ವಸತಿ/ನಿವೇಶನ ರಹಿತರ ಮಾಹಿತಿ ಜಿಪಿಎಸ್‌ನಲ್ಲಿ ದಾಖಲು

7
ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸಮೀಕ್ಷೆ, 87 ಸಾವಿರ ಕುಟುಂಬಗಳನ್ನು ಗುರುತಿಸಿದ ಜಿಲ್ಲಾ ಪಂಚಾಯಿತಿ

ವಸತಿ/ನಿವೇಶನ ರಹಿತರ ಮಾಹಿತಿ ಜಿಪಿಎಸ್‌ನಲ್ಲಿ ದಾಖಲು

Published:
Updated:
Deccan Herald

ಚಾಮರಾಜನಗರ: ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ 87,062 ವಸತಿ ಮತ್ತು ನಿವೇಶನರಹಿತ ಕುಟುಂಬಗಳು ಇರುವುದನ್ನು ಜಿಲ್ಲಾ ಪಂಚಾಯಿತಿ ಗುರುತಿಸಿದೆ.

ವಸತಿ ರಹಿತರ ವಿವರಗಳನ್ನು ಜಿಪಿಎಸ್ ವ್ಯವಸ್ಥೆಯಲ್ಲಿ ದಾಖಲಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದುವರೆಗೆ 22,105 ವಸತಿ ರಹಿತರ ಮಾಹಿತಿಯನ್ನು ಜಿಪಿಎಸ್‌ ಮೂಲಕ ದಾಖಲು ಮಾಡಿಕೊಳ್ಳಲಾಗಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ರಹಿತರ ಸಮೀಕ್ಷೆಯನ್ನು 2010–11ರಲ್ಲಿ ನಡೆಸಲಾಗಿತ್ತು. ಆಗ ಜಿಲ್ಲೆಯಲ್ಲಿ 30,972 ವಸತಿ ಮತ್ತು ನಿವೇಶನ ರಹಿತ ಕುಟುಂಬಗಳನ್ನು ಗುರುತಿಸಲಾಗಿತ್ತು. ಪ್ರಧಾನಮಂತ್ರಿ ಆವಾಸ್‌ (ಗ್ರಾಮೀಣ) ಯೋಜನೆ ಅಡಿಯಲ್ಲಿ ಇವರಿಗೆ ಹಂತ ಹಂತವಾಗಿ ಮನೆಗಳನ್ನು ನಿರ್ಮಿಸಿಕೊಡುತ್ತಾ ಬರಲಾಗುತ್ತಿದೆ.

ಆ ಸಮೀಕ್ಷೆಯಲ್ಲಿ ಬಿಟ್ಟು ಹೋದವರನ್ನು ಹಾಗೂ ಹೊಸ ವಸತಿ ಮತ್ತು ನಿವೇಶನ ರಹಿತ ಕುಟುಂಬಗಳನ್ನು ಪತ್ತೆ ಮಾಡಲು ಈ ವರ್ಷದ ಜೂನ್‌–ಜುಲೈ ತಿಂಗಳಲ್ಲಿ ಜಿಲ್ಲೆಯಾದ್ಯಂತ ಮತ್ತೆ ಸಮೀಕ್ಷೆ ನಡೆಸಲಾಗಿತ್ತು. ಪಟ್ಟಿ ಮಾಡಲಾದ ಕುಟುಂಬಗಳ ದಾಖಲೆಗಳನ್ನು ಪರಿಶೀಲನೆ ನಡೆಸುವುದರ ಮೂಲಕ ಜಿಲ್ಲಾ ಪಂಚಾಯಿತಿ ಅನರ್ಹರನ್ನು ಪಟ್ಟಿಯಿಂದ ಕೈಬಿಟ್ಟಿದೆ.

ಸಮೀಕ್ಷೆಯ ಅವಧಿ ಪೂರ್ಣಗೊಂಡಿದ್ದರೂ ಅರ್ಹರು ಯೋಜನೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ, ಎಲ್ಲಿಯಾದರೂ ವಸತಿ/ನಿವೇಶನ ರಹಿತರು ಇರುವುದು ಗಮನಕ್ಕೆ ಬಂದರೆ ಅವರನ್ನೂ ಪಟ್ಟಿಗೆ ಸೇರಿಸಲಾಗುತ್ತಿದೆ. 

‘ವಸತಿ ಮತ್ತು ನಿವೇಶನ ರಹಿತ ಕುಟುಂಬಗಳಿಗೆ ಸೀಮಿತ ಅವಧಿಯಲ್ಲಿ ಮನೆ ನಿರ್ಮಿಸಿಕೊಡಬೇಕು ಎಂಬುದು ಸರ್ಕಾರದ ಉದ್ದೇಶ. ಅದಕ್ಕಾಗಿ ಈ ಸಮೀಕ್ಷೆಯನ್ನು ನಡೆಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಡಾ.ಕೆ. ಹರೀಶ್‌ ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಪಿಎಸ್‌ನಲ್ಲಿ ದಾಖಲು: ವಸತಿ ರಹಿತ ಮತ್ತು ನಿವೇಶನ ರಹಿತ ಕುಟುಂಬಗಳ ವಿವರಗಳನ್ನು ಜಿಪಿಎಸ್‌ ಮೂಲಕ ಆನ್‌ಲೈನ್‌ನಲ್ಲಿ ದಾಖಲು ಮಾಡುವ ಪ್ರಕ್ರಿಯೆಯನ್ನೂ ಜಿಲ್ಲಾ ಪಂಚಾಯಿತಿ ಆರಂಭಿಸಿದೆ. 

‘ಗುರುತಿಸಲಾದ ಎಲ್ಲ ಕುಟುಂಬಗಳ ವಿವರಗಳನ್ನು ಈ ವ್ಯವಸ್ಥೆಯಡಿ ದಾಖಲಿಸಲಾಗುತ್ತದೆ. ಸದ್ಯ 22,105 ಕುಟುಂಬಗಳ ವಿವರಗಳು ದಾಖಲಾಗಿವೆ’ ಎಂದು ಜಿಲ್ಲಾ ಪಂಚಾಯಿತಿ ವಸತಿ ಯೋಜನೆ ನೋಡೆಲ್‌ ಅಧಿಕಾರಿ ಸತೀಶ್‌ ತಿಳಿಸಿದರು.

ಇದಕ್ಕಾಗಿ ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮವು ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನಿಯೋಜಿಸಿದೆ. 

ಈ ಸಿಬ್ಬಂದಿ, ಗುರುತಿಸಲಾದ ಕುಟುಂಬಗಳನ್ನು ಭೇಟಿ ಮಾಡಿ, ಹಾಲಿ ವಾಸಿಸುತ್ತಿರುವ ಮನೆ, ನಿವೇಶನ ಇದ್ದರೆ ನಿವೇಶನದ ಚಿತ್ರ (ವಸತಿ ರಹಿತರಾಗಿದ್ದಾರೆ) ಹಾಗೂ ಕುಟುಂಬದ ಮುಖ್ಯಸ್ಥರ ಭಾವಚಿತ್ರವನ್ನು ತೆಗೆದು ಸರ್ಕಾರವೇ ಅಭಿವೃದ್ಧಿ ಪಡಿಸಿರುವ ‘ಇಂದಿರಾ’ ಆ್ಯಪ್‌ಗೆ ಅಪ್‌ಲೋಡ್‌ ಮಾಡಬೇಕು.

ಆನ್‌ಲೈನ್‌ನಲ್ಲಿ ಲಭ್ಯ: ವಸತಿ/ನಿವೇಶನ ರಹಿತ ಕುಟುಂಬಗಳ ವಿವರಗಳನ್ನು ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮದ ವೆಬ್‌ಸೈಟ್‌ಗೆ ಕಡ್ಡಾ‌ಯವಾಗಿ ಅಪ್‌ಲೋಡ್‌ ಮಾಡಬೇಕು. ಯೋಜನೆಗಳ ಫಲಾನುಭವಿಗಳ ವಿವರ ಹಾಗೂ ಮನೆ ನಿರ್ಮಾಣದ ಪ್ರಗತಿಯನ್ನು ತೋರಿಸುವ ಚಿತ್ರಗಳು ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಸಮೀಕ್ಷೆಯಲ್ಲಿ ಗುರುತಿಸಿದವರಿಗೆ ಮಾತ್ರ ಮನೆ

ಈ ಸಮೀಕ್ಷೆಯಲ್ಲಿ ಗುರುತಿಸಲಾದ ಕುಟುಂಬಗಳಿಗೆ ಮಾತ್ರ ಆವಾಸ್‌ ಯೋಜನೆಯ ಅಡಿಯಲ್ಲಿ ಮನೆಗಳು ಸಿಗಲಿವೆ.

ಪ್ರಧಾನ ಮಂತ್ರಿ (ಗ್ರಾಮೀಣ) ಆವಾಸ್‌ ಯೋಜನೆಯ ಅಡಿಯಲ್ಲಿ ಎಷ್ಟು ಮನೆಗಳನ್ನು ನಿರ್ಮಿಸಬೇಕು ಎಂಬ ಗುರಿಯನ್ನು ಸಮೀಕ್ಷೆಯ ಆಧಾರದಲ್ಲೇ ಗ್ರಾಮ ಪಂಚಾಯಿತಿಗಳಿಗೆ ನಿಗದಿಪಡಿಸಲಾಗುತ್ತದೆ. 

‘ಯೋಜನೆ ಅನುಷ್ಠಾನ ಸಂದರ್ಭದಲ್ಲಿ ವಸತಿ/ನಿವೇಶನ ರಹಿತರ ಪಟ್ಟಿಯನ್ನು ಗ್ರಾಮಸಭೆಯ ಮುಂದಿಡಬೇಕಾಗುತ್ತದೆ. ಅಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಬಡವರಿಗೆ, ತುರ್ತಾಗಿ ಮನೆ ಅವಶ್ಯವುಳ್ಳವರಿಗೆ ಆದ್ಯತೆ ನೀಡಿ ಆಯ್ಕೆ ಮಾಡಲಾಗುತ್ತದೆ’ ಎಂದು ಸತೀಶ್‌ ತಿಳಿಸಿದರು.

ಅರ್ಜಿ ಹಾಕಬೇಕೆಂದಿಲ್ಲ: ಸಮೀಕ್ಷೆ ಆಧಾರದಲ್ಲೇ ಕುಟುಂಬ ರಹಿತರು ಹಾಗೂ ನಿವೇಶನ ರಹಿತರಿಗೆ ಮನೆ ನಿರ್ಮಿಸಿಕೊಡುವುದರಿಂದ ಅವರು ಮತ್ತೆ ಅರ್ಜಿ ಹಾಕಬೇಕು ಎಂದೇನಿಲ್ಲ. ಎಲ್ಲರ ವಿವರಗಳೂ ಜಿಲ್ಲಾ ಪಂಚಾಯಿತಿ ಬಳಿ ಇರುತ್ತದೆ. ಈ ಪಟ್ಟಿಯ ಆಧಾರದಲ್ಲೇ ಯೋಜನೆ ಅನುಷ್ಠಾನಗೊಳ್ಳುತ್ತದೆ.

ವಸತಿ/ನಿವೇಶನ ರಹಿತ ಕುಟುಂಬಗಳ ವಿವರ

87,061 – ಜಿಲ್ಲೆಯಲ್ಲಿರುವ ವಸತಿ/ನಿವೇಶನ ರಹಿತರ ಸಂಖ್ಯೆ

49,687 – ವಸತಿ ರಹಿತರ ಸಂಖ್ಯೆ

37,374 – ನಿವೇಶನ ರಹಿತರ ಸಂಖ್ಯೆ

17,575 – ಜಿಪಿಎಸ್‌ ವ್ಯವಸ್ಥೆಯಲ್ಲಿ ವಿವರಗಳನ್ನು ದಾಖಲು ಮಾಡಿಕೊಂಡಿರುವ ಕುಟುಂಬಗಳು
**

ಯಾವ ತಾಲ್ಲೂಕಿನಲ್ಲಿ ಎಷ್ಟು?

ತಾಲ್ಲೂಕು                     ವಸತಿ ರಹಿತರು                 ನಿವೇಶನ ರಹಿತರು               ಒಟ್ಟು
ಗುಂಡ್ಲುಪೇಟೆ                    11,585                            7,454                       19,039
ಚಾಮರಾಜನಗರ              15,668                            12,227                      27,895
ಯಳಂದೂರು                    4,875;                             6,247                      11,112
ಕೊಳ್ಳೇಗಾಲ                    17,559                            11,446                       29,005

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !