತ್ವಕ್ಕೆ ತಕ್ಕಂತೆ ಗ್ರಾಹಕರು ಗಿಫ್ಟ್‌ ಆಯ್ಕೆ ಮಾಡಬಹುದು. ಅವರ ಮನೆ ಬಾಗಿಲಿಗೆ ನಾವು ತಲುಪಿಸುತ್ತೇವೆ. ನಮ್ಮಲ್ಲಿ 2 ಸಾವಿರಕ್ಕೂ ಹೆಚ್ಚು ಉತ್ಪನ್ನಗಳ ಮಾರಾಟವಿವೆ’ ಎನ್ನುವ ನಾದಿಯಾ ಒಂದು ಮಗುವಿನ ತಾಯಿ. ಡಾಟೆಡ್ ಐ ಉತ್ಪನ್ನಗಳಿಗೆ ವಿದೇಶಗಳಿಂದಲೂ ಬೇಡಿಕೆ ಇದೆ. 

ಡಾಟೆಡ್‌ ಐ ವೆಬ್‌ಸೈಟ್‌ –  https://www.thedottedi.in

 

ಗೀತಾ ನಾಯಕ್‌– ಹ್ಯೂಸ್‌ಆಫ್‌ಗಾ

ಈಗ ನೈಸರ್ಗಿಕ ಉತ್ಪನ್ನಗಳ ಸೌಂದರ್ಯವರ್ಧಕಗಳಿಗೆ ಹೆಚ್ಚು ಬೇಡಿಕೆ. ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿ ನೈಸರ್ಗಿಕ ಸೌಂದರ್ಯ ಉತ್ಪನ್ನಗಳಿಗೆ ಇರುವ ಮಹತ್ವ ಹಾಗೂ ಅದರ ಮಾರುಕಟ್ಟೆ ಬಗ್ಗೆ ತಿಳಿದುಕೊಂಡ ಕತ್ರಿಗುಪ್ಪೆಯ ಗೀತಾ ನಾಯಕ್‌ ‘ಹ್ಯೂಸ್‌ಆಫ್‌ಗಾ’ ಆರಂಭಿಸಿದರು. 

ಮನೆಯಲ್ಲಿಯೇ ಅರಿಸಿನ, ಗುಲಾಬಿ ಜಲ, ಕೊಬ್ಬರಿ ಎಣ್ಣೆ ಮೊದಲಾದ ನೈಸರ್ಗಿಕ ಉತ್ಪನ್ನಗಳಿಂದ ತಯಾರಿಸಿದ ಮಾಯಿಶ್ಚರೈಸಿಂಗ್‌, ಲೋಶನ್‌, ಪೌಡರ್‌, ಸುಗಂಧದ್ರವ್ಯ, ಲಿಪ್‌ಸ್ಟಿಕ್‌, ಲಿಪ್‌ಬಾಮ್‌ಗಳ ಮಾರಾಟಕ್ಕೆ ಫೇಸ್‌ಬುಕ್‌, ಆನ್‌ಲೈನ್‌ ಮಾರುಕಟ್ಟೆಯನ್ನು ವೇದಿಕೆಯನ್ನಾಗಿಸಿಕೊಂಡಿದ್ದಾರೆ. ಚೋಟಾ ಭೀಮ್‌, ಬಾರ್ಬಿ ಡಾಲ್‌ ಇಂತಹ ಬೇರೆ ಬೇರೆ ಆಕೃತಿಗಳ ಸಾಬೂನುಗಳನ್ನು ಮಾಡುವುದು ಇವರ ವಿಶೇಷತೆ. ‘ಕಾರ್‌ ಬೂಟ್‌ ಸೇಲ್‌, ಮಾಲ್‌ಗಳಲ್ಲಿ ಸ್ಟಾಲ್‌ ಹಾಕುತ್ತೇನೆ. ರಾಜಾಜಿನಗರದ ಒರಾಯನ್‌ ಮಾಲ್‌, ಪ್ರೆಸ್ಟೀಜ್‌ ಶಾಂತಿನಿಕೇತನದಲ್ಲಿ ಸ್ಟಾಲ್‌ ಹಾಕಿ ಉತ್ಪನ್ನಗಳನ್ನು ಮಾರಾಟ ಮಾಡುತ್ತೇನೆ. ನನಗೆ ಸಣ್ಣ ಮಗು ಇದೆ. ಆದರೆ ಮನೆಯಲ್ಲೇ ವ್ಯಾಪಾರ ಮಾಡುವುದರಿಂದ ವ್ಯಾಪಾರಕ್ಕೆ ಕಷ್ಟವಾಗುತ್ತಿಲ್ಲ’ ಎಂಬುದು ಗೀತಾ ಮಾತು. 

ಗೀತಾ ನಾಯಕ್‌ ಸಂಪರ್ಕಕ್ಕೆ–  
096208 79990

ಫೇಸ್‌ಬುಕ್‌ ಕೊಂಡಿ– https://www.facebook.com/Huesofgaea/

 

ಲಕ್ಷ್ಮಿ ಶೆಟ್ಟಿ– ಗ್ಲಾಮ್‌ಡಸ್ಟ್‌ ಮೇಕಪ್‌ ಸ್ಟುಡಿಯೊ ಮಾಲಕಿ

ಬಣ್ಣದ ಜಗತ್ತಿನಲ್ಲಿ ಕ್ರಿಯಾಶೀಲ ಮೇಕಪ್‌ ಕಲಾವಿದರಿಗೆ ಹೆಚ್ಚು ಬೇಡಿಕೆ. ಸೆಲೆಬ್ರೆಟಿ ಮೇಕಪ್‌ ವುಮೆನ್‌ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ ನಾಗರಬಾವಿಯ ಲಕ್ಷ್ಮಿ ಶೆಟ್ಟಿ.  ಮೇಕಪ್‌ ಪ್ರೇಮಿಯಾದ ಅವರು ಅಲಂಕಾರ ಮಾಡಿಕೊಂಡೇ ಇರಬಹುದು ಎಂಬ ಕಾರಣಕ್ಕೆ ಎಂಜಿನಿಯರಿಂಗ್‌ ಓದನ್ನು ಅರ್ಧಕ್ಕೆ ಬಿಟ್ಟು ಕಿರುತೆರೆಗೆ ಹೋದರು. ಮೂರು ಧಾರಾವಾಹಿ ಹಾಗೂ ನಟ ಉಪೇಂದ್ರ ಜೊತೆ ಒಂದು ಸಿನಿಮಾದಲ್ಲಿ ನಟಿಸಿದರು. ಆದರೆ ನಟನೆ ಅವರ ಮನಸ್ಸಿಗೆ ತೃಪ್ತಿ ಕೊಡದಿದ್ದರಿಂದ ಅದನ್ನೂ ಅರ್ಧಕ್ಕೆ ಬಿಟ್ಟರು. ಮೇಕಪ್‌ ಅಂದ್ರೆ ತುಂಬ ಇಷ್ಟಪಡುತ್ತಿದ್ದ ಅವರು ಅದನ್ನೇ ವೃತ್ತಿಯಾಗಿ ಮುಂದುವರಿಸಲು ನಿರ್ಧಾರ ಮಾಡಿದರು. 

ಬ್ರೈಡಲ್‌ ಮೇಕಪ್‌ ಹಾಗೂ ಸೆಲೆಬ್ರೆಟಿ ಮೇಕಪ್‌ನಲ್ಲಿ ಗುರುತಿಸಿಕೊಳ್ಳುತ್ತಿರುವ ಲಕ್ಷ್ಮಿ ಆರಂಭದಲ್ಲಿ ತುಂಬ ಕಷ್ಟಪಟ್ಟಿದ್ದಾರೆ. ಸಿನಿಮಾ ಅಥವಾ ಕಿರುತೆರೆ ನಟಿಯರಿಗೆ ಮೇಕಪ್‌ಗಾಗಿ ಹೋದಾಗ, ಬೇರೆಯವರ ಕೈಯಲ್ಲಿ ಮೇಕಪ್‌ ಮಾಡಿಸಿರುತ್ತಿದ್ದರು. ಕಡೆ ಕ್ಷಣದಲ್ಲಿ ಅಪಾಯಿಂಟ್‌ಮೆಂಟ್‌ ಕ್ಯಾನ್ಸಲ್‌ ಮಾಡುವುದು, ‘ನಟಿಯಾಗಿದ್ದವಳು ಈಗ ಮೇಕಪ್‌ ಕಲಾವಿದೆಯಾಗಿದ್ದಾಳೆ’ ಎಂಬ ಕುಹಕದ ಮಾತುಗಳನ್ನು ಕೇಳುತ್ತಿದ್ದರು. ಆದರೆ ಇದನ್ನೆಲ್ಲಾ ಸವಾಲಾಗಿ ಸ್ವೀಕರಿಸಿ ಮುಂದುವರಿದರು. ಸಿಕ್ಕ ಸಣ್ಣ  ಸಣ್ಣ ಅವಕಾಶಗಳಲ್ಲಿ ಮೇಕಪ್‌ನಲ್ಲಿ ತನ್ನದೇ ಗುರುತನ್ನು ಉಳಿಸಿಕೊಂಡರು. ಈಗ ನಾಗರಬಾವಿಯಲ್ಲಿ ಸ್ವಂತ ‘ಗ್ಲಾಮ್‌ ಡಸ್ಟ್‌’ ಮೇಕ್ಓವರ್‌ ಸ್ಟುಡಿಯೊ ಆರಂಭಿಸಿದ್ದಾರೆ. 

‘ನಾನು ನಟಿಯರಾದ ಶಾನ್ವಿ ಶ್ರೀವಾಸ್ತವ, ಆಶಿಕಾ, ಮಾನ್ವಿತಾ, ಅನುಪಮಾ ಗೌಡ, ನೇಹಾ ಗೌಡ, ಕೃಷಿ ತಾಪಂಡ ಮೊದಲಾದ ನಟಿಯರಿಗೆ ಮೇಕಪ್‌ ಮಾಡಿದ್ದೇನೆ. ಬ್ರೈಡಲ್‌ ಮೇಕ್‌ಒವರ್‌ ನನಗಿಷ್ಟ. ನಾನು ಮೇಕಪ್‌ ಮಾಡುವಾಗ ಕಣ್ಣಿನ ಅಲಂಕಾರಕ್ಕೆ ವಿಶೇಷ ಗಮನ ನೀಡುತ್ತೇನೆ. ಇದೇ ನನ್ನ ಗುರುತಾಗಿದೆ’ ಎನ್ನುತ್ತಾರೆ ಲಕ್ಷ್ಮಿ. 

ವಿಳಾಸ– ಗ್ಲಾಮ್‌ಡಸ್ಟ್‌ ಮೇಕ್‌ಓವರ್‌ ಸ್ಟುಡಿಯೊ, ನಾಗರಬಾವಿ

ಇನ್‌ಸ್ಟಾಗ್ರಾಮ್‌ ಕೊಂಡಿ– makeoverwithlakshmi_shetty

 

ಸಂಗೀತಾ ಕೇಸ್ವಾನಿ–‘ವಸ್ತ್ರ' ಬೊಟಿಕ್‌

ಬಾಲ್ಯದ ವಸ್ತ್ರವಿನ್ಯಾಸದ ಗೀಳನ್ನೇ ಈಗ ವ್ಯಾಪಾರದ ಮಾರ್ಗವನ್ನಾಗಿಸಿಕೊಂಡವರು ‘ವಸ್ತ್ರ’ ಬೊಟಿಕ್‌ ಮಾಲಕಿ ಸಂಗೀತಾ ಕೇಸ್ವಾನಿ. ವ್ಯಾಪಾರ ಕುಟುಂಬದಿಂದ ಬಂದ ಸಂಗೀತಾಗೆ ಸ್ವಂತ ಬುಸಿನೆಸ್‌ ಮಾಡುವ ಕನಸಿತ್ತು. ಮಗು ಸ್ವಲ್ಪ ದೊಡ್ಡವನಾದ ನಂತರ ಸ್ವಂತ ಉದ್ದಿಮೆ ಆರಂಭಿಸಬೇಕು ಎಂದಾಗ ಅವರಿಗೆ ಹೊಳೆದಿದ್ದು ವಸ್ತ್ರವಿನ್ಯಾಸ. ಕುಟುಂಬ ಸದಸ್ಯರಿಗೆ ಹಾಗೂ ಸ್ನೇಹಿತರಿಗೆ ಅವರು ವಸ್ತ್ರವಿನ್ಯಾಸ ಮಾಡುತ್ತಿದ್ದರು. ಆಗ ಅವರೆಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದೇ ‘ವಸ್ತ್ರ’ ಬೊಟಿಕ್‌ ಆರಂಭಕ್ಕೆ ಕಾರಣ ಎನ್ನುತ್ತಾರೆ ಸಂಗೀತಾ. 

‘ವಸ್ತ್ರ’ದಲ್ಲಿ ಅನಾರ್ಕಲಿ, ಮಾಡರ್ನ್‌ ಕಟ್‌ ಬಟ್ಟೆ, ಟ್ಯುನಿಕ್‌, ಕುರ್ತಾ, ಸೀರೆ ಲಭ್ಯ. ಮದುಮಗಳ ಸೀರೆ, ಲೆಹೆಂಗಾವನ್ನು ವಿಶೇಷವಾಗಿ ಇವರೇ ವಿನ್ಯಾಸ ಮಾಡಿಕೊಡುತ್ತಾರೆ. ಸಾಂಪ್ರದಾಯಿಕ ಬಟ್ಟೆಗಳ ಜೊತೆಗೆ ಆಧುನಿಕ ಬಟ್ಟೆಗಳ ಸಂಗ್ರಹ ಇಲ್ಲಿದೆ. ‘ವಸ್ತ್ರದ ಎಲ್ಲಾ ಸಂಗ್ರಹಗಳ ವಿನ್ಯಾಸವೂ ವಿಶೇಷ’ ಎನ್ನುವ ಇವರು , ‘ದಕ್ಷಿಣ ಭಾರತದ ಮಹಿಳೆಯರು ತುಂಬ ಸೌಮ್ಯ ಬಣ್ಣಗಳನ್ನು ಮೆಚ್ಚುತ್ತಾರೆ. ಆದರೆ ನಾನು ಗಾಢ ಬಣ್ಣಗಳಲ್ಲಿ ಪ್ರಯೋಗ ಮಾಡಿದೆ. ಕ್ಲೈಂಟ್‌ಗೆ ಇಷ್ಟವಾಯಿತು. ದೇಹಾಕಾರ, ಬಣ್ಣ, ಎತ್ತರ, ಕುಳ್ಳ ಹೇಗೆ ಇದ್ದರೂ ಅವರವರ ದೇಹಾಕಾರಕ್ಕೆ ತಕ್ಕಂತೆ ವಿನ್ಯಾಸ ಮಾಡಿಕೊಡುತ್ತೇವೆ ಎನ್ನುತ್ತಾರೆ ಸಂಗೀತಾ.

ವಸ್ತ್ರ ಬೊಟಿಕ್‌, 16ನೇ ಮುಖ್ಯರಸ್ತೆ, 4ನೇ ಟಿ ಬ್ಲಾಕ್‌, ಜಯನಗರ. 

ಫೇಸ್‌ಬುಕ್‌ ಕೊಂಡಿ–www.facebook.com/VastrrabySangeetaKeswani/

ಪ್ರತಿಕ್ರಿಯಿಸಿ (+)