‘ಮನೆಯವರೇ ನನ್ನನ್ನು ನಂಬುತ್ತಿಲ್ಲ’

7

‘ಮನೆಯವರೇ ನನ್ನನ್ನು ನಂಬುತ್ತಿಲ್ಲ’

Published:
Updated:

ನನ್ನದು ಅವಿಭಕ್ತ ಕುಟುಂಬ. ನಾನು ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿ. ನನಗೆ ಸರ್ಕಾರಿ ನೌಕರಿ ಮಾಡಬೇಕೆಂಬ ಆಸೆ. ಆದರೆ ನಮ್ಮ ಮನೆಯಲ್ಲಿ ನನ್ನನ್ನು ಕಂಡರೆ ಯಾರಿಗೂ ಆಗುವುದಿಲ್ಲ, ಯಾರೂ ನನ್ನ ಜೊತೆ ಬೆರೆಯುವುದಿಲ್ಲ. ನನ್ನ ಅವಶ್ಯಕತೆ ಅವರಿಗೆ ಮುಗಿದಿದೆ ಅನ್ನಿಸುತ್ತದೆ. ನಾನು ಹೇಗಾದರೂ ನನ್ನ ಕಾಲ ಮೇಲೆ ನಾನು ನಿಲ್ಲುತ್ತೇನೆ ಅಂದರೂ ಕೇಳುತ್ತಿಲ್ಲ. ನನ್ನ ಮೇಲೆ ತುಂಬಾನೇ ಅನುಮಾನ ಪಡುತ್ತಾರೆ. ಹೊರಗೆ ಹೋಗಿ ಬಂದಾಗ ಅನುಮಾನದಿಂದ ನೋಡುತ್ತಾರೆ. ನಾನು ಇಲ್ಲಿಯವರೆಗೂ ಯಾವುದೇ ವ್ಯಸನಕ್ಕೂ ಬಲಿಯಾಗಿಲ್ಲ. ಒಮ್ಮೊಮ್ಮೆ ಈ ಮನೆ ಬಿಟ್ಟು ಎಲ್ಲಾದರೂ ಹೋಗಬೇಕು ಎನ್ನಿಸುತ್ತದೆ. ಆದರೆ ತಾಯಿ ಹಾಗೂ ತಂಗಿಯನ್ನು ಬಿಟ್ಟು ಹೋಗಲು ಮನಸ್ಸು ಬರುವುದಿಲ್ಲ. ನನಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ.

–ಹೆಸರು, ಊರು ಬೇಡ

ಈಗ ನಿಮಗೆ ನಿಮ್ಮ ಮನೆಯಲ್ಲಿ ಯಾರೂ ನಿಮಗೆ ಸಪೋರ್ಟ್‌ ಮಾಡುತ್ತಿಲ್ಲ, ಪ್ರೇರಣೆ ನೀಡುತ್ತಿಲ್ಲ ಮತ್ತು ನಿಮ್ಮನ್ನು ನಂಬುತ್ತಿಲ್ಲ ಎಂಬುದರ ಅರಿವಾಗಿದೆ. ಅದನ್ನು ಚಾಲೆಂಜ್ ಆಗಿ ಸ್ವೀಕರಿಸಿ. ನಿಮಗೆ ನೀವು ಏನು ಮಾಡಬೇಕು ಎಂಬುದರ ಸ್ಪಷ್ಟ ಅರಿವು ಇದೆ. ನಿಮ್ಮ ಗುರಿಯ ಮೇಲೆ ಗಮನ ಹರಿಸಿ. ಸ್ವ–ಪ್ರೇರಣೆಯಿಂದ ನೀವು ಇರಿಸಿಕೊಂಡ ಗುರಿಯನ್ನು ತಲುಪಿ. ನಿಮ್ಮ ಪ್ರಾಧ್ಯಾಪಕರು ಹಾಗೂ ಸ್ನೇಹಿತರ ಮಾರ್ಗದರ್ಶನ ಪಡೆದುಕೊಳ್ಳಿ. ನಿಮ್ಮ ಮನೆಯ ಸದಸ್ಯರಿಂದ ಯಾವುದೇ ನಿರೀಕ್ಷೆಯನ್ನು ಇರಿಸಿಕೊಳ್ಳಬೇಡಿ; ಸ್ವತಂತ್ರರಾಗಿರಿ. ನಿಮ್ಮ ಸಮಯವನ್ನು ಓದು ಹಾಗೂ ಸ್ವರ್ಧಾತ್ಮಕ ಪರೀಕ್ಷೆಗಳಿಗೆಂದೇ ಮೀಸಲಿಡಿ. ನೀವು ಆರೋಗ್ಯವಂತರಾಗಿರಲು ಒಳ್ಳೆಯ ಆಹಾರವನ್ನು ಸೇವಿಸಿ ಮತ್ತು ಒಂದಷ್ಟು ವ್ಯಾಯಾಮಗಳನ್ನು ಮಾಡಿ. ಧ್ಯಾನ ಮಾಡುವುದರಿಂದ ನಿಮ್ಮ ಮನಸ್ಸು ಶಾಂತವಾಗುವುದರ ಜೊತೆಗೆ ಬೇಡದ ಯೋಚನೆಗಳು ತಲೆಯಲ್ಲಿ ಸುಳಿಯದಂತೆ ಮಾಡುತ್ತದೆ. ಒಮ್ಮೆ ಗುರಿ ಸಾಧಿಸಿ, ನೀವು ಏನು ಎಂಬುದನ್ನು ನಿರೂಪಿಸಿದರೆ ಸುತ್ತಲಿನವರಿಗೆ ನಿಮ್ಮ ಸಾಮರ್ಥ್ಯದ ಅರಿವಾಗುತ್ತದೆ. ಹೀಗಾಗಿ ಈಗಿನಿಂದ ಅವರ ಬಗ್ಗೆ ತಲೆ ಕೆಡಿಸಿಕೊಳ್ಳದೇ ನಿಮ್ಮ ಓದಿನ ಮೇಲೆ ಗಮನ ಹರಿಸಿ.

**

ನನಗೆ 20 ವರ್ಷ; ಮದುವೆಯಾಗಿ ಒಂದು ಮಗುವಿದೆ. ನನ್ನ ಗಂಡ ಸರಿ ಇಲ್ಲ. ಮದುವೆ ಆಗುವವರೆಗೂ ನಾಟಕ ಮಾಡಿ, ನನ್ನ ಅಪ್ಪ ಅಮ್ಮನನ್ನು ನಂಬಿಸಿ ಮೋಸ ಮಾಡಿದ್ದಾರೆ. ಎಲ್ಲರೂ ಸೇರಿ ನನ್ನ ಜೀವನದ ಜೊತೆ ಆಟ ಆಡಿದ್ದಾರೆ. ನನಗೆ ಪ್ರೀತಿ ತೋರಿಸುವ ಜೀವ ಇಲ್ಲ ಎಂದು ನೆನೆಸಿಕೊಂಡು ಯಾವಾಗಲೂ ಅಳುತ್ತಿರುತ್ತೇನೆ. ಒಂಟಿಯಾಗಿ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಹಾಗೆ ಮತ್ತೊಂದು ಮದುವೆಯಾಗಲು ಸಾಧ್ಯವಿಲ್ಲ. ಮಗುವಿನ ಮುಖವನ್ನು ನೋಡಿಯಾದರೂ ನನ್ನ ಗಂಡ ಬದಲಾಗಬಹುದು ಎಂದುಕೊಂಡಿದ್ದೆ. ಆದರೆ ಅವರು ಈಗಲೂ ಬದಲಾಗಿಲ್ಲ. ಕೆಲಸಕ್ಕೂ ಹೋಗುವುದಿಲ್ಲ. ಮನೆಯಲ್ಲೇ ಇರುತ್ತಾರೆ. ಜೀವನ ತುಂಬಾ ಕಷ್ಟವಾಗಿದೆ. ಅವರು ಒಳ್ಳೆಯ ಮನುಷ್ಯನಾಗಿ ಬದಲಾಗಲು ಏನು ಮಾಡಬೇಕು? ಸಲಹೆ ಕೊಡಿ.

–ಹೆಸರು, ಊರು ಬೇಡ

ನೀವು ಏನು ಓದಿದ್ದೀರಿ ಎಂಬುದನ್ನು ಇಲ್ಲಿ ತಿಳಿಸಿಲ್ಲ. ನೀವು ಡಿಗ್ರಿ ಮುಗಿಸಿಲ್ಲವಾದಲ್ಲಿ ಓದನ್ನು ಗಂಭೀರವಾಗಿ ತೆಗೆದುಕೊಂಡು ಡಿಗ್ರಿ ಮುಗಿಸಲು ಪ್ರಯತ್ನಿಸಿ. ನೇರವಾಗಿ ಕಾಲೇಜಿಗೆ ಸೇರಿ ಓದಬಹುದು ಅಥವಾ ದೂರಶಿಕ್ಷಣದ ಮೂಲಕವೂ ಓದಬಹುದು. ಇದರಿಂದ ನೀವು ಮನೆಗೆಲಸ ಹಾಗೂ ಮಗುವಿನ ಕೆಲಸದಿಂದ ವಿರಾಮ ಹೊಂದಿದ ವೇಳೆ ಓದಲು ಸಹಾಯವಾಗುತ್ತದೆ. ಓದುವಾಗ ಮನೆಯ ಹಿರಿಯರು ಅಥವಾ ಗಂಡನ ಬಳಿ ಮಗುವನ್ನು ನೋಡಿಕೊಳ್ಳಲು ತಿಳಿಸಿ. ಓದಿನಿಂದ ವ್ಯಕ್ತಿತ್ವ ಬೆಳೆಯುತ್ತದೆ ಮತ್ತು ನಿಮ್ಮಲ್ಲಿ ಸುರಕ್ಷತೆಯ ಭಾವ ಮೂಡುವಂತೆ ಮಾಡುತ್ತದೆ. ಕೆಲಸಕ್ಕೂ ಪ್ರಯತ್ನಿಸಬಹುದು. ಚಿಕ್ಕ ಉದ್ಯೋಗವೇ ಆಗಿರಲಿ. ಅದು ನಿಮ್ಮಲ್ಲಿ ಜಗತ್ತನ್ನು ಎದುರಿಸುವ ಆತ್ಮವಿಶ್ವಾಸ ಹುಟ್ಟುವಂತೆ ಮಾಡುತ್ತದೆ. ನಿಮ್ಮ ಗಂಡ ಹಾಗೂ ಮಗುವಿನ ಮೇಲೆ ಕಾಳಜಿ, ಪ್ರೀತಿ ತೋರಿಸುವುದರ ಜೊತೆಗೆ ಮನೆಯ ಜವಾಬ್ದಾರಿಯನ್ನು ಮುಂದುವರಿಸಬಹುದು. ಕೇವಲ ನಿಮ್ಮ ಪ್ರೀತಿ ಹಾಗೂ ಕಾಳಜಿಯಿಂದ ನಿಮ್ಮ ಗಂಡ ಒಳ್ಳೆಯ ಮನುಷ್ಯನಾಗಲು ಸಾಧ್ಯ ಮತ್ತು ಅವರಲ್ಲಿ ಬದಲಾವಣೆಯನ್ನು ಕಾಣಲು ಸಾಧ್ಯ.

ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಂಡು ನಿಮ್ಮ ಗಂಡನ ಜೊತೆ ಮಾತನಾಡಿ. ಅವರು ನಿಮ್ಮ ಜೊತೆ ಹೆಚ್ಚು ಹೆಚ್ಚು ಮಾತನಾಡುವಂತೆ ನೋಡಿಕೊಳ್ಳಿ. ವಾದ ಮಾಡುವುದು ಹಾಗೂ ನಕಾರಾತ್ಮಕವಾಗಿ ಮಾತನಾಡುವುದನ್ನು ನಿಲ್ಲಿಸಿ. ಸಮಯವೇ ನಿಮ್ಮಿಬ್ಬರ ನಡುವಿನ ಬಾಂಧವ್ಯವನ್ನು ವೃದ್ಧಿಸುತ್ತದೆ.

**

ನನ್ನ ತಲೆಯಲ್ಲಿ ಯಾವಾಗಲೂ ಕೆಟ್ಟ ಯೋಚನೆಗಳೇ ಬರುತ್ತವೆ. ಕೆಟ್ಟ ಯೋಚನೆಗಳು ತಲೆಯಲ್ಲಿ ಸುಳಿಯಬಾರದು ಎಂದುಕೊಂಡರು ಸಾಧ್ಯವಾಗುತ್ತಿಲ್ಲ. ಎಷ್ಟು ಪ್ರಯತ್ನಪಟ್ಟರೂ ಅಂತಹ ಯೋಚನೆಗಳೇ ತಲೆಯಲ್ಲಿ ಮುತ್ತುತ್ತಿರುತ್ತವೆ. ಸಿನಿಮಾದಲ್ಲಿ ಅಥವಾ ಯಾರದ್ದಾದರೂ ಜೀವನದಲ್ಲಿ ನಡೆದ ಕೆಟ್ಟ ಪರಿಸ್ಥಿತಿಯನ್ನು ನೋಡಿ ‘ನನ್ನ ಜೀವನದಲ್ಲಿ ಆ ಥರ ಆಗಿಬಿಡುತ್ತದೋ’ ಎಂಬ ಭಯ ಕಾಡುತ್ತದೆ. ನನ್ನ ಜೀವನದಲ್ಲಿ ಹಾಗೆಲ್ಲ ಆಗಲು ಸಾಧ್ಯವಿಲ್ಲ ಎಂದು ಗೊತ್ತಿದ್ದರೂ ಭಯವಾಗುತ್ತದೆ. ಎಲ್ಲರನ್ನೂ ಅನುಮಾನದಿಂದಲೇ ನೋಡುತ್ತೇನೆ. ನನ್ನ ಮೇಲೂ ನನಗೆ ನಂಬಿಕೆ ಹೋಗಿ ಅನುಮಾನ ಶುರುವಾಗಿದೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ತಿಳಿದರೂ ಅನುಮಾನ ಹುಟ್ಟಿಕೊಳ್ಳುತ್ತಿದೆ. ಇದು ನನ್ನ ವಿದ್ಯಾಭ್ಯಾಸದ ಮೇಲೂ ಪರಿಣಾಮ ಬೀರುತ್ತಿದೆ. ನನಗೂ ಎಲ್ಲರಂತೆ ಕೆಟ್ಟ ಯೋಚನೆಗಳು ಇಲ್ಲದೇ ಇರಬೇಕು ಎಂಬ ಆಸೆ ಇದೆ. ಆದರೆ ಸಾಧ್ಯವಾಗುತ್ತಿಲ್ಲ. ಇದರಿಂದ ರಾತ್ರಿ ಸರಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ.

–ಹೆಸರು, ಊರು ಬೇಡ

ಪ್ರತಿಯೊಬ್ಬರ ಮನಸ್ಸಿನಲ್ಲೂ ಆಗಾಗ ನಕಾರಾತ್ಮಕ ಯೋಚನೆಗಳು ಸುಳಿಯುತ್ತವೆ. ಅದು ಸಾಮಾನ್ಯ ಸಂಗತಿ. ಆದರೆ ಅತಿಯಾದ ನಕಾರಾತ್ಮಕ ಯೋಚನೆಗಳು ಸಮಸ್ಯೆಯನ್ನು ಉಂಟುಮಾಡುತ್ತವೆ. ಅವನ್ನು ಹಾಗೆ ಮುಂದುವರಿಯಲು ಬಿಟ್ಟರೆ ನಕಾರಾತ್ಮಕ ಯೋಚನೆಗಳು ನಿಮ್ಮ ಜೀವನದ ಅನೇಕ ಭಾಗಗಳನ್ನು ಆವರಿಸುತ್ತವೆ. ಅಲ್ಲದೇ ಇದು ನಿಮ್ಮ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುವಂತೆ ಮಾಡುತ್ತದೆ. ನೀವು ಆ ಯೋಚನೆಗಳಿಂದ ಹೊರಬರಲು ಪ್ರಯತ್ನಿಸಿ ಸೋತಿದ್ದೀರಿ ಎಂಬುದ‌ನ್ನು ಇಲ್ಲಿ ತಿಳಿಸಿದ್ದೀರಿ. ನಾನು ನಿಮಗೆ ಒಳ್ಳೆಯ ಆಪ್ತಸಮಾಲೋಚಕರನ್ನು ನೋಡಿ ಎಂದು ಸಲಹೆ ನೀಡುತ್ತೇನೆ. ಅವರೊಂದಿಗೆ ಒಂದೆರಡು ಸೆಷನ್‌ಗಳನ್ನು ಮುಗಿಸಿದ ಮೇಲೆ ನಿಮಗೆ ನಿಮ್ಮಲ್ಲಿನ ನಕಾರಾತ್ಮಕ ಯೋಚನೆಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಅರಿವಾಗುತ್ತದೆ. ಯೋಗ–ಧ್ಯಾನಗಳನ್ನು ಅಭ್ಯಾಸ ಮಾಡಿಕೊಳ್ಳಿ. ಕ್ರೀಡೆಗಳಲ್ಲೂ ತೊಡಗಿಕೊಳ್ಳಿ.

Tags: 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !