ಗುರುವಾರ , ಡಿಸೆಂಬರ್ 12, 2019
26 °C

ಚರ್ಮರಕ್ಷಣೆಗೆ ಮನೆಯೇ ಔಷಧಾಲಯ

ಪರಿಮಳ ಶ್ರೀಕಂಠೇಶ್ವರ Updated:

ಅಕ್ಷರ ಗಾತ್ರ : | |

Deccan Herald

ಚಳಿಗಾಲ ಶುರುವಾದಂತೆ ತ್ವಚೆಯಲ್ಲಿನ ಶುಷ್ಕತೆ, ತುಟಿಗಳ ಒಡೆಯುವಿಕೆ, ಹಿಮ್ಮಡಿ ಹಾಗೂ ಕೈಗಳ ಒರಟಾಗುವ ಸಮಸ್ಯೆಗಳು ಶುರುವಾಗುತ್ತದೆ. ಶರದೃತುವಿನಲ್ಲಿ ಹೆಚ್ಚಾಗಿ ಒಣಹವೆ ಇರುವ ಕಾರಣ ನಮ್ಮ ಚರ್ಮವೂ ನೀರಿನ ಅಂಶ ಕಳೆದುಕೊಂಡು ಒರಟಾಗುವ ಸಾಧ್ಯತೆಗಳಿರುತ್ತದೆ. ಅದರಲ್ಲೂ ದೇಹದ ತೆರೆದ ಭಾಗಗಳಲ್ಲಿ ಇಂತಹ ಸಮಸ್ಯೆ ಜಾಸ್ತಿ. ಉದಾಹರಣೆಗೆ ಮುಖ, ತುಟಿಗಳು ಒಣಗಿ ಕಳಾಹೀನವಾಗುತ್ತದೆ. ಕೈ ಹಾಗೂ ಕಾಲು ಒಡೆಯುತ್ತವೆ. ಕೆಲವರಿಗೆ ನವೆ-ತುರಿಕೆ ಸಮಸ್ಯೆಗಳೂ ಉಲ್ಬಣಿಸುವ ಸಾಧ್ಯತೆ ಇರುತ್ತದೆ.

ಚಳಿಗಾಲದಲ್ಲಿ ಶರೀರಕ್ಕೆ ಸ್ನಿಗ್ಧ - ಜಿಡ್ಡಿನ ಪದಾರ್ಥಗಳ ಸೇವನೆಯು ಉತ್ತಮ ಫಲಕಾರಿಯಾಗಿರುತ್ತದೆ. ಇದರೊಂದಿಗೆ ತೈಲಮರ್ದನವೂ ತ್ವಚೆಯ ಮೃದುತ್ವಕ್ಕೆ ಸಹಕರಿಸುತ್ತದೆ. ಮೃದು ಚರ್ಮಕ್ಕೆ ಕೆಲವು ಸುಲಭ ಸೂತ್ರಗಳು:

1. ಚರ್ಮವು ಒಡೆದು ಒರಟಾಗಿದ್ದರೆ, ಸಾಸಿವೆಎಣ್ಣೆಯಲ್ಲಿ ಮಸಾಜ್ ಮಾಡುವುದು ಸೂಕ್ತ.

2. ನಿಂಬೆರಸ ಹಾಗೂ ಗ್ಲಿಸರಿನ್ ಅನ್ನು ಸಮಪ್ರಮಾಣದಲ್ಲಿ (50:50) ಬೆರೆಸಿ ಕೋಲ್ಡ್‌ಕ್ರೀಮ್‌ಗೆ ಬದಲಿಯಾಗಿ ಉಪಯೋಗಿಸಬಹುದು.

3. ಗಡ್ಡೆಕೋಸಿನ ಎಲೆಗಳನ್ನು ತೊಳೆದು, ಮಿಕ್ಸಿಗೆ ಹಾಕಿ ಅರೆದು, ರಸ ಹಿಂಡಿ ಅದಕ್ಕೆ ಸ್ವಲ್ಪ ಈಸ್ಟ್ ಹಾಗೂ ಜೇನುತುಪ್ಪಗಳನ್ನು ಬೆರಸಿ ದಪ್ಪ ಪದರವಾಗಿ ಮುಖ ಹಾಗೂ ಕತ್ತಿನ ಭಾಗದ ಮೇಲೆ ಪ್ಯಾಕ್ ಮಾಡಬೇಕು. 15 ನಿಮಿಷಗಳ ನಂತರ ನೀರಿನಲ್ಲಿ ನೆನೆಸಿದ ಹತ್ತಿಯಿಂದ ಮುಖದ ಮೇಲಿನ ಪದರವನ್ನು ತೆಗೆಯಬೇಕು.

4. ಚಳಿಯಿಂದ ಚರ್ಮವು ಕಳಾಹೀನವಾಗಿದ್ದರೆ ಸಮಪ್ರಮಾಣದಲ್ಲಿ ಎಳ್ಳಿನೆಣ್ಣೆ, ಸಾಸಿವೆಎಣ್ಣೆ ಹಾಗೂ ಆಲಿವ್ಎಣ್ಣೆಗಳನ್ನು ಬೆರೆಸಿ ಮರ್ದನ ಮಾಡಬೇಕು. ಅರ್ಧ ಗಂಟೆಯ ನಂತರ ಸ್ನಾನ ಮಾಡಬೇಕು. ಇದನ್ನು ಆಗಾಗ ಮಾಡುವುದರಿಂದ ಚರ್ಮದ ಮೃದುತ್ವ ಹಾಗೂ ಕಾಂತಿ ಹೆಚ್ಚುತ್ತದೆ.

5. ಚಳಿಯಲ್ಲಿ ಸೋಪ್‌ಗಿಂತ ಕಡಲೆಹಿಟ್ಟನ್ನು ಬಳಸಿ ಸ್ನಾನ ಮಾಡುವುದರಿಂದ ಶುಷ್ಕತೆ ಬರದು.

6. ಶುಷ್ಕ ತ್ವಚೆಯಲ್ಲಿನ ತೆರೆದ ರಂಧ್ರಗಳನ್ನು ಮುಚ್ಚುವುದರಿಂದ ಕೊಳೆ ಹಾಗೂ ಮಲಿನತೆ ಒಳಹೋಗದಂತೆ ತಡೆಯಬಹುದು. ಮೊಟ್ಟೆಯ ಬಿಳಿಯ ಭಾಗವನ್ನು ಚೆನ್ನಾಗಿ ಬೀಟ್ ಮಾಡಿ ಅದಕ್ಕೆ ಅಲಮ್ ಇಲ್ಲವೇ ಕರ್ಪೂರವನ್ನು ತುಣುಕಿನಷ್ಟು ಬೆರಸಿ. ಮುಖದ ಮೇಲೆ ಈ ಪ್ಯಾಕ್‌ ಅನ್ನು ಹಚ್ಚಿ ಹದಿನೈದು ನಿಮಿಷಗಳವರೆಗೂ ಬಿಡಿ. ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯುವುದು ಲಾಭದಾಯಕ.

ಮನೆಯಲ್ಲಿ ಸಿಗುವ ದಿನಬಳಕೆಯ ವಸ್ತುಗಳನ್ನು ಉಪಯೋಗಿಸಿ ಮೇಲಿನ ಆರೈಕೆಗಳನ್ನು ಮಾಡಿಕೊಳ್ಳಬಹುದಾಗಿದೆ.

ಪ್ರತಿಕ್ರಿಯಿಸಿ (+)