ತಾಯಂದಿರಿಗೆ ಸಜೆಯಾಗದಮಕ್ಕಳ ರಜೆ!

7

ತಾಯಂದಿರಿಗೆ ಸಜೆಯಾಗದಮಕ್ಕಳ ರಜೆ!

Published:
Updated:

‘ಮಗನ ರಜೆ ಶುರುವಾಗಿದೆ, ಒಂದಿಷ್ಟು ಸಿದ್ಧತೆ ಮಾಡಿಕೊಳ್ಳಬೇಕು' ಎಂದುಕೊಳ್ಳುತ್ತಿರುವಾಗಲೇ ಮಗ ಶಾಲೆ ಬಿಟ್ಟು ಬಂದ. ಮನೆಯೊಳಕ್ಕೆ ಬರುವ ಮೊದಲೇ ಧ್ವನಿ ಕೇಳಿತು. ‘ಅಮ್ಮಾ... ನೋಡು ನೀನು ನಂಗೆ ಒಳ್ಳೆಯವನಾಗಬೇಕು, ಒಳ್ಳೇದನ್ನೇ ಮಾಡಬೇಕು ಅಂತ ದಿನಾಲೂ ಹೇಳ್ತೀಯಲ್ಲಾ, ಯಾರೂ ಹಾಗಿರೋದೇ ಇಲ್ಲಾ, ನೋಡು ಸ್ಕೂಲಿನಲ್ಲಿ ಕೂಡ ಕೆಟ್ಟೋರಿಗೇ ಬಹುಮಾನ ಕೊಡ್ತಾರೆ’ ಮಗ ಮುಖ ಉಬ್ಬಿಸಿ ಹೇಳಿದ. ‘ಯಾಕೋ ಏನಾಯ್ತು ಮರಿ?’ ಎಂದು ಕೇಳಿದೆ. ಅವನು ಹೇಳಿದ. ‘ನೋಡಮ್ಮಾ, ಸ್ಕೂಲ್‍ನಲ್ಲಿ ಕೆಟ್ಟೋರಿಗೇ ಪ್ರೈಸ್ ಕೊಡ್ತಾರೆ, ರಾವಣನಿಗೆ ಫಸ್ಟ್ ಪ್ರೈಸ್, ನಾನು ವಿಷ್ಣು ಮಾಡಿದ್ರೂ ಸೆಕೆಂಡ್ ಪ್ರೈಸ್, ರಾವಣನಿಗಿಂತ ವಿಷ್ಣು ದೊಡ್ಡೋನಲ್ವೇನಮ್ಮಾ?’ ಕಣ್ಣಿನಲ್ಲಿ ನೀರು ತುಂಬಿ ಮಗು ಕೇಳುತ್ತಿದ್ದರೆ ಒಂದು ಕಡೆ ನಗು, ಒಂದು ಕಡೆ ಬೇಸರ – ಎರಡೂ ಆಯ್ತು.

ಇನ್ನೇನು ಅರ್ಧವಾರ್ಷಿಕ ಪರೀಕ್ಷೆ ಮುಗಿಯುತ್ತ ಬಂದಿದೆ. ದಸರೆಯ ರಜೆವಾಗಿದೆ. ಇವನ ಶಾಲೆಯಲ್ಲಿ ‘ಮೈಥೊಲೋಜಿಕಲ್ ಡ್ರೆಸ್ ಕಾಂಪಿಟೇಷನ್’ ಏರ್ಪಡಿಸಿದ್ದರು. ಮಗುವೊಂದು ರಾವಣನ ಪಾತ್ರ ಮಾಡಿತ್ತು. ಅದಕ್ಕೆ ಮೊದಲ ಬಹುಮಾನ ಬಂದಿತ್ತು. ವಿಷ್ಣು ಪಾತ್ರ ಹಾಕಿಕೊಂಡು ಹೋದ ಇವನಿಗೆ ಎರಡನೇ ಬಹುಮಾನ. ಅದಕ್ಕೇ ಇವನೂ, ಇವನ ಫ್ರೆಂಡ್ಸೂ ಅಂದುಕೊಂಡಿದ್ದಾರೆ, ವಿಷ್ಣು ಒಳ್ಳೆಯವನಾದರೂ, ದೇವರಾದರೂ ಅವನಿಗೆ ಎರಡನೇ ಬಹುಮಾನ ಅಂತ. ಕೂರಿಸಿಕೊಂಡು ಮುದ್ದು ಮಾಡುತ್ತಾ ಹೇಳಿದೆ: ‘ನೋಡು ಪುಟ್ಟಾ, ಬಹುಮಾನ ಬಂದಿದ್ದು ರಾವಣನಿಗಲ್ಲ; ರಾವಣನ ಪಾತ್ರ ಮಾಡಿದವನಿಗೆ, ಅಂವ ನಿನಗಿಂತ ಚೆನ್ನಾಗಿ ಡ್ರೆಸ್ ಮಾಡಿಕೊಂಡು ಬಂದಿದ್ದ ಅಲ್ಲ, ಹತ್ತು ತಲೆ, ಆಯುಧ ಎಲ್ಲ ಇತ್ತಲ್ಲ, ನೀನೂ ಚೆನ್ನಾಗಿ ಡ್ರೆಸ್ ಮಾಡಿಕೊಂಡಿದ್ದರೂ ಚೆನ್ನಾಗೇ ಪಾತ್ರ ಮಾಡಿದ್ದರೂ ಹತ್ತು ತಲೆ ಇರಲಿಲ್ವಲ್ಲ, ಅದಕ್ಕೆ ನಿಂಗೆ ಸೆಕೆಂಡ್ ಪ್ರೈಸ್, ಅವನಿಗೆ ಫಸ್ಟ್ ಪ್ರೈಸ್ ಬಂದಿದೆ’ ಎಂದೆ. ಮುಂದುವರಿಸಿ ‘ಬಹುಮಾನ ಬಂದಿದ್ದು ನಿಂಗೆ ಮರಿ, ವಿಷ್ಣುವಿಗಲ್ಲ; ವಿಷ್ಣುವಿಗೆ ನಿಮ್ಮ ಸ್ಕೂಲಿನ ಬಹುಮಾನದ ಹಂಗೇ ಇಲ್ಲ, ಅವನು ಯಾವಾಗಲೂ ಫಸ್ಟೇ. ಮತ್ತೆ ರಾವಣನಿಗೆ ಯಾರು ಫಸ್ಟ್ ಪ್ರೈಸ್ ಕೊಡುತ್ತಾರೆ? ಅವನ ಪಾತ್ರ ಮಾಡಿದ್ದಕ್ಕೆ ಕೊಟ್ಟಿದ್ದಾರೆ ಅಷ್ಟೇ’ ಎಂದೆ. ಅವನು ಸಮಾಧಾನ ಹೊಂದಿದಂತೆ ಕಂಡಿತು. ಇದನ್ನು ಯಾಕೆ ಹೇಳಬೇಕಾಯಿತೆಂದರೆ ಮಕ್ಕಳ ಮನಸ್ಸನ್ನು ಚೂರೂ ಅರ್ಥ ಮಾಡಿಕೊಳ್ಳದೇ ಏನೇನನ್ನೋ ಸೃಷ್ಟಿಸಿಬಿಡುವ ತಂದೆತಾಯಿಗಳು, ಸ್ಕೂಲು, ಸಮಾಜ – ಅಲ್ಲಿಗೆ ಮಕ್ಕಳ ಜಗತ್ತೇ ನಾಶವಾಗುತ್ತಾ ಸಾಗುತ್ತದೆ. ಅವರ ಜಗತ್ತಿನಲ್ಲಿ ದೊಡ್ಡವರು ವಿನಾ ಕಾರಣ ಭಾಗವಹಿಸುತ್ತಾರೆ. ಅವರ ರಜೆ, ವಿದ್ಯಾಭ್ಯಾಸ, ಭಾವನೆಗಳು ಎಲ್ಲವೂ ದೊಡ್ಡವರ ಮುಷ್ಟಿಯಲ್ಲಿ ನಲುಗುತ್ತವೆ. ಮೇಲಿನ ವಿಷಯವನ್ನೇ ತೆಗೆದುಕೊಳ್ಳಿ. ಮಕ್ಕಳ ಮನಸ್ಸನ್ನು ಯಾರಾದರೂ ಅರ್ಥ ಮಾಡಿಕೊಂಡಿದ್ದಾರೆಯೇ? ಸ್ಕೂಲಿನಲ್ಲಿ ಮಕ್ಕಳಿಗೆ ನೆಗೆಟಿವ್ ಪಾತ್ರಗಳನ್ನು ಹಾಕಬೇಡಿ ಎನ್ನಬಹುದಿತ್ತು ಅಥವಾ ತಂದೆ ತಾಯಿಗಳು ಅದನ್ನು ಯೋಚಿಸಬಹುದಿತ್ತು. ಆದರೆ ಹಾಗಾಗಲಿಲಲ್ಲ, ಮಕ್ಕಳೆಲ್ಲ ಕೆಟ್ಟವರಿಗೇ ಫಸ್ಟ್ ಪ್ರೈಸ್‌ ಕೊಟ್ಟಿದ್ದಾರೆ ಎಂದುಕೊಂಡಿದ್ದಾರೆ!

ಮಗು ಒಂದು ಸಂದರ್ಭವನ್ನು ತಿಳಿದುಕೊಳ್ಳುವುದು ಅದರ ಬುದ್ಧಿಮಟ್ಟದ ಮೇಲೆ. ಅಸೂಕ್ಷ್ಮವಾದ ಎಲ್ಲ ಸಂದರ್ಭಗಳೂ ಮಕ್ಕಳ ಬಾಲ್ಯವನ್ನು ನುಂಗುತ್ತಾ ಹೋಗುತ್ತವೆ. ರಾವಣನ ಪಾತ್ರ ಮಾಡಿದ ಮಗು ತಾನೇ ರಾವಣ ಎಂದುಕೊಂಡರೆ ಮಾಡುವುದೇನು – ಎಂದುಕೊಂಡೆ. ಮಕ್ಕಳ ಜಗತ್ತು ದೊಡ್ಡವರಿಂದ ಅನಗತ್ಯವಾಗಿ ಪ್ರವೇಶಿಸಲ್ಪಡುತ್ತದೆ ಎಂಬ ಕಾರಣಕ್ಕೆ. ದಸರೆಯ ರಜೆ ಬಂದಿದೆ, ಮಕ್ಕಳು ತುಂಬಾ ಆನಂದಿಸಬೇಕಾದ ರಜೆಯಂತಹ ಕ್ಷಣಗಳೂ ಕೂಡ ದೊಡ್ಡವರ ಬೈಗುಳ ತಿನ್ನುವ, ಶಿಕ್ಷೆ ಕೊಡಿಸಿಕೊಳ್ಳುವ, ಸಂತೋಷ ಕಸಿದುಕೊಳ್ಳುವ ಸಂದರ್ಭಗಳಾಗಿಬಿಡುತ್ತವೆ ಎಂಬ ಕಾರಣಕ್ಕೆ. ರಜೆಯ ಮಜಾ ಹೋಗಲಿ, ಕೆಲವು ಸ್ಕೂಲುಗಳಲ್ಲಿ ರಾಶಿ ರಾಶಿ ಹೋಮ್‍ವರ್ಕ್ ಕೊಡುತ್ತಾರೆ. ಇನ್ನು ಮನೆಯಲ್ಲಿ ತಾಯಂದಿರ ಗೋಳಾಟ: ‘ಯಾಕಾದ್ರೂ ಸ್ಕೂಲಿಗೆ ರಜಾ ಬರತ್ತೋ? ನಮ್ಮ ಪ್ರಾಣ ತಿನ್ನೋಕೆ’ ಎಂದು. ಸ್ಕೂಲಿಗೆ ರಜಾ ಇದ್ದರೂ ಹಲವು ಡೇ–ಕೇರ್‌ಗಳು ಓಪನ್ ಆಗಿರುತ್ತವೆ.

ಕೆಲಸಕ್ಕೆ ಹೋಗುವ ನಗರದ ತಾಯಂದಿರಿಗೆ ಮಕ್ಕಳನ್ನು ನೋಡಿಕೊಳ್ಳುವ, ಅವರ ರಜೆಯನ್ನು ಆನಂದಿಸುವ ಅವಕಾಶವೇ ಇರುವುದಿಲ್ಲ. ‘ರಜಾ ಬಂತು, ಏನು ಮಾಡುವುದೆಂಬುದೇ ಸಮಸ್ಯೆ, ಊರಿಗೆ ಕಳುಹಿಸಿಬಿಡ್ತೇನೆ’ ಎಂಬ ತಾಯಂದಿರೇ ಜಾಸ್ತಿ.

ಮಕ್ಕಳ ಮನಸ್ಸಿಗೆ ಹಿತವಾಗುವಂತೆ ನೋಡಿಕೊಳ್ಳುವ, ಅವರ ಜಗತ್ತಿನ ಪ್ರವೇಶ ಪಡೆದುಕೊಳ್ಳುವ ಜನರ ಸಂಖ್ಯೆ ಕಡಿಮೆಯೆಂದೇ ಹೇಳಬೇಕು. ಅವರ ಜಗತ್ತು ದೊಡ್ಡವರ ಜಗತ್ತಿನಂತೆ ತುಂಬಾ ವೇಗವಾದದ್ದಲ್ಲ. ಮಕ್ಕಳು ಯಾವಾಗಲೂ ತುಂಬಾ ಸಮಾಧಾನದ ಬಹಳ ಕಡಿಮೆ ವೇಗದ ಪರಿಸರವನ್ನು ಬಯಸುತ್ತಾರೆ. ಅಂತಹ ವಾತಾವರಣವನ್ನು ರಜೆಯಲ್ಲಾದರೂ ಮಕ್ಕಳಿಗೆ ಕಲ್ಪಿಸಿಕೊಡುವುದು ಅಗತ್ಯ. ಯಾರೋ ಕೇಳಿದರು, ‘ನಿಮ್ಮ ಮಗುವನ್ನು ಹೇಗೆ ನೋಡಿಕೊಳ್ಳುತ್ತೀರಿ?’ ಎಂದು. ‘ರಜಾ ಅಲ್ವಾ, ಅವನ ಮಾವ ಫೋಟೊಗ್ರಫಿ ಮಾಡ್ತಾರೆ, ಅವರೊಂದಿಗೆ ಒಂದು ನಾಲ್ಕು ದಿನ ಕಳಿಸಿಕೊಡ್ತೇನೆ, ಹೋಗಿಬರ್ತಾನೆ’, ಎಂದೆ. ‘ಇಷ್ಟು ಸಣ್ಣ ವಯಸ್ಸಿಗಾ?’ ಎಂದರು. ನಕ್ಕೆ. ತುಂಬ ಜನ ರಜೆ ಬಂತೆಂದರೆ ಟ್ಯೂಷನ್ ಕ್ಲಾಸಿಗೋ, ಮುಂದಿನ ಕ್ಲಾಸಿನ ಪ್ರಿಪರೇಷನ್‌ಗೋ ಕಳಿಸುವವರಿದ್ದಾರೆ. ಆದರೆ ಅದು ಸರಿಯಲ್ಲ. ಅವರ ಮನಸ್ಸು ಪಾಠದ ಏಕತಾನತೆಯಿಂದ ಬಿಡುಗಡೆಗೊಳ್ಳುವುದೂ ಅಷ್ಟೇ ಮುಖ್ಯ. ರಜೆಯಲ್ಲಾದರೂ ಮಕ್ಕಳನ್ನು ಪ್ರಕೃತಿಗೆ ಹತ್ತಿರವಾಗಿ ಇರುವಂತಹ ಪರಿಸರದಲ್ಲಿ ಬಿಡುವುದು ಉತ್ತಮ. ಅದು ಸಾಧ್ಯವಾಗದೇ ಇರುವಂತಹ ನಗರವಾಗಿದ್ದರೆ ಎಲ್ಲಾದರೂ ದೂರ ಪ್ರವಾಸ ಹೊರಡಬಹುದು. ಮಕ್ಕಳು ಆಗ ತಮ್ಮ ಒತ್ತಡದಿಂದ ಹೊರಬರುತ್ತಾರೆ.

ಮೊನ್ನೆ ಒಬ್ಬರು ಹೇಳುತ್ತಿದ್ದರು: ‘ರಜೆ ಬಂತಲ್ಲ, ಮನೆಯ ಒಂದು ರೂಮಿನ ತುಂಬಾ ಜೇಡಿಮಣ್ಣನ್ನು ತುಂಬಿಸಿದ್ದೇನೆ,’ ಎಂದು. ಅಲ್ಲೇ ಹತ್ತಿರದಲ್ಲಿ ನಿಂತಿದ್ದ ಮತ್ತೊಬ್ಬರು ಯಾಕೆ ಎಂದು ಕೇಳಿದರು. ‘ನೋಡಿ ನನ್ನ ಮಕ್ಕಳು ಜೇಡಿಮಣ್ಣಲ್ಲಿ ಮೂರ್ತಿ ಮಾಡ್ತವೆ, ಅವರಿಷ್ಟದ ಗೊಂಬೆ ಮಾಡ್ತವೆ, ಆಟ ಆಡಿಕೊಂಡು ಹಾಯಾಗಿರ್ತವೆ, ಮತ್ತೊಂದು ರೂಮಿನಲ್ಲಿ ಮರಳನ್ನು ತುಂಬಿಸಿದ್ದೇನೆ, ಟೆರೇಸ್ ಗಾರ್ಡನ್ ಮಾಡಿದ್ದೇನೆ, ಮಕ್ಕಳು ಅಲ್ಲಿ ಆಟ ಆಡಿ, ಗಿಡಗಳಿಗೆ ನೀರು ಹಾಕಿ ಇಡೀ ದಿನ ಅಲ್ಲೇ ಕಳೀತವೆ,’ ಎಂದರು. ಜಾಣ ತಂದೆ! ಮನೆ ಬಾಡಿಗೆಗೆ ಕೊಟ್ಟು ದುಡ್ಡು ಮಾಡಲು ಯೋಚಿಸಿಲ್ಲ.

ಮತ್ತೊಬ್ಬರು ಹೇಳುತ್ತಿದ್ದರು: ‘ಇಬ್ಬರು ಮಕ್ಕಳೂ ಯಕ್ಷಗಾನ ಕ್ಲಾಸಿಗೆ ಹೋಗುತ್ತಾರೆ, ಅರ್ಧ ದಿನ ಅಲ್ಲೇ ಕಳೆಯತ್ತೆ, ಸಂಜೆ ಮಕ್ಕಳ ಜೊತೆ ಎಲ್ಲಾದರೂ ಒಂದು ರೌಂಡ್ ಹೋಗಿಬರ್ತೇವೆ'. ಎಂದು. ಮಕ್ಕಳ ರಜೆ ಹಿರಿಯರಿಗೆ ಸಜೆ ಆಗದಂತೆ ಮಕ್ಕಳನ್ನು ಆಟದಲ್ಲೋ ಹವ್ಯಾಸಗಳಲ್ಲೋ ತೊಡಗಿಸಬಹುದು. ಕಲೀಗ್ ಒಬ್ಬರು ಹೇಳುತ್ತಿದ್ದರು: ‘ನನ್ನ ಆರು ವರ್ಷದ ಮಗ ನನಗೆ ತರಕಾರಿ ಹೆಚ್ಚಿಕೊಡ್ತಾನೆ, ಕಿಟಕಿ, ಗಾಜುಗಳನ್ನೆಲ್ಲಾ ತನ್ನ ಪುಟ್ಟ ಕೈಯ್ಯಲ್ಲಿ ಒರೆಸ್ತಾನೆ' ಎಂದು. ಇಂತಹ ಕೆಲಸಗಳ ಬಗ್ಗೆಯೂ ತಾಯಂದಿರು ತಮ್ಮ ಮಕ್ಕಳಲ್ಲಿ ಅರಿವು ಮೂಡಿಸಬಹುದು. ಮಕ್ಕಳು ಯಾವ ಕೆಲಸ ಮಾಡಲು ಇಷ್ಟಪಡುತ್ತಾರೋ ಅದರಲ್ಲಿ ಅವರನ್ನು ತೊಡಗಿಸಬಹುದು. ಥಿಯೇಟರ್, ಡಾನ್ಸ್, ಪೇಂಟಿಂಗ್, ಮ್ಯೂಸಿಕ್, ಫುಟ್‍ಬಾಲ್, ಕ್ರಿಕೆಟ್, ಚೆಸ್.....ತೊಡಗಿಕೊಳ್ಳಲು ತರಹೇವಾರಿ ಮಾರ್ಗಗಳಿವೆ. ಯಾವುದನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು.

ಯಾರೋ ಒಬ್ಬರು ಕೇಳಿದರು: ‘ರಜೆ ಬಂತಲ್ಲ, ಮಕ್ಕಳಿಗೆ ಏನು ಪ್ರಿಪರೇಶನ್ ಮಾಡಿಕೊಂಡಿದ್ದೀರಿ?’ ‘ಅವನಿಗೆ ಟೂಲ್ಸ್ ಮತ್ತು ಮೆಷಿನರಿ ಅಂದ್ರೆ ಇಷ್ಟ, ಈ ಸಲ ತಿರುಗುವ ಫ್ಯಾನ್ ಮಾಡ್ತೀನಿ ಅಂದ, ಜೊತೆಗೆ ಟ್ಯೂಬ್‍ಲೈಟ್ ಕೂಡ. ಅದಕ್ಕೆ ಬೇಕಾಗುವ ಪುಟಾಣಿ ಬ್ಯಾಟರಿ, ಎಲೆಕ್ಟ್ರಾನಿಕ್ ಸಾಮಾನುಗಳು, ಪುಟ್ಟ ಪುಟ್ಟ ಸ್ಕ್ರೂ ಡ್ರೈವರ್ಸ್, ಸ್ಕ್ರೂ, ಬಲ್ಪ್, ಟ್ಯೂಬ್‍ಲೈಟ್, ಸ್ವಿಚ್ಚು, ಆಟದ ಮನೆ ಕಟ್ಟಲು ಬೇಕಾಗುವ ರಟ್ಟುಗಳು – ಎಲ್ಲವನ್ನೂ ತಂದಿದ್ದೇನೆ. ಒಂದಿಷ್ಟು ಬಣ್ಣದ ಪೇಪರ್ಸ್‍ನ್ನೂ ತಂದಿದ್ದೇನೆ. ಅವನು ಅದನ್ನು ಗೋಡೆ ಮೇಲೆ ಅಂಟಿಸಿ ಪೇಂಟಿಂಗ್ ಮಾಡ್ತಾನೆ, ಚಿತ್ರ ಬಿಡಿಸ್ತಾನೆ, ಒಂದಿಷ್ಟು ಮಕ್ಕಳೇ ಓದುವ ಪುಸ್ತಕ ತಂದುಕೊಟ್ಟಿದ್ದೇನೆ, ಓದ್ತಾನೆ; ಊರಿಗೂ ಕಳ್ಸ್ಲಿಕ್ಕಿದೆ, ಅಲ್ಲಿ ಮನೆ ಹತ್ತಿರ ಹೊಳೆ ಇದೆ, ಈಜಾಡ್ಕೊಂಡು ಖುಷಿಯಾಗಿರ್ತಾನೆ’ ಎಂದು ಉತ್ತರಿಸಿದೆ.

ಹಳ್ಳಿಯಲ್ಲಾದರೆ ಮಕ್ಕಳನ್ನು ತೊಡಗಿಸುವುದು ಹೇಗೆ ಎಂಬ ಸಮಸ್ಯೆ ಉದ್ಭವವಾಗುವುದೇ ಇಲ್ಲ. ಏಕೆಂದರೆ ಅವರೇ ತಂಡ ಕಟ್ಟಿಕೊಂಡು ಗುಡ್ಡ, ಬೆಟ್ಟ, ಬೇಣ ಎಂದು ಅಲಿಯುತ್ತಾರೆ. ಹಿರಿಯರಿಗೆ ತಲೆಬಿಸಿ ಕಡಿಮೆ. ಹಕ್ಕೀಪುಕ್ಕ ಎಣಿಸಿಕೊಂಡು, ಮುಳ್ಳೆಹಣ್ಣು ಕಿತ್ತು ತಿಂದುಕೊಂಡು, ಎರೋಪ್ಲೇನ್ ಚಿಟ್ಟೆಗೆ ದಾರ ಕಟ್ಟೋ ಆಟ ಆಡಿಕೊಂಡು, ಗಾಳಿಪಟ ಹಾರಿಸಿಕೊಂಡು ಹಾಯಾಗಿರುತ್ತಾರೆ. ಹತ್ತಿರದಲ್ಲೇ ಸಣ್ಣ ಹಳ್ಳ, ಝರಿ, ತೊರೆ ಇದ್ದರೆ ಈಜಾಡ್ಕೊಂಡು ಖುಷಿ ಪಡ್ತಾರೆ. ನಗರದಲ್ಲಿ ಅವರ ರಕ್ಷಣೆಯ ಬಗ್ಗೆ ಆತಂಕ ಹಾಗೂ ಮನೆಯಲ್ಲಿ ಕೆಲಸಕ್ಕೆ ಹೋಗುವ ತಂದೆತಾಯಿಗಳು ಮಕ್ಕಳನ್ನು ಎಲ್ಲಿ ಬಿಡಬೇಕೆಂಬ ಸಮಸ್ಯೆಯಲ್ಲಿ ಒದ್ದಾಡುತ್ತಾರೆ. ಆದರೆ ಮಕ್ಕಳ ರಜೆಗೆಂದೇ ಅವರ ಹವ್ಯಾಸ ನೋಡಿಕೊಂಡು ಒಂದಿಷ್ಟು ಸಿದ್ಧತೆ ಮಾಡಿಕೊಳ್ಳುವುದು ಉತ್ತಮ. ಅನಗತ್ಯ ರಜೆ ತಪ್ಪಿಸಿ ಈ ದಿನಗಳಿಗಾಗಿಯೇ ತಂದೆತಾಯಿಗಳು ರಜೆಯನ್ನು ಕೂಡಿಟ್ಟು ಅವರ ಜೊತೆ ಸಮಯ ಕಳೆದರೆ ಮಕ್ಕಳಿಗೂ ಖುಷಿ. ಜೊತೆಗೆ ದೊಡ್ಡವರಿಗೊಂದು ಸಮಾಧಾನ. ಅವರಿಷ್ಟದ ಕೆಲಸಗಳಲ್ಲಿ ತೊಡಗಿಕೊಳ್ಳಲು ಮಕ್ಕಳನ್ನು ಬಿಟ್ಟರೆ ಸಂತೋಷಪಡುತ್ತಾರೆ. ಊಳಿದ ಮಕ್ಕಳ ಜೊತೆ ಆಟಕ್ಕೆ ಬಿಡುವುದೂ, ತಾವೂ ಮಕ್ಕಳ ಜೊತೆ ಆಟವಾಡುವುದು ದೊಡ್ಡವರು ಅನುಸರಿಸಬಲ್ಲ ವಿಧಾನ.

ಸರಿಯಾದ ಯೋಜನೆ ಹಾಕಿಕೊಂಡರೆ ಮಕ್ಕಳ ರಜೆ ತಾಯಂದಿರಿಗೆ ಸಜೆಯಾಗದೇ ಮಜವಾಗಿರುವುದರಲ್ಲಿ ಸಂದೇಹವಿಲ್ಲ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !