ವಿಭೂತಿಹಳ್ಳಿ ಪುನರ್ ವಸತಿ ಕೇಂದ್ರ: ಸತ್ತವರ ಹೆಸರಲ್ಲಿ ಮನೆ ಹಕ್ಕು ಪತ್ರಗಳು..!

7
ಸಿಂದಗಿ ತಾಲ್ಲೂಕಿನ ವಿಭೂತಿಹಳ್ಳಿ ಪುನರ್ ವಸತಿ ಕೇಂದ್ರದಲ್ಲಿ ಅಕ್ರಮದ ಕರ್ಮಕಾಂಡ

ವಿಭೂತಿಹಳ್ಳಿ ಪುನರ್ ವಸತಿ ಕೇಂದ್ರ: ಸತ್ತವರ ಹೆಸರಲ್ಲಿ ಮನೆ ಹಕ್ಕು ಪತ್ರಗಳು..!

Published:
Updated:
Deccan Herald

ಸಿಂದಗಿ: ಮೂವರು ಸತ್ತವರು. ಒಂದೇ ಹೆಸರಿಗೆ ಎರಡೆರೆಡು ಹಕ್ಕುಪತ್ರ. ಇದರ ಜತೆಗೆ ಒಂದೇ ಕುಟುಂಬಕ್ಕೆ ನಾಲ್ಕು ಮನೆಯ ಹಕ್ಕುಪತ್ರಗಳನ್ನು ವಿತರಿಸಿರುವ ಅಕ್ರಮ; ತಾಲ್ಲೂಕಿನ ರಾಮನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ವಿಭೂತಿಹಳ್ಳಿ ಪುನರ್ ವಸತಿ ಕೇಂದ್ರದಲ್ಲಿ ನಡೆದಿದೆ.

ಈ ಅಕ್ರಮದ ವಿರುದ್ಧ ಹಕ್ಕುಪತ್ರ ವಂಚಿತ ಅರ್ಹ ಫಲಾನುಭವಿಗಳು, ನಿರಂತರವಾಗಿ ಹೋರಾಟ ನಡೆಸುತ್ತಿದ್ದರೂ; ಗೋಳು ಕೇಳುವವರಿಲ್ಲದಾಗಿದೆ ಎನ್ನುತ್ತಾರೆ ಹೋರಾಟ ಸಮಿತಿಯ ಪ್ರಮುಖರಾದ ಸಲೀಂ ಅಲ್ದಿ, ಶಬ್ಬೀರ ಪಟೇಲ ಬಿರಾದಾರ, ಹರೀಶ ಬಿಸನಾಳ, ರಜತ ತಾಂಬೆ.

‘2009ರಲ್ಲಿ ಸುರಿದ ಕುಂಭದ್ರೋಣ ಮಳೆಗೆ ವಿಭೂತಿಹಳ್ಳಿ ಜಲಾವೃತಗೊಂಡಿತ್ತು. ಆಗ 150 ಆಸ್ತಿಗಳು ಮಾತ್ರ ಇದ್ದವು. ಆದರೆ ಇದೀಗ ಅವು 320ಕ್ಕೆ ಏರಿಕೆಯಾಗಿದ್ದು, ಇದು ಕಾನೂನು ಬಾಹಿರ.

ರಾಮನಹಳ್ಳಿ ಗ್ರಾಮ ಪಂಚಾಯ್ತಿಯಿಂದ 100 ಮನೆಗಳ ಹಕ್ಕು ಪತ್ರ ವಿತರಣೆಯಾಗಿದ್ದು; ಇನ್ನೂ 99 ಹಕ್ಕುಪತ್ರಗಳನ್ನು ನೀಡಬೇಕಿದೆ. ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿಲ್ಲ. ಅನರ್ಹ ಫಲಾನುಭವಿಗಳಿಗೆ ನೀಡಲಾಗಿದೆ’ ಎಂಬ ಆರೋಪ ಹೋರಾಟ ಸಮಿತಿಯ ಪ್ರಮುಖರದ್ದಾಗಿದೆ.

‘ಲಾಲಸಾಬ್‌ ಹಸನಸಾಬ್‌ ಅವಟಿ, ಸಂಗವ್ವ ಶಾಸಪ್ಪ ಶಿರಶ್ಯಾಡ, ಮಳಸಿದ್ದಪ್ಪ ಶರಣಪ್ಪ ಅಷ್ಟಗಿ ಎಂಬುವವರು ಹಕ್ಕುಪತ್ರಗಳನ್ನು ವಿತರಿಸುವ ಪೂರ್ವವೇ, ಅದೆಷ್ಟೋ ವರ್ಷಗಳ ಹಿಂದೆ ಮೃತರಾಗಿದ್ದಾರೆ. ಆದರೆ ಇವರ ಹೆಸರಿನಲ್ಲಿ ಹಕ್ಕುಪತ್ರಗಳಿವೆ.

ಮಲಕಪ್ಪ ವಿಠ್ಠಪ್ಪ ಚಾಂದಕವಠೆ, ಸೈಫನಸಾಬ್‌ ನಬಿಸಾಬ್‌ ಮುಲ್ಲಾ ಅವರ ಹೆಸರಿನಲ್ಲಿಯೇ ಒಬ್ಬರಿಗೆ ಎರಡು ಹಕ್ಕುಪತ್ರಗಳಿವೆ. ಒಂದೇ ಕುಟುಂಬದ ರಮೇಶ ಬಸವರಾಜ ಅರಳಗುಂಡಗಿ, ಸುರೇಶ ಬಸವರಾಜ ಅರಳಗುಂಡಗಿ, ಬೌರಮ್ಮ ಉದಂಡಪ್ಪ ಅರಳಗುಂಡಗಿ, ಆನಂದ ಉದಂಡಪ್ಪ ಅರಳಗುಂಡಗಿ, ಬಸಲಿಂಗಪ್ಪ ಉದಂಡಪ್ಪ ಅರಳಗುಂಡಗಿ, ಮಳಸಿದ್ದಪ್ಪ ದುಂಡಪ್ಪ ಅರಳಗುಂಡಗಿ, ಮಳಸಿದ್ದಪ್ಪ ಶರಣಪ್ಪ ಅಷ್ಟಗಿ, ಶಿವಾನಂದ ಮಳಸಿದ್ದಪ್ಪ ಅಷ್ಟಗಿ... ಹೀಗೆ ಒಂದೇ ಕುಟುಂಬದವರಿಗೆ ಬೇರೆ, ಬೇರೆ ಮಾಡಿ ಹಕ್ಕುಪತ್ರಗಳನ್ನು ಅಕ್ರಮವಾಗಿ ವಿತರಣೆ ಮಾಡಲಾಗಿದೆ’ ಎಂದು ಹೋರಾಟ ಸಮಿತಿಯ ರಜತ ತಾಂಬೆ ಗಂಭೀರ ಆರೋಪ ಮಾಡಿದರು.

‘ಈ ಅಕ್ರಮದ ಕುರಿತು ತಹಶೀಲ್ದಾರ್‌, ತಾಲ್ಲೂಕು ಪಂಚಾಯ್ತಿ ಇಓ, ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ... ಹೀಗೆ ಸಂಬಂಧಪಟ್ಟ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸಾಕಷ್ಟು ಸಲ ಮನವಿ ಸಲ್ಲಿಸಿ, ಮನವರಿಕೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಹಿಂದಿನ ಶಾಸಕ, ಹಾಲಿ ಶಾಸಕ, ಸಚಿವರೂ ಆದ ಎಂ.ಸಿ.ಮನಗೂಳಿ ಅವರಿಗೆ ಮನವಿ ಸಲ್ಲಿಸಿದೆ. ಆದರೂ ಪ್ರಯೋಜನವಾಗಿಲ್ಲ’ ಎಂದು ಹರೀಶ ಬಿಸನಾಳ ತಿಳಿಸಿದರು.

‘ಈ ಘಟನೆ ಕುರಿತಂತೆ ಕೂಲಂಕಷ ತನಿಖೆಯನ್ನು ಜಿಲ್ಲಾ ಮಟ್ಟದ ಅಧಿಕಾರಿಯಿಂದ ನಡೆಸಬೇಕು. ಲೋಪ ಎಸಗಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಬಾಕಿ ಉಳಿದಿರುವ ಹಕ್ಕು ಪತ್ರಗಳನ್ನು ಕೂಡಲೇ ವಿತರಿಸಬೇಕು.

ಒಂದು ವೇಳೆ ಹಕ್ಕುಪತ್ರ ವಿತರಣೆಯಲ್ಲಿ ದೊಡ್ಡ ಪ್ರಮಾಣದ ಲೋಪ ಕಂಡು ಬಂದಲ್ಲಿ ವಿತರಣೆಯಾದ ಎಲ್ಲ ಹಕ್ಕುಪತ್ರಗಳನ್ನು ರದ್ದುಪಡಿಸಿ, ಇನ್ನೊಮ್ಮೆ ವಿತರಣೆ ಮಾಡಬೇಕು. ಹಕ್ಕುಪತ್ರ ಹೊಂದದವರೂ ಮನೆಯಲ್ಲಿ ಅಕ್ರಮ ವಾಸ ಮಾಡಿರುವದನ್ನು ತೆರವುಗೊಳಿಸಬೇಕು’ ಎಂಬುದು ಹೋರಾಟ ಸಮಿತಿಯ ಪದಾಧಿಕಾರಿಗಳ ಆಗ್ರಹ.
**
ಹಕ್ಕುಪತ್ರ ವಿತರಣೆಗೆ ಸಂಬಂಧಿಸಿದಂತೆ ದೂರು ಕೇಳಿ ಬಂದಿದೆ. ವಿಚಾರಣೆ ನಡೆಸುವೆ. ತಪ್ಪು ನಡೆದಿರುವುದು ಗಮನಕ್ಕೆ ಬಂದರೇ ಸೂಕ್ತ ಕಾನೂನು ಕ್ರಮ ಜರುಗಿಸುವೆ
ಬಸವರಾಜ ಕಡಕಬಾವಿ, ತಹಶೀಲ್ದಾರ್
**

ಹಕ್ಕುಪತ್ರ ವಿತರಣೆಯಲ್ಲಿ ಅಕ್ರಮ ನಡೆದಿದೆ ಎಂದು 2013ರಿಂದ ಪ್ರತಿಭಟನೆ ಮಾಡುತ್ತಿದ್ದರೂ; ಸಂಬಂಧಿಸಿದ ಅಧಿಕಾರಿಗಳು ಕಿಂಚಿತ್‌ ಸ್ಪಂದಿಸುತ್ತಿಲ್ಲ
ಸಲೀಂ ಅಲ್ದಿ, ಎಸ್.ಡಿ.ಪಿ.ಐ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !