ಶುಕ್ರವಾರ, ನವೆಂಬರ್ 22, 2019
19 °C

ಹವ್ಯಾಸದಿಂದ ಉದ್ಯಮದವರೆಗೆ: ಮಹಿಳಾ ಉದ್ಯಮಿಗಳ ಯಶೋಗಾಥೆ

Published:
Updated:
Prajavani

ಅಡುಗೆ ಮನೆಗಷ್ಟೆ ಸೀಮಿತವಾಗಿದ್ದ ಮಹಿಳೆ ಅಡುಗೆ ಮನೆಯಲ್ಲೇ ಕನಸಿನ ಗೋಪುರವನ್ನು ಕಟ್ಟಿ ಅದರಲ್ಲೇ ಸಂತೋಷ ಕಾಣುತ್ತಿದ್ದವಳು ಇವತ್ತು ಅದೇ ಅಡುಗೆಮನೆಗೆ ಸ್ಮಾರ್ಟ್‌ನೆಸ್ ಎಂಬ ಟಚ್ ಕೊಟ್ಟಿದ್ದಾಳೆ. ಅಡುಗೆ ಅಂದ್ರೆ ಅನ್ನ, ಸಾರು, ಬೇಳೆ, ಮಿಕ್ಸಿ, ಗ್ರೈಂಡರ್ ಎನ್ನುವುದನ್ನು ಹೋಮ್‌ ಮೇಡ್‌ ಆಹಾರವೆಂಬ ಹೆಸರಿನಲ್ಲಿ ಬ್ಯುಸಿನೆಸ್‌ ಆಗಿ ಬದಲಾಯಿಸಿದ್ದಾಳೆ. ಹವ್ಯಾಸಗಳನ್ನು ಸಣ್ಣ ಪ್ರಮಾಣದ ಉದ್ಯಮದ ಸ್ತರಕ್ಕೇರಿಸಿದ್ದಾಳೆ.

ಆಕೆ ಬೆಂಗಳೂರಿನ ಐಶ್ವರ್ಯ. ಚಾಕೊಲೇಟ್ ಹಾಗೂ ಕೇಕ್‌ ಎಂದರೆ ತುಂಬಾ ಇಷ್ಟ. ಬೇಕಿಂಗ್ ಒಂದು ಹವ್ಯಾಸವಾಗಿತ್ತು. ಆಕೆ ಬೇಕ್ ಮಾಡಿದ ಕೇಕ್, ಬ್ರೌನೀಸ್‌ ತಿಂದ ಮನೆಯವರು, ಸ್ನೇಹಿತೆಯರು ಹೊಗಳಿದಾಗ ಇದನ್ನೇ ಕಮರ್ಷಿಯಲ್‌ ಆಗಿ ಯಾಕೆ ಶುರು ಮಾಡಬಾರದು ಎನಿಸಿತು. ಆಗ ಆರಂಭವಾಗಿದ್ದೇ ಬೇಕಿಂಗ್ ಬ್ಯುಸಿನೆಸ್. ಎಲ್ಲವೂ ಹೋಮ್ ಮೇಡ್. ಎರಡೇ ತಿಂಗಳಲ್ಲಿ ಸಾಕಷ್ಟು ಬೇಡಿಕೆಗಳು ಬರುತ್ತಿದ್ದು, ಸ್ವಯಂ ಉದ್ಯೋಗ ನೀಡುವ ತೃಪ್ತಿಯನ್ನೂ ಅನುಭವಿಸುತ್ತಿದ್ದಾರೆ.


ಐಶ್ವರ್ಯಾ

ಇದು ಒಬ್ಬಳು ಐಶ್ವರ್ಯಳ ಯಶೋಗಾಥೆ ಮಾತ್ರವಲ್ಲ ಅಥವಾ ಬೆಂಗಳೂರಿಗೆ ಸೀಮಿತವಾದ ಸ್ವ ಉದ್ಯೋಗದ ವಿವರಣೆಯೂ ಅಲ್ಲ, ಸಣ್ಣಪುಟ್ಟ ಪಟ್ಟಣಗಳಲ್ಲೂ ಸಹ ಹಲವಾರು ಮಹಿಳೆಯರು ಈಗ ಸ್ವ-ಉದ್ಯೋಗ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಒಂದು ಕಾಲದಲ್ಲಿ ಮನೆಯಿಂದ ಹೊರಬಂದು ಸಮಾಜದಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳಲು ಒಂದು ಅವಕಾಶಕ್ಕಾಗಿ ಕಾದು ಯಾವುದಾದರೂ ಕೆಲಸ ಸಿಕ್ಕಿದ್ರೆ ಸಾಕು ಎಂದು ಕಂಪನಿಗಳಲ್ಲಿ, ಶಾಲಾ- ಕಾಲೇಜುಗಳಲ್ಲಿ, ಬ್ಯಾಂಕ್‌ಗಳಲ್ಲಿ, ಸರ್ಕಾರಿ ನೌಕರಳಾಗಿ ಸೇವೆ ಸಲ್ಲಿಸುತ್ತಿದ್ದ ಮಹಿಳೆ ಅವಕಾಶಗಳನ್ನು ಉಪಯೋಗಿಸಿಕೊಂಡು ಉನ್ನತ ಶ್ರೇಣಿಗೇರಲು ಶ್ರಮಪಡುತ್ತಿದ್ದಳು.

ಆದರೆ ಈಗ ಸಣ್ಣ ಪ್ರಮಾಣದ ಬ್ಯುಸಿನೆಸ್ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಹುಟ್ಟುಹಾಕಿದ್ದಾಳೆ. ಅಂದು ಅಡುಗೆ ಮನೆಯಲ್ಲಿ ಮನೆಯವರ ಆರೋಗ್ಯದ ಹಿತದೃಷ್ಟಿಯಿಂದ ಏನೇನು ತಿಂಡಿ ತಿನಿಸು ಮಾಡುತ್ತಿದ್ದಳೋ, ಮನೆಯ ಅಲಂಕಾರಕ್ಕಾಗಿ ಏನೇನು ಕಸರತ್ತು ಮಾಡುತ್ತಿದ್ದಳೋ ಅದಕ್ಕೆಲ್ಲಾ ಈಗ ಹೊಸ ರೂಪ ಕೊಟ್ಟು ಗೃಹೋತ್ಪನ್ನವೆಂದು ಆನ್‌ಲೈನ್ ಮಾರುಕಟ್ಟೆಗೆ ಪರಿಚಯಿಸಿದ್ದಾಳೆ. ಅಂದಿನ ಹವ್ಯಾಸಗಳು ಇಂದು ಬ್ಯುಸಿನೆಸ್‌ ಆಗಿ ಹೊರಹೊಮ್ಮಿವೆ.

ಮನೆಯಲ್ಲೇ ತಯಾರಾಗುವ ಕೇಕ್‌

ಮನೆಯಲ್ಲೇ ತಯಾರಾದ ಆಹಾರಕ್ಕೆ ಈಗ ಬೇಡಿಕೆ ಹೆಚ್ಚಾಗಿದೆ. ಹುಟ್ಟುಹಬ್ಬದ ಹಾಗೂ ವಾರ್ಷಿಕೋತ್ಸವದ ಕೇಕ್‌ಗಳಿಗೆ ಎಲ್ಲಿಲ್ಲದ ಬೇಡಿಕೆ. ಇದನ್ನೇ ಗಮನದಲ್ಲಿಟ್ಟುಕೊಂಡು ಎಷ್ಟೋ ಜನ ಮಹಿಳೆಯರು ಮನೆಯಲ್ಲೇ ಕೇಕ್ ತಯಾರಿಸಿ ಮಾರಾಟ ಮಾಡುತ್ತಾರೆ. ಗ್ರಾಹಕರಿಗೆ ಯಾವ ಪರಿಮಳದ ಹಾಗೂ ಯಾವ ವಿನ್ಯಾಸದ ಕೇಕ್ ಬೇಕು ಎಂಬುದನ್ನು ತಿಳಿದು ಅದೇ ತರಹದ್ದು ಮಾಡಿಕೊಡುತ್ತಾರೆ. ಇಂಥವರಿಗೆ ಪ್ರಚಾರದ, ಜಾಹೀರಾತಿನ ಅವಶ್ಯಕತೆಯೂ ಇಲ್ಲ. ‘ಅಲ್ಲೊಬ್ಬಳು ಹೋಮ್ ಬೇಕರ್ ಇದ್ದಾಳೆ’ ಎಂಬ ವಿಚಾರ ಬಾಯಿಂದ ಬಾಯಿಗೆ ಹೋಗಿ ಆರ್ಡರ್‌ಗಳು ಹೆಚ್ಚಾಗುತ್ತವೆ.

‘ನಾನು ಜರ್ನಲಿಸಂ ಪದವೀಧರೆ. ಸ್ವ-ಉದ್ಯೋಗ ಮಾಡಬೇಕೆಂದು ತುಂಬಾ ಆಸಕ್ತಿ ಇತ್ತು. ಹೀಗಾಗಿ ಅಣ್ಣ ಹಾಗೂ ನಾನು ಕೆಫೆ ಮತ್ತು ಬೇಕಿಂಗ್ ಬ್ಯುಸಿನೆಸ್ ಅನ್ನು ಪ್ರಾರಂಭಿಸಿದೆವು. ಸತತವಾಗಿ ಮೂರು ವರ್ಷದಿಂದ ನಡೆಸುತ್ತಿದ್ದೇವೆ. ಕೇಕ್ ಹಾಗೂ ಪೇಸ್ಟ್ರೀಸ್‌ಗೆ ಸಾಕಷ್ಟು ಬೇಡಿಕೆ ಇದೆ. ಈ ವರ್ಷದಿಂದ ನಾನು, ಅಮ್ಮ ಹಾಗೂ ನನ್ನ ಅತ್ತಿಗೆ ಸೇರಿ ಪ್ರೀ-ಸ್ಕೂಲ್ ಅನ್ನು ಆರಂಭಿಸಿದ್ದೇವೆ’ ಎನ್ನುತ್ತಾರೆ ಇನ್ನೊಬ್ಬಳು ಯಶಸ್ವಿ ಸಣ್ಣ ಉದ್ಯಮಿ ಅಪೂರ್ವ.


ಅಪೂರ್ವಾ

ಇತ್ತೀಚೆಗೆ ಗಮನಿಸಿದಂತೆ ಮನೆಯಲ್ಲೇ ತಯಾರಾದ ಬ್ರೌನೀಸ್‌ಗೆ ಬೇಡಿಕೆ ಹೆಚ್ಚುತ್ತಿದೆ. ಪ್ರತಿಷ್ಠಿತ ಕಂಪನಿಗಳಿಗೆ ಕೆಲಸ ಮಾಡುವ ಯುವತಿಯರು ಕೂಡ ತಮ್ಮ ಬಿಡುವಿನ ಸಮಯದಲ್ಲಿ ತರಹೇವಾರಿ ಬ್ರೌನೀಸ್, ಕಪ್ ಕೇಕ್ ಹಾಗೂ ಮಫಿನ್ಸ್‌ ಮಾಡಿ ಪೂರೈಸುತ್ತಿದ್ದಾರೆ.

ಅಡುಗೆ ತರಗತಿ

ಮನೆಯ ಕಿಚನ್ ಅನ್ನು ಸ್ವಲ್ಪ ನವೀಕರಣ ಮಾಡಿಸಿ, ಅಲ್ಲೇ ಕುಕಿಂಗ್ ತರಗತಿ ನಡೆಸುವ ಮಹಿಳೆಯರು ಇದ್ದಾರೆ. ವಾರಾಂತ್ಯದಲ್ಲಿ ಇತರ ಮಹಿಳೆಯರಿಗೆ ಕೋಚಿಂಗ್ ಕೊಡುತ್ತಾರೆ. ಇದರಿಂದ ಆದಾಯವೂ ಬರುತ್ತದೆ, ಇನ್ನಿತರರು ಹೊಸ ರುಚಿಯನ್ನು ಕಲಿತಂತೆಯೂ ಆಗುತ್ತದೆ.

ಗೃಹಾಲಂಕಾರ ವಸ್ತುಗಳು

ಗೃಹಾಲಂಕಾರಿಕ ವಸ್ತುಗಳು ಕೂಡ ಕೈಗೆಟಕುವ ದರದಲ್ಲಿ ಲಭ್ಯ. ಡಿಕೊಪೇಜ್ ವಾಜ್‌ಗಳು, ಗ್ಲಾಸ್, ಟ್ರೇ, ಆಭರಣ ಪೆಟ್ಟಿಗೆ, ವಾಲ್ ಹ್ಯಾಂಗಿಂಗ್ಸ್.. ಹೀಗೆ ಮನೆಯನ್ನು ಚಂದಗಾಣಿಸಲು ಏನೇನು ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆಯೋ ಅದಕ್ಕಿಂತ ಇನ್ನಷ್ಟು ಉತ್ತಮ ಗುಣಮಟ್ಟದ್ದನ್ನು ಹೆಂಗಳೆಯರು ಮನೆಯಲ್ಲೇ ಮಾಡಿ ಮಾರಾಟ ಮಾಡುವುದಕ್ಕೂ ಸಾಕಷ್ಟು ಬೇಡಿಕೆ ಇದೆ.

‘ಐದಾರು ವರ್ಷಗಳ ಹಿಂದೆ ಕುಂದನ್ ಹ್ಯಾಂಡಿಕ್ರಾಫ್ಟ್ ಪ್ರಾರಂಭಿಸಿದೆವು. ಹಬ್ಬಗಳಿಗೆ ಬೇಕಾಗುವ ಅಲಂಕಾರಿಕ ವಸ್ತುಗಳಾದ ಕುಂಕುಮದ ಭರಣಿ, ಕುಂದನ್ ರಂಗೋಲಿ, ಅಲಂಕಾರಿಕ ತುಪ್ಪದ ದೀಪಗಳು, ಅಲಂಕಾರಿಕ ಕ್ಯಾಂಡಲ್‌ಗಳು ಹಾಗೂ ಇನ್ನಿತರ ಹ್ಯಾಂಡಿಕ್ರಾಫ್ಟ್ ವಸ್ತುಗಳು ನಮ್ಮಲ್ಲಿ ದೊರೆಯುತ್ತವೆ. ಮೊದಲಿಗೆ ಹವ್ಯಾಸವಾಗಿ ಆರಂಭವಾದದ್ದು ಈಗ, ಯಾವುದೊ ಕಷ್ಟ ಕಾಲದಲ್ಲಿ ನನ್ನೊಂದಿಗಿದ್ದ ಏಳು ಮಹಿಳೆಯರು ಹಾಗೂ ಅವರ ಕುಟುಂಬಕ್ಕೆ ಆಧಾರವಾಗಿದೆ’ ಎನ್ನುತ್ತಾರೆ ಇನ್ನೊಬ್ಬ ಉದ್ಯಮಿ ಚಂದ್ರಿಕಾ.


ಚಂದ್ರಿಕಾ

ಆಭರಣಗಳು

ಹಾಗೆಯೇ ಸೀಸನ್‌ಗೆ ತಕ್ಕಂತೆ ಬಟ್ಟೆ, ಮೇಕಪ್ ಹಾಗೂ ಅದಕ್ಕೆ ಒಪ್ಪುವ ಆಭರಣ. ಇವುಗಳನ್ನು ಮನೆಯಲ್ಲೇ ತಯಾರಿಸಿ ಮಾರಾಟ ಮಾಡುವುದು ಆದಾಯದ ಒಂದು ಬಹು ದೊಡ್ಡ ಭಾಗವಾಗಿದೆ. ಕಿವಿಯೋಲೆ, ನೆಕ್ಲೇಸ್, ಡಿಸೈನ್ ಬಳೆಗಳು, ವ್ಯಾನಿಟಿ ಬ್ಯಾಗ್ ಇನ್ನಿತರ ಮನಸೂರೆಗೊಳ್ಳುವ ವಸ್ತುಗಳು ಅವಳ ಕೈಚಳಕದಲ್ಲಿ ತಯಾರಾಗುತ್ತಿವೆ.

ಮನೆಯಲ್ಲಿ ತಯಾರಿಸಿದ ಯಾವುದೇ ಅಲಂಕಾರಿಕ ವಸ್ತುವಿರಲಿ, ತಿನಿಸುಗಳೇ ಇರಲಿ. ಅವುಗಳಿಗಾಗಿ ಪ್ರದರ್ಶನ ಮತ್ತು ಮಾರಾಟದಲ್ಲಿ ಮಳಿಗೆ ಹಾಕುವುದು ಒಂದು ರೀತಿಯ ಟ್ರೆಂಡ್ ಆಗಿದೆ. ಇಂತಹ ಮಾರಾಟ ಎಲ್ಲಿ ನಡೆಯುತ್ತಿದೆ ಎಂಬ ವಿವರ ಹೇಗೂ ಫೇಸ್‌ಬುಕ್‌ನಲ್ಲಿ ಲಭ್ಯವಿರುತ್ತದೆ. ಮಳಿಗೆ ಹಾಕಿ ಅರಳು ಹುರಿದಂತೆ ಮಾತನಾಡಿ ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ವ್ಯಾಪಾರ ಮುಗಿದಿರುತ್ತದೆ.ಆನ್‌ಲೈನ್ ಎಂಬ ಬ್ರಹ್ಮಾಸ್ತ್ರವನ್ನು ಉಪಯೋಗಿಸಿಕೊಂಡು ಎಷ್ಟೆಲ್ಲಾ ಕೆಲಸಗಳನ್ನು ಸಲೀಸಾಗಿ ಮಾಡುತ್ತಿದ್ದಾಳೆ ಇಂದಿನ ಮಹಿಳೆ. ಕೆಲಸ ಸಿಗದೆ ಮುಂದೇನು ಎಂದು ಯೋಚಿಸುವವರಿಗೆ ಇದೊಂದು ಸುವರ್ಣಾವಕಾಶ.

ಇದನ್ನೂ ಓದಿ: ಮಹಿಳಾ ಉದ್ಯಮಿಗಳಲ್ಲಿ ಗರಿಗೆದರಿದ ಉತ್ಸಾಹ

ಪ್ರತಿಕ್ರಿಯಿಸಿ (+)